ಶನಿವಾರ, ನವೆಂಬರ್ 23, 2019
17 °C

ಕೆನಡಾದಲ್ಲಿ ಕೃತಕ ಬುದ್ಧಿಮತ್ತೆಯ ಮ್ಯೂಸಿಯಂ

Published:
Updated:
Prajavani

ಇತ್ತೀಚೆಗೆ ಅಂತರರಾಷ್ಟ್ರೀಯ ಸಮ್ಮೇಳನ ಒಂದರಲ್ಲಿ ಭಾಗವಹಿಸಲು ಕೆನಡಾದ ಮಾಂಟ್ರಿಯಲ್ ನಗರಕ್ಕೆ ಭೇಟಿ ನೀಡಿದ್ದೆ. ಸಮ್ಮೇಳನ ಮುಗಿಸಿದ ನಂತರ ನಗರದಲ್ಲಿ ತಿರುಗಾಡುತ್ತಿದ್ದೆ. ಈ ವೇಳೆ ನನ್ನನ್ನು ಹೆಚ್ಚು ಆಕರ್ಷಿಸಿದ್ದು ಸೆಂಟರ್ ಫೈ (Centre PHI) ಎಂಬ ಮ್ಯೂಸಿಯಂ. ಪ್ರೇಕ್ಷಣೀಯ ಸ್ಥಳಗಳನ್ನೆಲ್ಲ ನೋಡುತ್ತ ಧಾವಿಸುತ್ತಿದ್ದ ನನಗೆ, ಇದನ್ನು ಪೂರ್ತಿಯಾಗಿ ನೋಡುವ ಹಸಿವು ನೀಗಲಿಲ್ಲವಾಗಿ, ಅದಕ್ಕೆಂದೇ ಮತ್ತೊಂದು ದಿನ ಮೀಸಲಿಟ್ಟೆ.

‘ಸೆಂಟರ್ ಫೈ’ ಎಂಬುದು ಕಲ್ಪಿತ ವಾಸ್ತವ(Virtual Reality), ಕೃತಕ ಬುದ್ಧಿಮತ್ತೆ (Artifical Inteligence) ಹಾಗೂ ಯಂತ್ರ ಕಲಿಕೆಯ (Machine Learning) ತಂತ್ರಜ್ಞಾನಗಳನ್ನು ಸಮ್ಮಿಳಿಸಿ, ಒಂದು ಸಂಕೀರ್ಣ ಕೆಮಿಸ್ಟ್ರಿಯ ಅರಿವನ್ನು ವಿವಿಧ ಮನೋರಂಜನಾ ಚಟುವಟಿಕೆಗಳ ಮೂಲಕ ಸರಳವಾಗಿ ಜನಮಾನಸಕ್ಕೆ ಉಣಬಡಿಸುವ ಮ್ಯೂಸಿಯಂ.

ಕೃತಕ ಬುದ್ಧಿಮತ್ತೆ ಎಂಬುದು ಯಂತ್ರಗಳ ಬುದ್ಧಿಶಕ್ತಿಯಾಗಿದ್ದು, ಅಲ್ಲಿ ಗಣಕಯಂತ್ರವು ತನ್ನ ಪರಿಸರವನ್ನು ಗ್ರಹಿಸಿ, ವಿವರಗಳನ್ನು ಅಳವಡಿಸಿಕೊಂಡು ನವೀಕರಣಗೊಳ್ಳುತ್ತದೆ. ಜಾನ್ ಮೆಕಾರ್ಥಿಯು ಟಂಕಿಸಿದ ಈ  ‘ಕೃತಕ ಬುದ್ಧಿಮತ್ತೆ’ ಎಂಬ ಶಬ್ದಕ್ಕೆ ಬುದ್ಧಿಮತ್ತೆಯುಳ್ಳ ಯಂತ್ರಗಳನ್ನು ತಯಾರಿಸುವ ವಿಜ್ಞಾನ ಹಾಗೂ ತಂತ್ರಜ್ಞಾನ ಎಂಬ ಅರ್ಥವಿದೆ. ಮಾನವ ಕೇಂದ್ರಗುಣ, ಬುದ್ಧಿಮತ್ತೆ ಹಾಗೂ ಹೋಮೊ ಸೇಪಿಯನ್‍ಗಳ ತಿಳಿವಳಿಕೆ – ಇವುಗಳ ಅಡಿಪಾಯದ ಮೇಲೆ ಅದೆಷ್ಟು ನಿಖರವಾಗಿ ಈ ನವ ತಂತ್ರಜ್ಞಾನವನ್ನು ಹೆಣೆಯಲಾಗಿದೆ ಎಂದರೆ ಇದನ್ನು ಯಂತ್ರವೂ ಸಹ ಅನುಕರಿಸಬಲ್ಲದು. ತರ್ಕ, ಜ್ಞಾನ, ಕಲಿಕೆ, ಯೋಜನೆ, ಸಂವಹನ, ಗ್ರಹಿಕೆ ಅಲ್ಲದೇ ವಸ್ತು ವಿಷಯಗಳ ಚಲಾವಣೆ ಹಾಗೂ ಕೌಶಲ್ಯಪೂರ್ವಕ ಬಳಕೆ ಇವುಗಳೆಲ್ಲದರ ಆಧಾರದ ಮೇಲೆ ನಿರ್ಮಿತವಾದ ಈ ತಂತ್ರಜ್ಞಾನ ಇಂದು ಅನೇಕ ರಂಗಗಳಲ್ಲಿ ಪ್ರಯೋಗವಾಗುತ್ತಿದೆ. ಮುಂದೆ ನೀವು ಕನ್ನಡದಲ್ಲಿ ಒಂದು ಭಾಷಣ ಮಾಡಿದರೆ, ಮರುಕ್ಷಣ ನಿಮ್ಮ ಪ್ರತಿರೂಪವೂ ನಿಮ್ಮ ಹಾವಭಾವ, ಧ್ವನಿಯ ಏರಿಳಿತಗಳನ್ನು ಅಳವಡಿಸಿಕೊಂಡು ನೀವು ಬಯಸಿದ ಭಾಷೆಯಲ್ಲೂ ಭಾಷಣ ಮಾಡಬಲ್ಲದು!

ಈ ಮ್ಯೂಸಿಯಂನಲ್ಲಿ ಯಂತ್ರಗಳು ನಮ್ಮದೇ ದೇಹದ ಭಾಗಗಳಂತೆ ವರ್ತಿಸುವುದನ್ನು ಸ್ವತಃ ಅನುಭವಿಸುತ್ತೇವೆ. ಇನ್ನೂ ಸೋಜಿಗವೆಂದರೆ ‘ವ್ಯಾಸ್ಟ್ ಬಾಡಿ’(VAST body) ಎಂಬ ವಿಭಾಗದಲ್ಲಿ ನ್ಯೂರಲ್ ನೆಟ್‍ವರ್ಕ್ ತಂತ್ರಜ್ಞಾನದ ಮೂಲಕ ನಮ್ಮ ಎದುರಿನ ಪರದೆಯ ಮೇಲೆ ಇಂತಹ ಯಂತ್ರವೊಂದು ನಮ್ಮೆಲ್ಲ ಚಲನವಲನಗಳನ್ನೂ ತಕ್ಷಣ ಅನುಕರಿಸಿ ತೋರುತ್ತದೆ. ಇದನ್ನು ಕಂಡ ನನ್ನ ಒಳಮನದಲ್ಲಿ ಶಾಯರಿಯೊಂದು ಅರಳುತ್ತಿತ್ತು, ‘ಫಿರ್ ಕಭಿ ಮುಡಕೆ ಯೆ ನ ಪೂಛಿಯೆ, ಬೀತಾ ಹೈ ಕ್ಯಾ/ ದುನಿಯಾವಾಲೋ, ಆಗೆ ಆಗೆ ದೇಖಿಯೇ, ಹೋತಾ ಹೈ ಕ್ಯಾ’. ಇನ್ನೂ ಮುದ ನೀಡುವ ವಿಷಯವೆಂದರೆ, ಕೆನಡಾದ ಪ್ರಸಿದ್ಧ ನೃತ್ಯಗಾರ್ತಿಯರು ನಮ್ಮ ಚಲನವಲನಗಳನ್ನು ಅನುಕರಿಸುತ್ತಾರೆ, ಥೇಟ್ ಕನ್ನಡಿಯ ಪ್ರತಿರೂಪದಂತೆಯೇ! ನಾನು ಕುತೂಹಲದಿಂದ ಎದೆಯ ಮೇಲೆ ಕೈ ಇಟ್ಟುಕೊಂಡು ನರ್ತಿಸಿದೆ; ತರುಣ ನೃತ್ಯಗಾತಿ ಮಾಯವಾಗಿ, ವೃದ್ಧ ನೃತ್ಯಗಾತಿ ನನ್ನನ್ನು ಅನುಕರಿಸಿದಳು!!.

‘ಅಲ್ಗಾರಿದಮಿಕ್ ಪರ್‍ಫ್ಯೂಮರಿ’ ಎಂಬುದು ಯಂತ್ರ ಕಲಿಕೆಯ ಆಕರ್ಷಣೀಯ ವಿಭಾಗ. ಅಲ್ಲಿ ಯಂತ್ರವು ಕೇಳುವ ನಮ್ಮ ಹಿನ್ನೆಲೆ, ಬೇಕು-ಬೇಡಗಳು ಇತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಬೇಕು. ನಂತರ ಅದು ತೋರಿಸುವ ಅನೇಕ ಸುಗಂಧ ದ್ರವ್ಯಗಳನ್ನು ಮೂಸಿ, ಅಂಕಗಳನ್ನು ನೀಡಬೇಕು. ಈಗ ಅದು ಇಲ್ಲಿಯವರೆಗೆ ಸಂಗ್ರಹಿಸಿದ ಎಲ್ಲ ಮಾಹಿತಿಯನ್ನು ಹೆಕ್ಕಿ ತೆಗೆದು, ನಮ್ಮ ಹಿನ್ನೆಲೆ ಹಾಗೂ ಅಭಿರುಚಿಗೆ ಹೊಂದಿಕೆಯಾಗುವ ಜನರು ಪಸಂದು ಮಾಡಿದ ಸುಗಂಧಗಳನ್ನು ಹೋಲಿಸಿ ನೋಡಿ, ಹೊಸದೇ ಒಂದು ಸುಗಂಧ ದ್ರವ್ಯವನ್ನು ನಮಗೆ ನೀಡುತ್ತದೆ. ಹೀಗೆ ಕೃತಕ ಬುದ್ಧಿಮತ್ತೆಯ ಮೂಲಕವೇ ತಯಾರಿಸಿದ ನಮ್ಮ ವಿಶಿಷ್ಟ ಫಾರ್ಮುಲಾದ ಫರ್‍ಫ್ಯೂಮ್‍ನ ಪುಟ್ಟ ಬಾಟಲ್‍ನ್ನು ನಮ್ಮ ಹೆಸರಿನ ಲೇಬಲ್ ಅಂಟಿಸಿ ಸ್ಮರಣಿಕೆಯಾಗಿ ಉಚಿತವಾಗಿ ನೀಡುವ ವ್ಯವಸ್ಥೆ ಅಲ್ಲಿದೆ. ದೊಡ್ಡ ಬಾಟಲ್ ಅನ್ನು ಪಡೆಯಲು ಇಚ್ಛಿಸಿದರೆ ಶುಲ್ಕ ತೆರಬೇಕಾಗುತ್ತದೆ.

‘ಜಿಮ್ನೇಸಿಯಾ’ ಎಂಬ ವಿಭಾಗದಲ್ಲಿ ಕಲ್ಪಿತ ವಾಸ್ತವದ ಅನುಭವ ವೀಕ್ಷಕರಿಗೆ ದೊರೆಯುತ್ತದೆ. ನಾವು ಪಾಳು ಬಿದ್ದಿರುವ ಒಂದು ಕಟ್ಟಡದಲ್ಲಿ ಕುಳಿತಿದ್ದೇವೆ. ಕಾಲಲ್ಲಿ ಕಸ, ಅಲ್ಲಲ್ಲಿ ಪುಟಿಯುತ್ತಿರುವ ಫುಟ್‍ಬಾಲ್‍ಗಳು, ಪಕ್ಕದಲ್ಲಿ ಕುಳಿತು ನಮ್ಮೆಡೆ ನೋಡುತ್ತಿರುವ ಬಾಲಕ, ಎದುರಿಗೆ ಬಂದು ಹಾಡುತ್ತಿರುವ ಬಾಲಕಿ – ಇವುಗಳ ಮಧ್ಯೆ ವಾಸ್ತವ-ಅವಾಸ್ತವಗಳ ನಡುವಿನ ಗೆರೆಯೇ ಅಳಿಸಿ ಹೋಗುವುದಿದೆಯಲ್ಲಾ! ಅದನ್ನು ಅನುಭವಿಸಿಯೇ ಸವಿಯಬೇಕು.

‘ಅಯಾಹುವಾಸ್ಕಾ’ ಎಂಬ ವಿಭಾಗದಲ್ಲಿ ನಾವು ಅಮೆಜಾನ್ ಮಳೆಕಾಡಿನಲ್ಲಿ ಸಂಚರಿಸುತ್ತಿರುವ ಅನುಭವ ಪಡೆಯಬಹುದು. ಮಾತ್ರವಲ್ಲ, ಅಲ್ಲಿನ ಮೂಲ ನಿವಾಸಿಗಳ ‘ಶಿಪಿಬೋ’ ಎಂಬ ನಾಟಿ ವೈದ್ಯದ ವೀಕ್ಷಣೆ ಸಹ ಲಭ್ಯವಿದೆ.‘7 ಲೈವ್ಸ್’ ಎಂಬ ವಿಭಾಗದಲ್ಲಿ ಟೋಕಿಯೊದ ಸಬ್ ವೇ ಒಂದರ ಪ್ಲಾಟ್‍ಫಾರ್ಮ್‍ನಲ್ಲಿ ನಡೆಯುವ ಆತ್ಮಹತ್ಯೆಯ ಕುರಿತು ಏಳು ಯುವತಿಯರು ತಮ್ಮದೇ ರೀತಿಯಲ್ಲಿ ಹೇಳುವ ಪರಿಯು ಅಕಿರಾ ಕುರೋಸಾವಾನ ಪ್ರಸಿದ್ಧ ‘ರಾಶೊಮೊನ್ (Rashomon)’ ಚಿತ್ರವನ್ನು ನೆನಪಿಸುತ್ತದೆ. ‘ವಿ ಕುಡ್ ಬಿ ಹ್ಯೂಮನ್’ ಎಂಬ ವಿಭಾಗದಲ್ಲಿ ನಿಂತ ರೊಬೊ, ವೀಕ್ಷಕರು ತನ್ನೊಂದಿಗೆ ಇಲ್ಲಿಯವರೆಗೆ ಮಾತನಾಡಿದ ಹಾಗೂ ತಿಳಿಸಿದ ಮಾಹಿತಿಯನ್ನು ನವೀಕರಿಸಿಕೊಳ್ಳುತ್ತ ವಿಶ್ವಕೋಶವೇ ಆಗಿಹೋಗಿದೆ.

ಇದಲ್ಲದೇ ಮೂರು ಅಂತಸ್ತುಗಳ ಸ್ಟೇಡಿಯಂನಲ್ಲಿ ಎತ್ತರದಲ್ಲಿ ಮೇಲೆ ಕೆಳಗೆ ಹಾರಾಡುವ ಹಾಗೂ ಹಾಗೆ ನಾವು ಹಾರಾಡುತ್ತಲೇ ನೃತ್ಯಗಾರರ ತಂಡಗಳು ನಮ್ಮನ್ನು ಸಮೀಪಿಸುವ ಅನುಭವವೂ ಅಪೂರ್ವವಾದದ್ದು. ಇದಕ್ಕಿಂತ ಹಿಂದಿನ ಅಮೆರಿಕ ಭೇಟಿಯಲ್ಲಿ ಯುನಿವರ್ಸಲ್ ಸ್ಟುಡಿಯೊದಲ್ಲಿ ಕಲ್ಪಿತ ವಾಸ್ತವದ ಪ್ರದರ್ಶನವನ್ನು ನೋಡಿದ್ದೆ. ಆದರೂ, ಪ್ರಸ್ತುತ ಮ್ಯೂಸಿಯಂನ ವೈಶಿಷ್ಟ್ಯವೆಂ ದರೆ, ಪ್ರತಿಯೊಂದು ವಿಭಾಗದಲ್ಲಿಯೂ ತರಬೇತಿ ಹೊಂದಿದ ಗೈಡ್‍ಗಳು ಖುದ್ದು ವೀಕ್ಷಕರಿಗೆ ವಿವರಿಸಿ ಹೇಳುತ್ತಾರೆ. ನಮ್ಮ ಕುತೂಹಲಗಳಿಗೆ ಸ್ಪಂದಿಸುವುದರಿಂದ ಈ ಭೇಟಿ ವಿಶಿಷ್ಟವೆನಿಸುತ್ತದೆ.

ಹೊರಬಂದಾಗ ಭವಿಷ್ಯದ ಅಗಾಧತೆಗೆ ನಮ್ಮನ್ನು ನಾವು ಒಡ್ಡಿಕೊಳ್ಳುವ ಸಂದರ್ಭದಲ್ಲಿ ಗರ್ದಿಗಮ್ಮತ್ತಿನ ಕುಬ್ಜ ಪಾತ್ರಗಳೇ ನಾವಾಗಿಬಿಡುತ್ತಿದ್ದೇವೆಂಬ ಮಂದವಾದ ಅರಿವೂ ಕೂಡ ಕೆಲ ಕ್ಷಣ ಕಾಡಿತು.

ಗೈಡ್ ಜೊತೆ ಲೇಖಕರು

ಚಿತ್ರಗಳು: ಲೇಖಕರವು

ಪ್ರತಿಕ್ರಿಯಿಸಿ (+)