ಶುಕ್ರವಾರ, ಫೆಬ್ರವರಿ 28, 2020
19 °C

ಮನೆಯೆಂಬ ಮಂತ್ರಗೃಹ ವ್ಯಕ್ತಿತ್ವವೆಂಬ ವಾಸ್ತುಪುರುಷ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎ ತ್ತ ಸುತ್ತಿದರೂ ಮನಸ್ಸು ನೆಲೆ ಕಾಣುವುದು ತನ್ನಲ್ಲೇ; ಹಾಗೇ ಎತ್ತ ತಿರುಗಿದರೂ ಮನುಷ್ಯ ಸೇರುವುದು ತನ್ನ ಮನೆಗೆ. ‘ಮನೆ’ ಎಂಬುದು ಹೀಗೆ ನಮ್ಮ ಅಸ್ಮಿತೆಯ ಅನನ್ಯ ಅಂಶ. ‘ಮನೆ ಬಿಟ್ಟು ಓಡಿಹೋದ’, ‘ಮನೆಯಿಂದಾಚೆಗೆ ತಳ್ಳಿ ಬಿಡುತ್ತೇನೆ’, ‘ಮನೆಗೆ ಸೇರಿಸುವುದಿಲ್ಲ’ – ಈ ಎಲ್ಲ ಹೇಳಿಕೆಗಳು ಹುಟ್ಟಿಸುವ ಭಾವತುಮುಲ ಎಷ್ಟು ಗಾಢವಾದುದಲ್ಲವೆ? ಮನೆ ಎಂಬುದು ಕೇವಲ ಕಿಟಕಿ, ಬಾಗಿಲು, ಗೋಡೆಗಳ ಗೂಡಲ್ಲ, ಅದು ಭಾವನಾತ್ಮಕ ಚೌಕಟ್ಟು. ಮನೆಯಿಂದ ಬಂದದ್ದೇ ಮನೆತನ. ಮನೆಯ ಮರ್ಯಾದೆ, ಮನೆತನದ ಗೌರವ ಇತ್ಯಾದಿ ಆರೋಪಿತ ಸಾಮಾಜಿಕ ನಿಯಂತ್ರಕಗಳ ಭಾವಮೂಲವೂ ಈ ಮನೆಯೆಂಬುದರ ಸೂಕ್ಷ್ಮಾಂಶವೇ. ಮನೆಯೆಂಬ ಭೌತಿಕ ನೆಲೆಯ ಹಿನ್ನೆಲೆಯಲ್ಲಿ ಅಮೂರ್ತ ಭಾವವೊಂದು ಹೆಪ್ಪುಗಟ್ಟಿರುತ್ತದೆ. ಅದು ವ್ಯಕ್ತಿಯನ್ನು ತನ್ನ ಕುಟುಂಬಕ್ಕೆ ಕಟ್ಟಿಹಾಕುವ ಸೂತ್ರವೂ ಹೌದು. ಮನೆಯ ಎಲ್ಲ ಸದಸ್ಯರೂ ಈ ಸೂತ್ರದಿಂದ ಬಂಧಿತರಾದವರೇ. ರಾಬರ್ಟ್ ಫ್ರಾಸ್ಟ್, ‘ಮನೆ ಎಂಬುದು, ನೀನಲ್ಲಿಗೆ ಹೋದಾಗ, ಅಲ್ಲಿಯವರು ನಿನ್ನನ್ನು ಸ್ವೀಕರಿಸುವ ತಾಣ’ (Home is the place where, when you have to go there, they have to take you in) ಎನ್ನುತ್ತಾನೆ. ಹೀಗೆ ಮನೆ, ಮನೆತನ ನಮ್ಮದಾಗಿರುತ್ತದೆ.

ಮನೆಯ ಸ್ಥೂಲ ಚಿತ್ರಣದಲ್ಲಿ ಒಂದು ಆವರಣ, ಅಂಗಳ, ಬೈಠಕ್ ಖಾನೆ, ಪಡಸಾಲೆ, ಒಳಕೋಣೆಗಳು, ಅಡುಗೆಮನೆ, ಸ್ನಾನಗೃಹ, ಶೌಚಗೃಹ - ಇವುಗಳೆಲ್ಲವೂ ಇರುತ್ತವೆ. ಹೊರಗಿನ ವ್ಯಕ್ತಿಗಳು ಬಂದಾಗ ಅವರ-ನಮ್ಮ ಬಾಂಧವ್ಯ ಯಾವ ಮಟ್ಟದ್ದಾಗಿರುತ್ತದೆ ಎಂಬ ಆಧಾರದ ಮೇಲೆ ಅವರಿಗೆ ಮನೆಯ ಆವರಣಗಳಿಗೆ ಪ್ರವೇಶವಿರುತ್ತದೆ. ಬಹಳ ಆತ್ಮೀಯರಾದವರಿಗೆ ಒಳಗಿನ ಕೋಣೆಗಳಿಗೆ ಪ್ರವೇಶ, ಅಡುಗೆಮನೆಯಲ್ಲಿ ಪಾನಕ–ಪೇಯಗಳ ಸಮರ್ಪಣೆ, ಉಳಿದವರಿಗೆ ಹೊರಗಿನ ಬೈಠಕ್ ಖಾನೆಯಲ್ಲಿ ಸತ್ಕಾರ. ತೀರ ಅಪರಿಚಿತರಿಗೆ ತಲೆಬಾಗಿಲಿಂದಲೇ ವಿದಾಯ. ಮನೆಯಲ್ಲಿನ ಉಪಕರಣಗಳಿಗೂ ತಮ್ಮದೇ ಆದ ಸ್ಥಾನಗಳಿವೆ ಮೇಜು, ಕುರ್ಚಿ, ಗಡಿಯಾರ ಹಾಗೂ ಇತರ ಅಗತ್ಯದ ಆಲಂಕಾರಿಕ ವಸ್ತುಗಳು ತಮ್ಮ ತಮ್ಮ ಉಪಯೋಗ, ಆವಶ್ಯಕತೆಗೆ ತಕ್ಕಂತಹ ಸ್ಥಳಗಳಲ್ಲಿ ಇರುತ್ತವೆ. ಅಡುಗೆಮನೆಯ ಲೋಟ, ತಟ್ಟೆಗಳು ಎಲ್ಲೆಡೆ ಓಡಾಡಿದರೂ ಅಂತಿಮವಾಗಿ ಅಲ್ಲಿಗೇ ಹೋಗಿ ಸೇರುತ್ತವೆ.

ಮನುಷ್ಯನ ದೇಹವೂ ಭಗವಂತ ಸೃಷ್ಟಿಸಿದ ಮನೆ. ಪ್ರತಿಯೊಂದು ಅಂಗಕ್ಕೂ ಪ್ರತ್ಯೇಕವಾದ ಕಾರ್ಯಕ್ಷೇತ್ರ, ಕಾರ್ಯವಿಧಾನವಿರುತ್ತದೆ. ಕೈ ಕೆಲಸ ಮಾಡಬಹುದೇ ಹೊರತು ಶರೀರವನ್ನು ಹೊತ್ತು ಓಡಲಾರದು. ಕಣ್ಣು ನೋಡುತ್ತದೆಯೇ ಹೊರತು ಕೇಳುವುದಿಲ್ಲ. ಆದರೆ ಮನಸ್ಸು ಇವೆಲ್ಲದರಲ್ಲೂ ಸೂಕ್ಷ್ಮವಾಗಿ ಪ್ರವೇಶಿಸಿ ಕೆಲಸ ಮಾಡುತ್ತದೆ. ನಮ್ಮ ಮನಸ್ಸು ವಿವಿಧ ಸ್ತರಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಹೊರಗಿನಿಂದ ಬರುವ ವ್ಯಕ್ತಿ, ಸಂಸ್ಕಾರ, ಚಿಂತನೆಗಳ ಮೌಲ್ಯಗಳಿಗೆ ಅನುಗುಣವಾಗಿ ಅವುಗಳನ್ನು ಸ್ವೀಕರಿಸಬೇಕು. ಉತ್ತಮ, ಉದಾತ್ತ ಚಿಂತನೆಗಳಿಗೆ ನೇರವಾಗಿ ಪ್ರವೇಶವಿರಬೇಕು. ಸಾಮಾನ್ಯ ಚಿಂತನೆಗಳನ್ನು ಶುಚಿಗೊಳಿಸಿ, ಸುಧಾರಣೆಯ ನಂತರ ಒಳಗಿನ ಆವರಣಗಳಿಗೆ ಪ್ರವೇಶ ಕಲ್ಪಿಸಬೇಕು. ಇನ್ನು ದುರ್ವಿಚಾರಗಳನ್ನು ಪ್ರವೇಶದ್ವಾರದಿಂದಲೇ ಹೊರಗಟ್ಟಬೇಕು. ಸ್ಥೂಲವಾದ ದೇಹವೆಂಬ ಮನೆಯಲ್ಲಿ ವಾಸಿಸುವ ಮನೆಯೊಡೆಯನಾದ ಪುರುಷ ಸದಾ ಜಾಗೃತನಾಗಿದ್ದುಬಿಟ್ಟರೆ ಮನೆಯೂ ಮನಸ್ಸು ಸುರಕ್ಷಿತ.

ಮನೆ ಕಟ್ಟುವುದು ಒಂದು ಕೌಶಲ; ಅದನ್ನು ಅಲ್ಲಗಳೆಯುವಂತಿಲ್ಲ. ಬದುಕನ್ನು ಕಟ್ಟಿಕೊಳುವುದಕ್ಕೂ ಮನೆಯನ್ನು ಕಟ್ಟಿಕೊಳ್ಳುವುದಕ್ಕೂ ಬಹಳ ಸಾಮ್ಯತೆಯಿದೆ. ಮನೆ ಹೇಗೆ ಸದಸ್ಯರಿಗೆಲ್ಲ ಆಶ್ರಯವನ್ನೂ ಮುದವನ್ನೂ ನೀಡುತ್ತದೊ ಹಾಗೇ ಬದುಕು ಕೂಡ ಇತರರಿಗೆ ನೆಲೆಯಾಗುವುದಾದರೆ ಬಲು ಚಂದ. ಅದೇ ಜೀವನದ ಸಾರ್ಥಕತೆ. ಆದರೆ ಇದನ್ನು ಕಟ್ಟಿಕೊಳ್ಳುವುದು ಹೇಗೆ? ಖಾಲಿ ನಿವೇಶನ ಕಂಡಾಗಲೆಲ್ಲ, ಅಲ್ಲಿನ ಮುಳ್ಳುಕಂಟಿಗಳನ್ನು ಕಂಡು ಮುಖ ಸಿಂಡರಿಸುವುದು ನಮ್ಮ ಸಹಜ ವರ್ತನೆ. ಆದರೆ ಕಾಲಕ್ರಮದಲ್ಲಿ ಅಲ್ಲೊಂದು ಸುಂದರ ಕಟ್ಟಡ ಬೆಳೆದು ನಿಂತಾಗ ನಾವು ಹಿಂದೆ ಕಂಡ ನಿವೇಶನ ಇದೇ ಏನು ಎಂದು ಅಚ್ಚರಿಪಡುತ್ತೇವೆ. ಈ ಬದಲಾವಣೆಯ ಹಿಂದಿನ ಪ್ರಯತ್ನ-ಪರಿಶ್ರಮ ಭಾವಿಸಿದಾಗ ಭೌತಿಕ ಜಗತ್ತಿನ ನಿರ್ಮಾಣದ ಹಿಂದಿರುವ ಸಂಕಲ್ಪದ ಮಹತ್ವ ಮನಗಾಣುತ್ತೇವೆ. ಶ್ಯೂನದಿಂದ ಸೃಷ್ಟಿಯಾಗುತ್ತದೆ ಎಂಬುದನ್ನು ನಂಬಲಾಗದವರೂ ನಂಬುವಂತೆ ಮಾಡುವ ಈ ಪರಿವರ್ತನೆಯ ಕೌಶಲ ಕುತೂಹಲಕಾರಿ. ಖಾಲಿ ನಿವೇಶನವನ್ನು ಸ್ವಚ್ಛಗೊಳಿಸಿ ಪಾಯ ತೋಡಿದಾಗ, ಇದೇನು ಹಜಾರ ಇಷ್ಟು ಚಿಕ್ಕದೆ? ಈ ಕೊಠಡಿಯಲ್ಲಿ ಮಂಚ ಹಾಕುವುದು ಹೇಗೆ? – ಎಂಬೆಲ್ಲ ಪ್ರಶ್ನೆಗೆ ವಿನ್ಯಾಸಕರ ಮುಗುಳ್ನಗುತ್ತಾನೆ. ಪಾಯ ಹಾಕಿ ಗೋಡೆ ಕಟ್ಟುವಾಗಲೂ ಅಚ್ಚರಿ. ಹುಡಿ ಸಿಮೆಂಟು, ಹಿಡಿ ಮರಳು, ಜೊತೆಗೆ ನೀರು, ಇವುಗಳನ್ನು ಸೇರಿಸಿ ಕಟ್ಟಿದ ಗೋಡೆ ನೂರು ವರ್ಷ ನಿಲ್ಲುತ್ತದಂತೆ! ದೂಡಿದರೆ ಬಿದ್ದುಬಿಡುವ ಹಸಿಗೋಡೆ ಕಾಲಕ್ರಮದಲ್ಲಿ ಗಟ್ಟಿಯಾಗಿ ನಿಲ್ಲುತ್ತದೆ. ಇನ್ನು ಛಾವಣಿ–ಯಾವ ಆಧಾರವೂ ಇಲ್ಲದೆ ಪಾತ್ರೆಯ ಮುಚ್ಚಳದಂತೆ ಆವರಿಸಿ ಹರಡುತ್ತದೆ. ತೊಲೆ, ಕಂಬ ಇಲ್ಲದೆ ಛಾವಣಿ ನಿಲ್ಲುವುದು ವಿಚಿತ್ರವಲ್ಲವೆ? ಇವೆಲ್ಲಕ್ಕಿಂತ ಸೋಜಿಗವೆಂದರೆ ಕಟ್ಟುವ ಮೊದಲೇ ಕಟ್ಟಡದ ಪೂರ್ಣ ಚಿತ್ರ ವಿನ್ಯಾಸಕಾರನ ಮನಸ್ಸಿನಲ್ಲಿ ಇರುತ್ತದೆ! ಅವನು ಮಾಲಿಕನ ಅಗತ್ಯಕ್ಕೆ ತಕ್ಕಂತೆ, ಅಪೇಕ್ಷೆಗೆ ಅನುಗುಣವಾಗಿ ಮನೆಗೆ ರೂಪ ಕೊಡುತ್ತಾನೆ. ‘Beginning with the end in mind’ ಎಂಬುದು ಇಲ್ಲಿನ ಗಮನೀಯ ಅಂಶ.

ಇವೆಲ್ಲ ಸೂಚಿಸುವುದು ಮನುಷ್ಯನ ಸಂಕಲ್ಪಶಕ್ತಿಯನ್ನು, ಅವನ ಬೌದ್ಧಿಕ ಸಾಧನೆಯನ್ನು. ವ್ಯಕ್ತಿಯ ನಿರ್ಮಾಣವೂ ಇಷ್ಟೇ ಕುತೂಹಲಕಾರಿ ಎಂದು ಆಲೋಚಿಸಿ ಭಾವಿಸುವಾಗ ಬಹಳ ಅಂಶಗಳು ಮನಸ್ಸಿಗೆ ಲಗ್ಗೆ ಹಾಕುತ್ತವೆ. ಪ್ರತಿಯೊಂದು ಮಗುವೂ ಒಂದು ಖಾಲಿ ನಿವೇಶನ. ಅದು ಏನಾಗುತ್ತದೆ ಎಂದು ಯೋಚಿಸದೆ ಮೂಲ ಸಂಸ್ಕಾರದ ಬುನಾದಿ ನೀಡುವುದು ತಂದೆ-ತಾಯಿಗಳ ಕರ್ತವ್ಯ. ಶಿಕ್ಷಣವ್ಯವಸ್ಥೆ, ಜಗತ್ತು ನೀಡುವ ಅಂಶಗಳು ಮೈಗೂಡಲು ಯುವಜನತೆಗೆ ಅಂತರ್ವೀಕ್ಷಣೆಯ ‘ಕ್ಯೂರಿಂಗ್‌’ ಆಗಬೇಕು. ಹಂತಹಂತವಾಗಿ ಇಂತಹದೊಂದು ವ್ಯಕ್ತಿತ್ವ ಬೆಳೆದು ನಿಂತಾಗ, ಪುರುಷಸೌಧ ಸರ್ವಸೊಬಗಿನಿಂದ ಅರಳಿ ನಿಂತಾಗ ಗೌರವದಿಂದ ಜನ ತಲೆಬಾಗುವುದನ್ನು ಕಾಣುತ್ತೇವೆ. ಆದರೆ ಇಲ್ಲೂ ಕೂಡ ವ್ಯಕ್ತಿ ಅಂತ್ಯಲಕ್ಷ್ಯದ ಪೂರ್ಣರೂಪವನ್ನು ಮನಸ್ಸಿನಲ್ಲಿರಿಸಿಕೊಂಡು ವ್ಯಕ್ತಿ ತನ್ನ ವ್ಯಕ್ತಿತ್ವ ನಿರ್ಮಾಣವನ್ನು ಆರಂಭಿಸಬೇಕು ಎಂಬುದನ್ನು ಮರೆಯಲಾಗದು. ನಾವು ಕಟ್ಟುವುದು ಮೂರೇ ದಿನಕ್ಕೆ ಕುಸಿಯಬೇಕಾದ ಮುರುಕಲು ಮನೆಯನ್ನೋ ಅಥವಾ ನೂರಾರು ಜನರಿಗೆ ಮಾದರಿಯಾಗುವ ವಿಶಾಲ ಬಂಗಲೆಯನ್ನೋ ಎಂದು ನಿರ್ಧರಿಸುವವರು ನಾವೇ. ಸದೃಢ ವ್ಯಕ್ತಿತ್ವ ನಿರ್ಮಾಣದ ಪ್ರಯತ್ನ ಇಂದಿನಿಂದಲೇ ಆರಂಭವಾಗಲಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)