ಮೋದಿ ವಿರೋಧ ಪಕ್ಷದಲ್ಲಿ ಕೆಲಸ ಮಾಡಲಿ: ಎಂ.ಪಿ.ನಾಡಗೌಡ ವಾಗ್ದಾಳಿ

ಮಂಗಳವಾರ, ಏಪ್ರಿಲ್ 23, 2019
29 °C

ಮೋದಿ ವಿರೋಧ ಪಕ್ಷದಲ್ಲಿ ಕೆಲಸ ಮಾಡಲಿ: ಎಂ.ಪಿ.ನಾಡಗೌಡ ವಾಗ್ದಾಳಿ

Published:
Updated:

ವಿಜಯಪುರ: ‘ನೇರವಾಗಿ ಮುಖ್ಯಮಂತ್ರಿ, ಪ್ರಧಾನಮಂತ್ರಿಯಾದವರು ಮೋದಿ. ಒಮ್ಮೆಯೂ ವಿರೋಧ ಪಕ್ಷದಲ್ಲಿ ಕೆಲಸ ಮಾಡಿಲ್ಲ. ಆದ್ದರಿಂದ ಈ ಬಾರಿ ಎಲ್ಲರೂ ಸೇರಿ ವಿರೋಧ ಪಕ್ಷದ ನಾಯಕನನ್ನಾಗಿಸುವ ಮೂಲಕ, ಮೋದಿಗೆ ಪ್ರಜಾಪ್ರಭುತ್ವದ ಅರಿವು ಮೂಡಿಸೋಣ’ ಎಂದು ಲೋಕ ತಾಂತ್ರಿಕ ಜನತಾದಳದ ಮುಖಂಡ ಎಂ.ಪಿ.ನಾಡಗೌಡ ಲೇವಡಿ ಮಾಡಿದರು.

‘ಮೋದಿ ಆಡಳಿತದಲ್ಲಿ ಅಚ್ಚೇ ದಿನ ಬರಲೇ ಇಲ್ಲ. ಡಾಲರ್ ಮೌಲ್ಯ, ಪೆಟ್ರೋಲ್‌ ಧಾರಣೆ, ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದೆ. ಕಪ್ಪು ಹಣ ದೇಶಕ್ಕೆ ಬರುವ ಬದಲು ಮತ್ತಷ್ಟು ಹೆಚ್ಚು ಹೋಗಿದೆ’ ಎಂದು ಬುಧವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಇಂದಿರಾಗಾಂಧಿಯೂ ಇದೇ ವರ್ತನೆ ತೋರುತ್ತಿದ್ದರು. ಒಮ್ಮೆ ವಿರೋಧ ಪಕ್ಷದಲ್ಲಿ ಕೂತ ಬಳಿಕ ಸರಿಯಾದರು. ಮೋದಿಗೂ ಇದೇ ಆಗಬೇಕಿದೆ’ ಎಂದು ಕಟಕಿಯಾಡಿದರು.

‘ವೈಮಾನಿಕ ದಾಳಿ, ಸೈನಿಕರ ಶೌರ್ಯವನ್ನು ತಮ್ಮ ಸಾಧನೆ ಎಂದು ಬಿಂಬಿಸಿಕೊಂಡು ಪ್ರಧಾನಿ ಮೋದಿ ಮತ ಕೇಳುತ್ತಿರುವುದು ಸರಿಯಲ್ಲ. ಎಂದಿಗೂ ಯಾವ ಪಕ್ಷಗಳು ಸೈನಿಕರನ್ನು ವಿಷಯವಾಗಿರಿಸಿಕೊಂಡು ಮತ ಕೇಳಿದ ಉದಾಹರಣೆ ಇಲ್ಲ. ಲಾಲ್‌ಬಹದ್ದೂರ್‌ ಶಾಸ್ತ್ರಿ ಎದೆಗಾರಿಕೆ ಯಾರಿಗೂ ಇಲ್ಲ. ಲಾಹೋರ್‌ ತನಕವೂ ಸೈನ್ಯ ಕಳುಹಿಸಿದ್ದರು’ ಎಂದರು.

‘ಆರ್‌ಡಿಎಕ್ಸ್‌ ಪುಲ್ವಾಮಾ ಪ್ರವೇಶಿಸಿದ ಬಗ್ಗೆ ಸೂಕ್ತ ತನಿಖೆಯಾಗಬೇಕು. ಇದು ಕೇಂದ್ರದ ವೈಫಲ್ಯ. ಕೇಂದ್ರ ಇಂದಿಗೂ ರಾ, ಸಿಬಿಐ, ಇಡಿ, ರಿಸರ್ವ್‌ ಬ್ಯಾಂಕ್ ಸೇರಿದಂತೆ ಅನೇಕ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ’ ಎಂದು ದೂರಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಎಂ.ಆರ್.ಪಾಟೀಲ, ಶಶಿ ತಾವರಗೇರಿ, ರಾಯಣ್ಣವರ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !