ಮಲ್ಲಯ್ಯನಪುರದಲ್ಲೊಂದು ಇತಿಹಾಸದ ಹೆಗ್ಗುರುತು

7
ಗುಂಡ್ಲುಪೇಟೆ: ಪುರಾತನ ದೇವಾಲಯಕ್ಕೆ ನೀಡಬೇಕಿದೆ ಕಾಯಕಲ್ಪ– ಗ್ರಾಮಸ್ಥರ ಒತ್ತಾಯ

ಮಲ್ಲಯ್ಯನಪುರದಲ್ಲೊಂದು ಇತಿಹಾಸದ ಹೆಗ್ಗುರುತು

Published:
Updated:
Prajavani

ಗುಂಡ್ಲುಪೇಟೆ: ತಾಲ್ಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಲಕ್ಷ್ಮಿಕಾಂತ ದೇವಾಲಯ ಆ ಗ್ರಾಮದ ಹೆಗ್ಗುರುತು. ಆದರೆ, ಈಗ ಅದು ಜೀರ್ಣಾವಸ್ಥೆಗೆ ತಲುಪಿದೆ.

ಇದನ್ನು ಒಡೆಯರ ಕಾಲದ ದೇವಾಲಯ ಎಂದು ಕರೆಯಲಾಗುತ್ತದೆ. ಆದರೆ, ಈ ದೇವಸ್ಥಾನವನ್ನು ಯಾರು, ಯಾವಾಗ ಸ್ಥಾಪನೆ ಮಾಡಿದರು ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ. 

ದುಸ್ಥಿತಿಗೆ ತಲುಪಿರುವ ದೇವಾಲಯ ಈಗ ಬೀಳುವ ಹಂತದಲ್ಲಿದೆ. ಅದರ ಮೂಲ ವಿಗ್ರಹಗಳಾಲಿ, ಶಿಲ್ಪಗಳಾಗಲಿ ಇಲ್ಲ. ಅವುಗಳನ್ನು ನಂಜನಗೂಡು ತಾಲ್ಲೂಕಿನ ಕಳಲೆ ಗ್ರಾಮದ ಬಳಿ ಇರುವ ದೇವಾಲಯದಲ್ಲಿ ಇಡಲಾಗಿದೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ. 

ದೇವಾಲಯದ ಮೇಲೆ ಇಟ್ಟಿಗೆ ಗಾರೆಯಿಂದ ನಿರ್ಮಿಸಲಾಗಿರುವ ವಿಮಾನ ಆಕಾರದ ಅವಶೇಷಗಳನ್ನು ಕಾಣಬಹುದಾಗಿದೆ. 

ಮಡಕೆ -ಚೂರುಗಳು ಪತ್ತೆ: ಈ ಪರಿಸರದ ಸುತ್ತಮುತ್ತ ಈ ಹಿಂದಿನ ಜೀವನ ಪದ್ಧತಿಗಳನ್ನು ನಿರೂಪಿಸುವಂತಹ ಕುರುಹುಗಳು ಪತ್ತೆಯಾಗಿವೆ. 

ಪ್ರಾಚೀನ ಕಾಲದ ಬೂದು, ಮಾಸಲು ಬಣ್ಣದ ಮಡಕೆ ಚೂರುಗಳನ್ನು ಸಂಶೋಧಕರಾದ ಡಾ.ಮಣಿಕಂಠ ಅವರು ಪತ್ತೆ ಹಚ್ಚಿದ್ದಾರೆ.  ಗ್ರಾಮದ ಮಾರಿಗುಡಿಯ ಮುಂಭಾಗದಲ್ಲಿ ವೀರಗಲ್ಲು, ಮಾಸ್ತಿಗಲ್ಲುಗಳು ಹಾಗೂ ಅಂದಿನ ಕಾಲದ ಜನರು ಉಪಯೋಗಿಸಿರುವ ಕಲ್ಲು ಚಪ್ಪಡಿಗಳು ಈಗಲೂ ಇವೆ.

ಇವುಗಳನ್ನು ಸಂರಕ್ಷಿಸಿಡಬೇಕು ಮತ್ತು ದೇವಾಲಯದ ಜೀರ್ಣೋದ್ಧಾರಕ್ಕೆ ಸರ್ಕಾರ ಗಮನ ನೀಡಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ಗ್ರಾಮದಲ್ಲಿರುವ ವೀರಗಲ್ಲಿನಲ್ಲಿ ವಿಶೇಷವಾದ ಚಿತ್ರವೊಂದು ಗಮನ ಸೆಳೆಯುತ್ತದೆ. ಮಹಿಳೆಯೊಬ್ಬರು ಬೇಟೆಯಾಡುತ್ತಿರುವ ಚಿತ್ರ ಇದೆ. ಅದೇ ಕಲ್ಲಿನಲ್ಲಿ ಹಂದಿಯನ್ನು ನಾಯಿ ಓಡಿಸಿಕೊಂಡು ಹೋಗುತ್ತಿರುವ ಚಿತ್ರ ಇದೆ. ಮೇಲ್ಭಾಗದಲ್ಲಿ ಹಂದಿಯನ್ನು ಮತ್ತೊಂದು ಪ್ರಾಣಿ ಬೇಟೆ ಮಾಡುತ್ತಿರುವ ಚಿತ್ರ ಇದೆ. 

ಮಹಿಳೆಯೊಬ್ಬರು ಹಂದಿಯನ್ನು ಇತರ ಪ್ರಾಣಿಗಳಿಂದ ರಕ್ಷಿಸಲು ಸಹಾಯಕ್ಕೆ ಬರುತ್ತಿರುವ ಚಿತ್ರ ಇದಾಗಿರಬಹುದು ಎಂಬುದು ಊರ ಹಿರಿಯರ ಅಭಿಪ್ರಾಯ. 

‘ಗ್ರಾಮದಲ್ಲಿ ಪುರಾತನ ಮಾದರಿಯ ದೇವಾಲಯ ಇತ್ತು ಎಂಬುದಕ್ಕೆ ಹಲವು ವಸ್ತುಗಳು ದಾಖಲೆ ಸಮೇತ ಸಿಕ್ಕಿವೆ. ಇವುಗಳನ್ನು ಉಳಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ನಮ್ಮ ಹಿಂದಿನ ಪರಂಪರೆಗಳ ದ್ಯೋತಕವಾಗಿರುವ ಇವುಗಳನ್ನು ರಕ್ಷಿಸುವ ಅಗತ್ಯವಿದೆ’ ಎಂದು ಗ್ರಾಮಸ್ಥ ಕೃಷ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂದಿನ ಜೀವನ ಪದ್ಧತಿಯ ದಾಖಲೆಗಳು’

’ದೇವಾಲಯ ಹಾಗೂ ಸುತ್ತಮುತ್ತ ದೊರೆತಿರುವ ಶಿಲ್ಪಗಳು ಹಿಂದಿನ ಇತಿಹಾಸ ಮತ್ತು ಜನರ ಜೀವನ ಪದ್ಧತಿಯನ್ನು ವಿವರಿಸುವ ದಾಖಲೆಗಳಾಗಿವೆ. ಇಂತಹ ದೇವಾಲಯಗಳನ್ನು ಸ್ಥಳೀಯರು, ಜನಪ್ರತಿನಿದಿಗಳು ಮತ್ತು ಸರ್ಕಾರ ಇವುಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವನ್ನು ಮಾಡಬೇಕು’ ಎಂದು ಸಂಶೋಧಕ ಡಾ.ಎಸ್.ಮಣಿಕಂಠ ಅವರು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !