ಪ್ರಕೃತಿ ಮುನಿಸು; ತಣಿಯದ ಆಕ್ರೋಶ

7
ಬಾರದ ಸಿಎಂ: ಕೃಷ್ಣೆಯ ಒಡಲಲ್ಲಿ ಮಡುಗಟ್ಟಿದ ನಿರಾಸೆ

ಪ್ರಕೃತಿ ಮುನಿಸು; ತಣಿಯದ ಆಕ್ರೋಶ

Published:
Updated:
Deccan Herald

ಬಾಗಲಕೋಟೆ: ಆಲಮಟ್ಟಿಯ ಲಾಲ್‌ಬಹಾದ್ದೂರ್‌ ಶಾಸ್ತ್ರಿ ಸಾಗರ ಜಲಾಶಯದಲ್ಲಿ ಕೃಷ್ಣೆಗೆ ಬಾಗಿನ ಅರ್ಪಿಸುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾರ್ಯಕ್ರಮ, ಭಾನುವಾರ ಪ್ರಕೃತಿ ಮುನಿಸಿಗೆ ಸಿಲುಕಿ ಕೊನೆ ಕ್ಷಣದಲ್ಲಿ ರದ್ದಾಯಿತು. ಇದು ಉತ್ತರ ಕರ್ನಾಟಕ ’ಪ್ರತ್ಯೇಕ’ವಾದಿಗಳ ಆಕ್ರೋಶಕ್ಕೆ ಮತ್ತಷ್ಟು ತುಪ್ಪ ಸುರಿಯಿತು.

ವಾಡಿಕೆಗಿಂತ 15 ದಿನ ಮೊದಲೇ ಆಲಮಟ್ಟಿ ಜಲಾಶಯ ಈ ಬಾರಿ ಭರ್ತಿಯಾಗಿದೆ. ಈ ಅವಕಾಶವನ್ನು ಉತ್ತರ ಕರ್ನಾಟಕದ ಅಭಿವೃದ್ಧಿ ನಿರ್ಲಕ್ಷ್ಯ ಕೂಗು ತಣಿಸಲು ವೇದಿಕೆಯಾಗಿ ಬಳಸಲು ನಿರ್ಧರಿಸಿದ್ದ ಕುಮಾರಸ್ವಾಮಿ, ಬಾಗಿನ ಅರ್ಪಣೆಗೆ ಮುಂದಾಗಿದ್ದರು.

ಆಷಾಢ ಮುಗಿದ ಬೆನ್ನಿಗೆ ಶ್ರಾವಣ ಮಾಸದ ಮೊದಲ ದಿನದ ಬೆಳಗಿನ ಅರ್ಧ ದಿನವನ್ನು ಹುಬ್ಬಳ್ಳಿಯಲ್ಲಿ ನ್ಯಾಯಾಲಯ ಸಂಕೀರ್ಣದ ಕಟ್ಟಡ ಉದ್ಘಾಟನೆಗೆ, ಇನ್ನುಳಿದ ಅವಧಿಯನ್ನು ಕೃಷ್ಣೆಗೆ ಬಾಗಿನ ಅರ್ಪಣೆಗೆ ಮೀಸಲಿಟ್ಟಿದ್ದರು. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ನಲ್ಲಿ ಆಲಮಟ್ಟಿ ಹೆಲಿಪ್ಯಾಡ್‌ಗೆ ಬಂದಿಳಿದು ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಸಿದ್ಧತೆಯೂ ನಡೆದಿತ್ತು.

ಮಳೆಯ ಸ್ವಾಗತ: ಹುಬ್ಬಳ್ಳಿಯಲ್ಲಿ ಭಾರಿ ಮಳೆಯ ಜತೆಗೆ ಮುಂಜಾನೆಯಿಂದಲೇ ಆಲಮಟ್ಟಿ ಸೇರಿದಂತೆ ಸುತ್ತಲಿನ ರಾಂಪುರ, ನಿಡಗುಂದಿ, ಸೀತಿಮತಿಯಲ್ಲಿ ಬಿರುಸಿನ ಮಳೆಯಾಗಿದ್ದು, ಜಲಾಶಯದ ಪರಿಸರದಲ್ಲೂ ಮೋಡ ಮುಸುಕಿದ ವಾತಾವರಣ ಇತ್ತು. ಮಳೆಯ ನಡುವೆಯೇ ಜಲಾಶಯದ ಬಳಿ ನಿರ್ಮಿಸಿರುವ ವಿಶೇಷ ಅಟ್ಟಣಿಗೆಯಲ್ಲಿ ನಿಂತು ಬಾಗಿನ ಬಿಡಲು ಕೃಷ್ಣಾ ಭಾಗ್ಯ ಜಲ ನಿಗಮದ (ಕೆ.ಬಿ.ಜೆ.ಎನ್‌.ಎಲ್) ಅಧಿಕಾರಿಗಳು ವ್ಯವಸ್ಥೆ ಮಾಡಿದ್ದರು.

ಸ್ವತಃ ಬಾಗಲಕೋಟೆ–ವಿಜಯಪುರ ಅವಳಿ ಜಿಲ್ಲೆಗಳ ಉಸ್ತುವಾರಿ ಸಚಿವರು ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದರು. ಆದರೆ ಕಡೆಯ ಕ್ಷಣದಲ್ಲಿ ಹುಬ್ಬಳ್ಳಿಯಿಂದ ಸಚಿವ ಶಿವಾನಂದ ಪಾಟೀಲ ಅವರಿಗೆ ಬಂದ ಕರೆ ಕಾರ್ಯಕ್ರಮ ರದ್ದಾದ ವಿಚಾರವನ್ನು ದೃಢಪಡಿಸಿತು. ಆದರೆ ಇದರ ಸೂಕ್ಷ್ಮತೆ ಗ್ರಹಿಸಿದ ಶಿವಾನಂದ ಪಾಟೀಲರು, ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಅವರಿಗೆ ಉತ್ತರ ಕರ್ನಾಟಕದ ಬಗ್ಗೆ ಇರುವ ವಿಶೇಷ ಅಸ್ಥೆಯನ್ನು ಪದೇ ಪದೇ ಒತ್ತಿ ಹೇಳಿದರು. ಸ್ಥಳೀಯವಾಗಿ ಮುಂದೆ ಎದುರಾಗಬಹುದಾದ ಅಸಮಾಧಾನ ತಣಿಸುವ ಪ್ರಯತ್ನ ಮಾಡಿದರು.

ಮಡುಗಟ್ಟಿದ ನಿರಾಸೆ: ಬಾಗಿನ ಅರ್ಪಣೆ ಕಾರ್ಯಕ್ರಮದ ನೆಪದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕೃಷ್ಣಾ ಕೊಳ್ಳದಲ್ಲಿ ಬಾಕಿ ಇರುವ ನೀರಾವರಿ ಯೋಜನೆಗಳ ಪೂರ್ಣಗೊಳಿಸಲು ವಿಶೇಷ ಪ್ಯಾಕೇಜ್ ಘೋಷಿಸುತ್ತಾರೆ. ಸಂತ್ರಸ್ತರ ಅಳಲಿಗೆ ದನಿಯಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆ ಮೂಲಕ ಅಭಿವೃದ್ಧಿಯ ಸಮತೋಲನಕ್ಕೆ ಇಂಬು ನೀಡಿ, ವಿರೋಧಿಗಳ ಬಾಯಿ ಮುಚ್ಚಿಸಲಿದ್ದಾರೆ ಎಂದು ಯೋಜಿಸಲಾಗಿತ್ತು. ಆದರೆ ಅದ್ಯಾವುದೂ ಆಗಲಿಲ್ಲ.

’ಆಗಸ್ಟ್ ಎರಡನೇ ವಾರ ಈ ಭಾಗದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು. ಆಲಮಟ್ಟಿಗೆ ನೇರ ರೈಲು ಸಂಪರ್ಕವೂ ಇದೆ. ರಸ್ತೆ ಮಾರ್ಗದಲ್ಲಿ ಬರಲು ಹೆದ್ದಾರಿಯೂ ಇದೆ. ಮುಖ್ಯಮಂತ್ರಿ ಬರಲೇಬೇಕು ಎಂದು ಮನಸ್ಸು ಮಾಡಿದ್ದರೆ ಎರಡು ತಾಸು ವಿಳಂಬವಾಗಿಯಾದರೂ ಆಲಮಟ್ಟಿಗೆ ಬರಬಹುದಿತ್ತು’ ಎನ್ನುತ್ತಾರೆ ಬಾಗಲಕೋಟೆ ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ ಸಂಗಮೇಶ ಹಿತ್ತಲಮನಿ.

’ಹುಬ್ಬಳ್ಳಿಗೆ ಬಂದು ಅಲ್ಲಿ ಸಮಯ ಒದಗಿ ಬಂದರೆ ಮಾತ್ರ ಆಲಮಟ್ಟಿಗೆ ಬಂದು ಬಾಗಿನ ಬಿಡುವ ಮನಸ್ಥಿತಿಯೇ ಕುಮಾರಸ್ವಾಮಿ ಅವರಿಗೆ ಉತ್ತರ ಕರ್ನಾಟಕದ ಬಗ್ಗೆ ಇರುವ ನಿರ್ಲಕ್ಷ್ಯ ಧೋರಣೆಯನ್ನು ಬಿಂಬಿಸುತ್ತದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !