ಬೀಡಿ ಕಾಲೊನಿ‌ಯ ಸೌಂದರ್ಯ ವೃದ್ಧಿಸಲಿದೆ ಉದ್ಯಾನ

7
ಚಾಮರಾಜನಗರದ 4ನೇ ವಾರ್ಡ್‌ನಲ್ಲಿ ₹ 10 ಲಕ್ಷ ವೆಚ್ಚದಲ್ಲಿ ನಿರ್ಮಣ, ವಾರದಲ್ಲಿ ಕೆಲಸ ಆರಂಭ ನಿರೀಕ್ಷೆ

ಬೀಡಿ ಕಾಲೊನಿ‌ಯ ಸೌಂದರ್ಯ ವೃದ್ಧಿಸಲಿದೆ ಉದ್ಯಾನ

Published:
Updated:
Prajavani

ಚಾಮರಾಜನಗರ: ನಗರದ ವಿವಿಧ ಕಡೆಗಳಲ್ಲಿ ಇರುವ ಉದ್ಯಾನಗಳು ನಿರ್ವಹಣೆಯ ಕೊರತೆಯಿಂದ ಸೊರಗಿರುವುದರ ನಡುವೆಯೇ, ನಾಲ್ಕನೇ ವಾರ್ಡ್‌ನಲ್ಲಿ ಉದ್ಯಾನದ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. 

ವಾರ್ಡ್‌ನಲ್ಲಿ ಬರುವ ಗಾಳಿಪುರ ಬಡಾವಣೆಯ ಬೀಡಿ ಕಾಲೊನಿಯಲ್ಲಿ ಉದ್ಯಾನ ನಿರ್ಮಾಣವಾಗಲಿದೆ. ಈಗಾಗಲೇ ಉದ್ಯಾನಕ್ಕೆ ಜಾಗ ಗುರುತಿಸಿದ್ದು, ಅದರ ಸುತ್ತ ಬೇಲಿಯನ್ನೂ ಹಾಕಲಾಗಿದೆ. ನಗರಸಭೆಯ ಪ್ರಕಾರ ನಗರದಲ್ಲಿ ಈಗಾಗಲೇ 23 ಉದ್ಯಾನಗಳಿವೆ. ಹೊಸದಾಗಿ ಅಭಿವೃದ್ಧಿಗೊಳ್ಳಲಿರುವ ಹಸಿರು ವನ 24ನೆಯದ್ದಾಗಲಿದೆ.

 ₹ 10 ಲಕ್ಷ ಅನುದಾನ: ₹ 10 ಲಕ್ಷ ವೆಚ್ಚದಲ್ಲಿ ಉದ್ಯಾನ ಅಭಿವೃದ್ಧಿಗೊಳ್ಳಲಿದೆ. ಉದ್ಯಾನದ ನಿರ್ಮಾಣಕ್ಕೆ ಕಳೆದ ವರ್ಷ ನಗರಸಭೆ ಅನುದಾನದ ಅಡಿಯಲ್ಲಿ ₹ 5 ಲಕ್ಷ ಬಿಡುಗಡೆಯಾಗಿತ್ತು. ಹೆಚ್ಚುವರಿ ಕೆಲಸಗಳಿಗೆ ಮತ್ತೆ ₹ 5 ಲಕ್ಷ ಬಿಡುಗಡೆಯಾಗಿದೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ವಾರದಲ್ಲಿ ಕೆಲಸ ಆರಂಭವಾಗಲಿದೆ ಎಂದು ಹೇಳುತ್ತಾರೆ ನಗರಸಭೆ ಅಧಿಕಾರಿಗಳು.

ಏನಿರಲಿದೆ?: 100X100 ವಿಸ್ತೀರ್ಣದ ಜಾಗದಲ್ಲಿ ಉದ್ಯಾನ ನಿರ್ಮಾಣವಾಗಲಿದೆ. ಇಲ್ಲಿ ನಡೆದಾಡುವ ಪಥ, ಮಕ್ಕ‌ಳು ಆಟವಾಡುವ ಉಪಕರಣಗಳು, ಉಯ್ಯಾಲೆಗಳನ್ನು ಅಳವಡಿಸಲಾಗುತ್ತದೆ. ಹುಲ್ಲು ಹಾಸು, ಬೆಂಚುಗಳು, ಅಲಂಕಾರಿಕ ಗಿಡಗಳು ಉದ್ಯಾನದ ಸೌಂದರ್ಯ ಹೆಚ್ಚಿಸಲಿವೆ.

ವಾಯುವಿಹಾರಕ್ಕೆ ಆಹ್ಲಾದಕರ ವಾತಾವರಣವಿರುವ ಉದ್ಯಾನದ ನಿರ್ಮಾಣ ಆಗಬೇಕು. ಮಕ್ಕಳಿಗೆ ಆಟವಾಡಲೂ ಅವಕಾಶ ನೀಡಬೇಕು ಎಂದು ಹೇಳುತ್ತಾರೆ ಸ್ಥಳೀಯರು.

ಶೀಘ್ರ ನಿರ್ಮಿಸಿ: ‘ನಮ್ಮ ಮಕ್ಕಳು ಆಟ ಆಡಲು ನಗರಕ್ಕೆ ಹೋಗುತ್ತಾರೆ. ಈ ಉದ್ಯಾನ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಿ ಮಕ್ಕಳಿಗೆ ಆಟವಾಡಲು ಮುಕ್ತಗೊಳಿಸಬೇಕು. ಹೆಚ್ಚು ಸಮಯ ಮನೆಯಲ್ಲೇ ಇರುವ ಗೃಹಿಣಿಯರಿಗೆ ಸಮೀಪದಲ್ಲೇ ಉದ್ಯಾನವಿದ್ದರೆ ಸ್ವಲ್ಪ ಸಮಯ ಕಾಲ ಕಳೆಯಬಹುದು. ಆರೋಗ್ಯಕರ ವಾತಾವರಣ ಕೂಡ ಸಿಗಲಿದೆ’ ಎಂದು ಸ್ಥಳೀಯ ಮಹಿಳೆಯರು ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ವಚ್ಛತೆ, ಅಭಿವೃದ್ಧಿಗೆ ಒತ್ತು ನೀಡಬೇಕು: ‘ಉದ್ಯಾನ ನಿರ್ಮಾಣ ಮಾಡಿದರಷ್ಟೇ ಸಾಲದು, ವಾರ್ಡ್‌ನ ಎಲ್ಲ ಮೂಲಸೌಲಭ್ಯ ಒದಗಿಸಲು ಸದಸ್ಯರು ಮುಂದಾಗಬೇಕು. ಚರಂಡಿ, ಕುಡಿಯುವ ನೀರು ಎಲ್ಲವೂ ಮುಖ್ಯವಾಗುತ್ತದೆ. ಉದ್ಯಾನದ ಒಳಗೆ ಸ್ವಚ್ಛತೆ ಕಾಪಾಡಬೇಕು. ಸಾಕಷ್ಟು ಬೆಳಕಿನ ವ್ಯವಸ್ಥೆಯೂ ಇರಬೇಕು’ ಎಂದು ನಿವಾಸಿ ಜಬೀರ್‌ ಒತ್ತಾಯಿಸಿದರು.

ಅಂಗನವಾಡಿಗೆ ಹೊಂದಿಕೊಂಡಂತೆ ನಿರ್ಮಾಣ: ‘2 ಸಾವಿರ ಜನಸಂಖ್ಯೆ ಹೊಂದಿರುವ ಬೀಡಿ ಕಾಲೊನಿಯಲ್ಲಿ 30 ವರ್ಷ ಹಳೆಯದಾಗಿರುವ ಅಂಗನವಾಡಿ ಕೇಂದ್ರಕ್ಕೆ ಹೊಂದಿಕೊಂಡಂತೆ ಉದ್ಯಾನ ನಿರ್ಮಾಣವಾಗಲಿದೆ. ಇಲ್ಲಿನ ಮಕ್ಕಳು ಕೂಡ ಈ ಉದ್ಯಾನದಲ್ಲಿ ಆಟ ಆಡಬಹುದು. ಮಕ್ಕಳಿಗೆ ಉತ್ತಮ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಉದ್ಯಾನ ವನ ನಿರ್ಮಾಣವಾಗುತ್ತಿದೆ’ ಎಂದು ಸ್ಥಳೀಯ ಮುಖಂಡ ಸೈಯದ್‌ ಜಬೀವುಲ್ಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ವರ್ಷ ಸಂಸದರ ಅನುದಾನ ₹ 1 ಲಕ್ಷದಲ್ಲಿ ಅಂಗನವಾಡಿ ಕಟ್ಟಡ ದುರಸ್ತಿ ಮಾಡಲಾಗಿದೆ. ಸುಂದರ ಕಟ್ಟಡಕ್ಕೆ ಮರುಜೀವ ಬಂದಿದೆ. ಈ ವರ್ಷ ಇದಕ್ಕೆ ಹೊಂದಿಕೊಂಡಂತೆ ಸುತ್ತಲೂ ಕಬ್ಬಿಣ ಕಾಪೌಂಡ್‌ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮೂರು ವಾರ್ಡ್‌ಗಳಿಗೆ ಅನುಕೂಲ

‘ಈ ಉದ್ಯಾನದಿಂದ 3, 4 ಮತ್ತು 5ನೇ ವಾರ್ಡ್‌ಗಳ ಜನರಿಗೆ ಅನುಕೂಲವಾಗಲಿದೆ. ಈ ವರೆಗೂ ಇಲ್ಲಿನವರು ನಗರದ ಉದ್ಯಾನಗಳಿಗೆ ವಾಯುವಿಹಾರಕ್ಕೆ ಹೋಗುತ್ತಿದ್ದರು. ಅಂಗನವಾಡಿಗೆ ಹೊಂದಿಕೊಂಡಂತೆ ಉದ್ಯಾನ ನಿರ್ಮಾಣ ಆಗಲಿರುವುದರಿಂದ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೂ ಸಹಕಾರಿಯಾಗಲಿದೆ’ ಎಂದು ವಾರ್ಡ್‌ ಸದಸ್ಯ ಎನ್‌.ಖಲೀವುಲ್ಲಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲ್ಲಿನ ಮಕ್ಕಳು ಆಟವಾಡಲು ನಗರದ ಹೌಸಿಂಗ್‌ ಬೋರ್ಡ್‌ನಲ್ಲಿರುವ ಉದ್ಯಾನಕ್ಕೆ ಹೋಗಬೇಕಿತ್ತು. ಈಗ ಕಾಲೊನಿಯಲ್ಲೇ ಉದ್ಯಾನ ನಿರ್ಮಾಣವಾಗುತ್ತಿದೆ. ಮಕ್ಕಳು ಎಲ್ಲಿಯೂ ಹೋಗುವ ಅಗತ್ಯವಿಲ್ಲ. ಏಳೆಂಟು ದಿನದಲ್ಲಿ ಕೆಲಸಗಳು ಆರಂಭವಾಗಲಿದೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !