ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದು–ಮುದ್ದಾದ ಜುಗಲ್‌ಬಂದಿ ಗಣಪ

ಕಲಾಪ
Last Updated 2 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಸದ್ಯ ಗಣೇಶನನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿ ಇದ್ದೇವೆ. ಎತ್ತ ನೋಡಿದರೂ ಗಣೇಶ ಅಂದ್ರೆ ಗಣೇಶ. ವಿವಿಧ ವಾದ್ಯಗಳನ್ನು ನುಡಿಸುವ ವಾದ್ಯಗಣೇಶ ಎಲ್ಲಿಯೂ ಕಾಣಿಸುತ್ತಿಲ್ಲ ಎನಿಸಿತೆ? ಒಮ್ಮೆ ಜಯನಗರದ ಕಲಾರಾಧನ ಕಲಾ ಗ್ಯಾಲರಿಗೆ ಭೇಟಿ ಕೊಡಿ.

ಇಲ್ಲಿರುವ ಕಲಾಕೃತಿಗಳಲ್ಲಿ ಗಣಪ ವಿವಿಧ ವಾದ್ಯಗಳನ್ನು ನುಡಿಸುವುದರಲ್ಲಿ ತಲ್ಲೀನ. ಇವನ ಸಂಗೀತಕ್ಕೆ ತಲೆದೂಗದವರೇ ಇಲ್ಲ. ಒಬ್ಬ ಗಣೇಶನ ಸಂಗೀತ ಆಲಿಸಿದವರ ತಲೆಗೂದಲು ನೆಟ್ಟಗಾಗಿದೆ. ಮತ್ತೊಬ್ಬ ಗಣೇಶನೇಕೋ ಹಿಂಜರಿಕೆಯಿಂದಲೇ ಆಶೀರ್ವಾದ ಮಾಡುತ್ತಿದ್ದಾನೆ.

ಹಾಗೇ ಮುಂದುವರೆದರೆ ಜುಗಲ್‌ಬಂದಿ ಗಣಪನ ಕಲಾಕೃತಿಗಳಿಗೆ ಮುಖಾಮುಖಿಯಾಗುವಿರಿ. ಅಲ್ಲೆಲ್ಲೋ ಮೂಲೆಯಲ್ಲಿ ಕುಳಿತ ಒಂಟಿ ವಿನಾಯಕ ತಣ್ಣಗೆ ತಂಬೂರಿ ನುಡಿಸುತ್ತಾನೆ.

ಹೀಗೆ ಚಿತ್ರ–ವಿಚಿತ್ರ ಎನಿಸುವ, ಆದರೂ ಮನಸ್ಸಿಗೆ ಮುದ ನೀಡುವ ಗಣಪಗಳು ಹುಟ್ಟಿದ್ದು ಶಕುಂತಲಾ ಜೈನ್‌ ಅವರ ಕರಗಳಲ್ಲಿ. ಗಣೇಶ ಹಬ್ಬದ ಪ್ರಯುಕ್ತ ಇವರು ರಚಿಸಿರುವ ಗಣೇಶನ ಭಿನ್ನ– ವಿಭಿನ್ನ ತೈಲ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ರಾಜಸ್ತಾನ ಮೂಲದ ಶಕುಂತಲಾ ಹುಟ್ಟಿ, ಬೆಳೆದದ್ದು ತುಮಕೂರಿನಲ್ಲಿ. ಎಳವೆಯಿಂದಲೂ ಚಿತ್ರಕಲೆಯಲ್ಲಿ ಇವರಿಗೆ ಆಸಕ್ತಿ. ಮದುವೆಯಾದ ನಂತರ ಚಿತ್ರಕಲೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡರು.

ಇವರ ಶ್ರದ್ಧೆ ಮತ್ತು ಆಸಕ್ತಿ ಗುರುತಿಸಿದ ಕುಟುಂಬದ ಸದಸ್ಯರು, ಸ್ನೇಹಿತರು ಪ್ರೋತ್ಸಾಹಿಸಿದರು. ಚಿತ್ರಕಲೆಯ ಪ್ರಧಾನ ವಸ್ತು ಅಧ್ಯಾತ್ಮ. ಗಣೇಶ, ಶಿವ, ಬುದ್ಧ ಎಂದರೆ ಬಲು ಪ್ರೀತಿ ಇವರಿಗೆ. ಶಿವ, ಬುದ್ಧ, ಗಣೇಶ ಯಾರೇ ಆಗಲಿ ಇವರ ಕಲಾಪ್ರಪಂಚದಲ್ಲಿ ವಿಶಿಷ್ಟ ಅವತಾರಗಳಲ್ಲಿ ಕಾಣಿಸುತ್ತಾರೆ ಎಂಬುದಕ್ಕೆ ಇಲ್ಲಿರುವ ಗಣೇಶನ ತೈಲಚಿತ್ರಗಳೇ ಸಾಕ್ಷಿ.

‘ಈವರೆಗೆ ಗಣೇಶನನ್ನು ಕುರಿತು 580ಕ್ಕೂ ಹೆಚ್ಚು ಚಿತ್ರಗಳನ್ನು ಬಿಡಿಸಿದ್ದೇನೆ.  ಹಬ್ಬದ ಪ್ರಯುಕ್ತ 40 ಗಣಪ ಕಲಾಕೃತಿಗಳನ್ನು ಪ್ರದರ್ಶನಕ್ಕಿಟ್ಟಿದ್ದೇನೆ. ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂಬುದು ಶಕುಂತಲಾ ಅವರ ಮಾತು. ಎರಡು ಅಡಿ ಎತ್ತರದ ಗಣೇಶನಿಂದ ಹಿಡಿದು ಎಂಟು ಅಡಿ ಎತ್ತರದ ಗಣೇಶಗಳನ್ನು ತೈಲ ವರ್ಣದಲ್ಲಿ ಇವರು ಬಿಡಿಸಿದ್ದಾರೆ. ಹಲವು ಕಡೆ ಪ್ರದರ್ಶನವನ್ನೂ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT