ಶುಕ್ರವಾರ, ಸೆಪ್ಟೆಂಬರ್ 24, 2021
21 °C
ಒಲಿಂಪಿಯನ್‌ ದೀಪಾ ಕರ್ಮಾಕರ್‌ ಮನದ ಮಾತು

ಜಿಮ್ನಾಸ್ಟಿಕ್ಸ್‌ನಲ್ಲಿ ಆಸಕ್ತಿಯೇ ಇರಲಿಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

ಜಿಮ್ನಾಸ್ಟಿಕ್ಸ್‌ನಲ್ಲಿ ಆಸಕ್ತಿಯೇ ಇರಲಿಲ್ಲ

ಭುವನೇಶ್ವರ : ನಾನು ಮುಂದೊಂದು ದಿನ ಶ್ರೇಷ್ಠ ಜಿಮ್ನಾಸ್ಟಿಕ್ಸ್‌ ಪಟು ಆಗುತ್ತೇನೆ ಎಂದು ಖಂಡಿತ ಕನಸು ಕಂಡಿರಲಿಲ್ಲ. ಏಕೆಂದರೆ ಈ ಕ್ರೀಡೆಯಲ್ಲಿ  ಎಳ್ಳಷ್ಟು ಆಸಕ್ತಿ ಇರಲಿಲ್ಲ. ಜೊತೆಗೆ ಜಿಮ್ನಾಸ್ಟಿಕ್ಸ್‌ ಏನು ಎಂಬುದರ ಅರಿವೂ ಇರಲಿಲ್ಲ...

ಹೀಗೆ ತಮ್ಮ ಅಂತರಾಳವನ್ನು ಬಿಚ್ಚಿಟ್ಟವರು ಒಲಿಂಪಿಯನ್‌ ಜಿಮ್ನಾಸ್ಟಿಕ್‌ ಪಟು ದೀಪಾ ಕರ್ಮಾಕರ್‌.ತ್ರಿಪುರದ ದೀಪಾ ಅವರು ರಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿ ಚಾರಿತ್ರಿಕ ಸಾಧನೆ ಮಾಡಿದ್ದರು. ಶನಿವಾರ ಇಲ್ಲಿ ನಡೆದ ಸಮಾರಂಭದಲ್ಲಿ ಅವರು ಹಲವು ವಿಷಯಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.‘ ಕೋಚ್‌ ವಿಶ್ವೇಶ್ವರ ನಂದಿ ಅವರು ನನ್ನ ಬದುಕು ರೂಪಿಸಿದರು. ಅವರು ನನ್ನ ಪಾಲಿಗೆ ದೇವರಿದ್ದಂತೆ. ಆರಂಭದ ದಿನಗಳಲ್ಲಿ ಅವರು  ಈ ಕ್ರೀಡೆಯ ಹಲವು ಮಜಲುಗಳನ್ನು ಹೇಳಿಕೊಟ್ಟರು. ಅವರ ಮಾರ್ಗದರ್ಶನದಲ್ಲಿ ನಾನು ಅನೇಕ ಕೌಶಲಗಳನ್ನು ಕಲಿತು, ಜೂನಿ ಯರ್‌ ರಾಷ್ಟ್ರೀಯ ಚಾಂಪಿಯನ್‌ ಷಿಪ್‌ಗಳಲ್ಲಿ ಪದಕಗಳನ್ನು ಗೆದ್ದೆ. ಅದು ನನ್ನ ಕ್ರೀಡಾ ಬದುಕಿಗೆ ಮಹತ್ವದ ತಿರುವು ನೀಡಿತು. 2009ರಲ್ಲಿ  ಭಾರತ ತಂಡದ ಶಿಬಿರಕ್ಕೆ ಆಯ್ಕೆಯಾದಾಗ ಅನೇಕರು ನೀವು ಬಾಂಗ್ಲಾದೇಶದವರೇ ಎಂದು ಪ್ರಶ್ನಿಸಿದ್ದರು’ ಎಂದು ಅಗರ್ತಲದ ದೀಪಾ ನೆನಪಿನ ಪುಟವನ್ನು ತಿರುವಿ ಹಾಕಿದ್ದಾರೆ.‘ಲಂಡನ್‌ನಲ್ಲಿ ನಡೆದ ಚಾಂಪಿಯನ್‌ ಷಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದೆ. ಅದು ನನ್ನ ಪಾಲಿನ ಮೊಟ್ಟಮೊದಲ ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ ಆಗಿತ್ತು. 2010ರಲ್ಲಿ ದೆಹಲಿಯಲ್ಲಿ ಆಯೋಜನೆಯಾಗಿದ್ದ ಕಾಮನ್‌ವೆಲ್ತ್‌ ಕೂಟಕ್ಕೆ ಆಯ್ಕೆ ಟ್ರಯಲ್ಸ್‌ ನಡೆಸಲಾಗಿತ್ತು. ಅದರಲ್ಲಿ ಭಾಗವಹಿಸಿ ಹಿರಿಯ ಮತ್ತು ಅನುಭವಿ ಜಿಮ್ನಾಸ್ಟಿಕ್ಸ್‌ ಪಟುಗಳನ್ನು ಹಿಂದಿಕ್ಕಿದ್ದೆ. ಆದರೆ ಕೂಟದಲ್ಲಿ ಪದಕದ ಸಾಮರ್ಥ್ಯ ಮೂಡಿಬರಲಿಲ್ಲ. ಇದರಿಂದ ನಿರಾಸೆಗೊಳಗಾಗದೆ ಕಠಿಣ ಅಭ್ಯಾಸಕ್ಕೆ ಅಣಿಯಾದೆ’ ಎಂದಿದ್ದಾರೆ.‘ತವರಿನಲ್ಲಿ ನಡೆದ ಕಾಮನ್‌ವೆಲ್ತ್‌ ಕೂಟದ ಪುರುಷರ ವಿಭಾಗದಲ್ಲಿ ಆಶಿಶ್‌ ಕುಮಾರ್‌ ಅವರು ಕಂಚಿನ ಸಾಧನೆ ಮಾಡಿದ್ದರು. ಅವರ ಸಾಧನೆಯಿಂದ ಪ್ರೇರೇಪಿತಳಾದ ನಾನು 2014 ಗ್ಲಾಸ್ಗೊ ಕೂಟದಲ್ಲಿ ಪದಕ ಗೆಲ್ಲಲೇಬೇಕೆಂದು ಪಣ ತೊಟ್ಟೆ. ಜೊತೆಗೆ ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಸಾಗಿದೆ. ಅದರ ಫಲವಾಗಿ ಕೂಟದಲ್ಲಿ ಕಂಚಿಗೆ ಕೊರಳೊಡ್ಡಲು ಸಾಧ್ಯವಾಯಿತು’ ಎಂದು ದೀಪಾ ಆರಂಭದ ದಿನಗಳನ್ನು ಮೆಲುಕು ಹಾಕಿದ್ದಾರೆ.‘ಈ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲೇಬೇಕು ಎಂದು ದೃಢವಾಗಿ ನಿಶ್ಚಯಿಸಿದ್ದೆ. ಈ ಹಾದಿ ಸುಲಭದ್ದಂತೂ ಆಗಿರಲಿಲ್ಲ. ಇದಕ್ಕಾಗಿ  ಜೀವವನ್ನೇ ಮುಡಿಪಾಗಿಟ್ಟಿದ್ದೆ. ಪ್ರೊಡೊನೊವಾ ವಾಲ್ಟ್‌ ಅತ್ಯಂತ ಅಪಾಯಕಾರಿ ಕಸರತ್ತಾಗಿದೆ. ಇದು ಗೊತ್ತಿದ್ದರೂ ಅಭ್ಯಾಸದ ವೇಳೆ  1000 ಬಾರಿ ಈ ಕಸರತ್ತು ಮಾಡಿದ್ದೆ. ಇದೆಲ್ಲದರ ಫಲ ಎಂಬಂತೆ ಒಲಿಂಪಿಕ್ಸ್‌ನಲ್ಲಿ ಫೈನಲ್‌ಗೆ ಅರ್ಹತೆ ಗಳಿಸಿದೆ. ಜೊತೆಗೆ ಕಂಚು ಗೆಲ್ಲುವ ಅವಕಾಶವನ್ನು ಅಲ್ಪದರಲ್ಲಿ ಕಳೆದುಕೊಂಡೆ. ಮಹಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದು ವಿಶ್ವಾಸವನ್ನು ಹೆಚ್ಚಿಸಿದೆ’ ಎಂದು ತಿಳಿಸಿದ್ದಾರೆ.‘ಎಂಟನೇಯವಳಾಗಿ ಫೈನಲ್‌ ಪ್ರವೇಶಿಸಿದ್ದಾಗ ತುಂಬಾ ನಿರಾಸೆ ಯಾಗಿತ್ತು. ಆ ಹಂತದಲ್ಲಿ ಕೋಚ್‌ ವಿಶ್ವೇಶ್ವರ ನಂದಿ ಅವರು  ನನ್ನಲ್ಲಿ ನವಚೈತನ್ಯ ತುಂಬಿದರು. ಫೈನಲ್‌ಗೂ ಮುನ್ನ ಅವರಾಡಿದ ಒಂದೊಂದು ಮಾತು ನನ್ನನ್ನು ಕಾಡುತ್ತಿತ್ತು. ಎಷ್ಟೇ ಕಷ್ಟವಾದರೂ ಸರಿ ಅತ್ಯಂತ ಸೊಗಸಾಗಿ ಕಸರತ್ತು ಮಾಡಬೇಕು ಎಂದು ನಿಶ್ಚಯಿಸಿದ್ದೆ. ಹೀಗಾಗಿ  ಚೀನಾ, ಜಪಾನ್‌ನ ಜಿಮ್ನಾಸ್ಟ್‌ ಗಳನ್ನು ಹಿಂದಿಕ್ಕಲು ಸಾಧ್ಯವಾಯಿತು’ ಎಂದು ದೀಪಾ ನುಡಿದಿದ್ದಾರೆ.‘ಅಮೆರಿಕ, ರಷ್ಯಾ, ಚೀನಾದಂತಹ ದೇಶಗಳಲ್ಲಿ ಮಹತ್ವದ ಕೂಟಕ್ಕೆ ಅರ್ಹತೆಗಳಿಸಿದ ಸ್ಪರ್ಧಿಗಳಿಗೆ ಸಿದ್ಧತೆ ಕೈಗೊಳ್ಳಲು ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಆದರೆ ಭಾರತದಲ್ಲಿ ಸಾಧನೆ ಮೂಡಿ ಬಂದ ಬಳಿಕ ಹಣದ ನೆರವು ಸಿಗುತ್ತದೆ. ವಿದೇಶಗಳಿಗೂ ನಮಗೂ ಇರುವ ವ್ಯತ್ಯಾಸ ಇದು. ಪರಿಸ್ಥಿತಿ ಹೀಗಿರುವಾಗ ನಮ್ಮವರಿಂದ ಪದಕದ ಸಾಮರ್ಥ್ಯವನ್ನು ನಿರೀಕ್ಷಿಸುವುದಾದರೂ ಹೇಗೆ’ ಎಂದು ದೀಪಾ ಅವರ ಕೋಚ್‌ ನಂದಿ ಪ್ರಶ್ನಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.