ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧವೆಂಬ ರೋಚಕ ಕಲ್ಪನೆ!

Last Updated 30 ಆಗಸ್ಟ್ 2019, 5:55 IST
ಅಕ್ಷರ ಗಾತ್ರ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತ ಇತ್ತೀಚೆಗೆ ನಡೆಸಿದ ನಿರ್ದಿಷ್ಟ ದಾಳಿಯ (ಸರ್ಜಿಕಲ್ ಸ್ಟ್ರೈಕ್) ಬೆನ್ನ ಹಿಂದೆಯೇ, ನಮ್ಮ ಕೆಲವು ರಾಜಕೀಯ ಮುಖಂಡರು ಈ ವಿಚಾರವಾಗಿ ಎದೆಯುಬ್ಬಿಸಿ ವಿಜಯೋತ್ಸಾಹವನ್ನು ಮೆರೆದರು. ಈ ದಾಳಿಯ ತಾತ್ಕಾಲಿಕ ಯಶಸ್ಸು ನಮ್ಮ ಮುಖಂಡರನ್ನು ಕುರುಡಾಗಿಸಿದೆ. ಇದರ ನಡುವೆ, ಯುದ್ಧಗಳ ನಿಷ್ಫಲತೆ ಹಾಗೂ ನಮ್ಮ ವಿರುದ್ಧ ಸಂಚು ಮಾಡುತ್ತಿರುವ ಚೀನಾ ಜೊತೆ ಪಾಕಿಸ್ತಾನ ತನ್ನ ಸಂಬಂಧ ಬಲಪಡಿಸಿಕೊಂಡು ಸಮಯಕ್ಕೆ ಹೊಂಚು ಹಾಕುತ್ತಿರಬಹುದಾದ ಸಾಧ್ಯತೆ ಕಡೆ ನಮ್ಮ ಗಮನ ಗೌಣವಾಗಿದೆ.

ಭಾರತ ಮತ್ತು ಪಾಕಿಸ್ತಾನ ಇದುವರೆಗೂ ನಾಲ್ಕು ಬಾರಿ ಯುದ್ಧ ಭೂಮಿಯಲ್ಲಿ ಸೆಣಸಾಡಿವೆ. ತಾಷ್ಕೆಂಟ್ ಒಪ್ಪಂದದ ಹೊರತಾಗಿಯೂ ಪಾಕಿಸ್ತಾನದ ಕಡೆಯಿಂದ ನಿರಂತರವಾಗಿ ಒಳನುಸುಳುವಿಕೆಗಳು ನಡೆದಿವೆ.

ಈ ದುಷ್ಕೃತ್ಯಗಳಿಗೆ ಸಮರೋತ್ಸಾಹವೊಂದೇ ಪರಿಹಾರವಲ್ಲ. ಕಟು ಸಮಾಲೋಚನೆ ನಡೆಸಿ ಪರ್ಯಾಯ ಮಾರ್ಗಅರಸಬೇಕೇ ಹೊರತು ಯುದ್ಧ ಸಾಮಗ್ರಿಗಳ ಧೈರ್ಯದಿಂದ ರಣಭೂಮಿಯನ್ನು ಅರಸುವುದಲ್ಲ. ಒಂದುಪಕ್ಷ ಪಾಕಿಸ್ತಾನಕ್ಕೆ ಕಾಶ್ಮೀರವನ್ನು ವಶಪಡಿಸಿಕೊಳ್ಳುವುದಾಗಲಿ, ನಮ್ಮನ್ನು ಸೋಲಿಸುವುದಾಗಲಿ ಮುಖ್ಯವಾಗದೆ, ಜೀವ ಹಾನಿಯುಂಟು ಮಾಡುವುದೇ ಗುರಿಯಾಗಿ, ಅಣ್ವಸ್ತ್ರಗಳನ್ನು ಹರಿಬಿಟ್ಟರೆ ನಂತರದ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳುವುದು ಸುಲಭವಲ್ಲ.

ಒಂದೆಡೆ ಭಾರತ ನಿರ್ದಿಷ್ಟ ದಾಳಿ ನಡೆಸಿತು. ಮತ್ತೊಂದೆಡೆ ಆಂತರಿಕ ಯುದ್ಧಗಳಿಗೆ ಮಂಗಳ ಹಾಡಲು ಪಟ್ಟ ಶ್ರಮದ ಫಲವಾಗಿ ಕೊಲಂಬಿಯಾದ ಅಧ್ಯಕ್ಷ ಉವಾನ್ ಸ್ಯಾಂಟೋಸ್ ಅವರು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ವಿಪರ್ಯಾಸವೆಂದರೆ, ಗಾಂಧಿ ಜಯಂತಿ ಈ ಎಲ್ಲಾ ವಿದ್ಯಮಾನಗಳ ಆಸುಪಾಸಿನಲ್ಲೇ ಇದ್ದದ್ದು. ಈ ವರ್ಷದ ಗಾಂಧಿ ಜಯಂತಿ ಸಮಯಕ್ಕೆ ಪಾಕಿಸ್ತಾನದ ಜೊತೆಗಿನ ಭಾರತದ ಸಂಬಂಧ ಮತ್ತಷ್ಟು ಹದಗೆಟ್ಟು, ಅಲ್ಲಿನ ಸೇನಾ ಮುಖ್ಯಸ್ಥರು ‘ನಾವು ಭಾರತವನ್ನು ಸಂಪೂರ್ಣವಾಗಿ ತೊಡೆದುಹಾಕುತ್ತೇವೆ’ ಎಂದು ಹೇಳುವಷ್ಟರ ಮಟ್ಟಿಗೆ ಹೋಗಿದೆ. ಎರಡೂ ದೇಶಗಳ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಸಂಬಂಧಗಳಿಗೆ ದ್ವೇಷದ ದಳ್ಳುರಿ ತಿಲಾಂಜಲಿ ನೀಡಬಹುದು ಎಂಬ ಆತಂಕ ಮೂಡಿದೆ.

ಸಿನಿಮೀಯವಾಗಿ ಯೋಚಿಸಿದರೆ ಯುದ್ಧ ಎಂಬ ಕಲ್ಪನೆಯು ರೋಚಕ ಎನಿಸಬಹುದು. ಯುದ್ಧ ವಿಮಾನಗಳ ಸದ್ದು, ಮಳೆಯೋಪಾದಿಯಲ್ಲಿ ಹೊಮ್ಮುವ ಗುಂಡುಗಳು, ಎಲ್ಲೆಂದರಲ್ಲಿ ಬಾಂಬುಗಳ ಸದ್ದು ಮೈನವಿರೇಳುವಂತೆ ಮಾಡಬಹುದು. ಆದರೆ ಈ ರೋಚಕ ಕಲ್ಪನೆಯಲ್ಲಿ ನಾವು ಮರೆಯುವುದು ಅದೇ ಯುದ್ಧದ ಶೌರ್ಯ ಪ್ರದರ್ಶನದ ವೇಳೆಯಲ್ಲಿ ರಕ್ತವೆಷ್ಟು ಹರಿಯಿತು ಮತ್ತು ಹೆಣಗಳು ಎಷ್ಟು ಉರುಳಿದವು ಎಂಬುದನ್ನು. ಮನುಷ್ಯನ ಇತಿಹಾಸದಲ್ಲಿ ನಡೆದಿರುವ ಲೆಕ್ಕವಿಲ್ಲದಷ್ಟು ಯುದ್ಧಗಳಲ್ಲಿ ನಮ್ಮ ಮೇಲೆ ಗಣನೀಯವಾದ ಪ್ರಭಾವ ಬೀರಿದ್ದು ಮಹಾಯುದ್ಧಗಳು! ಈ ಮಹಾಯುದ್ಧಗಳ ಪರಿಣಾಮವಾಗಿ ಯುರೋಪ್ ಕಂಡಿದ್ದು ರಾಕ್ಷಸ ವ್ಯಾಪ್ತಿಯ ಕ್ರೂರತ್ವ. ಇದರಿಂದ ಅದು ಅರಿತದ್ದು ‘ಪ್ರತೀ ವ್ಯಕ್ತಿಗೂ ತನ್ನ ಸ್ವಾತಂತ್ರ್ಯವನ್ನು ಬಯಸುವ ಹಕ್ಕಿದೆ ಮತ್ತು ಅದನ್ನು ಕಾಪಾಡಿಕೊಳ್ಳುವ ಹಕ್ಕೂ ಇದೆ’ ಎಂಬುದನ್ನು. ಜೊತೆಗೆ, ಸಹಬಾಳ್ವೆ ಪಾಲಿಸುವುದರಲ್ಲಿ ಸಾಮಾಜಿಕ ಅಭಿವೃದ್ಧಿಯ ರಹಸ್ಯ ಅಡಗಿದೆ ಎಂಬುದನ್ನು ಅರಿಯುವ ಹೊತ್ತಿಗೆ ಯುರೋಪ್ ಅಗಣಿತ ಪ್ರಮಾಣದಲ್ಲಿ ಹಣವನ್ನು ಮಾತ್ರ ಕಳೆದುಕೊಳ್ಳಲಿಲ್ಲ; ಅದಕ್ಕಿಂತ ಅಮೂಲ್ಯವಾದ ತನ್ನ ಜನರ ಜೀವವನ್ನು ಕಳೆದುಕೊಂಡಿತು.

ಅಮೆರಿಕದ ಬರಹಗಾರ ಅರ್ನೆಸ್ಟ್ ಹೆಮ್ಮಿಂಗ್ವೆ ‘ಎ ಫೇರ್‌ವೆಲ್‌ ಟು ಆರ್ಮ್ಸ್’ ಕೃತಿಯನ್ನು ಬರೆಯಲು ಮೂಲ ಕಾರಣ ಅವರ ಯುದ್ಧ ಅನುಭವ. ಮೊದಲ ಮಹಾಯುದ್ಧದ ಸಮಯದಲ್ಲಿ ಸ್ವಯಂ ಸ್ಫೂರ್ತಿಯಿಂದ ಗಾಯಾಳುಗಳನ್ನು ಸಾಗಿಸಲು ಆಂಬುಲೆನ್ಸ್ ಚಾಲಕರಾಗಿದ್ದ ಹೆಮ್ಮಿಂಗ್ವೆ, ಗಂಭೀರವಾಗಿ ಗಾಯಗೊಂಡು ಯುದ್ಧದ ಕರಾಳ ಮುಖವನ್ನು ಸ್ವತಃ ಅನುಭವಿಸಿದರು, ತಮ್ಮ ಕೃತಿಯಲ್ಲಿ ದುರಂತವನ್ನೇ ಪಾತ್ರವನ್ನಾಗಿಸಿದರು.

ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ಬರುವ ರಾವಣ ನಮ್ಮ ಕಣ್ಣಿಗೆ ಉದಾತ್ತ ಮನಸ್ಸಿನ ಮಹಾರಾಜ ಎಂದು ಕಾಣಿಸಲು ಮುಖ್ಯ ಕಾರಣ, ರಾಮನನ್ನು ಯುದ್ಧದಲ್ಲಿ ಎದುರಿಸಲು ಸೈನ್ಯವನ್ನು ತೆಗೆದುಕೊಂಡು ಹೋಗಲು ಅವನು ನಿರಾಕರಿಸುವಂತೆ ಕುವೆಂಪು ಅವರು ಮಾಡಿದ್ದು. ಮಂಡೋದರಿಯನ್ನು ಉದ್ದೇಶಿಸುತ್ತ ರಾವಣನು, ತಾನು ಯಾವ ಕಾರಣಕ್ಕೂ ತನ್ನ ದೇಶದಲ್ಲಿ ‘ವಿಧವೆಯರು, ಅನಾಥ ಮಕ್ಕಳು, ಶೋಕಭರಿತ ತಾಯಂದಿರ ಸಂಖ್ಯೆಯನ್ನು ಹೆಚ್ಚು ಮಾಡುವುದಿಲ್ಲ’ ಎನ್ನುತ್ತಾನೆ. ಕುವೆಂಪು ಅವರ ಮೇಲೆ ಗಾಢವಾಗಿ ಪ್ರಭಾವ ಬೀರಿದ್ದು ರಷ್ಯಾದ ಲಿಯೊ ಟಾಲ್ಸ್‌ಟಾಯ್‌ ಅವರ ‘ವಾರ್ ಅಂಡ್ ಪೀಸ್’ ಕೃತಿ.

ಇದು ನಮಗೆ ಯುದ್ಧದ ಭೀಕರತೆಯ ಮೇಲೆ ಗಮನಾರ್ಹವಾಗಿ ಬೆಳಕನ್ನು ಚೆಲ್ಲುವ ವಾಸ್ತವವಾದಿ ಚಿತ್ರಣವಾಗಿ ಕಾಣುತ್ತದೆ. ಟಾಲ್ಸ್‌ಟಾಯ್‌ ಅವರ ಮುಖ್ಯ ಉದ್ದೇಶವಿದ್ದದ್ದು ಇತಿಹಾಸಕಾರರನ್ನು ಅಣಕ ಮಾಡುವುದು ಮತ್ತು ಇತಿಹಾಸವು ಸತ್ಯವನ್ನು ಇದ್ದ ಹಾಗೆಯೇ ಹೇಳುವ ದಿಟ್ಟತನತೋರಬೇಕೆಂದು ಸಾರುವುದು. ಒಟ್ಟಿನಲ್ಲಿ ಸಾಹಿತಿಗಳ ನಿಲುವು ಯುದ್ಧದ ವಿರುದ್ಧವಾಗಿದ್ದು ಶಾಂತಿ ಪ್ರತಿಪಾದಿಸುವುದಾಗಿದೆ. ಕುವೆಂಪು ವಿಶ್ವ ಮಾನವನ ಚಿತ್ರವನ್ನು ಕಲ್ಪಿಸಿದರೆ, ಬೇಂದ್ರೆ ವಿಶ್ವಮೈತ್ರಿಯನ್ನು ಕಲ್ಪಿಸಿದರು, ಅವಧೂತರ ನೆಲೆಗಟ್ಟಿನಲ್ಲಿ ಅದನ್ನು ಬಲವಾಗಿ ಪ್ರತಿಪಾದಿಸಿದರು.

ಯುದ್ಧವೆಂಬ ಜೀವವಿರೋಧಿ ನೀತಿಯ ಬಗ್ಗೆ ನಮಗೆ ತಿಳಿ ಹೇಳಿರುವ ಸಾಹಿತಿಗಳಲ್ಲದೆ ಇತರ ನೂರೆಂಟು ಜನರಲ್ಲಿ ಅಶೋಕ ಮತ್ತು ಬುದ್ಧನನ್ನು ನಾವು ಇಂದಿಗೂ ಮರೆಯಲು ಸಾಧ್ಯವಿಲ್ಲ. ಬಿ.ಆರ್.ಅಂಬೇಡ್ಕರ್ ತಳ ಸಮುದಾಯಗಳಿಗೆ ಹೋರಾಟದ ಮಾರ್ಗವನ್ನು ಹೇಳಿಕೊಟ್ಟಿದ್ದು ಶಿಕ್ಷಣ, ಸಂಘಟನೆ, ಚಳವಳಿ ಎಂಬ ಮಂತ್ರಗಳ ಮೂಲಕ. ಹಾಗೆಯೇ ಮಹಾತ್ಮ ಗಾಂಧಿ ಹೋರಾಟದ ದಾರಿ ಕಂಡುಕೊಂಡಿದ್ದು ನಿಶ್ಶಸ್ತ್ರೀಕರಣ ಮತ್ತು ಸತ್ಯಾಗ್ರಹ ಎಂಬ ಮೂಲ ಮಂತ್ರಗಳ ಮೂಲಕ. ಅವರಿಗೆ ಸತ್ಯಾಗ್ರಹ ಎಂಬುದು ಅರಿವಾಗಿದ್ದು ಅಧ್ಯಾತ್ಮದ ನೆಲೆಯಲ್ಲಿ. ಅದು ಅವರ ಪಾಲಿಗೆ ಆಧ್ಯಾತ್ಮಿಕ ಶಕ್ತಿ ಮತ್ತು ತ್ಯಾಗದಿಂದ ದೊರೆಯುವ ಆತ್ಮದ ಶುದ್ಧೀಕರಣ. ‘ಸತ್ಯಾಗ್ರಹದಲ್ಲಿ ಸತ್ಯದ ಸಮರ್ಥನೆಯಾಗುವುದು ಎದುರಾಳಿಗೆ ನೋವುಂಟು ಮಾಡುವ ಮೂಲಕ ಅಲ್ಲ, ನಮ್ಮ ಮೇಲಿನ ಪ್ರಯೋಗದ ಮೂಲಕ’ ಎಂದಿದ್ದಾರೆ ಅವರು.

ಗಾಂಧಿ ಜಯಂತಿ ಆಚರಣೆಯಲ್ಲಿ ನಮಗಿರುವುದು ಒಂದೇ ಕಾರ್ಯಸೂಚಿ. ಗಾಂಧೀಜಿಗೆ ಪ್ರಿಯವಾದ ‘ವೈಷ್ಣವ ಜನತೋ’ ಹಾಡನ್ನು ಸುಶ್ರಾವ್ಯವಾಗಿ ಹಾಡಿ ಅಥವಾ ಹಾಡಿಸಿ, ಅವರ ಬಗ್ಗೆ ಒಂದೆರಡು ಮಾತನ್ನು ಆಡಲು ಅತಿಥಿಯನ್ನು ಗೊತ್ತುಪಡಿಸಿ, ಅವರ ಭಾಷಣ ಕೇಳಿ, ಕೊನೆಗೆ ಗಾಂಧಿಯವರ ಒಂದೆರಡು ವಿಚಾರಗಳನ್ನು ಮೆಲುಕು ಹಾಕುತ್ತ ಮನೆಗೆ ಹೋಗುವುದು. ಆದರೆ ಗಾಂಧಿ ಸಾರಿದ ಸಂದೇಶಗಳನ್ನು ಅಂತರ್ಗತ ಮಾಡಿಕೊಳ್ಳುವತ್ತ ಗಮನ ಹರಿಸಬೇಕಾದುದು, ಇದೆಲ್ಲದರ ಜೊತೆಗೆ ನಾವು ಮಾಡಬೇಕಾದ ಪ್ರಮುಖ ಕೆಲಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT