ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಹವಾಮಾನ, ಚಂಡಮಾರುತ ಅಧ್ಯಯನಕ್ಕೆ ನಾಸಾದಿಂದ 6 ಸಣ್ಣ ಉಪಗ್ರಹ

Last Updated 9 ನವೆಂಬರ್ 2016, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಚಂಡಮಾರುತ, ಹವಾಮಾನ ಮತ್ತು ಭೂ ವಾತಾವರಣವನ್ನು ಪ್ರವೇಶಿಸುವ ಸೌರಶಕ್ತಿ ಅಳೆಯುವ ವಿವಿಧ ಗಾತ್ರದ ಆರು ಅತ್ಯಾಧುನಿಕ ಉಪಗ್ರಹಗಳನ್ನು ಅಮೆರಿಕ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ನಾಸಾ ಅಂತರಿಕ್ಷಕ್ಕೆ ಕಳುಹಿಸಲಿದೆ.

ಈ ಉಪಗ್ರಹಗಳು  ಬ್ರೆಡ್ಡಿನ ತುಂಡಿನ ಗಾತ್ರದಿಂದ ಹಿಡಿದು ಬಟ್ಟೆ ಒಗೆಯುವ ಯಂತ್ರದಷ್ಟು ಗಾತ್ರವನ್ನು ಹೊಂದಿವೆ. ‘ನಮ್ಮ ಯೋಜನೆಗಳಿಗೆ ಎದುರಾಗುವ ಪ್ರಮುಖ ವೈಜ್ಞಾನಿಕ ಸಮಸ್ಯೆಗಳನ್ನು ಎದುರಿಸಲು ನಾಸಾ ಈಗ ಹೆಚ್ಚಾಗಿ ಸಣ್ಣ ಉಪಗ್ರಹಗಳನ್ನು ಬಳಸುತ್ತಿದೆ’ ಎಂದು  ನಾಸಾದ ವಿಜ್ಞಾನ ಯೋಜನೆಗಳ ಸಹಾಯಕ ಆಡಳಿತಗಾರ  ಥಾಮಸ್‌ ಜುರ್ಬುಚೆನ್‌ ಹೇಳಿದ್ದಾರೆ.

‘ಬಾಹ್ಯಾಕಾಶ ಕ್ಷೇತ್ರದಲ್ಲಿ ನಡೆಯುತ್ತಿರುವ ವೈಜ್ಞಾನಿಕ ಆವಿಷ್ಕಾರಗಳನ್ನು ಪರೀಕ್ಷಿಸಲು  ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಯನಕಾರರಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡಲು ಸಣ್ಣ ಉಪಗ್ರಹಗಳು ಅವಕಾಶ ಕಲ್ಪಿಸುತ್ತವೆ’ ಎಂದು ಅವರು ವಿವರಿಸಿದ್ದಾರೆ.

ಬಾಹ್ಯಾಕಾಶದಿಂದ ಭೂಮಿಯನ್ನು ಬೇರೆ ಬೇರೆ ರೀತಿಯಲ್ಲಿ ಅವಲೋಕಿಸಲು ವಿನೂತನ ವಿಧಾನಗಳನ್ನು ಆವಿಷ್ಕರಿಸಲು ಸಣ್ಣ ಉಪಗ್ರಹಗಳ ತಂತ್ರಜ್ಞಾನ ನೆರವಾಗಿದೆ.

ಆರು ಉಪಗ್ರಹಗಳ ಪೈಕಿ ಐದು ಉಪಗ್ರಹಗಳು ಮುಂದಿನ ಕೆಲವು ತಿಂಗಳುಗಳಲ್ಲಿ ಉಡಾವಣೆಗೊಳ್ಳಲಿವೆ. ಇವುಗಳು ಬದಲಾಗುತ್ತಿರುವ ಭೂಮಿಯ ಅಧ್ಯಯನಕ್ಕೆ ಹೊಸ ಹೊಸ ಮಾರ್ಗಗಳನ್ನು ತೋರಲಿವೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ಉಪಗ್ರಹಗಳು ಯಾವುವು?: ಆರ್‌ಎವಿಎಎನ್‌– ರೇಡಿಯೊಮೀಟರ್‌ ಅಸೆಸ್‌ಮೆಂಟ್ ಯೂಸಿಂಗ್‌ ವರ್ಟಿಕಲಿ ಅಲೈನ್ಡ್‌ ನ್ಯಾನೊ ಟ್ಯೂಬ್‌ (ಸಂಕ್ಷಿಪ್ತವಾಗಿ ‘ಕ್ಯೂಬ್‌ಸ್ಯಾಟ್‌’ ಕರೆಯಲಾಗಿದೆ) ಎಂಬ ಹೆಸರಿನ ಉಪಗ್ರಹವು ಈ ತಿಂಗಳು ಉಡಾವಣೆಗೊಳ್ಳಲಿದೆ.

ಭೂಮಿಯತ್ತ ಬರುವ ಸೌರಶಕ್ತಿಯು ಭೂ ವಾತಾವರಣ ಪ್ರವೇಶಿಸುವ ಮತ್ತು ಅಂತರಿಕ್ಷದಲ್ಲೇ ಉಳಿಯುವ ಪ್ರಮಾಣದಲ್ಲಿ (ಎನರ್ಜಿ ಬಜೆಟ್‌ ಎಂದು ಹೇಳಲಾಗುತ್ತದೆ) ಆಗುವ ವ್ಯತ್ಯಾಸವನ್ನು ಪತ್ತೆ ಹಚ್ಚಲು ಅಭಿವೃದ್ಧಿ ಪಡಿಸಿರುವ ಹೊಸ ತಂತ್ರಜ್ಞಾನದ ಪ್ರಾತ್ಯಕ್ಷಿಕೆಯನ್ನು ಈ ಉಪಗ್ರಹ ನಡೆಸಲಿದೆ.

2017ರ ಬೇಸಿಗೆಯಲ್ಲಿ ಇನ್ನೂ 2 ಕ್ಯೂಬ್‌ಸ್ಯಾಟ್‌ಗಳನ್ನು ನಾಸಾ ಉಡಾವಣೆ ಮಾಡಲಿದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಗುವ ಈ ಉಪಗ್ರಹಗಳು ಮೋಡಗಳ ಮೇಲೆ ನಿಗಾ ಇಡಲಿವೆ.

ಮೋಡಗಳನ್ನು ಇನ್ನಷ್ಟು ಅರ್ಥೈಸಿಕೊಳ್ಳಲು ಮತ್ತು ತಾಪಮಾನ ಹಾಗೂ ಹವಾಮಾನದಲ್ಲಿ ಅವುಗಳು ನಿರ್ವಹಿಸುವ ಪಾತ್ರದ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸಲು ಇವು ವಿಜ್ಞಾನಿಗಳಿಗೆ ನೆರವಾಗಲಿದೆ.

ಗ್ರೀನ್‌ಬೆಲ್ಟ್‌ನಲ್ಲಿರುವ ನಾಸಾದ ಗೊಡ್ಡಾರ್ಡ್‌ ಸ್ಪೇಸ್‌ ಫ್ಲೈಟ್‌ ಸೆಂಟರ್‌ನ ಡಾಂಗ್‌ ವು ಅವರು ಅಭಿವೃದ್ಧಿ ಪಡಿಸಿರುವ ‘ಐಸ್‌ಕ್ಯೂಬ್‌’ ಹೆಸರಿನ ಉಪಗ್ರಹ ಮೋಡದಲ್ಲಿನ ಮಂಜುಗಡ್ಡೆಯನ್ನು ಅಳೆಯಲು ಸಣ್ಣ ಮತ್ತು ಹೆಚ್ಚು ಕಂಪನಾಂಕ ಹೊಂದಿರುವ ಮೈಕ್ರೊವೇವ್‌ ರೇಡಿಯೊಮೀಟರ್‌ ಹೊಂದಿದೆ.

ಮೇರಿಲ್ಯಾಂಡ್‌ನ ವಿಶ್ವವಿದ್ಯಾಲಯದ ವಾಂಡೆರ್ಲಿ ಮಾರ್ಟಿನ್‌ ಅವರು ಅಭಿವೃದ್ಧಿ ಪಡಿಸಿರುವ ಮತ್ತೊಂದು ಉಪಗ್ರಹ ‘ಹಾರ್ಪ್‌’ (ಎಚ್‌ಎಆರ್‌ಪಿ–ಹೈಪರ್‌–ಆ್ಯಂಗುಲರ್‌ ರೇನ್‌ಬೊ ಪೋಲಾರಿಮೀಟರ್‌) ಉಪಗ್ರಹವು ಗಾಳಿಯಲ್ಲಿರುವ ಕಣಗಳನ್ನು ಹೊಸ ವಿಧಾನದಲ್ಲಿ ಅಳೆಯಲಿದೆ.

‘ಮಿರಾಟ’ (ಎಂಐಆರ್‌ಎಟಿಎ–ಮೈಕ್ರೊವೇವ್‌ ರೇಡಿಯೊಮೀಟರ್‌ ಟೆಕ್ನಾಲಜಿ ಆಕ್ಸಲರೇಷನ್‌ ಮಿಷನ್‌) ಎಂಬ ಉಪಗ್ರಹವು 2017ರ ಜನವರಿಯಲ್ಲಿ ಉಡಾವಣೆಗೊಳ್ಳಲಿದೆ. ಶೂ ಪೆಟ್ಟಿಗೆಯಷ್ಟು ದೊಡ್ಡದಿರುವ ಈ ಉಪಗ್ರಹವು, ದೊಡ್ಡ ಹವಾಮಾನ ಉಪಗ್ರಹಗಳು ಹೊಂದಿರುವ ಸಾಮರ್ಥ್ಯ ಹೊಂದಿದೆ.

ಇದರಲ್ಲಿರುವ ಪುಟ್ಟ ಸೆನ್ಸರ್‌ಗಳು ಭೂ ಉಷ್ಣತೆ, ತೇವಾಂಶಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಲಿದೆ. ಈ ಮಾಹಿತಿಗಳನ್ನು ಹವಾಮಾನ ಮುನ್ಸೂಚನೆ ಮತ್ತು ಚಂಡಮಾರುತಗಳ  ಮೇಲೆ ನಿಗಾ ಇಡಲು ಬಳಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT