7

ಮಾಸದ ಚೆಲುವಿನ ಮೊನಾಲಿಸಾ

Published:
Updated:
ಮಾಸದ ಚೆಲುವಿನ ಮೊನಾಲಿಸಾ

ಯೂರೋಪ್ ಪ್ರವಾಸದ ಅಂಗವಾಗಿ ನಾನು ನನ್ನ ಪತ್ನಿ ಪ್ಯಾರಿಸ್‌ಗೆ ಭೇಟಿ ಕೊಟ್ಟಾಗ, ಮೊದಲು ನೋಡಿದ್ದು ದೈತ್ಯಾಕಾರದ ‘ಐಫೆಲ್ ಟವರ್’. ಅದು ವಾಸ್ತು ವಿನ್ಯಾಸದ ಅದ್ಭುತವೇ ಸರಿ. ನಾವು ಹೋಗಿದ್ದುದು ಪ್ಯಾಕೇಜ್ ಟೂರ್. ನಮಗಂತೂ ಯಾವಾಗ ಮೊನಾಲಿಸಾ ಕಲಾಕೃತಿ ನೋಡಲು ಸಾಧ್ಯವಾಗುವುದೋ ಎಂದು ಮನಸ್ಸು ಹಾತೊರೆಯುತ್ತಿತ್ತು. ಆದರೆ, ಆ ಕಲಾಕೃತಿಯಿದ್ದ ‘ಲೂವ್ರ್ ಮ್ಯೂಸಿಯಂ’ ನಾವು ನೋಡಬೇಕಾದ ಸ್ಥಳಗಳ ಪಟ್ಟಿಯಲ್ಲಿ ಇರಲಿಲ್ಲ.

ನಾವು ಕೆಲವು ಸಮಾನ ಮನಸ್ಕರು ಅಲ್ಲಿಗೆ ಭೇಟಿ ನೀಡಲು ಅನುವು ಮಾಡಿಕೊಡಬೇಕೆಂದು ನಮ್ಮ ಪ್ರವಾಸಿ ಮಾರ್ಗದರ್ಶಿಯನ್ನು ಕೇಳಿಕೊಂಡೆವು. ಅವರು ಒಪ್ಪಿಕೊಂಡರು.‘ಲೂವ್ರ್‌ ಮ್ಯೂಸಿಯಂ’ ವಿಶಾಲವಾದ ಸೇಯ್ನ್ ನದಿಯ ದಂಡೆಯ ಮೇಲಿರುವ ಪ್ರೇಕ್ಷಣೀಯ ಸ್ಥಳ. ಪ್ಯಾರಿಸ್‌ನಲ್ಲಿ ಇರುವ ಮ್ಯೂಸಿಯಂ ಅಥವಾ ಕಲಾಗ್ಯಾಲರಿಗಳಲ್ಲೆಲ್ಲ ಬಹಳ ಗಮನಾರ್ಹವಾದದ್ದು. ಇದಕ್ಕೆ ಪ್ರವೇಶದ್ವಾರ ಎಲ್ಲಿದೆಯಂದು ಹುಡುಕಿದಾಗ ಗೊತ್ತಾಯಿತು –ಅದಕ್ಕೆ ಸ್ವಲ್ಪ ದೂರದಲ್ಲಿರುವ ಗಾಜಿನ ತ್ರಿಕೋನಾಕೃತಿಯ ಬೃಹತ್ ಕಟ್ಟಡದ ಮೂಲಕ ಟಿಕೆಟ್ ಕೊಂಡು ಒಳಗೆ ಪ್ರವೇಶಿಸಬೇಕು ಎನ್ನುವ ಸಂಗತಿ.

ಇತ್ತೀಚೆಗೆ ನಿರ್ಮಾಣವಾಗಿರುವ ಈ ಕಟ್ಟಡದ ಬಗ್ಗೆಯೂ ಸಾಕಷ್ಟು ವಿವಾದ ಎದ್ದಿದೆ. ಇದು ಈ ಪರಿಸರಸಲ್ಲಿ ‘ರಿನೇಸಾನ್ಸ್’ ಶೈಲಿಯ ವಾಸ್ತುಶಿಲ್ಪಕ್ಕೆ ಸ್ವಲ್ಪವೂ ಸರಿಹೊಂದದ ಕಟ್ಟಡ ವಿನ್ಯಾಸವಾಗಿದೆ ಎನ್ನುವುದು ವಿವಾದಕ್ಕೆ ಕಾರಣ.ಒಂದಾದ ಮೇಲೊಂದು ಮಹಡಿಗಳನ್ನು ಏರುತ್ತಾ ಕಲಾಕೃತಿಗಳನ್ನು (ಹೆಚ್ಚಾಗಿ ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ) ನೋಡುತ್ತಿದ್ದಂತೆ, ನನಗೆ ಹೈದರಾಬಾದ್‌ನಲ್ಲಿರುವ ‘ಸಾಲಾರ್ ಜಂಗ್ ಮ್ಯೂಸಿಯಂ’ ನೆನಪಾಯಿತು. ಅಲ್ಲಿಯೂ ಎಲ್ಲಿ ನೋಡಿದರೂ ಕಲಾಕೃತಿಗಳ ಸಂಗ್ರಹವೇ ಕಾಣುತ್ತದೆ.

ಕೊನೆಗೂ ಕಾತರದಿಂದ ಕಾಯುತ್ತಿದ್ದ ಮೊನಾಲಿಸಾ ಇರುವ ವಿಶಾಲವಾದ ಗ್ಯಾಲರಿ ಬಂದೇ ಬಿಟ್ಟಿತು. ಭಾರಿ ಭದ್ರತೆಯಲ್ಲಿರುವ ಈ ಗ್ಯಾಲರಿಗೆ, ಜಗತ್ತಿನ ಎಲ್ಲಾ ಕಡೆಯಿಂದ ‘ಮೊನಾಲಿಸಾ’ಳನ್ನು ನೋಡಲೆಂದೇ ಪ್ರವಾಸಿಗರು ಬರುತ್ತಿರುತ್ತಾರೆ.

ಇಲ್ಲಿನ ಬಿಗಿ ಭದ್ರತೆಗೆ ಕಾರಣಗಳು ಇಲ್ಲದೆ ಇಲ್ಲ. ಹಿಂದೊಮ್ಮೆ ಈ ಕಲಾಕೃತಿಯ ಕಳ್ಳತನವಾಗಿ, ತನಿಖೆಯ ಸಂದರ್ಭದಲ್ಲಿ ಈ ಕೃತಿಯನ್ನು ಅಧ್ಯಯನ ಮಾಡುತ್ತಿದ್ದ ಜಗದ್ವಿಖ್ಯಾತ ಕಲಾವಿದ ಪಿಕಾಸೊ ಬಗ್ಗೆಯೇ ಅನುಮಾನ ಉಂಟಾಗಿ ಆತನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಪಿಕಾಸೊ ಆರೋಪದಿಂದ ಮುಕ್ತನಾಗಿದುದು ಈಗ ಇತಿಹಾಸ.ಹೆಚ್ಚು ಕಡಿಮೆ ಎಲ್ಲ ನೋಡುಗರೂ ‘ಮೊನಾಲಿಸಾ’ಳ ಫೋಟೊ ಕ್ಲಿಕ್ಕಿಸುತ್ತಲೇ ಇರುತ್ತಾರೆ. ಒಂದು ಕಾಲಕ್ಕೆ ಈ ಕಲಾಕೃತಿಯನ್ನು ಬುಲೆಟ್ ಫ್ರೂಫ್ ಗಾಜಿನ ಹಿಂಬದಿ ಇಡಲಾಗಿತ್ತಂತೆ. ನಾವು ನೋಡಿದಾಗ ನಮಗೆ ಹಾಗೆನ್ನಿಸಲಿಲ್ಲ. ಆದರೆ ಅದು ಹಾಳಾಗದಂತೆ ಉತ್ತಮ ಸ್ಥಿತಿಯಲ್ಲಿ ಸಂರಕ್ಷಿಸಿಡಲಾಗಿದೆ.

ಇಷ್ಟಕ್ಕೂ ಮೊನಾಲಿಸಾಳ ವೈಶಿಷ್ಟ್ಯವೇನು? ಯಾವ ಕೋನದಿಂದ ನೋಡಿದರೂ ತನ್ನ ಕಡೆಗೇ ದೃಷ್ಟಿಸುವಂತೆ ಕಾಣುವ ಚಿತ್ರವೇ? ಅವಳ ನಿಗೂಢ ನಗುವೇ? ಬಹುಶಃ ಇವೆಲ್ಲವೂ ಎನ್ನಬೇಕು.1503–04ರಲ್ಲಿ ಖ್ಯಾತ ಕಲಾವಿದ ಲಿಯೊನಾರ್ಡೊ ಡ ವಿಂಚಿ ರಚಿಸಿದ ಈ ಕಲಾಕೃತಿ 77X53 ಸೆಂಟಿಮೀಟರ್‌ ಅಳತೆಯಲ್ಲಿದೆ. ಸರಳತೆಯಲ್ಲಿ ಸೌಂದರ್ಯ ಎಂಬ ಮಾತಿಗೆ ತಕ್ಕಂತೆ ಈ ಚಿತ್ರ ರಚಿತವಾಗಿದೆ. ಅಂದಹಾಗೆ, ಮೊನಾಲಿಸಾಳ ಹುಬ್ಬುಗಳು ಹಾಗೂ ರೆಪ್ಪೆಗೂದಲು ಕಾಣುವುದೇ ಇಲ್ಲ. ಆದರೂ, ಮುಖದ ಒಟ್ಟಂದದಲ್ಲಿ ಅದು ಗೌಣವಾಗುತ್ತದೆ. ಅದಕ್ಕೆ ಹುಬ್ಬಿನ ಕೂದಲು ಕೀಳುವ ಆ ಕಾಲದ ಫ್ಯಾಷನ್ ಕಾರಣವಿರಬಹುದು ಎಂದು ಹೇಳಲಾಗಿದೆ.

ಈ ಕಲಾಕೃತಿಯನ್ನು ನೋಡುತ್ತಾ ನಿಂತರೆ, ಯಾವುದೇ ಕಲಾಭಿಮಾನಿಗೆ ಅದನ್ನು ನೋಡುತ್ತಲೇ ಇರಬೇಕು ಎನಿಸುತ್ತದೆ. ಯಾವ ಕಡೆಯಿಂದ ಫೋಟೊ ತೆಗೆದರೂ ಸಮಾಧಾನವೇ ಆಗುವುದಿಲ್ಲ. ಮೊನಾಲಿಸಾಳ ಮುಗ್ಧತೆ ಅಷ್ಟರಮಟ್ಟಿಗೆ ಸೆಳೆಯುತ್ತದೆ.ಇಲ್ಲೊಂದು ವಿಷಯ ಹೇಳಬೇಕು. ನಮ್ಮಲ್ಲಿ ಬಹುತೇಕ ಚಾರಿತ್ರಿಕ ಸ್ಥಳಗಳಲ್ಲಿ, ದೇವಸ್ಥಾನಗಳಲ್ಲಿ ಛಾಯಾಗ್ರಹಣಕ್ಕೆ ಅವಕಾಶವಿಲ್ಲ. ಆದರೆ ನಮ್ಮ ಪ್ರವಾಸದಲ್ಲಿ ವ್ಯಾಟಿಕನ್ ಚರ್ಚ್ ಸೇರಿದಂತೆ ಎಲ್ಲೆಡೆ ಫೋಟೊ ತೆಗೆಯಲು ಅವಕಾಶವಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry