ಸೋಮವಾರ, ಡಿಸೆಂಬರ್ 9, 2019
20 °C
ಎಂಟು ಕ್ರೀಡಾಪಟುಗಳಿಗೆ ಪ್ರತಿಷ್ಠಿತ ಪ್ರಶಸ್ತಿ ವಿರಾಟ್, ಸಾಕ್ಷಿಗೆ ಗೌರವ

ವಿಕಾಸಗೌಡ, ಶೇಖರ್‌ಗೆ ಪದ್ಮಶ್ರೀ ಪುರಸ್ಕಾರ

Published:
Updated:
ವಿಕಾಸಗೌಡ, ಶೇಖರ್‌ಗೆ ಪದ್ಮಶ್ರೀ ಪುರಸ್ಕಾರ

ನವದೆಹಲಿ: ಕರ್ನಾಟಕದ ಅಥ್ಲೀಟ್ ವಿಕಾಸಗೌಡ ಮತ್ತು ಅಂಧರ ಕ್ರಿಕೆಟ್ ತಂಡದ ನಾಯಕ ಶೇಖರ್ ನಾಯ್ಕ ಅವರು ಸೇರಿದಂತೆ ದೇಶದ ಒಟ್ಟು ಎಂಟು ಮಂದಿ ಕ್ರೀಡಾಸಾಧಕರಿಗೆ  ಪದ್ಮಶ್ರೀ ಪುರಸ್ಕಾರ ನೀಡಲಾಗಿದೆ.  

 

ಡಿಸ್ಕಸ್‌ ಥ್ರೋ ಪಟು ವಿಕಾಸ ಗೌಡ ಅವರು ಅಮೆರಿಕದಲ್ಲಿ ನೆಲೆಸಿದ್ದಾರೆ. ಅಲ್ಲಿಯೇ ತರಬೇತಿ ಪಡೆಯುತ್ತಿರುವ ಅವರು ಇದುವರೆಗೆ ಒಟ್ಟು ನಾಲ್ಕು ಒಲಿಂಪಿಕ್ಸ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 

 

ಇವರಲ್ಲದೇ ಭಾರತ  ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ರಿಯೊ ಒಲಿಂಪಿಕ್ಸ್‌ ಕಂಚಿನ ಪದಕವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್  ಭಾರತ ಹಾಕಿ ತಂಡದ ನಾಯಕ ಪಿ.ಆರ್. ಶ್ರೀಜೇಶ್,  ರಿಯೊ ಒಲಿಂಪಿಕ್ಸ್‌ ಮಹಿಳೆಯರ ಜಿಮ್ನಾಸ್ಟಿಕ್ಸ್‌ನಲ್ಲಿ   ನಾಲ್ಕನೆ ಸ್ಥಾನ ಪಡೆದಿದ್ದ  ದೀಪಾ ಕರ್ಮಾಕರ್,   ಪ್ಯಾರಾ ಲಿಂಪಿಕ್ಸ್ ಪದಕವಿಜೇತರಾದ ದೀಪಾ ಮಲಿಕ್, ಮರಿಯಪ್ಪನ್ ತಂಗವೇಲು ಅವರಿಗೂ  ಪದ್ಮಶ್ರೀ ಪುರಸ್ಕಾರ ನೀಡಲಾಗಿದೆ.

 

 2014ರಲ್ಲಿ ವಿರಾಟ್ ಕೊಹ್ಲಿ ಅವರು ಭಾರತ ಟೆಸ್ಟ್ ತಂಡದ ನಾಯಕರಾಗಿ ನೇಮಕವಾಗಿದ್ದರು. ಅವರ ನಾಯಕತ್ವ ದಲ್ಲಿ ಭಾರತ ತಂಡವು ಸತತ ಐದು ಟೆಸ್ಟ್ ಸರಣಿಗಳನ್ನು ಗೆದ್ದು ಐಸಿಸಿ ರ್‌್ಯಾಂಕಿಂಗ್‌ ನಲ್ಲಿ ಅಗ್ರಸ್ಥಾನ ಅಲಂಕರಿಸಿದೆ. 

 

ಈಚೆಗೆ ಮಹೇಂದ್ರಸಿಂಗ್ ದೋನಿ ಅವರು ಸೀಮಿತ ಓವರ್‌ಗಳ ತಂಡಗಳ ನಾಯಕತ್ವ ತ್ಯಜಿಸಿದ ನಂತರ ಕೊಹ್ಲಿ ಆ ತಂಡಗಳಿಗೂ ನಾಯಕರಾಗಿದ್ದಾರೆ.  ಇತ್ತೀಚೆಗೆ ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕೊಹ್ಲಿ ಬಳಗವು 2–1 ರಿಂದ ಗೆದ್ದಿತು. 

 

ಸಾಕ್ಷಿ, ದೀಪಾಗೆ ಗೌರವ

ಒಲಿಂಪಿಕ್ಸ್‌ನ ಮಹಿಳೆಯರ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಮೊದಲ ಮಹಿಳೆಯೆಂಬ ಹೆಗ್ಗಳಿಕೆ ಇರುವ ಹರಿಯಾಣದ ಸಾಕ್ಷಿ ಮಲಿಕ್ ಅವರಿಗೆ    ಪದ್ಮಶ್ರೀ ನೀಡಲಾಗಿದೆ.  58 ಕೆಜಿ ವಿಭಾಗದಲ್ಲಿ ಅವರು ಪದಕ ಗಳಿಸಿದ್ದರು.

 

ಭಾರತವನ್ನು ಒಲಿಂಪಿಕ್ಸ್‌ನಲ್ಲಿ  ಜಿಮ್ನಾಸ್ಟಿಕ್ಸ್‌ನಲ್ಲಿ ಪ್ರತಿನಿಧಿಸಿದ  ಮೊದಲ ವನಿತೆ ತ್ರಿಪುರದ ದೀಪಾ ಅವರೂ ಪದ್ಮ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. 

 

ಹಾಕಿ ಕ್ರೀಡೆಗೆ ಗೌರವ: 2016ರ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದ ಭಾರತದ ಪುರುಷರ ಹಾಕಿ ತಂಡದ ನಾಯಕ ಪಿ.ಅರ್. ಶ್ರೀಜೇಶ್ ಅವರೂ ದೇಶದ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.  ಗೋಲ್‌ಕೀಪರ್ ಶ್ರೀಜೇಶ್ ನಾಯಕತ್ವದ ತಂಡವು ಹೋದ ವರ್ಷ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಬೆಳ್ಳಿ ಪದಕ ಜಯಿಸಿತ್ತು. 

 

ರಿಯೊ ಪ್ಯಾರಾಲಿಂಪಿಕ್ಸ್‌ನ ಮಹಿಳೆಯರ ಶಾಟ್‌ಪಟ್‌ (ಎಫ್‌53) ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ದೀಪಾ ಮಲಿಕ್ ಮತ್ತು ಪುರುಷರ ಹೈಜಂಪ್‌ನ ಟಿ–42ರಲ್ಲಿ   ಚಿನ್ನದ ಪದಕ ಗೆದ್ದಿದ್ದ ಮರಿಯಪ್ಪನ್ ತಂಗವೇಲು ಅವರಿಗೂ ಗೌರವ ಸಂದಿದೆ.

 

ಒಟ್ಟು 89 ಗಣ್ಯರಿಗೆ ಈ ಬಾರಿ ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದೆ.  ಆದರೆ, ಕ್ರೀಡಾ ವಿಭಾಗದಲ್ಲಿ ಯಾರಿಗೂ ಪದ್ಮವಿಭೂಷಣ ಮತ್ತು ಪದ್ಮಭೂಷಣ ಪ್ರಶಸ್ತಿ ಒಲಿದಿಲ್ಲ.  ರಿಯೊ ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಪಿ.ವಿ. ಸಿಂಧು ಮತ್ತು ಅವರ ಕೋಚ್ ಪುಲ್ಲೇಲ ಗೋಪಿಚಂದ್ ಅವರಿಗೆ ಕ್ರಮವಾಗಿ ಪದ್ಮವಿಭೂಷಣ ಮತ್ತು ಪದ್ಮಭೂಷಣ ಪ್ರಶಸ್ತಿ ಸಿಗುವ ನಿರೀಕ್ಷೆ ಇತ್ತು. ಕೆಲವು ಸಾಮಾಜಿಕ ಜಾಲತಾಣ ಗಳಲ್ಲಿ ಅವರಿಗೆ ಪ್ರಶಸ್ತಿ ಲಭಿಸಿದೆ ಎಂಬ ಸುದ್ದಿಯೂ ಹರಿದಾಡಿತ್ತು.  ಆದರೆ, ಕೇಂದ್ರಸರ್ಕಾರವು ಪ್ರಕಟಿಸಿದ ಅಧಿಕೃತ ಪಟ್ಟಿಯಲ್ಲಿ ಅವರಿಬ್ಬರ ಹೆಸರು ಇರಲಿಲ್ಲ. 

 

**

ಅನಿರೀಕ್ಷಿತ ಪ್ರಶಸ್ತಿ ಖುಷಿ ತಂದಿದೆ: ಶೇಖರ್ ನಾಯ್ಕ

ಬೆಂಗಳೂರು: ‘ಅಂಧತ್ವ  ಬದುಕನ್ನೇ ನುಂಗಿ ಹಾಕಬಾರದು ಎನ್ನುವ ಕಾರಣಕ್ಕಾಗಿ ಕ್ರಿಕೆಟ್‌ ಆಡಲು ಆರಂಭಿಸಿದೆ. ಹವ್ಯಾಸಕ್ಕೆ ಮಾತ್ರ ಆಡುವುದು ಅಂದುಕೊಂಡಿದ್ದೆ. ಆದರೆ ಹಂತಹಂತವಾಗಿ ವೃತ್ತಿಪರ ಆಟಗಾರನಾಗಿ ಬದಲಾದೆ. ಈಗ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ ಎಂದರೆ ನಂಬಲು ಸಾಧ್ಯವೇ ಆಗುತ್ತಿಲ್ಲ. ಈ ಅನಿರೀಕ್ಷಿತ ಗೌರವ ಮತ್ತಷ್ಟು ಸಾಧನೆಗೆ ಸ್ಫೂರ್ತಿಯಾಗಿದೆ’ ಎಂದು ಭಾರತ ಅಂಧರ ಕ್ರಿಕೆಟ್‌ ತಂಡದ ಮಾಜಿ ನಾಯಕ ಶೇಖರ್‌ ನಾಯ್ಕ ಸಂತೋಷ ಹಂಚಿಕೊಂಡಿದ್ದಾರೆ.


 


ಬುಧವಾರ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ದೂರವಾಣಿ ಮೂಲಕ ಪ್ರಶಸ್ತಿ ಬಂದ ವಿಷಯ ಮಧ್ಯಾಹ್ನ ಗೊತ್ತಾಯಿತು. ಯಾರೋ ಸ್ನೇಹಿತರು ತಮಾಷೆ ಮಾಡುತ್ತಿದ್ದಾರೆ ಅಂದುಕೊಂಡಿದ್ದೆ. ವಿಷಯ ನಿಜವೆಂದು ಗೊತ್ತಾದಾಗ ನನಗಾದ ಖುಷಿ ಅಷ್ಟಿಷ್ಟಲ್ಲ’ ಎಂದೂ ಅವರು ಹೇಳಿದರು. ಅಂಧ ಕ್ರಿಕೆಟಿಗನೊಬ್ಬ ನಿಗೆ ಪದ್ಮಶ್ರೀ ಗೌರವ ಲಭಿಸಿದ್ದು ಇದೇ ಮೊದಲು.


 


‘ಇಷ್ಟು ವರ್ಷವಾದರೂ ನಮ್ಮನ್ನು ಮಹತ್ವದ ಪ್ರಶಸ್ತಿಗೆ ಪರಿಗಣಿಸಿದ್ದಕ್ಕೆ ಖುಷಿಯಾಗಿದೆ’ ಎಂದರು.


 


ಶೇಖರ್‌ ಶಿವಮೊಗ್ಗ ಜಿಲ್ಲೆಯ ಹರಿಕೆರೆ ತಾಂಡಾದವರು. 2012ರಲ್ಲಿ ಭಾರತ ಅಂಧರ ತಂಡ ಬೆಂಗಳೂರಿನಲ್ಲಿ ನಡೆದ ಟ್ವೆಂಟಿ–20 ವಿಶ್ವಕಪ್‌ನಲ್ಲಿ ಪ್ರಶಸ್ತಿ ಜಯಿಸಿತ್ತು. ಆಗ ಶೇಖರ್ ತಂಡವನ್ನು ಮುನ್ನಡೆಸಿ ದ್ದರು. ಹಲವಾರು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ದೇಶವನ್ನು ಮುನ್ನಡೆಸಿದ್ದಾರೆ.


 


2014ರಲ್ಲಿ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ನಡೆದ ಅಂಧರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಪಾಲ್ಗೊಂಡಿತ್ತು. ಆಗಲೂ ಶೇಖರ್‌ ತಂಡದಲ್ಲಿದ್ದರು. ಆಗ ಭಾರತ ಪ್ರಶಸ್ತಿ ಕೂಡ ಜಯಿಸಿತ್ತು.


 

**

ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆ ಯಾಗಿರುವುದು ಅಪಾರ ಸಂತಸ ತಂದಿದೆ. ನನ್ನ ತಾಯಿ, ಕೋಚ್ ಮತ್ತು ಸರ್ಕಾರದ ಪ್ರೋತ್ಸಾಹದಿಂದಾಗಿ ದೊಡ್ಡ  ಸಾಧನೆ ಮಾಡಲು ಸಾಧ್ಯವಾಯಿತು. 


-ತಂಗವೇಲು ಮರಿಯಪ್ಪನ್


ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ 


 

**

ಪ್ರಶಸ್ತಿ ಲಭಿಸಿರುವುದರಿಂದ ಅಪಾರ ಸಂತಸವಾಗಿದೆ. ಇದರೊಂದಿಗೆ ನನ್ನ ಜವಾಬ್ದಾರಿ ಹೆಚ್ಚಿದೆ. ಮುಂದಿನ ಟೂರ್ನಿಗಳಲ್ಲಿ  ಪದಕಗಳನ್ನು ಗೆದ್ದು ತರುವ ಛಲ ಮೂಡಿದೆ


-ದೀಪಾ ಕರ್ಮಾಕರ್


ಒಲಿಂಪಿಯನ್ ಜಿಮ್ನಾಸ್ಟ್


 

**

ಪ್ರಶಸ್ತಿಯನ್ನು ತಮ್ಮ ತಂಡಕ್ಕೆ ಸಮರ್ಪಿಸುತ್ತೇನೆ.  ಕೆಲವು ವರ್ಷಗಳಿಂದ ತಂಡದ ಆಟಗಾರರು ಶ್ರೇಷ್ಠ ಸಾಧನೆ ಮಾಡಿದ್ದಾರೆ. ಇಡೀ ತಂಡವು ಸಂಘಟಿತವಾಗಿ ಆಡಿ ಗೆಲ್ಲದೇ ಹೋಗಿದ್ದರೆ ನನಗೆ ಕೀರ್ತಿ ಒಲಿಯುತ್ತಿರಲಿಲ್ಲ. 


-ಪಿ.ಆರ್. ಶ್ರೀಜೇಶ್ 


ಭಾರತ ಹಾಕಿ ತಂಡದ ನಾಯಕ 

 

ಪ್ರತಿಕ್ರಿಯಿಸಿ (+)