7

ಅಗಣಿತ ವಾಹನಗಳ ದೇಶಕ್ಕೆ ರಸ್ತೆ ಸುರಕ್ಷತಾ ಮಸೂದೆ

Published:
Updated:
ಅಗಣಿತ ವಾಹನಗಳ ದೇಶಕ್ಕೆ ರಸ್ತೆ ಸುರಕ್ಷತಾ ಮಸೂದೆ

ಒಂದು ಊರಿನ ಅಥವಾ ಮಹಾನಗರದ ರಸ್ತೆಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಅಲ್ಲಿ ಎಷ್ಟು ವಾಹನಗಳ ನೋಂದಣಿಗೆ ಅವಕಾಶ ನೀಡಬಹುದು ಎಂಬ ನಿಯಮ ನಮ್ಮ ದೇಶದಲ್ಲಿ ಇಲ್ಲ. ಹೀಗಿರುವ ಸಂದರ್ಭದಲ್ಲಿ, ಪ್ರಯಾಣಿಕರನ್ನು ಕರೆದೊಯ್ಯುವ ವಾಹನಗಳ (ಬಸ್ಸು, ಟಿ.ಟಿ) ಚಾಲಕರು ತಮ್ಮ ವಾಹನಗಳಲ್ಲಿ ಇಂತಿಷ್ಟೇ ಸಂಖ್ಯೆಯ ಪ್ರಯಾಣಿಕರನ್ನು ಕೂರಿಸಿಕೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಕೂರಿಸಿಕೊಂಡರೆ ಅದನ್ನು ನಿಯಮ ಉಲ್ಲಂಘನೆಯೆಂದು ಪರಿಗಣಿಸಿ, ಚಾಲಕರಿಗೆ ದಂಡ ವಿಧಿಸಲಾಗುವುದು ಎಂದು ಹೇಳುವ ಮಸೂದೆಯೊಂದನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದೆ.

ಈಗ ಜಾರಿಯಲ್ಲಿರುವ ಮೋಟಾರು ವಾಹನ ಕಾಯ್ದೆ 1988ಕ್ಕೆ ತಿದ್ದುಪಡಿ ತರುವ ಈ ಮಸೂದೆಗೆ ‘ಮೋಟಾರು ವಾಹನ ತಿದ್ದುಪಡಿ ಮಸೂದೆ – 2016’ ಎಂದು ಹೆಸರಿಡಲಾಗಿದೆ.

ಮಹಾನಗರಗಳಲ್ಲಿ, ಪಟ್ಟಣಗಳಲ್ಲಿ ನೋಂದಣಿ ಮಾಡಬಹುದಾದ ವಾಹನಗಳ ಸಂಖ್ಯೆಗೆ ನಮ್ಮಲ್ಲಿ ಮಿತಿ ಇಲ್ಲ. ಮಿತಿಮೀರಿದ ವಾಹನಗಳಿಂದಾಗಿ ರಸ್ತೆಗಳು ಕಿಷ್ಕಿಂಧೆಯಂತೆ ಆಗಿರುವ ಸಂದರ್ಭದಲ್ಲಿ, ರಸ್ತೆ ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ಭಾರಿ ಮೊತ್ತದ ದಂಡ ವಿಧಿಸುವ, ರಸ್ತೆಗಳನ್ನು ಹೆಚ್ಚು ಸುರಕ್ಷಿತಗೊಳಿಸುವ ಗುರಿ ಹೊಂದಿರುವ ಮಸೂದೆಗೆ ಲೋಕಸಭೆಯ ಅನುಮೋದನೆ ದೊರೆತಿದೆ. ರಾಜ್ಯಸಭೆಯ ಅನುಮೋದನೆ ಸಿಗಬೇಕಿದೆ.

‘ರಸ್ತೆಗಳ ಧಾರಣಾ ಸಾಮರ್ಥ್ಯ ಅಧ್ಯಯನ ಮಾಡಿ, ಒಂದು ಪ್ರದೇಶದಲ್ಲಿ ಇಂತಿಷ್ಟು ವಾಹನಗಳ ನೋಂದಣಿಗೆ ಮಾತ್ರ ಅವಕಾಶ ಎನ್ನುವ ನಿಯಮ ವಿಶ್ವದ ಕೆಲವೆಡೆ ಈಗಾಗಲೇ ಜಾರಿಯಲ್ಲಿದೆ. ಆದರೆ ತಿದ್ದುಪಡಿ ಮಸೂದೆಯಲ್ಲಿ ಅದನ್ನು ಸೇರಿಸಿಕೊಳ್ಳದಿರುವುದು ಒಂದು ಲೋಪ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ವಕೀಲರೊಬ್ಬರು.

‘ಇಂಥ ನಿಯಮ ತಂದರೆ ಬಹಳಷ್ಟು ಜನರಿಗೆ ಕೋಪ ಬರಬಹುದು. ಆದರೆ ನಗರಗಳ  ರಸ್ತೆಗಳನ್ನು ಸುರಕ್ಷಿತಗೊಳಿಸಬೇಕು ಎಂದರೆ, ಅಲ್ಲಿ ಸಂಚರಿಸುವ ವಾಹನಗಳ ಸಂಖ್ಯೆಯ ಮೇಲೆ ಮಿತಿ ಹೇರಲೇಬೇಕು’ ಎನ್ನುತ್ತಾರೆ ಅವರು.

‘ಸಿಂಗಪುರದಂತಹ ರಾಷ್ಟ್ರಗಳು ವಾಹನ ನೋಂದಣಿ ಮೇಲೆ ಮಿತಿ ಹೇರಿವೆ. ಆದರೆ ನಮ್ಮಲ್ಲಿ ವಾಹನ ತಯಾರಕರ ಲಾಬಿಯ ಕಾರಣ ಇದು ಸಾಧ್ಯವಾಗದಿರಬಹುದು. ರಸ್ತೆಗಳನ್ನು ಸುರಕ್ಷಿತವಾಗಿಸುವುದು ಎಂದರೆ, ರಸ್ತೆಗಳಲ್ಲಿನ ದಟ್ಟಣೆ ಕಡಿಮೆ ಮಾಡುವುದೂ ಸೇರಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದು ತುಸು ಕಷ್ಟವಾಗಬಹುದಾದರೂ, ಈ ಕೆಲಸ ಆಗಲೇಬೇಕು’ ಎನ್ನುತ್ತಾರೆ ಸಾರಿಗೆ ತಜ್ಞ ಎಂ.ಎನ್. ಶ್ರೀಹರಿ.

ಉತ್ತಮ ಆಶಯ: ಮಸೂದೆಯ ಕೆಲವು ಅಂಶಗಳ ಬಗ್ಗೆ ತಕರಾರು ಎತ್ತಬಹುದಾದರೂ, ಒಟ್ಟಾರೆ ಆಶಯವನ್ನು ಸ್ವಾಗತಿಸಬೇಕಾಗುತ್ತದೆ. ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ಸಹಾಯ ಮಾಡುವ ‘ಆಪದ್ಬಾಂಧವ’ರಿಗೆ ಕಾನೂನಿನ ರಕ್ಷಣೆ ಕೊಡುವ ಅಂಶ ಮಸೂದೆಯಲ್ಲಿದೆ. ಹಾಗೆಯೇ, ನಿಯಮ ಉಲ್ಲಂಘನೆಗೆ ದೊಡ್ಡ ಪ್ರಮಾಣದಲ್ಲಿ ದಂಡ ವಿಧಿಸುವುದು ತಪ್ಪು ಮಾಡುವುದನ್ನು ತಡೆಯಲು ಇರುವ ಪ್ರಮುಖ ಮಾರ್ಗಗಳಲ್ಲಿ ಒಂದು ಎನ್ನುತ್ತಾರೆ ತಜ್ಞರು.

ದಂಡದ ಮೊತ್ತ ಹೆಚ್ಚು ಮಾಡುವುದರ ಜೊತೆಯಲ್ಲೇ, ವಾಹನ ಚಾಲನಾ ಪರವಾನಗಿ ಪಡೆಯಲು ಪ್ರಕ್ರಿಯೆಯನ್ನು ಇನ್ನಷ್ಟು ಕಠಿಣಗೊಳಿಸಬೇಕು. ಚಾಲಕನನ್ನು ಕಠಿಣ ಪರೀಕ್ಷೆಗೆ ಒಳಪಡಿಸಿಯೇ ಆತನಿಗೆ ಪರವಾನಗಿ ನೀಡಬೇಕು ಎನ್ನುವುದು ಶ್ರೀಹರಿ ಅವರ ಅಭಿಪ್ರಾಯ.

‘ಕಾನೂನಿನ ಬಗ್ಗೆ ಮಾಹಿತಿ ಇಲ್ಲದ ಕಾರಣಕ್ಕಾಗಿ, ವಾಹನ ಚಾಲಕರು ಅದನ್ನು ಉಲ್ಲಂಘಿಸಬಹುದಾದ ಸ್ಥಿತಿ ನಿವಾರಿಸಲು, ವಾಹನ ಚಾಲನಾ ಪರವಾನಗಿ ಪಡೆಯಲು ಕನಿಷ್ಠ ವಿದ್ಯಾರ್ಹತೆ ನಿಗದಿ ಮಾಡಬೇಕಿತ್ತು’ ಎಂಬುದು ವಕೀಲರೊಬ್ಬರ ಅಭಿಪ್ರಾಯ.

ವಾಹನಗಳಲ್ಲಿ ದೋಷ ಇದ್ದರೆ ಆ ಮಾದರಿಯ ವಾಹನಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಮಾಡುವ ಅಧಿಕಾರವನ್ನು ಮಸೂದೆಯು ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಇದು ಮಸೂದೆಯ ಉತ್ತಮ ಅಂಶಗಳಲ್ಲಿ ಒಂದು. ಹಾಗೆಯೇ, ರಸ್ತೆ ವಿನ್ಯಾಸ ದೋಷಪೂರಿತವಾಗಿದ್ದರೆ, ಆ ದೋಷದಿಂದಾಗಿ ಅಲ್ಲಿ ಅಪಘಾತ ಸಂಭವಿಸಿದರೆ ದೋಷಕ್ಕೆ ಕಾರಣರಾದ ಗುತ್ತಿಗೆದಾರ ಅಥವಾ ರಸ್ತೆ ವಿನ್ಯಾಸಕಾರನಿಗೆ ದಂಡ ವಿಧಿಸಲೂ ಈ ಮಸೂದೆ ಅವಕಾಶ ಕಲ್ಪಿಸುತ್ತದೆ. ಆದರೆ ಈಗಿರುವ ವಿನ್ಯಾಸ ನಿಯಮಗಳನ್ನು ಇನ್ನಷ್ಟು ಉತ್ತಮಪಡಿಸುವುದು ಹೇಗೆಂಬ ಬಗ್ಗೆ ಉಲ್ಲೇಖವಿರುವಂತೆ ಕಾಣಿಸುತ್ತಿಲ್ಲ!

ವಿನ್ಯಾಸ ದೋಷದಿಂದ ಅಪಘಾತ ಸಂಭವಿಸಿ ಅದರಲ್ಲಿ ವ್ಯಕ್ತಿ ಮೃತಪಟ್ಟರೆ ಅಥವಾ ಗಾಯಗೊಂಡರೆ ಮಾತ್ರ ವಿನ್ಯಾಸಕಾರನಿಗೆ, ಗುತ್ತಿಗೆದಾರನಿಗೆ ದಂಡ ವಿಧಿಸಲು ಸಾಧ್ಯ ಎನ್ನುತ್ತದೆ ಮಸೂದೆ.

‘ರಸ್ತೆಯ ವಿನ್ಯಾಸವನ್ನು ಸರಿಯಾಗಿ ಮಾಡದವನಿಗೆ ದಂಡ ವಿಧಿಸಲು, ಅಲ್ಲಿ ರಸ್ತೆ ಅಪಘಾತ ಆಗುವವರೆಗೆ ಕಾಯುವುದು ಏಕೆ? ರಸ್ತೆ ವಿನ್ಯಾಸವು ನಿಯಮಗಳಿಗೆ ಅನುಗುಣವಾಗಿ ಆಗಿದೆಯೇ ಎಂಬುದನ್ನು ತಜ್ಞರಿಂದ ಪರಿಶೀಲಿಸಿ, ಆಗಿರದಿದ್ದರೆ ಗುತ್ತಿಗೆದಾರನಿಗೆ ಹಣದ ಪಾವತಿ ತಡೆಹಿಡಿಯುವ ವ್ಯವಸ್ಥೆ ಜಾರಿಗೆ ತರಬಹುದಲ್ಲವೇ’ ಎಂದು ಪ್ರಶ್ನಿಸುತ್ತಾರೆ ವಕೀಲ ಕೆ.ವಿ. ಧನಂಜಯ್. ರಸ್ತೆ ಅಪಘಾತವು ಚಾಲಕನ ತಪ್ಪಿನಿಂದಾಗಿ ಆಗಿದ್ದಲ್ಲ, ರಸ್ತೆಯ ವಿನ್ಯಾಸವೇ ಅದಕ್ಕೆ ಕಾರಣ ಎಂಬುದನ್ನು ಸಾಬೀತು ಮಾಡುವುದು ತುಸು ಕಷ್ಟದ ಕೆಲಸ ಎನ್ನುವ ಅಭಿಪ್ರಾಯವನ್ನು ‘ಪ್ರಜಾವಾಣಿ’ ಜೊತೆ ಮಾತನಾಡಿದ ಕೆಲವು ವಕೀಲರು ವ್ಯಕ್ತಪಡಿಸಿದರು.

ಉತ್ತಮವಾದ ವಾಹನಗಳನ್ನು ಸಿದ್ಧಪಡಿಸಿಕೊಡುವುದು ವಾಹನ ತಯಾರಕರ ಕರ್ತವ್ಯ. ಖರೀದಿಸಿದ ವಾಹನಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಮಾಲೀಕರ, ಚಾಲಕರ ಕರ್ತವ್ಯ. ರಸ್ತೆಗಳನ್ನು ಉತ್ತಮ ಸ್ಥಿತಿಯಲ್ಲಿ ಇಡುವುದು ಪ್ರಭುತ್ವದ ಕೆಲಸ. ಏಕೆಂದರೆ ಈ ಕಾರ್ಯವನ್ನು ವೈಯಕ್ತಿಕ ನೆಲೆಯಲ್ಲಿ ಮಾಡುವುದು ಆಗದು.

ಆದರೆ, ನಮ್ಮ ಹೆದ್ದಾರಿಗಳಲ್ಲಿ ದಟ್ಟಣೆ ಹೇಗಿವೆ ಎಂಬುದನ್ನು ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ವಾಹನ ಚಾಲನೆ ಮಾಡಿ ಅರಿಯಬಹುದು. ಕಿರಿದಾದ ಹೆದ್ದಾರಿಗಳಲ್ಲಿ ವಾಹನ ಚಾಲನೆ ಎಷ್ಟು ಅಪಾಯಕಾರಿ ಎಂಬುದನ್ನು ಬೆಂಗಳೂರು – ಹೊನ್ನಾವರ ಹೆದ್ದಾರಿ ನೋಡಿ ತಿಳಿಯಬಹುದು. ಜಾನುವಾರುಗಳು ಇದ್ದಕ್ಕಿದ್ದಂತೆ ಹೆದ್ದಾರಿಗೆ ನುಗ್ಗಿದರೆ ಆಗುವ ಅಪಾಯ ಏನೆಂಬುದನ್ನು ರಾಜ್ಯದ ಎಲ್ಲ ಹೆದ್ದಾರಿಗಳು ಹೇಳುತ್ತವೆ.

ರಸ್ತೆ ಸುರಕ್ಷತೆ ಹೆಚ್ಚಿಸುವುದೆಂದರೆ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದೂ ಸೇರುತ್ತದೆ. ದಂಡದ ಮೊತ್ತ ಹೆಚ್ಚಿಸುವುದೊಂದೇ ಅಲ್ಲ.

**

ಥರ್ಡ್‌ ಪಾರ್ಟಿ ವಿಮೆ: ಆಶಯಕ್ಕೆ ಸೋಲು

ಥರ್ಡ್‌ ಪಾರ್ಟಿ ವಿಮಾ ಪರಿಹಾರ ಮೊತ್ತಕ್ಕೆ ಗರಿಷ್ಠ ಮಿತಿ ಹೇರಿರುವುದಲ್ಲದೆ ಈ ಮಸೂದೆಯಲ್ಲಿ ಇನ್ನೊಂದು ಗಮನಾರ್ಹ ಅಂಶವಿದೆ. ಚಾಲನಾ ಪರವಾನಗಿ ಇಲ್ಲದ ವ್ಯಕ್ತಿಯೊಬ್ಬ ವಾಹನ ಚಲಾಯಿಸಿ, ಅಪಘಾತದಲ್ಲಿ ಮೂರನೆಯ ವ್ಯಕ್ತಿಯ ಸಾವಿಗೆ ಕಾರಣನಾದರೆ, ವಿಮಾ ಕಂಪೆನಿಗಳು ಥರ್ಡ್‌ ಪಾರ್ಟಿ ವಿಮಾ ಪರಿಹಾರ ನೀಡುವುದಿಲ್ಲ. ‘ಚಾಲಕನ ಬಳಿ ಪರವಾನಗಿ ಇಲ್ಲದ ಕಾರಣ ಹಣ ಕೊಡಲಾಗದು’ ಎಂದು ಅವು ಹೇಳುತ್ತವೆ.

‘ಆದರೆ, ಕಂಪೆನಿಗಳ ಈ ನಡೆಯಿಂದಾಗಿ, ಸತ್ತುಹೋಗಿರುವ ಅಮಾಯಕನ ಕುಟುಂಬ ಪರಿಹಾರದ ಮೊತ್ತದಿಂದ ವಂಚಿತವಾಗುತ್ತದೆ. ವಿಮಾ ಕಂಪೆನಿಗಳು ಥರ್ಡ್ ಪಾರ್ಟಿ ಪರಿಹಾರ ಮೊತ್ತವನ್ನು ಮೃತನ ಕುಟುಂಬಕ್ಕೆ ಪಾವತಿಸಿ, ಆ ಮೊತ್ತವನ್ನು ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡಿದವನಿಂದ ಅಥವಾ ಆ ವಾಹನದ ಮಾಲೀಕನಿಂದ ನಂತರದ ದಿನಗಳಲ್ಲಿ ವಸೂಲಿ ಮಾಡಿಕೊಳ್ಳಬೇಕು ಎಂಬ ಅಂಶವನ್ನು ತಿದ್ದುಪಡಿ ಮಸೂದೆಯಲ್ಲಿ’ ಸೇರಿಸಬೇಕಿತ್ತು ಎನ್ನುವುದು ವಕೀಲ ಅರುಣ್ ಶ್ಯಾಮ್ ಅವರ ವಾದ.

ಈ ಅಂಶವನ್ನು ಮಸೂದೆಯಲ್ಲಿ ಸೇರಿಸಿರದ ಕಾರಣ, ಥರ್ಡ್‌ ಪಾರ್ಟಿ ವಿಮೆಯ ಹಿಂದಿನ ಉದ್ದೇಶವೇ ಸೋತುಹೋಗುತ್ತದೆ ಎಂದು ಶ್ಯಾಮ್ ಹೇಳಿದರು.

**

ವಿವಾದ, ಗೊಂದಲಗಳಲ್ಲಿ ಸಿಲುಕಿಕೊಂಡ ಥರ್ಡ್‌ ಪಾರ್ಟಿ ವಿಮೆ

ಥರ್ಡ್‌ ಪಾರ್ಟಿ ವಿಮೆ ವಿಚಾರದಲ್ಲಿ ವಿಮಾ ಕಂಪೆನಿಗಳು ಎಷ್ಟು ಪರಿಹಾರ ಕೊಡಬಹುದು ಎಂಬ ಬಗ್ಗೆ ತಿದ್ದುಪಡಿ ಮಸೂದೆಯಲ್ಲಿ ಹೇಳಿರುವ ಮಾತುಗಳು ತೀವ್ರ ವಿವಾದದ ಸ್ವರೂಪ ಪಡೆದಿವೆ.

‘ವಾಹನ ವಿಮಾ ಕಂಪೆನಿಗಳು ನೀಡುವ ಥರ್ಡ್‌ ಪಾರ್ಟಿ ವಿಮಾ ಪರಿಹಾರ ಮೊತ್ತಕ್ಕೆ ಈಗಿರುವ ಕಾಯ್ದೆಯಲ್ಲಿ ಮಿತಿ ಇಲ್ಲ. ಆದರೆ ಈಗ ಹೊಸ  ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದ ನಂತರ, ಅಪಘಾತದಲ್ಲಿ ವ್ಯಕ್ತಿ ಮೃತಪಟ್ಟರೆ ಕಂಪೆನಿಯಿಂದ ಸಿಗುವ ಥರ್ಡ್‌ ಪಾರ್ಟಿ ವಿಮಾ ಮೊತ್ತ ಗರಿಷ್ಠ ₹ 10 ಲಕ್ಷ ಮಾತ್ರ. ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಪರಿಹಾರವಾಗಿ ಕೊಡುವಂತೆ ಕೋರ್ಟ್‌ ಆದೇಶಿಸಿದರೆ ಅದನ್ನು ವಾಹನ ಚಾಲಕ ಅಥವಾ ಮಾಲೀಕ ಭರಿಸಬೇಕಾಗಬಹುದು’ ಎಂದು ಮೋಟಾರು ವಾಹನ ಕಾಯ್ದೆಯಡಿ ಹಲವು ಪ್ರಕರಣಗಳಲ್ಲಿ ವಾದಿಸಿರುವ ವಕೀಲ ಸುಂದರ್‌ ರಾಜ್ ಗುಪ್ತ ಹೇಳಿದರು.

‘ಅಪಘಾತವಾದರೆ, ಮೃತಪಡುವ ಅಥವಾ ಗಾಯಗೊಂಡ ವ್ಯಕ್ತಿಗೆ ಪರಿಹಾರ ಮೊತ್ತ ಕೊಡಲು ವಿಮಾ ಕಂಪೆನಿ ಇದೆ. ಕೈಯಿಂದ ಹಣ ಕೊಡಬೇಕಿಲ್ಲ ಎಂಬ ಉದಾಸೀನ ಭಾವದಲ್ಲಿ ವಾಹನ ಚಲಾಯಿಸುವಂತಿಲ್ಲ’ ಎಂದು ಅವರು ಹೇಳುತ್ತಾರೆ.

ವಿಮಾ ಕಂಪೆನಿ ಕೊಡಬೇಕಿರುವ ಮೊತ್ತಕ್ಕೆ ಮಿತಿ ಹೇರಿರುವ ಮಸೂದೆಯು, ಪರಿಹಾರ ರೂಪದಲ್ಲಿ ಕೊಡಲು ಕೋರ್ಟ್‌ಗಳು ಆದೇಶಿಸಬಹುದಾದ ಮೊತ್ತಕ್ಕೆ ಗರಿಷ್ಠ ಮಿತಿ ನಿಗದಿ ಮಾಡಿಲ್ಲ. ಇದರಿಂದಾಗಿ ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಿರುವವರು ಯಾರು ಎಂಬ ಬಗ್ಗೆ ಮಸೂದೆಯಲ್ಲಿ ಸ್ಪಷ್ಟನೆ ಇಲ್ಲ ಎಂದು ಪಿಆರ್‌ಎಸ್‌ ಲೆಜಿಸ್ಲೇಟಿವ್ ಸಂಸ್ಥೆಯ ಟಿಪ್ಪಣಿ ಹೇಳುತ್ತದೆ.

*

***

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry