ಶುಕ್ರವಾರ, ಜನವರಿ 28, 2022
25 °C
ಬೆಲೆ ಕುಸಿತ ಹಾದಿಯಲ್ಲಿ ಕಾಳುಮೆಣಸು

ಕೈಹಿಡಿಯದ ‘ಕಪ್ಪು ಬಂಗಾರ’

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

ಕೈಹಿಡಿಯದ ‘ಕಪ್ಪು ಬಂಗಾರ’

ಮಡಿಕೇರಿ: ‘ಕಪ್ಪು ಬಂಗಾರ’ವೆಂದೇ ಪ್ರಸಿದ್ಧಿಯಾಗಿರುವ ಕಾಳು ಮೆಣಸಿನ ಧಾರಣೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.ಬರ ಪರಿಸ್ಥಿತಿ, ಇಳುವರಿ ಕುಸಿತದ ನಡುವೆ ಬೆಲೆಯಾದರೂ ಕೈಹಿಡಿಯಲಿದೆ ಎಂಬ ನಿರೀಕ್ಷೆ ಸುಳ್ಳಾಗಿದೆ. ದಾಸ್ತಾನು ಮಾಡಿದ್ದ ಕಾಳು ಮೆಣಸನ್ನು ಖರೀದಿಸುವವರೇ ಇಲ್ಲ!ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯ ಬೇಲೂರು ಹಾಗೂ ಸಕಲೇಶಪುರ ಭಾಗದಲ್ಲಿ ಹೆಚ್ಚಾಗಿ ಕಾಳು ಮೆಣಸು ಬೆಳೆಯಲಾಗುತ್ತದೆ. ಜನವರಿಯಲ್ಲಿ ಕೊಯ್ಲು ಮಾಡಿ ಒಣಗಿಸಿ ದಾಸ್ತಾನು ಮಾಡಿದ್ದರು. ಇಂದಲ್ಲ ನಾಳೆ ಉತ್ತಮ ಧಾರಣೆಯ ನಿರೀಕ್ಷೆಯಲ್ಲಿದ್ದ ಬಹುತೇಕ ಬೆಳೆಗಾರರು, ಈಗ ಚಿಂತೆಗೆ ಒಳಗಾಗಿದ್ದಾರೆ.ನವೆಂಬರ್‌, ಡಿಸೆಂಬರ್‌ನಲ್ಲಿ ಪ್ರತಿ ಕ್ವಿಂಟಲ್‌ ಕಾಳು ಮೆಣಸಿಗೆ ₹ 60 ಸಾವಿರ ಬೆಲೆಯಿತ್ತು. ಆಗ ಮಾರಾಟ ಮಾಡಲು ಬೆಳೆ ಕೈಸೇರಿರಲಿಲ್ಲ. ಹೊಸಬೆಳೆ ಬಂದ ನಂತರ ಬೆಲೆಯೂ ಸ್ಥಿರವಾಗಿಲ್ಲ. ಜನವರಿ, ಫೆಬ್ರುವರಿಯಲ್ಲಿ ಕ್ವಿಂಟಲ್‌ಗೆ ₹ 56 ಸಾವಿರದಿಂದ ₹ 58 ಸಾವಿರದ ಆಸುಪಾಸಿನಲ್ಲಿತ್ತು. ಮಾರ್ಚ್‌ನಲ್ಲೂ ಅಂತಹ ಏರಿಳಿತ ಕಂಡಿರಲಿಲ್ಲ. ಆದರೆ, ಏಪ್ರಿಲ್‌ನಲ್ಲಿ ಇಂದಿದ್ದ ಬೆಲೆ ನಾಳೆಯಿಲ್ಲ ಎನ್ನುವ ಪರಿಸ್ಥಿತಿ ಎದುರಾಗಿದೆ.‘ಕಳೆದ ತಿಂಗಳ ಆರಂಭದಲ್ಲಿ ಕೊಡಗು, ಸೋಮವಾರಪೇಟೆ, ಸಕಲೇಶಪುರದ ಮಾರುಕಟ್ಟೆಗಳಲ್ಲಿ ಕ್ವಿಂಟಲ್‌ಗೆ ₹ 52,500ರಿಂದ ₹ 54,500ಕ್ಕೆ ಖರೀದಿ ಮಾಡುತ್ತಿದ್ದರು. ಅದೇ ಏಪ್ರಿಲ್‌ ಕೊನೆಯಲ್ಲಿ ₹ 44 ಸಾವಿರಕ್ಕೆ ಬಂದು ನಿಂತಿರುವುದು ಬೆಳೆಗಾರರ ದುಗುಡ ಹೆಚ್ಚಿಸಿದೆ. ಇಪ್ಪತ್ತು ದಿನಗಳ ಅಂತರದಲ್ಲಿ ಕ್ವಿಂಟಲ್‌ಗೆ ₹ 10 ಸಾವಿರದಷ್ಟು ಬೆಲೆ ಕುಸಿದಿದೆ. ಎಸ್ಟೇಟ್‌ ಹಾಗೂ ಮನೆಯ ಬಳಿ ಚಿಲ್ಲರೆಯಾಗಿ ಖರೀದಿಸುವ ವ್ಯಾಪಾರಿಗಳು ಪ್ರತಿ ಕೆ.ಜಿಗೆ ₹ 420ಕ್ಕೆ ಕೇಳುತ್ತಿರುವುದು ಮತ್ತಷ್ಟು ನೆಮ್ಮದಿ ಕೆಡಿಸಿದೆ’ ಎಂದು ಬೆಳೆಗಾರರು ನೋವು ತೋಡಿಕೊಳ್ಳುತ್ತಿದ್ದಾರೆ.‘ಕೊಡಗು ಜಿಲ್ಲೆಯೂ ಮೂರು ವರ್ಷಗಳ ಕಾಲ ಬರಕ್ಕೆ ತುತ್ತಾಗಿತ್ತು. ನದಿ, ತೋಡು ಹಾಗೂ ತೆರೆದಬಾವಿಗಳೂ ಬತ್ತಿ ಹೋಗಿದ್ದವು. ಕಾಫಿ ಗಿಡ, ಕಾಳು ಮೆಣಸಿನ ಬಳ್ಳಿಯನ್ನು ಉಳಿಸಿಕೊಳ್ಳುವುದೂ ಕಷ್ಟವಾಗಿತ್ತು. ಎಲ್ಲ ಸಂಕಷ್ಟಗಳ ನಡುವೆಯೂ ಅಲ್ಪಸ್ವಲ್ಪ ಇಳುವರಿ ಬಂದಿತ್ತು. ಕಾಫಿಯ ಜತೆಗೆ ಕಾಳು ಮೆಣಸಿನ ಧಾರಣೆಯೂ ಕುಸಿತದ ಹಾದಿ ಹಿಡಿದಿರುವುದು ನಮ್ಮನ್ನು ಸಾಲದ ಕೂಪಕ್ಕೆ ತಳ್ಳುತ್ತಿದೆ’ ಎಂದು ನಾಪೋಕ್ಲು ಕಾಫಿ ಬೆಳೆಗಾರ  ಕೆ.ಪೂವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.ಆಮದು ತಂದ ಸಮಸ್ಯೆ: ‘ವಿಯೆಟ್ನಾಂ ಸೇರಿದಂತೆ ಇತರೆ ದೇಶಗಳಿಂದ ಕಾಳು ಮೆಣಸು ಆಮದಾಗುತ್ತಿರುವುದು ಸ್ಥಳೀಯ ಮಾರುಕಟ್ಟೆಗಳಲ್ಲಿ ಬೆಲೆ ಕುಸಿತಕ್ಕೆ ಕಾರಣವಾಗಿದೆ.ಇಡೀ ದೇಶದಲ್ಲಿ ಮಳೆಯ ಕೊರತೆಯಿದೆ. ಜತೆಗೆ, ನೋಟು ರದ್ದತಿಯ ದೊಡ್ಡ ಹೊಡೆತದಿಂದ ಮಾರುಕಟ್ಟೆ ಇನ್ನೂ ಚೇತರಿಸಿಕೊಂಡಿಲ್ಲ. ಖರೀದಿದಾರರಿಗೂ ನಷ್ಟವಾಗುತ್ತಿದೆ. ಜೂನ್‌ ಅಥವಾ ಜುಲೈನಲ್ಲಿ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ’ ಎನ್ನುತ್ತಾರೆ ಮಡಿಕೇರಿ ವ್ಯಾಪಾರಿ ಕೆ.ಅಬ್ದುಲ್ಲಾ.‘ಜಿಲ್ಲೆಯಲ್ಲಿ ಪ್ರತಿ ವರ್ಷ 15 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಅಂದಾಜು 6,000 ಟನ್‌ ಕಾಳು ಮೆಣಸು ಉತ್ಪಾದನೆ ಆಗುತ್ತದೆ. ಈ ಬಾರಿ ಇಳುವರಿ ಕುಸಿದಿತ್ತು. ಜಿಲ್ಲೆಯಲ್ಲಿ ಗುಣಮಟ್ಟದ ಕಾಳು ಮೆಣಸು ಬೆಳೆದರೂ ಸಂಸ್ಕರಣಾ ಘಟಕದ ಕೊರತೆಯಿದೆ’ ಎಂದೂ ಅವರು ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.