ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜರಂಗ್‌ ಪೂನಿಯಾಗೆ ಚಿನ್ನದ ಸಂಭ್ರಮ: ಸರಿತಾಗೆ ಬೆಳ್ಳಿ

Last Updated 13 ಮೇ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಬಜರಂಗ್ ಪೂನಿಯಾ ಏಷ್ಯನ್ ಕುಸ್ತಿ ಚಾಂಪಿಯನ್‌ ಷಿಪ್‌ನಲ್ಲಿ ಶನಿವಾರ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ.

ಪುರುಷರ 65ಕೆ.ಜಿ ಫ್ರೀಸ್ಟೈಲ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ಬಜರಂಗ್ 6–2ರಲ್ಲಿ ಕೊರಿಯಾದ ಸೆವುಂಗ್‌ ಚಲ್ ಲೀ ಅವರನ್ನು ಮಣಿಸುವ ಮೂಲಕ ಚಿನ್ನಕ್ಕೆ ಕೊರಳೊಡ್ಡಿದರು.

23 ವರ್ಷದ ಭಾರತದ ಆಟಗಾರ ಅಂತಿಮ ಸುತ್ತಿನಲ್ಲಿ ವಿರಾಮದ ವೇಳೆಗೆ 0–2ರಲ್ಲಿ ಹಿಂದೆ ಇದ್ದರು. ಆ ಬಳಿಕ ಅವರು ಅಪೂರ್ವವಾಗಿ ಸೆಣಸಿದರು. ಎದುರಾಳಿಗೆ ಒಂದೂ ಪಾಯಿಂಟ್ಸ್ ಬಿಟ್ಟುಕೊಡದೆ ಸತತ ದಾಳಿ ನಡೆಸಿದರು.

ದ್ವಿತೀಯಾರ್ಧದ ಆರಂಭದಲ್ಲೇ ಎದುರಾಳಿಯನ್ನು ಕೆಳಕ್ಕೆ ಉರುಳಿಸಿದ ಬಜರಂಗ್ ಒಂದು ಪಾಯಿಂಟ್‌ ಪಡೆ ದರು. ಬಳಿಕ ಇನ್ನೊಂದು ಪ್ರಯತ್ನದಲ್ಲಿ ಎರಡು ಪಾಯಿಂಟ್ಸ್ ಗಿಟ್ಟಿಸಿದರು. 4–2ರ ಮುನ್ನಡೆಯ ಬಳಿಕ ಬಜರಂಗ್ ಹಿಂದಿ ರುಗಿ ನೋಡಲಿಲ್ಲ.

ಲಂಡನ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದುಕೊಂಡಿದ್ದ ಭಾರತದ ಯೋಗೇಶ್ವರ್ ದತ್ ಕೂಡ ಗ್ಯಾಲರಿಯಿಂದಲೇ ಬಜರಂಗ್‌ಗೆ ಪ್ರೋತ್ಸಾಹ ನೀಡಿದರು.

ಸೆಮಿಫೈನಲ್‌ನಲ್ಲಿ ಬಜರಂಗ್‌ 3–2 ರಲ್ಲಿ ಕುಕವಾಂಗ್ ಕಿಮ್ ಎದುರು ಪ್ರಯಾಸದ ಗೆಲುವು ದಾಖಲಿಸಿ ಫೈನಲ್ ತಲುಪಿದ್ದರು.

ಕ್ವಾರ್ಟರ್‌ಫೈನಲ್‌ನಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿದ್ದ ಬಜರಂಗ್ 7–5ರಲ್ಲಿ ಹಿಂದಿನ ಏಷ್ಯನ್ ಚಾಂಪಿಯನ್‌ ಷಿಪ್‌ನಲ್ಲಿ ಚಿನ್ನ ಜಯಿಸಿದ್ದ ಇರಾನ್‌ನ ಸಾಸಿರಿ ಮೈಸಮ್ ಅವರಿಗೆ ಆಘಾತ ನೀಡಿದ್ದರು.

ಅರ್ಹತಾ ಸುತ್ತಿನಲ್ಲಿ ಭಾರತದ ಆಟಗಾರ 4–3ರಲ್ಲಿ ಉಜ್ಬೇಕಿಸ್ತಾನದ ಕುಸ್ತಿಪಟು ಸಿರೊಜಿದ್ದೀನ್‌ ಹಸನೊವ್‌ ಅವರನ್ನು ಮಣಿಸಿದ್ದರು.

ಸರಿತಾಗೆ ಬೆಳ್ಳಿ: ಮಹಿಳೆಯರ 58ಕೆ.ಜಿ ವಿಭಾಗದ ಫೈನಲ್‌ನಲ್ಲಿ ಸರಿತಾ 0–6ರಲ್ಲಿ ಕಿರ್ಗಿಸ್ತಾನದ ಅಸುಲು ತನೆಬೆಕೊವಾ ಎದುರು ಸೋಲು ಕಂಡು ಬೆಳ್ಳಿಗೆ ತೃಪ್ತಿಪಟ್ಟರು.

ಸರಿತಾ ಟೂರ್ನಿಗೂ ಮೊದಲು ಎರಡು ಕೆ.ಜಿ ತೂಕ ಕಳೆದುಕೊಂಡಿ ದ್ದರು. ಆದ್ದರಿಂದ ಸಾಕ್ಷಿ ಮಲಿಕ್ (60ಕೆ.ಜಿ) ಹಾಗೂ ಸರಿತಾ ತಮ್ಮ ವಿಭಾ ಗಗಳಲ್ಲಿ ಬದಲಾವಣೆ ಮಾಡಿಕೊಂಡು ಕಣಕ್ಕಿಳಿದಿದ್ದರು.

ಫೈನಲ್‌ನಲ್ಲಿ ಅವರು ಆರಂಭ ದಿಂದಲೇ ತೀವ್ರ ಹಿನ್ನಡೆ ಅನುಭವಿಸಿದರು. ಮೊದಲರ್ಧದ ವೇಳೆಗೆ  ಕಿರ್ಗಿ ಸ್ತಾನದ ಆಟಗಾರ್ತಿ 4–0ರಲ್ಲಿ ಮುಂದೆ ಇದ್ದರು. ಬಳಿಕ ದ್ವಿತೀಯಾರ್ಧದಲ್ಲೂ ಸರಿತಾ ಚೇತರಿಸಿಕೊಂಡು ಪೈಪೋಟಿ ನಡೆಸಲಿಲ್ಲ.

‘ತೂಕದಲ್ಲಿ ಒಂದೆರಡು ಕೆ.ಜಿ ಹೆಚ್ಚು ಕಡಿಮೆ ಆಗುವುದು ಕುಸ್ತಿಯಲ್ಲಿ ಹೊಸ ಸಂಗತಿ ಏನು ಅಲ್ಲ. ಈಗ ಸದ್ಯಕ್ಕೆ ನಾನು 58ಕೆ.ಜಿ ಇದ್ದೇನೆ. ಆದ್ದರಿಂದ ಇದೇ ವಿಭಾಗದಲ್ಲಿ ಆಡಿದೆ. ಸೆಮಿಫೈನಲ್‌ ವರೆಗೂ ಉತ್ತಮ ಹೋರಾಟ ನಡೆಸಿದೆ. ಆದರೆ ಫೈನಲ್‌ನಲ್ಲಿ  ಗೆಲ್ಲಲು ಸಾಧ್ಯ ವಾಗಲಿಲ್ಲ. ಚಿನ್ನ ಗೆಲ್ಲುವ ಕನಸು ಇತ್ತು. ಇದು ನನಸಾಗದೇ ಉಳಿಯಿತು’ ಎಂದು ಸರಿತಾ ಹೇಳಿದ್ದಾರೆ.

ಸೆಮಿಫೈನಲ್‌ನಲ್ಲಿ ಅವರು 12–0 ರಲ್ಲಿ ವಿಯೆಟ್ನಾಮ್‌ನ ಹುವಾಂಗ್ ಡುಯೊ ಎದುರು ಗೆದ್ದು ಚಿನ್ನದ ಪದಕದ ಸುತ್ತಿಗೆ ಲಗ್ಗೆಯಿಟ್ಟಿದ್ದರು.

ಕ್ವಾರ್ಟರ್‌ಫೈನಲ್‌ನಲ್ಲಿ ಸರಿತಾ 10–0ರಲ್ಲಿ ಉಜ್ಬೇಕಿಸ್ತಾನದ ಅಸೆಮ್‌ ಸೆಡ ಮೆಟೋವಾ ಎದುರು ಗೆದ್ದು ಸೆಮಿ ಫೈನಲ್ ಪ್ರವೇಶಿಸಿದ್ದರು.

ಸತ್ಯವ್ರತಗೆ ಸೋಲು: ಸಾಕ್ಷಿ ಮಲಿಕ್ ಅವರ ಪತಿ ಸತ್ಯವ್ರತ ಕಡಿಯಾನ್ ಪುರು ಷರ 97ಕೆ.ಜಿ ವಿಭಾಗದಲ್ಲಿ ಸೋಲು ಕಂಡಿದ್ದಾರೆ.

ಕಂಚಿನ ಪದಕಕ್ಕಾಗಿ ನಡೆದ ಪ್ಲೇ ಆಫ್‌ ಪಂದ್ಯದಲ್ಲಿ ಸತ್ಯವ್ರತ 5–8ರಲ್ಲಿ ಮಂಗೋಲಿಯಾದ ಬಾತಜುಲ್ ಉಲ್‌ಜಿಸೈಖಾನ್ ಮೇಲೆ ಸೋತರು.

ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಸಂದೀಪ್‌ ತೋಮರ್‌ ಪುರುಷರ 57 ಕೆ.ಜಿ ವಿಭಾಗದಲ್ಲಿ ಸೋಲು ಕಂಡಿದ್ದಾರೆ.

ಗೆಲುವಿನ ಹಂತದಲ್ಲಿದ್ದ ವೇಳೆ ತೋಮರ್ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದ್ದರಿಂದ ಅವರು 5–6ರಲ್ಲಿ ಕಜಕಿಸ್ತಾನದ ಉಲುಜಬೆಕ್‌ ಜೊದೊಶ್‌ಬೆಕೊವ್ ಎದುರು ನಿರಾಸೆ ಕಂಡರು. ಪುರುಷರ 74ಕೆ.ಜಿ ವಿಭಾಗದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಜಿತೇಂ ದರ್ 7–8ರಲ್ಲಿ ಜಪಾನ್‌ನ ಸುಬಾಸ ಅಸಾಯ್ ಮೇಲೆ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT