ಇಲ್ಲಿನ ಜನ ಸ್ನೇಹಪರರು

7
ನಗರದ ಅತಿಥಿ

ಇಲ್ಲಿನ ಜನ ಸ್ನೇಹಪರರು

Published:
Updated:
ಇಲ್ಲಿನ ಜನ ಸ್ನೇಹಪರರು

ಪ್ರತಿಭೆಯಿದ್ದರೂ ತಮ್ಮ ಎತ್ತರದ ಕಾರಣಕ್ಕಾಗಿ ಸಾಕಷ್ಟು ಸಿನಿಮಾ ಅವಕಾಶ ಕಳೆದುಕೊಂಡವರು. ಇವರು ಕನ್ನಡದ ‘ಮತ್ತೆ ಬನ್ನಿ ಪ್ರೀತ್ಸೋಣ’ ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ‘ಸ್ಕೆಚರ್ಸ್‌’ ಆಯೋಜಿಸಿದ್ದ ಫ್ಯಾಷನ್‌ ಷೋನಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿದ್ದರು.

‘ಇಲ್ಲಿಗೆ ಸಾಕಷ್ಟು ಬಾರಿ  ಬಂದಿದ್ದೇನೆ. ಬೇರೆ ನಗರಗಳಿಗೆ ಹೋಲಿಸಿದರೆ ಇಲ್ಲಿನ ವಾತಾವರಣ ಭಿನ್ನ. ‘ಮತ್ತೆ ಬನ್ನಿ ಪ್ರೀತ್ಸೋಣ’ ಚಿತ್ರೀಕರಣದ ಸಂದರ್ಭ ಒಂದು ತಿಂಗಳ ಕಾಲ ಇಲ್ಲಿಯೇ ಇದ್ದೆ. ಈ ಊರು ನನಗೆ ಸದಾ ಇಷ್ಟ’ ಎಂದು ಮಾತು ಆರಂಭಿಸಿದರು ನಟಿ ಕರಿಷ್ಮಾ ತನ್ನಾ.

ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿರುವ ಅವರಿಗೆ ಲವ್ಲಿ ಸ್ಟಾರ್ ಪ್ರೇಮ್ ಹಾಗೂ ನಿರ್ದೇಶಕ ರವೀಂದ್ರ ಗೆಳೆಯರಂತೆ.

‘ಇಬ್ಬರ ಮೊಬೈಲ್‌ ಸಂಖ್ಯೆ ಕಳೆದುಕೊಂಡು ಬಿಟ್ಟಿದ್ದೇನೆ ಇಲ್ಲದಿದ್ದರೆ ಖಂಡಿತ ಅವರಿಗೆ ಕರೆ ಮಾಡಿ ಮಾತನಾಡಿಸುತ್ತಿದ್ದೆ. ‘ಮತ್ತೆ ಬನ್ನಿ ಪ್ರೀತ್ಸೋಣ’ ಚಿತ್ರೀಕರಣ ಸಮಯದಲ್ಲಿ ತಂಡದೊಂದಿಗೆ ಉತ್ತಮ ಬಾಂಧವ್ಯ ಇತ್ತು. ಆ ಸಮಯದಲ್ಲಿ ಕೆಲವು ಕನ್ನಡ ಪದಗಳನ್ನೂ ಕಲಿತಿದ್ದೆ’ ಎಂದು ಅವರು ನೆನಪಿಸಿಕೊಳ್ಳುತ್ತಾರೆ.

‘ಬಾಲಿವುಡ್‌ಗೂ ಚಂದನವನಕ್ಕೂ ಚಿತ್ರೀಕರಣ ದೃಷ್ಟಿಯಿಂದ ಹೆಚ್ಚೇನು ಭಿನ್ನತೆ ಇಲ್ಲ. ಅಲ್ಲಿಗೆ ಹೋಲಿಸಿದರೆ ಇಲ್ಲಿನ ಜನ ನಟರನ್ನು ಹೆಚ್ಚು ಗೌರವದಿಂದ ಕಾಣುತ್ತಾರೆ. ಪ್ರೀತಿಯಿಂದ ಮಾತನಾಡಿಸುತ್ತಾರೆ. ಇಲ್ಲಿನ ಜನ ಸ್ನೇಹಪರರು’ ಎನ್ನುತ್ತಾರೆ ಅವರು.

ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ತಮ್ಮ ಛಾಪು ಮೂಡಿಸಿರುವ ಕರಿಷ್ಮಾ ಅವರಿಗೆ ಎರಡರ ಬಗ್ಗೆಯೂ  ಪ್ರೀತಿ ಇದೆ. ‘ನಾನು ಟಿ.ವಿ.ಯಿಂದ ಬೆಳೆದು ಬಂದ ಕಲಾವಿದೆ. ಟಿ.ವಿ.ಯಿಂದ ನನಗೆ ಜನಪ್ರಿಯತೆ ಸಿಕ್ಕಿದೆ. ಈಗಂತೂ ಟಿ.ವಿ.ಯೂ ಸಿನಿಮಾ ಮಟ್ಟಕ್ಕೆ ಬೆಳೆದುಬಿಟ್ಟಿದೆ. ಟೀವಿ ಕಲಾವಿದರೂ ಸಿನಿಮಾದವರಿಗಿಂತ ಕಮ್ಮಿ ಇಲ್ಲದಂತೆ ಹಣಗಳಿಸುತ್ತಿದ್ದಾರೆ. ನಟಿಯಾಗಿ ನನಗೆ ಎಲ್ಲಿ ನಟನೆಗೆ ಅವಕಾಶ ಸಿಗುತ್ತದೆಯೊ ಅಲ್ಲಿಗೆ ನಾನು ಹೋಗುತ್ತೇನೆ. ಟೀವಿ, ಸಿನಿಮಾ ಎಂಬ ಭೇದ ನನಗಿಲ್ಲ’ ಎಂಬ ಸ್ಪಷ್ಟೋಕ್ತಿ ಅವರದ್ದು.

‘ರಿಯಾಲಿಟಿ ಷೋಗಳಿಂದ ಕಡಿಮೆ ಸಮಯದಲ್ಲಿ ಹೆಚ್ಚು ಹಣ ಸಿಗುತ್ತದೆ (ನಗು). ಇದಲ್ಲದೆ ರಿಯಾಲಿಟಿ ಷೋಗಳು ಪ್ರತಿಭೆ ಹೊರ ಹಾಕಲು ಸಿಗುವ ವೇದಿಕೆ. ಅವು ವ್ಯಕ್ತಿ ಎಷ್ಟು ಗಟ್ಟಿಯಿದ್ದಾನೆ ಎಂದು ಒರೆಗೆ ಹಚ್ಚುವ ವೇದಿಕೆ ಕೂಡ ಹೌದು. ಅವುಗಳಿಂದ ನನಗೆ ಸಾಕಷ್ಟು ಪ್ರಚಾರ ಸಿಕ್ಕಿದೆ. ಅನುಭವವೂ ದೊರೆತಿದೆ’ ಎಂಬುದು ಅವರ ಅನುಭವದ ನುಡಿ.

ವಿಕ್ಟೋರಿಯಾ ಬೆಕಂ ಅವರನ್ನು  ಫ್ಯಾಷನ್ ಐಕಾನ್ ಎಂದು ಆರಾಧಿಸುವ ಕರಿಷ್ಮಾಗೆ  ಬೆಕಂನ ಫ್ಯಾಷನ್ ಸೆನ್ಸ್ ಬಹಳ ಇಷ್ಟ. ಅಂತೆಯೇ ಬಾಲಿವುಡ್‌ನಲ್ಲಿ ಸೋನಮ್‌ ಕಪೂರ್‌ ಕೂಡಾ ಇಷ್ಟ. ಲುಕ್‌ ಮತ್ತು ಉಡುಪುಗಳೊಂದಿಗೆ ಸದಾ ಪ್ರಯೋಗಶೀಲರಾಗಿರುವ ಸೋನಮ್, ಕಂಗನಾ ರನೋಟ್‌ ಅಂದರೆ ಕರಿಷ್ಮಾಗೆ ವಿಶೇಷ ಒಲವು.

ಅಷ್ಟಾಗಿ ಸಿನಿಮಾಗಳನ್ನು ನೋಡದ ಕರಿಷ್ಮಾ ಇತ್ತೀಚೆಗೆ ಬಾಹುಬಲಿ–2 ನೋಡಿದ್ದಾರಂತೆ.  ಪ್ರಸ್ತುತ ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಸಂಜಯ್ ದತ್‌ ಅವರ ಜೀವನ ಆಧಾರಿತ ಚಿತ್ರದಲ್ಲಿ ರಣಬೀರ್‌ ಕಪೂರ್ ಅವರೊಂದಿಗೆ ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದಾರೆ.

‘ಎತ್ತರ’ದ ನಿಲುವು ತೊಡಕಲ್ಲ...

ನನ್ನ ಎತ್ತರದ ನಿಲುವಿನಿಂದ (ಎತ್ತರ: 5.9) ಕೆಲವು ಅವಕಾಶಗಳನ್ನು ಕಳೆದುಕೊಂಡಿದ್ದೇನೆ. ಕೆಲವು ನಾಯಕರಿಗೆ ಅದೊಂದು ಕೀಳರಿಮೆ ಇದೆ. ನಾಯಕನಿಗಿಂತ ನಾಯಕಿ ಗಿಡ್ಡ ಇರಬೇಕು ಎಂಬುದು ಸರಿಯಿಲ್ಲ. ಕೇವಲ ನಟರಷ್ಟೆ ಅಲ್ಲ ನಿರ್ದೇಶಕರು ಹೀಗೆಯೇ ಯೋಚಿಸುತ್ತಾರೆ. ನಾನು ಸಣ್ಣವರಿಂದ ಇದನ್ನೇ ಕೇಳುತ್ತಾ ಬಂದಿದ್ದೇನೆ. ಇದು ಬದಲಾಗಬೇಕು. ಆದರೆ ಈ ವಿಷಯದಲ್ಲಿ ಸಲ್ಮಾನ್‌ ಖಾನ್‌ ಭಿನ್ನವಾಗಿ ನಿಲ್ಲುತ್ತಾರೆ.

ಅವರು ಹೆಚ್ಚೇನು ಎತ್ತರವಿಲ್ಲ. ಆದರೆ, ಸದಾ ತಮಗಿಂತ ಉದ್ದದ ನಟಿಯರೊಂದಿಗೆ ನಟಿಸುತ್ತಾರೆ. ಅವರಿಗೆ ತಮ್ಮ ನಟನೆಯ ಮೇಲೆ ನಂಬಿಕೆ ಇದೆ. ಅವರಿಗೆ ಆಗದ ಸಮಸ್ಯೆ ಕೆಲವು ನಟರಿಗೆ ಏಕೆ ಆಗುತ್ತದೆಯೊ ಗೊತ್ತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry