ಗಾಳಿಯ ಆರ್ಭಟ; ಕೃಷಿಕರಿಗೆ ಸಂಕಟ

7

ಗಾಳಿಯ ಆರ್ಭಟ; ಕೃಷಿಕರಿಗೆ ಸಂಕಟ

Published:
Updated:
ಗಾಳಿಯ ಆರ್ಭಟ; ಕೃಷಿಕರಿಗೆ ಸಂಕಟ

ವಿಜಯಪುರ: ಜಿಲ್ಲೆಯ ವ್ಯಾಪ್ತಿಯಲ್ಲಿ ಮೂರು ದಿನ ಗಾಳಿಯ ಆರ್ಭಟ ಹೆಚ್ಚಿತ್ತು. ಸೋಮವಾರ, ಮಂಗಳವಾರ ಗಂಟೆಗೆ 30ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದ್ದು, ರೈತ ಸಮೂಹದಲ್ಲಿ ಆತಂಕ ಸೃಷ್ಟಿಸಿತ್ತು.

ಬುಧವಾರ ಸಹ ಗಾಳಿ ಬೀಸುವ ವೇಗ ಗಂಟೆಗೆ 25ರಿಂದ 40 ಕಿ.ಮೀ. ಇತ್ತು. ಗುರುವಾರದಿಂದ ಗಾಳಿ ಬೀಸುವ ವೇಗದ ತೀವ್ರತೆ ಕಡಿಮೆಯಾಗಿದೆ. ಆದರೂ 15ರಿಂದ 25 ಕಿ.ಮೀ. ವೇಗ ದಲ್ಲಿ ಮುಂದಿನ ದಿನಗಳಲ್ಲೂ ಗಾಳಿ ಬೀಸಲಿದೆ ಎಂಬುದು ಹವಾಮಾನ ಮುನ್ಸೂಚನೆ ತಿಳಿಸುವ ಜಾಲತಾಣಗಳಲ್ಲಿ ಪ್ರಕಟಗೊಂಡಿದ್ದು, ರೈತ ಸಮೂಹಕದ ಆತಂಕ ಹೆಚ್ಚಿಸಿದೆ.

ಜಿಲ್ಲೆಯ ಎಲ್ಲೆಡೆ ಮುಂಗಾರು ಪೂರ್ವ ಮಳೆ ಸಮರ್ಪಕವಾಗಿ ಸುರಿಯಲಿಲ್ಲ. ಬಹುತೇಕ ಕಡೆ ವರ್ಷದ ಮೊದಲ ಮಳೆಯ ಹನಿಗಳು ಇನ್ನೂ ಭುವಿ ಸ್ಪರ್ಶಿಸಿಲ್ಲ. ಮೂರ್ನಾಲ್ಕು ದಿನ ಗಳಿಂದ ಆಗಸದಲ್ಲಿ ಮಳೆಯ ಮೋಡಗಳು ದಟ್ಟೈಸುವ ಮೂಲಕ, ಮಳೆ ಸುರಿಯುವ ಛಾಯೆ ಗೋಚರಿಸಿದರೂ, ಗಾಳಿಯ ಅಬ್ಬರಕ್ಕೆ ಒಂದೇ ಒಂದು ಹನಿ ಮಳೆ ಸುರಿಸದೆ ಮೋಡಗಳು ಬಾನಂಗಳದಲ್ಲಿ ಓಡಲಾರಂಭಿಸಿವೆ.

ಬರುವ ದಿನಗಳಲ್ಲೂ ಗಾಳಿಯ ವೇಗ 15ರಿಂದ 20, 25 ಕಿ.ಮೀ. ಇರಲಿದೆ ಎಂಬುದು ಹವಾಮಾನ ಮುನ್ಸೂಚನೆ ನೀಡುವ ಜಾಲತಾಣಗಳಲ್ಲಿ ದಾಖಲಾಗಿದೆ. ಬಯಲು ಸೀಮೆಯನ್ನೇ ಹೊಂದಿರುವ ಜಿಲ್ಲೆಯ ವ್ಯಾಪ್ತಿಯಲ್ಲಿ ಬೆಟ್ಟ–ಗುಡ್ಡ ವಿರಳಾತಿ ವಿರಳ. ಆಗಸದಲ್ಲಿ ಮಳೆ ಸುರಿಸುವ ಮೋಡಗಳು ದಟ್ಟೈಸಿದರೂ, ಗಾಳಿಯ ವೇಗಕ್ಕೆ ಇವು ಒಂದೆಡೆ ನಿಲ್ಲದೆ ಚೆದುರಿ ಓಡಿ ಹೋಗುತ್ತವೆ. ಇದರಿಂದ ನಮ್ಮಲ್ಲಿ ಮಳೆ ಸುರಿಯುವುದೋ ಇಲ್ಲವೋ ಎಂಬ ಆತಂಕ ಬೆಂಬಿಡದೆ ಕಾಡುತ್ತಿದೆ ಎನ್ನುತ್ತಾರೆ ರೈತ ಮುಖಂಡ ಅರವಿಂದ ಕುಲಕರ್ಣಿ.

ಅಬ್ಬರ ಹೆಚ್ಚೈತಿ: ‘ಸತತ ಬರದ ಹೊಡೆತಕ್ಕೆ ತತ್ತರಿಸಿದ್ದೇವೆ. ವರ್ಷಕ್ಕೆ ಎರಡ್ಮೂರು ಹದ ಮಳೆ ಸುರಿದರೂ ನಾವು ನಮ್ಮ ಭೂಮಿಯಲ್ಲಿ ಭರ್ಜರಿ ಫಸಲು ಬೆಳೆಯುತ್ತೇವೆ. ಆದರೆ ಮಳೆ ಎರಡ್ಮೂರು ವರ್ಷದಿಂದ ಕೈಕೊಟ್ಟಿರುವುದರಿಂದ ತೋಟಗಾರಿಕೆ ಬೆಳೆ ದ್ರಾಕ್ಷಿ ಪಡವೂ ಒಣಗಿದೆ.

ಮುಂಗಾರಿ–ಹಿಂಗಾರಿ ಕೃಷಿ ಉತ್ಪನ್ನವೂ ಕೈಗತ್ತದಾಗಿದೆ. ಹಿಂಗಾದರೆ ದೊಡ್ಡ ಕುಟುಂಬದ ಬದುಕು ಸಾಗಿ ಸೋದು ಕಷ್ಟವಾಗಿದೆ’ ಎಂದು ಇಂಡಿ ತಾಲ್ಲೂಕು ಕಪನಿಂಬರಗಿ ಗ್ರಾಮದ ರೈತ ದಾದಾಗೌಡ ಖಾನಾಪುರ ತಿಳಿಸಿದರು. ‘ವಾರದಿಂದ ಗಾಳಿ ಅಬ್ಬರ ಹೆಚ್ಚೈತಿ. ರಾತ್ರಿ ವೇಳೆ ಬಿರುಸಾಗೈತಿ. ಹಗಲು ನೀರು ಹಾಯಿಸಲು ಕರೆಂಟ್‌ ಇರಲ್ಲ. ರಾತ್ರಿಯಿಡಿ ನೀರು ಹಾಯಿಸಿ ದರೂ ಗಾಳಿ ಗಿಡದ ಬುಡಕ್ಕೆ ನೀರು ಬೀಳಿಸದೆ ದೂರ ಹಾಕುತ್ತಿದೆ. ಇದೇ ರೀತಿ ಮಳೆಯನ್ನೂ ದೂರ ಹೊತ್ತೊಯ್ಯುತ್ತಿದೆ. ನಮ್ಮ ಹಣೆ ಬರಹ ಚಲೋ ಇಲ್ಲದಂಗಾಗೈತಿ’ ಎಂದು ದಾದಾಗೌಡ ಬೇಸರ ವ್ಯಕ್ತಪಡಿಸಿದರು.

‘ಹೋದ ವರ್ಸ ಜಮೀನು ಗುತ್ತಿಗೆ ಪಡೆದು 11 ಎಕರೆ ಹೊಲದಲ್ಲಿ ತೊಗರಿ ಬಿತ್ತಿದೆ. ಬರದಲ್ಲೂ ಫಸಲು ಕೈಗತ್ತಿತು. ಕ್ವಿಂಟಲ್‌ ತೊಗರಿ ದರ ₹ 5 ಸಾವಿರ ಸಿಗಲಿಲ್ಲ. ಮಾಡಿದ ಖರ್ಚು ಹುಟ್ಟಲಿಲ್ಲ. ಬದಲಿಗೆ ₹ 40 ಸಾವಿರ ಲುಕ್ಸಾನಾಯ್ತು.

ಈ ಬಾರಿ ನಿರೀಕ್ಷೆಯಿಂದ ಮುಂಗಾರು ಮಳೆ ಹನಿಯುವ ಮುನ್ನವೇ ಭೂಮಿ ಹರಗಿ ಸಿದ್ಧಪಡಿಸಿದ್ದೇನೆ. ಸ್ವಂತ 10 ಎಕರೆ ಹೊಲದ ಜತೆಗೆ 11 ಎಕರೆ ಗುತ್ತಿಗೆ ಪಡೆದಿರುವೆ. ಮಳೆ ಬೀಳುತ್ತಿ ದ್ದಂತೆ ತೊಗರಿ, ಜೋಳ ಬಿತ್ತುತ್ತೇನೆ. ಭಗವಂತ ಕಣ್ಬಿಟ್ಟರೆ ಮಾತ್ರ ನಮ್ಮ ಬದುಕು ಹಸನಾಗುತ್ತೆ.

ಹಿಂದಿನ ವರ್ಸದ ಲುಕ್ಸಾನು ಸ ರಿಯಾಗುತ್ತ. ಇಲ್ಲಾಂದ್ರ ಯಾರೂ ನಮ್ಮನ್ನು ಕಾಪಾಡೂದಿಲ್ಲ’ ಎಂದು ತಾಲ್ಲೂಕಿನ ಕನ್ನಾಳ ಗ್ರಾಮದ ರೈತ ಮಲ್ಲಪ್ಪ ಬನ್ನೇನವರ ‘ಪ್ರಜಾವಾಣಿ’ಗೆ ತಿಳಿಸಿದರು.

**

ವರ್ಷಕ್ಕೊಂದು ಬಿರು ಮಳೆ ಸುರಿದರೂ ನಮ್ಮ ಬಾಳು ಬಂಗಾರ ಆಗ್ತೈತಿ. ಸುತ್ತಲೂ ಮಳೆ ಆಗ್ತೈತಿ. ನಮಗ ಆಗಂಗಿಲ್ಲ. ವಿಪರೀತ ಗಾಳಿ ಭಯ ಹುಟ್ಸೈತಿ

-ದಾದಾಗೌಡ ಖಾನಾಪುರ

ಕಪನಿಂಬರಗಿ ರೈತ

*

ಮುಂಗಾರು ಪೂರ್ವ ಅಕಾಲಿಕ ಮಳೆ ಸುರಿದಿಲ್ಲ. ಮುಂಗಾರು ಕೇರಳ ಪ್ರವೇಶಿಸಿದ ವೇಳೆಗೆ ಜಿಲ್ಲೆಯ ವ್ಯಾಪ್ತಿ ಯಲ್ಲಿ ಗಾಳಿಯ ಆರ್ಭಟ ಹೆಚ್ಚಿದ್ದು, ರೈತ ಸಮೂಹದಲ್ಲಿ ಆತಂಕ ಸೃಷ್ಟಿಸಿದೆ.

-ಅರವಿಂದ ಕುಲಕರ್ಣಿ

ರೈತ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry