ಸಾಹಸ ಕ್ರೀಡೆಗಳಿಗೆ ಸರ್ಕಾರದಿಂದ ಉತ್ತೇಜನ

7
ಕಾಳಿ ಕಯಾಕಿಂಗ್‌ ಉತ್ಸವಕ್ಕೆ ಚಾಲನೆ; ವೃತ್ತಿನಿರತ ಸ್ಪರ್ಧಿಗಳು ಭಾಗಿ; ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿಕೆ

ಸಾಹಸ ಕ್ರೀಡೆಗಳಿಗೆ ಸರ್ಕಾರದಿಂದ ಉತ್ತೇಜನ

Published:
Updated:
ಸಾಹಸ ಕ್ರೀಡೆಗಳಿಗೆ ಸರ್ಕಾರದಿಂದ ಉತ್ತೇಜನ

ಜೊಯಿಡಾ (ಉತ್ತರ ಕನ್ನಡ): ‘ರಾಜ್ಯದಲ್ಲಿ ಸಾಹಸ ಕ್ರೀಡೆಗಳನ್ನು ಉತ್ತೇಜಿಸಲು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2017–18ನೇ ಸಾಲಿನಲ್ಲಿ ಹಲವಾರು ಸಾಹಸ ಕ್ರೀಡೆಗಳನ್ನು ಆಯೋಜಿಸಿದ್ದು, ಅವುಗಳಲ್ಲಿ ಕಾಳಿ ಕಯಾಕಿಂಗ್‍ ಉತ್ಸವ ಮೊದಲನೆಯದು’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಪ್ರಮೋದ್‍ ಮಧ್ವರಾಜ್‍ ಹೇಳಿದರು.

ತಾಲ್ಲೂಕಿನ ಅವೆಡಾ ಗ್ರಾಮದ ಕಾಳಿ ನದಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಮೂರು ದಿನಗಳ ಕಾಳಿ ಕಯಾಕಿಂಗ್‍ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

‘ಪ್ರವಾಸೋದ್ಯಮ ಹಾಗೂ ಸಾಹಸ ಕ್ರೀಡೆಗಳು ನಿಕಟವಾದ ಸಂಬಂಧ ಹೊಂದಿದೆ. ಹೀಗಾಗಿ ಪ್ರವಾಸೋದ್ಯಮ ಇಲಾಖೆಯು ₹ 3.50 ಕೋಟಿಯನ್ನು ಜನರಲ್‍ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ (ಜೇತ್ನಾ) ನೀಡಲಾಗಿದ್ದು, ಮುಂದಿನ 9 ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಹತ್ತು ಸಾಹಸ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಭಾರತದ ಗಂಗಾ ಕಯಾಕ್‌ ಉತ್ಸವ, ಮೇಘಾಲಯ ಕಯಾಕ್‌ ಉತ್ಸವ ಹಾಗೂ ಮಲಬಾರ್‌ ಕಯಾಕ್‌ ಉತ್ಸವ ಹೊರತುಪಡಿಸಿದರೆ ರಾಜ್ಯದಲ್ಲಿ ಪ್ರಥಮ ಬಾರಿಗೆ ಇಲ್ಲಿನ ಕಾಳಿ ನದಿಯಲ್ಲಿ ಕಯಾಕಿಂಗ್‌ ಉತ್ಸವ ಸಂಘಟಿಸಿದ್ದೇವೆ. ಮಲಬಾರ್‌ ಉತ್ಸವದಲ್ಲಿ ಕೇವಲ 60 ಸ್ಪರ್ಧಿಗಳು ಭಾಗವಹಿಸಿದ್ದರು. ಆದರೆ ಇಲ್ಲಿ 150ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ. ನ್ಯೂಜಿಲೆಂಡ್‌, ಆಸ್ಟ್ರೇಲಿಯಾ, ಯುನೈಟೆಡ್‌ ಕಿಂಗ್‌ಡಮ್‌, ಅಮೆರಿಕಾ, ಇಟಲಿ, ಭಾರತದ ನೇಪಾಳ, ಮೇಘಾಲಯ, ಕೇರಳ, ಉತ್ತರಾಖಂಡ ಹಾಗೂ ರಾಜ್ಯದ ಉಡುಪಿ, ಬೆಂಗಳೂರು ಸೇರಿದಂತೆ ನಾನಾ ಭಾಗಗಳಿಂದ ಸ್ಪರ್ಧಿಗಳು ಬಂದಿದ್ದಾರೆ’ ಎಂದರು.

ಶಾಶ್ವತ ವ್ಯವಸ್ಥೆಗೆ ಚಿಂತನೆ: ‘ಕೊಡುಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಬರ್ಪೊಳೆಯಲ್ಲಿ ಕೇವಲ ಮಳೆಗಾಲದಲ್ಲಿ ಮಾತ್ರ ರ್‍ಯಾಫ್ಟಿಂಗ್‌ ಸಂಘಟಿಸಬಹುದು. ಆದರೆ ಕಾಳಿ ನದಿಯು ಅಣೆಕಟ್ಟೆಯಿಂದ ನಿಯಂತ್ರಣಗೊಂಡಿದ್ದು, ನೀರಿನ ಹರಿವು ಸದಾ ಕಾಲ ಇರುತ್ತದೆ. ಹೀಗಾಗಿಯೇ ಕಯಾಕಿಂಗ್‌ಗೆ ಇದು ಪ್ರಶಸ್ತ ಸ್ಥಳವಾಗಿದ್ದು, ಪ್ರತಿ ವರ್ಷ ಇಂಥ ಉತ್ಸವ ಹಾಗೂ ನಿರಂತರವಾಗಿ ಈ ಚಟುವಟಿಕೆ ನಡೆಯಲು ಶಾಶ್ವತ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.

ಒಲಿಂಪಿಕ್‍ ಕ್ರೀಡಾಪಟುಗಳಿಗೆ ಸಹಕಾರ: ‘ಪ್ರತಿಷ್ಠಿತ ಒಲಿಂಪಿಕ್‍ ಕ್ರೀಡೆಗಳಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಸರ್ಕಾರ ಬದ್ಧವಾಗಿದ್ದು, ಸುಮಾರು 1,000 ಮಂದಿಯನ್ನು ದತ್ತು ಸ್ವೀಕರಿಸಿ ಅವರಿಗೆ ಎಲ್ಲ ರೀತಿಯ ಸಹಕಾರ ಹಾಗೂ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಪ್ರಮೋದ್‌ ಮಧ್ವರಾಜ್‌ ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನರ್ಮದಾ ಪಾಟ್ನೇಕರ, ಅವೆಡಾ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕಸ್ತೂರಿಬಾಯಿ ಗುಡೆ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್‌. ಚಂದ್ರಶೇಖರ ನಾಯಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ರಮೇಶ್‌ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry