ಮಕ್ಕಳ ಮೋಹಕ್ಕೆ ಸಿಲುಕೀರಿ ಜೋಕೆ...

7

ಮಕ್ಕಳ ಮೋಹಕ್ಕೆ ಸಿಲುಕೀರಿ ಜೋಕೆ...

Published:
Updated:
ಮಕ್ಕಳ ಮೋಹಕ್ಕೆ ಸಿಲುಕೀರಿ ಜೋಕೆ...

ವಕೀಲ ನಾಗನಗೌಡ ಪಾಟೀಲರು ಪ್ರಾಮಾಣಿಕರೆಂದೇ ಗುರುತಿಸಿಕೊಂಡವರು. ಸಹಕಾರಿ ಕಾಯ್ದೆಗಳಿಗೆ ಸಂಬಂಧಿಸಿದ ಬ್ಯಾಂಕ್‌ಗಳ ಕೇಸುಗಳನ್ನು ನಡೆಸುವುದಲ್ಲಿ ನಿಪುಣರು ಅವರು.

ಕಠಿಣ ಪರಿಶ್ರಮದಿಂದ ಮೇಲೆ ಬಂದು ಹಣ ಸಂಪಾದಿಸಿದರು. ಯಾವ ದುರಭ್ಯಾಸಕ್ಕೂ ಕೈಹಾಕದ ಕಾರಣ, ಬೆಂಗಳೂರಿನ ಬಸವನಗುಡಿಯಲ್ಲಿ ದೊಡ್ಡದಾದ ಬಂಗಲೆಯನ್ನೂ ಕಟ್ಟಿಸಿದರು.

ಒಂದು ಹೆಣ್ಣು, ಒಂದು ಗಂಡು ಮಗುವಿನ ತಂದೆಯಾದ ಪಾಟೀಲರಿಗೆ ಎಲ್ಲ ಪೋಷಕರಂತೆ ಮಕ್ಕಳ ಉಜ್ವಲ ಭವಿಷ್ಯದ ಚಿಂತೆ. ಮಕ್ಕಳನ್ನು ಡಾಕ್ಟರ್‌, ಎಂಜಿನಿಯರ್‌ ಮಾಡಬೇಕೆಂದು ಕೊಂಡರು. ಭರ್ಜರಿಯಾಗಿ ಅವರ ಮದುವೆ ಮಾಡುವ ಕನಸು ಕಂಡರು. ಹಾಗೂ ಹೀಗೂ ಹಣ ಸಂಪಾದಿಸಿ 25ಲಕ್ಷ ರೂಪಾಯಿಗಳನ್ನು ಬ್ಯಾಂಕಿನಲ್ಲಿ ಭದ್ರತಾ ಠೇವಣಿ ಇಟ್ಟರು. ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಈ ಹಣದಿಂದ ತಮ್ಮ ಕನಸು ನನಸು ಮಾಡುವ ಭರವಸೆ ಅವರಿಗಿತ್ತು.

ಇಬ್ಬರೂ ಮಕ್ಕಳು ಅಪ್ಪನ ಇಚ್ಛೆಯಂತೆ ಬೆಳೆದರು. ಮಗಳು ಎಂಜಿನಿಯರಿಂಗ್‌ ಕಾಲೇಜು ಸೇರಿದರೆ, ಮಗ ಎಂಬಿಬಿಎಸ್‌ ಸೇರಿದ. ಪಾಟೀಲರ ಸಂತೋಷಕ್ಕೆ ಪಾರವೇ ಇರಲಿಲ್ಲ. ತಮ್ಮೆಲ್ಲಾ ಆಸೆ ಈಡೇರಿದಂತೆ ಕಂಡಿತು ಅವರಿಗೆ.

***

ಅದೊಂದು ದಿನ ನಾನು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಹೋಗುತ್ತಿದ್ದೆ. ಅದೇ ಬಸ್ಸಿನಲ್ಲಿ ಪಾಟೀಲರೂ ಹೊರಟಿದ್ದರು. ಪಕ್ಕದಲ್ಲಿಯೇ ಕುಳಿತಿದ್ದರಿಂದ ಪರಸ್ಪರ ಪರಿಚಯವಾಗಿ ಆತ್ಮೀಯರಾದೆವು. ಅಲ್ಲಿಂದ, ನಾವಿಬ್ಬರು ದೂರವಾಣಿ ಕರೆ ಮಾಡಿಕೊಳ್ಳುತ್ತಿದ್ದೆವು.

***

ಒಂದು ದಿನ ಪಾಟೀಲರಿಗೆ ಉಯಿಲು (ವಿಲ್‌) ಬರೆಯುವ ಮನಸ್ಸಾಯಿತು. ಆದ್ದರಿಂದ ಭೇಟಿಯಾಗಲು ನನ್ನ ಕಚೇರಿಗೆ ಬಂದರು. ಸುದೀರ್ಘ ಚರ್ಚೆ ಬಳಿಕ ಮಗನಿಗೆ ಮನೆ, ಮಗಳಿಗೆ ಸೈಟು ಹಾಗೂ ಹೆಂಡತಿಗೆ ಒಡವೆ ಬರೆದರು. ಅಲ್ಲಿಗೆ ಅವರು ತಮ್ಮ ಮಕ್ಕಳ ಉಜ್ವಲ ಭವಿಷ್ಯದ ಎರಡನೆಯ ಹಂತ ತಲುಪಿದ ನಿಟ್ಟುಸಿರು ಬಿಟ್ಟರು.

ಇದಾದ ಕೆಲವು ತಿಂಗಳ ನಂತರ  ಇದ್ದಕ್ಕಿದ್ದಂತೆಯೇ ರಾತ್ರಿ ಸುಮಾರು ಎರಡು ಗಂಟೆಗೆ ನನಗೆ ದೂರವಾಣಿ ಕರೆ ಮಾಡಿದ ಪಾಟೀಲರು ನಡುಗುತ್ತಿದ್ದರು. ಗಾಬರಿಯಿಂದ ನಾನು ವಿಷಯ ಏನು ಎಂದು ಕೇಳಿದೆ. ಮಗಳು ಯಾರೋ ಒಬ್ಬ ಹುಡುಗನೊಂದಿಗೆ ಮದುವೆ ನಿಶ್ಚಯ ಮಾಡಿಕೊಂಡಿದ್ದಾಳೆ ಎಂದು ಹೇಳಿದರು.

‘ನಾಳೆನೇ ಯಾವುದೋ ದೇವಸ್ಥಾನದಲ್ಲಿ ಮದುವೆ ಮುಹೂರ್ತ ಇಟ್ಟುಕೊಂಡಿದ್ದಾಳಂತೆ. ಆನಂತರ ಅವನ ಜೊತೆ ವಿದೇಶಕ್ಕೆ ಹೋಗುತ್ತಾಳಂತೆ. ಹೀಗೆ ಅವಳು ನನಗೆ ಕರೆ ಮಾಡಿ ಹೇಳಿದ್ದಾಳೆ, ಏನು ಮಾಡಬೇಕು ಎಂದೇ ತಿಳಿಯುತ್ತಿಲ್ಲ’ ಎಂದು ಒಂದೇ ಉಸಿರಿನಲ್ಲಿ ಹೇಳಿದರು.

‘ಮದುವೆಗೆ ನಮ್ಮನ್ನು ಕರೆದಿದ್ದಾಳೆ.  ಹುಡುಗ ಯಾರು, ಯಾವ ಕುಲ, ಅವನ ಕುಟುಂಬದ ಹಿನ್ನೆಲೆ ಏನು, ಅವನ ಗುಣ ಹೇಗಿದೆಯೋ ಏನೂ ಗೊತ್ತಿಲ್ಲ. ಮಗಳಿಗೆ ಯಾರಾದರೂ ಮೋಸ ಮಾಡಿದರೆ ಏನು ಮಾಡುವುದು, ಅವಳಿಗೆ ಏನೂ ಗೊತ್ತಾಗುವುದಿಲ್ಲ’ ಎಂದ ಅವರು  ಪೊಲೀಸರ ಮೂಲಕ ಮದುವೆಯನ್ನು ಹೇಗಾದರೂ ತಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಮಕ್ಕಳ ವಿಷಯ ಬಂದಾಗ, ಅದರಲ್ಲೂ ಹೆಣ್ಣುಮಕ್ಕಳ ವಿಷಯದಲ್ಲಿ ಎಡವಟ್ಟು ಆಗುತ್ತಿರುವಾಗ ಎಂಥವರೂ ನಡುಗಿ ಹೋಗುತ್ತಾರೆ, ಏನು ಮಾಡಬೇಕೆಂದೂ ತೋಚುವುದಿಲ್ಲ, ತಲೆಯೇ ಓಡುವುದಿಲ್ಲ ಎನ್ನುತ್ತಾರಲ್ಲ, ಇದು ಹಾಗೆಯೇ. ಪಾಟೀಲರೇ ಖುದ್ದು ವಕೀಲರಾಗಿದ್ದರೂ ಅವರಿಗೆ ಏನು ಮಾಡಬೇಕೆಂದು ತೋಚದೆ ನಡುರಾತ್ರಿ ನನ್ನ ಸಲಹೆ ಕೇಳಿದ್ದರು. ನಾನು ಎಲ್ಲವನ್ನೂ ಆಲಿಸಿ ಮರುದಿನ ಬೆಳಿಗ್ಗೆ ಬರುವಂತೆ ಹೇಳಿ ಸಮಾಧಾನ ಪಡಿಸಿದೆ.

ಮದುವೆಯನ್ನು ತಡೆಯುವ ಸಂಬಂಧ ಸಿವಿಲ್‌ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಅವರು ನಿರ್ಧರಿಸಿದ್ದರು. ರಾತ್ರಿಪೂರ್ತಿ ಕುಳಿತು ಖುದ್ದಾಗಿ ಅರ್ಜಿ ತಯಾರಿಸಿ ಬೆಳ್ಳಂಬೆಳಗ್ಗೆ ನನ್ನ ಕಚೇರಿಗೆ ಬಂದರು. ಆ ಪ್ರಕರಣದಲ್ಲಿ ವಕಾಲತ್ತು ವಹಿಸುವಂತೆ ನನ್ನನ್ನು ಕೇಳಿಕೊಂಡರು. ಬಹುತೇಕ ಅರ್ಜಿ ಅವರೇ  ತಯಾರು ಮಾಡಿದ್ದರು. ಮದುವೆಯ ಸ್ಥಳ ಮತ್ತು ವರನ ವಿವರಗಳನ್ನು ತುಂಬುವುದು ಮಾತ್ರ ನನ್ನ ಕೆಲಸವಾಗಿತ್ತು.

ನಾನು ಕೇಸು ನಡೆಸುವ ಸಂಬಂಧ ಪಾಟೀಲರ ಜೊತೆ ಚರ್ಚಸುತ್ತಿರುವಾಗಲೇ ಅವರ ಹೆಂಡತಿ ನನಗೆ ದೂರವಾಣಿ ಕರೆ ಮಾಡಿದರು. ತುಂಬಾ ಆತಂಕದಲ್ಲಿದ್ದ ಅವರು, ಮಗಳ ವಿರುದ್ಧ ಕೋರ್ಟ್‌ನಲ್ಲಿ ಕೇಸು ಹಾಕದಂತೆ ಕೋರಿಕೊಂಡರು! ‘ದಯವಿಟ್ಟು ಈ ವಿಷಯದಲ್ಲಿ ಮುಂದುವರಿ

ಯಬೇಡಿ. ನನ್ನ ಯಜಮಾನರು ನನ್ನ ಮಾತು ಕೇಳುತ್ತಿಲ್ಲ. ನೀವೇ ಅವರಿಗೆ ಏನಾದರೂ ಹೇಳಿ’ ಎಂದರು.

‘ಮದುವೆಯ ಎಲ್ಲಾ ಸಿದ್ಧತೆಗಳನ್ನು ಮಗಳೇ ಮಾಡಿಕೊಂಡಿದ್ದಾಳೆ. ಹುಡುಗ ತುಂಬಾ ಒಳ್ಳೆಯವ ಎಂದಿದ್ದಾಳೆ. ಮದುವೆಯಾದ ಮರು ದಿನವೇ ಇಬ್ಬರೂ ಆಸ್ಟ್ರೇಲಿಯಾಕ್ಕೆ ಹೋಗಲಿದ್ದಾರಂತೆ. ಅವರ ಭವಿಷ್ಯ ಅವರೇ ನಿರ್ಧರಿಸಿ ಕೊಂಡಿದ್ದಾರೆ. ನಾವು ಅಡ್ಡಿ ಮಾಡುವುದು ಸರಿಯಲ್ಲ. ಹೀಗೆ ಕೇಸು ಹಾಕಿದರೆ ಎಲ್ಲರ ಮಾನ ಹರಾಜು ಆಗುತ್ತದೆ.

ನಾನು ಹೇಳುವಷ್ಟು ಹೇಳಿ ನೋಡಿದೆ. ಆದರೆ ಅವಳು ಕೇಳುತ್ತಿಲ್ಲ. ಈ ಸಮಯದಲ್ಲಿ ಕೇಸು-ಗೀಸು ಅಂತೆಲ್ಲಾ ಹೋದರೆ ಚೆನ್ನಾಗಿ ಇರಲ್ಲ.  ಅವಳ ಹಣೆಬರಹದಲ್ಲಿ ಇದ್ದದ್ದು ಆಗಲಿ’ ಎಂದು ಗದ್ಗದಿತರಾಗಿ ಹೇಳಿದರು. ಪಾಟೀಲರ ಕೋಪವನ್ನು ತಣಿಸುವಂತೆ ನನ್ನನ್ನು ಕೋರಿಕೊಂಡರು.

ಅವರು ಹೇಳಿದ್ದು ನನಗೂ ಸರಿ ಎನ್ನಿಸಿತ್ತು. ಆದರೆ ಪಾಟೀಲರಲ್ಲಿ ತುಂಬಿದ್ದ ಆಕ್ರೋಶ, ನೋವು ಶಮನ ಮಾಡುವುದು ನನಗೆ ಅಷ್ಟು ಸುಲಭ ಆಗಿರಲಿಲ್ಲ. ಆದರೂ ನನ್ನ ಪ್ರಯತ್ನ ಬಿಡಲಿಲ್ಲ. ಎಲ್ಲಾ ರೀತಿಯಲ್ಲೂ ಹೇಳಿ ನೋಡಿದೆ. ಅವರ ಕೋಪ ಒಂದು ಹಂತಕ್ಕೆ ತಣ್ಣಗಾಗುತ್ತ ಬಂದ ಮೇಲೆ ಸಮೀಪದ ಹೋಟೆಲ್‌ಗೆ ಕರೆದುಕೊಂಡು ಹೋಗಿ ಒಳ್ಳೆ ದೋಸೆ ತಿನ್ನಿಸಿದೆ.

ಅಷ್ಟರಲ್ಲಿ ಅವರು ತಮ್ಮನ್ನು ತಾವು ಸಮಾಧಾನ ಮಾಡಿಕೊಂಡು, ನಡುರಾತ್ರಿ  ಹಾಗೂ ಬೆಳ್ಳಂಬೆಳಗ್ಗೆ ತೊಂದರೆ ಕೊಟ್ಟಿದ್ದಕ್ಕೆ ಕ್ಷಮೆ ಕೋರಿದರು. ನಂತರ, ‘ಹಾಳಾಗಿ ಹೋಗಲಿ ಬಿಡಿ. ಮದುವೆ ನಡೆದೇ ಹೋಗಲಿ. ಆದರೆ ಯಾವುದೇ ಕಾರಣಕ್ಕೂ ನಾವ್ಯಾರೂ ಅವಳ ಮದುವೆಗೆ ಹೋಗುವುದಿಲ್ಲ. ಅವಳ ಮುಖವನ್ನೂ ನೋಡುವುದಿಲ್ಲ. ನಮಗೂ ಅವಳಿಗೂ ಸಂಬಂಧವೇ ಇಲ್ಲ’ ಎಂದು ಹೇಳಿ ಹೋದರು. ಅಲ್ಲಿಗೆ ಅವರಿಗೆ ತಾವು ಮಗಳ ಬಗ್ಗೆ ಕಂಡಿದ್ದ ಕನಸು ಕಮರಿದ ಅನುಭವ ಆಯಿತು.

ಕೆಲವು ದಿನಗಳ ನಂತರ ಅವರು ನನ್ನನ್ನು ಮತ್ತೆ ಭೇಟಿಯಾದರು. ಆದರೆ ಮಗಳ ಬಗ್ಗೆ ಒಂದು ಮಾತೂ ಆಡಲಿಲ್ಲ. ನಾನೂ ಕೇಳಲೂ ಹೋಗಲಿಲ್ಲ. ಅವರೀಗ ಎಂಬಿಬಿಎಸ್‌ ಓದುತ್ತಿದ್ದ ಮಗನ ಭವಿಷ್ಯದ ಬಗ್ಗೆ ಮಾತ್ರ ಯೋಚಿಸುತ್ತಿದ್ದರು.

***

ಹೀಗೆ ಕೆಲ ವರ್ಷಗಳು ಕಳೆದವು. ಒಂದು ದಿನ ನನಗೆ ದೂರವಾಣಿ ಕರೆ ಮಾಡಿದ ಪಾಟೀಲರು ತುರ್ತಾಗಿ ಭೇಟಿಯಾಗಬೇಕು ಎಂದರು. ಅವರ ಸಮಸ್ಯೆ ಈಗ ಮಗನ ವಿಚಾರದ್ದಾಗಿತ್ತು. ಬೇರೆ ಧರ್ಮದ ಹುಡುಗಿಯನ್ನು ಆತ ಪ್ರೀತಿಸುತ್ತಿರುವ ವಿಷಯ ಕೇಳಿದ್ದ ಅವರು ಕುಸಿದು ಹೋಗಿದ್ದರು. ಆದರೆ ಮಗನ ಮೇಲಿದ್ದ ಮಮತೆ ಮಾತ್ರ ಕಮ್ಮಿಯಾಗಿರಲಿಲ್ಲ.

‘ನನ್ನ ಮಗ ಎಂಬಿಬಿಎಸ್‌ ಪೂರ್ತಿಗೊಳಿಸಿದ್ದಾನೆ. ಅವನು ಪ್ರೀತಿಸುತ್ತಿರುವ ಹುಡುಗಿ ಬುದ್ಧಿವಂತೆಯಂತೆ. ಎಂ.ಎಸ್‌.ನಲ್ಲಿ ಮೆರಿಟ್‌ ಸೀಟು ಪಡೆದುಕೊಂಡಿದ್ದಾಳಂತೆ. ಮಗನಿಗೆ ಕಡಿಮೆ ಅಂಕ ಇರುವ ಕಾರಣ ಮೆರಿಟ್‌ ಸೀಟು ಸಿಗುವುದಿಲ್ಲ. ಈಗಾಗಲೇ ದಾವಣಗೆರೆಯ ಮೆಡಿಕಲ್‌ ಕಾಲೇಜಿ

ನಲ್ಲಿ ಸ್ನಾತಕೋತ್ತರ ಸೀಟನ್ನು ರಿಸರ್ವ್‌ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದಾನೆ.

ಒಳ್ಳೆಯ ಹುಡುಗ. ದಯವಿಟ್ಟು ನಿಮ್ಮ ಶಿಫಾರಸು ಬಳಸಿ ಒಂದು ಸೀಟು ಕೊಡಿಸಿ’ ಎಂದರು. ಮಗಳಿಂದ ಈಗಾಗಲೇ ಅವರು ಪಟ್ಟಿರುವ ನೋವಿನ ಅರಿವು ನನಗಿತ್ತು. ಆದ್ದರಿಂದ ಮಗನ ವಿಷಯದಲ್ಲಿ ಪುನಃ ಅವರಿಗೆ ತೊಂದರೆ ಆಗಬಾರದು ಎಂದು ‘ನನ್ನ ಕೈಲಾದಷ್ಟು ಪ್ರಯತ್ನ ಮಾಡುವೆ’ ಅಂದೆ.

ಅತ್ಯಧಿಕ ಶುಲ್ಕ ಇರುವ ಆ ಕಾಲೇಜಿನಲ್ಲಿ ನನ್ನ ಶಿಫಾರಸು ಬಳಸಿ 25ಲಕ್ಷ ರೂಪಾಯಿಯಲ್ಲೇ ಸೀಟು ಕೊಡಿಸಿದೆ. ಪಾಟೀಲರು ಬಹಳ ಖುಷಿಯಾದರು. ಬ್ಯಾಂಕಿನಲ್ಲಿ ಇಟ್ಟಿದ್ದ ಅಷ್ಟೂ ಹಣವನ್ನು ಮಗನ ಕಾಲೇಜಿನ ಶುಲ್ಕವಾಗಿ ನೀಡಿದರು. ಮಗ ಮುಂದೆ ವೈದ್ಯನಾಗಿ ಇದಕ್ಕಿಂತ ಹೆಚ್ಚಿನ ಹಣ ಸಂಪಾದನೆ ಮಾಡಿ ತಮ್ಮನ್ನು ಸಾಕುವ ಭರವಸೆ ಅವರಿಗಿತ್ತು.

ಈ ಮಧ್ಯೆ ಪಾಟೀಲರ ಹೆಂಡತಿ ತೀರಿ ಹೋದರು. ಮಗನನ್ನು ಅದೇ ಹುಡುಗಿ ಜೊತೆ ಪಾಟೀಲರು ಮದುವೆ ಮಾಡಿಸಿದರು. ಮಗ-ಸೊಸೆ ಇಬ್ಬರೂ ಓದು ಮುಗಿಸಿದರು. ಈಗ ದಂಪತಿಗೆ ನರ್ಸಿಂಗ್‌ ಹೋಂ ಮಾಡುವ ಆಸೆಯಾಯಿತು. ಪಾಟೀಲರ ಬಳಿ ಈಗ ಇದ್ದ ಏಕೈಕ ಆಸ್ತಿ ಎಂದರೆ ಬಂಗಲೆ. ಅದನ್ನೇ ನರ್ಸಿಂಗ್‌ ಹೋಂ ಮಾಡುವುದಾಗಿ ಮಗ ಅಪ್ಪನ ಬಳಿ ಕೇಳಿದ.

ಹೆಂಡತಿ-ಮಗಳು ಇಬ್ಬರಿಂದಲೂ ದೂರವಾಗಿದ್ದ ಪಾಟೀಲರಿಗೆ ಈಗ ಏಕೈಕ ಆಧಾರ ಎಂದರೆ ಈ ಮಗನೇ. ಮೊದಮೊದಲು ಇದಕ್ಕೆ ವಿರೋಧ ವ್ಯಕ್ತಪಡಿಸಿದರೂ ಮಗನ ಬೇಡಿಕೆಗೆ ಇಲ್ಲ ಎನ್ನಲಾಗದೇ ಮನೆಯನ್ನು ನರ್ಸಿಂಗ್‌ ಹೋಂ ಮಾಡಲು ಒಪ್ಪಿಗೆ ಸೂಚಿಸಿದರು.

ನರ್ಸಿಂಗ್‌ ಹೋಂ ಉದ್ಘಾಟನೆ ಭರ್ಜರಿಯಾಗಿ ನಡೆಯಿತು. ಇದಕ್ಕಾಗಿ ಪಾಟೀಲರು ಕೆಲವು ಕಡೆ ಸಾಲ ಕೂಡ ಮಾಡಿದರು. ಈ ಮೊದಲು ಬರೆದಿದ್ದ ಉಯಿಲು ಪತ್ರವನ್ನು ಬದಲಾಯಿಸಿದ ಅವರು, ಎಲ್ಲಾ ಆಸ್ತಿಯನ್ನು ಮಗನ ಹೆಸರಿಗೆ ಬರೆದರು.

ಎಲ್ಲಾ ಆಸ್ತಿ ತನ್ನ ಕೈಸೇರುತ್ತಲೇ ಮಗನ ವರಸೆ ಬದಲಾಯಿತು. ‘ಡ್ಯಾಡಿ ನೀವು ಒಬ್ಬರೇ ಇದ್ದೀರಲ್ವಾ? ಔಟ್‌ಹೌಸ್‌ನಲ್ಲಿ ಉಳಿದುಕೊಳ್ಳಿ’ ಎಂದ. ಪಾಟೀಲರಿಗೆ ಆಕಾಶವೇ ಕಳಚಿಬಿದ್ದಂಥ ಅನುಭವ. ಆದರೆ ಮಗ-ಸೊಸೆಯ ಮಾತಿಗೆ ಎದುರಾಡುವ ಪರಿಸ್ಥಿತಿ ಅವರದ್ದಾಗಿರಲಿಲ್ಲ. ಔಟ್‌ಹೌಸ್‌ನಲ್ಲಿ ಒಂಟಿಯಾಗಿ ವಾಸಮಾಡತೊಡಗಿದರು. ಅಲ್ಲಿಗೆ ತಮ್ಮ ಮಗನ ಭವಿಷ್ಯದ ಬಗ್ಗೆ ತಾವು ಕಂಡ ಕನಸೂ ನುಚ್ಚುನೂರಾಗುತ್ತಿರುವುದು ಅನುಭವಕ್ಕೆ ಬಂತು. ಆದರೆ ಹಾಗೂ ಹೀಗೂ ಸುಧಾರಿಸಿಕೊಂಡರು.

ಇತ್ತ, ಮಗ-ಸೊಸೆಯ ದಾಂಪತ್ಯದಲ್ಲಿ ಬಿರುಕು ಶುರುವಾಯಿತು. ನರ್ಸಿಂಗ್‌ ಹೋಂನತ್ತ ಗಮನ ಕಡಿಮೆಯಾಯ್ತು. ದಾಂಪತ್ಯ ಜೀವನ ವಿಚ್ಛೇದನ

ದಲ್ಲಿ ಕೊನೆಯಾಯ್ತು. ದುರದೃಷ್ಟಕ್ಕೆ ಈ ಪ್ರಕರಣಕ್ಕೂ ನಾನೇ ವಕೀಲನಾಗಬೇಕಾಯಿತು. ನರ್ಸಿಂಗ್‌ ಹೋಂಗೆ ಪಡೆದುಕೊಂಡ ಸಾಲದ ಬಡ್ಡಿ ಏರುತ್ತಾ ಬಂತು. ಹೆಂಡತಿಗೆ ವಿಚ್ಛೇದನ ಕೊಟ್ಟ ಮೇಲೆ ಮಗ ದುರಭ್ಯಾಸಗಳಿಗೆ ದಾಸನಾದ. ನರ್ಸಿಂಗ್‌ ಹೋಂಗೆ ಬರುವುದನ್ನೇ ನಿಲ್ಲಿಸಿದ. ನರ್ಸಿಂಗ್‌ ಹೋಂ ಮುಚ್ಚಿತು. ಮನೆ ಹರಾಜಿಗೆ ಬಂತು. ಬ್ಯಾಂಕಿಗೆ ಒತ್ತೆ ಇಟ್ಟಿದ್ದ ಔಟ್‌ಹೌಸ್‌ ಕೂಡ ಬ್ಯಾಂಕ್‌ ಪಾಲಾಯ್ತು.

***

ಮುದ್ದಿನ ಮಗಳು ಮಾತುಕೇಳದೇ ದೂರವಾದಳು. ಪ್ರೀತಿಯ ಹೆಂಡತಿ ನಡುವಿನಲ್ಲಿಯೇ ಒಂಟಿಮಾಡಿ ಇಹಲೋಹ ತ್ಯಜಿಸಿದರು, ಇಳಿವಯಸ್ಸಿಗೆ ಆಸರೆಯಾಗಬೇಕಿದ್ದ ಮಗ ಇಲ್ಲ ಸಲ್ಲದ ಚಟ ಅಂಟಿಸಿಕೊಂಡು ದೂರವಾದ. ನೆಲೆಯಾಗಿದ್ದ ಒಂದೇ ಸೂರೂ ಕೈತಪ್ಪಿತು. ಮಕ್ಕಳ ಭವಿಷ್ಯದ ಬಗ್ಗೆ ಅಗತ್ಯಕ್ಕಿಂತ ಹೆಚ್ಚಿಗೆ ಯೋಚಿಸಿ, ತಮ್ಮ ಹೊಟ್ಟೆಬಟ್ಟೆ ಕಟ್ಟಿ ಹಣ ಕೂಡಿಸಿಟ್ಟ ಪಾಟೀಲರಿಗೆ ಎಲ್ಲವನ್ನೂ–ಎಲ್ಲರನ್ನೂ ಕಳೆದುಕೊಂಡು ದಿಕ್ಕೇ ತೋಚದಾಯಿತು.

ಕೊನೆಗೆ ಅವರ ಕೈಹಿಡಿದಿದ್ದು ವಕೀಲಿ ವೃತ್ತಿ ಮಾತ್ರ. ಮಕ್ಕಳು ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ವಕೀಲಿ ವೃತ್ತಿಯಿಂದ ದೂರ ಸರಿದಿದ್ದ ಪಾಟೀಲರು ಪುನಃ ವಕೀಲಿ ವೃತ್ತಿ ಆರಂಭಿಸಿದ್ದಾರೆ. ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಈಗಲೂ ಕೋರ್ಟ್‌ಗೆ ಹಾಜರಾಗುತ್ತಾರೆ.  ಐಷಾರಾಮಿ ಕಾರಿನಲ್ಲಿ ಠಾಕುಠೀಕಾಗಿ ಬರಬೇಕಿದ್ದ ಪಾಟೀಲರು ಅದೇ ಹಳೆಯ ಕೋಟನ್ನು ಹಾಕಿಕೊಂಡು  ಬಸ್ಸಿನಲ್ಲಿ ಬಂದು ಇಳಿಯುವುದನ್ನು ನೋಡಿದಾಗ ಕರುಳು ಚುರುಕ್‌ ಎನ್ನುತ್ತದೆ.

‘ಕಷ್ಟಪಟ್ಟು ಹಣ ಸಂಪಾದನೆ ಮಾಡಿ ಕೂಡಿಟ್ಟರೆ, ದಯವಿಟ್ಟು ಅದನ್ನು ನಿಮ್ಮ ಮಕ್ಕಳೂ ಸೇರಿದಂತೆ ಯಾರ ಬಳಿಯೂ ಹೇಳಿಕೊಳ್ಳಬೇಡಿ. ಒಂದಿಷ್ಟು ಹಣ ನಿಮ್ಮ ಭವಿಷ್ಯಕ್ಕೂ ಕೂಡಿಟ್ಟುಕೊಳ್ಳಿ. ಮಕ್ಕಳ ಬಗ್ಗೆ ಅತಿಯಾದ ಆತ್ಮವಿಶ್ವಾಸ ಒಳ್ಳೆಯಲ್ಲ.  ಇಲ್ಲದಿದ್ದರೆ ನಿಮ್ಮ ಪಾಡೂ ನನ್ನ ಹಾಗೆ ಆಗಬಹುದು’ ಎಂದು ಪದೇಪದೇ ಹೇಳುತ್ತಿರುವ ಪಾಟೀಲರ ಮಾತಿನಲ್ಲಿ ಎಷ್ಟು ಸತ್ಯಾಂಶ ಇದೆಯಲ್ಲವೇ...?

(ಹೆಸರು ಬದಲಾಯಿಸಲಾಗಿದೆ)

*ಲೇಖಕ ಹೈಕೋರ್ಟ್‌ ವಕೀಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry