ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮೀಮ್‌ ಇಕ್ಬಾಲ್‌ ಏಕಾಂಗಿ ಹೋರಾಟ

ಮಿಷೆಲ್‌ ಸ್ಟಾರ್ಕ್‌ ವೇಗದ ದಾಳಿ
Last Updated 5 ಜೂನ್ 2017, 20:03 IST
ಅಕ್ಷರ ಗಾತ್ರ

ಲಂಡನ್‌: ಪ್ರಮುಖ ಬ್ಯಾಟ್ಸ್‌ ಮನ್‌ಗಳು ಮಿಷೆಲ್‌ ಸ್ಟಾರ್ಕ್ (29ಕ್ಕೆ4) ಅವರ  ವೇಗದ ದಾಳಿಯ ಮುಂದೆ ತರಗೆಲೆಗಳ ಹಾಗೆ ಉದುರುತ್ತಿದ್ದರೂ ಆರಂಭಿಕ ಆಟಗಾರ ತಮಿಮ್‌ ಇಕ್ಬಾಲ್‌ (95; 114ಎ, 6ಬೌಂ, 3ಸಿ) ಛಲ ಬಿಡದೆ ಹೋರಾಡಿದರು.

ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ಬಲದಿಂದ ಬಾಂಗ್ಲಾದೇಶ ತಂಡ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸಾಧಾರಣ ಮೊತ್ತ ಕಲೆಹಾಕಿದೆ.

ಕೆನ್ನಿಂಗ್ಟನ್‌ ಓವಲ್‌ ಕ್ರೀಡಾಂಗಣ ದಲ್ಲಿ ಸೋಮವಾರ ಮೊದಲು ಬ್ಯಾಟ್ ಮಾಡಿದ ಮಷ್ರಫೆ ಮೊರ್ತಜಾ ಪಡೆ 44.3 ಓವರ್‌ಗಳಲ್ಲಿ 182ರನ್‌ಗಳಿಗೆ ಆಲೌಟ್‌ ಆಯಿತು. ಗುರಿ ಬೆನ್ನಟ್ಟಿರುವ ಆಸ್ಟ್ರೇಲಿಯಾ 16 ಓವರ್‌ಗಳಲ್ಲಿ 1 ವಿಕೆಟ್‌ಗೆ 83 ರನ್‌ ಗಳಿಸಿತ್ತು. ಆಗ ಮಳೆ ಸುರಿದ ಕಾರಣ ಆಟ ಸ್ಥಗಿತವಾಗಿತ್ತು.

ಆಘಾತ: ಬ್ಯಾಟಿಂಗ್‌ ಆರಂಭಿಸಿದ ಬಾಂಗ್ಲಾದೇಶ ತಂಡಕ್ಕೆ ಆರನೇ ಓವರ್‌ನಲ್ಲಿ ವೇಗಿ ಜೋಶ್‌ ಹ್ಯಾಜಲ್‌ವುಡ್‌ ಆಘಾತ ನೀಡಿದರು. ಎರಡನೇ ಎಸೆತದಲ್ಲಿ ಸೌಮ್ಯ ಸರ್ಕಾರ್‌ (3), ವಿಕೆಟ್‌ ಕೀಪರ್‌ ಮ್ಯಾಥ್ಯೂ ವೇಡ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.

ಇಮ್ರುಲ್‌ ಕಯಾಸ್‌ (6) ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್‌ ಸೇರಿಕೊಂಡರು. ಪ್ಯಾಟ್‌ ಕಮಿನ್ಸ್‌ ಹಾಕಿದ 11ನೇ ಓವರ್‌ನ ಎರಡನೇ ಎಸೆತ ಆಫ್‌ಸ್ಟಂಪಿನಿಂದ ಆಚೆ ಸಾಗುತ್ತಿತ್ತು. ಅದನ್ನು ಕೆಣಕಿದ ಕಯಾಸ್‌, ಕವರ್‌ ಪಾಯಿಂಟ್‌ನಲ್ಲಿದ್ದ  ಆ್ಯರನ್‌ ಫಿಂಚ್‌ಗೆ ಕ್ಯಾಚ್‌ ಕೊಟ್ಟರು.

ಆರಂಭದಲ್ಲೇ ಎರಡು ವಿಕೆಟ್‌ ಕಳೆದುಕೊಂಡಿದ್ದರಿಂದ ತಂಡದ ರನ್‌ ವೇಗವೂ ತಗ್ಗಿತು. ಅನುಭವಿ ಮುಷ್ಫಿಕರ್‌ ರಹೀಮ್‌ ಕೂಡ ಔಟಾಗಲು ಅವಸರಿಸಿದರು! ಬಲಗೈ ಬ್ಯಾಟ್ಸ್‌ಮನ್‌ ರಹೀಮ್‌ 20 ಎಸೆತಗಳಲ್ಲಿ 9 ರನ್‌ ಕಲೆಹಾಕಿ ಮೊಸಸ್‌ ಹೆನ್ರಿಕ್ಸ್‌ಗೆ ವಿಕೆಟ್‌ ನೀಡಿದರು.

ತಮೀಮ್‌ ಛಲದ ಇನಿಂಗ್ಸ್‌: ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ತಮೀಮ್‌ ಇಕ್ಬಾಲ್‌ ಎದೆಗುಂದಲಿಲ್ಲ. ಇಂಗ್ಲೆಂಡ್‌ ವಿರುದ್ಧದ ಮೊದಲ ಪಂದ್ಯ ದಲ್ಲಿ ಶತಕ ಸಿಡಿಸಿ ಮಿಂಚಿದ್ದ  ಅವರು ಕಾಂಗರೂಗಳ ನಾಡಿನ ಬೌಲರ್‌ಗಳನ್ನೂ ಕಾಡಿದರು.

ಜೋಶ್‌ ಹ್ಯಾಜಲ್‌ವುಡ್‌, ಮಿಷೆಲ್‌ ಸ್ಟಾರ್ಕ್‌ ಅವರ ಎಸೆತಗಳನ್ನು ನಿರ್ಭೀತಿ ಯಿಂದ ಎದುರಿಸಿದ ಅವರು ಅವುಗಳನ್ನು ಲೀಲಾಜಾಲವಾಗಿ ಬೌಂಡರಿ ಗೆರೆ ದಾಟಿಸಿ ಕಳೆಗುಂದಿದ್ದ ಇನಿಂಗ್ಸ್‌ಗೆ ಜೀವ ತುಂಬಿದರು.

ಅವರಿಗೆ ಅನುಭವಿ ಬ್ಯಾಟ್ಸ್‌ಮನ್‌ ಶಕೀಬ್‌ ಅಲ್‌ ಹಸನ್‌ (29; 48ಎ, 2ಬೌಂ) ಸೂಕ್ತ ಬೆಂಬಲ ನೀಡಿದರು. ತಾವೆದುರಿಸಿದ ಎರಡನೇ ಎಸೆತವನ್ನು ಬೌಂಡರಿಗಟ್ಟಿದ ಶಕೀಬ್‌ ಬಳಿಕ ತಾಳ್ಮೆಯ ಆಟಕ್ಕೆ ಒತ್ತು ನೀಡಿದರು.

23ನೇ ಓವರ್‌ನಲ್ಲಿ ತಮೀಮ್‌ ಗರ್ಜಿಸಿದರು. ಮೊಸಸ್‌ ಹೆನ್ರಿಕ್ಸ್‌ ಹಾಕಿದ ಓವರ್‌ನ ಎರಡನೇ ಎಸೆತವನ್ನು ಮಿಡ್‌ಆನ್‌ನತ್ತ ಸಿಕ್ಸರ್‌ಗೆ ಅಟ್ಟಿದ ಅವರು ಮರು ಎಸೆತದಲ್ಲಿ ಬೌಂಡರಿ ಗಳಿಸಿ ಅಂಗಳದಲ್ಲಿ ಮಿಂಚಿನ ಸಂಚಲನ ಉಂಟು ಮಾಡಿದರು. ಕೊನೆಯ ಎಸೆತದಲ್ಲೂ ಬೌಂಡರಿ ಬಾರಿಸಿದ ಅವರು ಟ್ರಾವಿಸ್‌ ಹೆಡ್‌ ಹಾಕಿದ ಮರು ಓವರ್‌ನ ಮೂರನೇ ಎಸೆತದಲ್ಲಿ ಒಂದು ರನ್‌ ಗಳಿಸಿ ಅರ್ಧಶತಕ ಪೂರೈಸಿದರು. 68 ಎಸೆತಗಳ ಅವರ ಇನಿಂಗ್ಸ್‌ನಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್‌ ಸೇರಿತ್ತು.

ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಈ ಜೋಡಿಯನ್ನು ಮುರಿಯಲು ಆಸ್ಟ್ರೇಲಿಯಾ ನಾಯಕ ಸ್ಮಿತ್‌ ಬೌಲಿಂಗ್‌ ನಲ್ಲಿ ಹಲವು ಬದಲಾವಣೆಗಳನ್ನು ಮಾಡಿದರು. 30ನೇ ಓವರ್‌ನಲ್ಲಿ ಕಾಂಗರೂಗಳ ನಾಡಿನ ತಂಡಕ್ಕೆ ಯಶಸ್ಸು ಸಿಕ್ಕಿತು.

ಟ್ರಾವಿಸ್‌ ಹೆಡ್‌ ಹಾಕಿದ ಓವರ್‌ನ ಮೊದಲ ಎರಡು ಎಸೆತಗಳನ್ನು ತಮೀಮ್‌ ಸಿಕ್ಸರ್‌ಗೆ ಅಟ್ಟಿ ಅಭಿಮಾನಿಗಳನ್ನು ರಂಜಿಸಿದರು. ಆದರೆ ಐದನೇ ಎಸೆತದಲ್ಲಿ ಶಕೀಬ್‌ ಎಲ್‌ ಬಿಡಬ್ಲ್ಯು ಬಲೆಯಲ್ಲಿ ಬಂದಿಯಾದರು. ಇದರೊಂದಿಗೆ 69ರನ್‌ಗಳ ನಾಲ್ಕನೇ ವಿಕೆಟ್‌ ಜೊತೆಯಾಟಕ್ಕೆ ತೆರೆ ಬಿತ್ತು.

ಸ್ಟಾರ್ಕ್‌ ಮೋಡಿ: 43ನೇ ಓವರ್‌ನಲ್ಲಿ ದಾಳಿಗಿಳಿದ ಎಡಗೈ ವೇಗಿ ಮಿಷೆಲ್‌ ಸ್ಟಾರ್ಕ್‌ ಮೋಡಿ ಮಾಡಿದರು. ಮೊದಲ ಎಸೆತದಲ್ಲಿ ತಮೀಮ್‌ ವಿಕೆಟ್‌ ಕೆಡವಿದ ಅವರು ಮೂರು ಮತ್ತು ನಾಲ್ಕನೇ ಎಸೆತಗಳಲ್ಲಿ ಕ್ರಮವಾಗಿ  ಮೊರ್ತಜಾ (0) ಮತ್ತು ರುಬೇಲ್‌ ಹೊಸೇನ್‌ (0) ಅವರನ್ನು ಔಟ್‌ ಮಾಡಿದರು. 45ನೇ ಓವರ್‌ನ ಮೂರನೇ ಎಸೆತದಲ್ಲಿ ಮೆಹದಿ ಹಸನ್‌ ಮಿರಾಜ್‌ (14) ವಿಕೆಟ್‌ ಪಡೆದು ಬಾಂಗ್ಲಾ ಇನಿಂಗ್ಸ್‌ಗೆ ತೆರೆ ಎಳೆದರು.

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ: 44.3 ಓವರ್‌ಗಳಲ್ಲಿ 182 (ತಮಿಮ್‌ ಇಕ್ಬಾಲ್‌ 95,  ಶಕೀಬ್‌ ಅಲ್‌ ಹಸನ್‌ 29, ಶಬ್ಬೀರ್‌   ಮೆಹದಿ ಹಸನ್‌ ಮಿರಾಜ್‌ 14; ಮಿಷೆಲ್‌ ಸ್ಟಾರ್ಕ್‌ 29ಕ್ಕೆ4, ಜೋಶ್‌ ಹ್ಯಾಜಲ್‌ವುಡ್‌ 40ಕ್ಕೆ1, ಪ್ಯಾಟ್‌ ಕಮಿನ್ಸ್‌ 22ಕ್ಕೆ1, ಟ್ರಾವಿಸ್‌ ಹೆಡ್ 33ಕ್ಕೆ1, ಮೊಸಸ್‌ ಹೆನ್ರಿಕ್ಸ್‌ 30ಕ್ಕೆ1, ಆ್ಯಡಮ್‌ ಜಂಪಾ 13ಕ್ಕೆ2).
(ವಿವರ ಅಪೂರ್ಣ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT