ಸವಾಲು ಸುಲಭವಾಗಿಸುವ ಲ್ಯಾಂಡ್‌ ರೋವರ್

7

ಸವಾಲು ಸುಲಭವಾಗಿಸುವ ಲ್ಯಾಂಡ್‌ ರೋವರ್

Published:
Updated:
ಸವಾಲು ಸುಲಭವಾಗಿಸುವ ಲ್ಯಾಂಡ್‌ ರೋವರ್

ಎಂಥದ್ದೇ ಕಚ್ಚಾ ರಸ್ತೆ, ರಸ್ತೆ ಇಲ್ಲದೆಡೆಯೂ  ಸಲೀಸಾಗಿ ಸಾಗುವುದಕ್ಕೆ ಲ್ಯಾಂಡ್‌ ರೋವರ್ ವಾಹನಗಳು ಹೆಸರುವಾಸಿ. ಲ್ಯಾಂಡ್‌ ರೋವರ್‌ನ ಡಿಫೆಂಡರ್ ಎಸ್‌ಯುವಿ, ಜಗತ್ತಿನ ಅತ್ಯುತ್ತಮ ಆಫ್‌ರೋಡರ್‌ಗಳಲ್ಲಿ ಒಂದು.

ಅಂತೆಯೇ ಕಂಪೆನಿಯ ಎಲ್ಲಾ ಎಸ್‌ಯುವಿಗಳೂ ಅತ್ಯುತ್ತಮ ಆಫ್‌ರೋಡರ್‌ಗಳಾಗಿವೆ. ತನ್ನ ಎಸ್‌ಯುವಿಗಳ ಸಾಮರ್ಥ್ಯವನ್ನು ಪರಿಚಯಿಸುವ ಉದ್ದೇಶದಿಂದ ಕಂಪೆನಿ, ಈಚೆಗೆ ಬೆಂಗಳೂರಿನಲ್ಲಿ ಆಫ್‌ರೋಡ್ ಡ್ರೈವ್ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ನಗರದ ಹೊರವಲಯದಲ್ಲಿರುವ ವೈಲ್ಡ್ ರಿಟ್ರೀಟ್ ಅಡ್ವೆಂಚರ್ ಕ್ಲಬ್‌ನ ಆವರಣದಲ್ಲಿರುವ ಸಹಜ ದಿಬ್ಬ, ಹೊಳೆ-ಹೊಂಡಗಳಲ್ಲಿ ಡಿಸ್ಕವರಿ ಸ್ಪೋರ್ಟ್ಸ್ ಮತ್ತು ರೇಂಜ್‌ ರೋವರ್ ಇವೋಕ್‌ಗಳನ್ನು ಚಲಾಯಿಸುವ ಅವಕಾಶ ಒದಗಿಸಿತ್ತು.

ಬೇರೆಲ್ಲಾ ಆಫ್‌ರೋಡ್‌ ವಾಹನಗಳು ಬಳಸುವಂತೆ ಲೋ ಗಿಯರ್ ಟ್ರಾನ್ಸ್‌ವರ್‌ ಕೇಸ್ ಮತ್ತು ಡಿಫರೆನ್ಷಿಯಲ್ ಲಾಕ್‌ಗಳನ್ನು ಲ್ಯಾಂಡ್‌ ರೋವರ್ ಬಳಸುವುದಿಲ್ಲ. ಬದಲಿಗೆ ಮರಳು, ಹಿಮ, ಸಡಿಲ ಮಣ್ಣು, ಬಂಡೆಗಲ್ಲುಗಳು ಇರುವ ಕಡೆ ಚಲಾಯಿಸಲು ಪ್ರತ್ಯೇಕ ಆಯ್ಕೆಗಳಿರುವ ಟೆರೇನ್ ರೆಸ್ಪಾನ್ಸ್ ಸಿಸ್ಟಂ ಅನ್ನು ಈ ಎಸ್‌ಯುವಿಗಳು ಬಳಸುತ್ತವೆ.

ಟೆರೇನ್ ರೆಸ್ಪಾನ್ಸ್ ಸಿಸ್ಟಂ (ಟಿಆರ್‌ಎಸ್) ಎನ್ನುವುದು ಒಂದು ಕಂಪ್ಯೂಟರ್ ನಿಯಂತ್ರಿತ ವ್ಯವಸ್ಥೆ. ಎಸ್‌ಯುವಿಯ ಪ್ರತೀ ಚಕ್ರಕ್ಕೆ ಎಷ್ಟು ಶಕ್ತಿ ರವಾನೆ ಮಾಡಬೇಕು. ಯಾವ ಚಕ್ರಕ್ಕೆ ಶಕ್ತಿ ರವಾನೆ ಮಾಡಬಾರದು ಎಂಬುದನ್ನು ಟಿಆರ್‌ಎಸ್ ನಿರ್ಧರಿಸುತ್ತದೆ.

ಇತರ ಮ್ಯಾನ್ಯುಯಲ್ ಆಫ್‌ರೋಡ್ ವಾಹನಗಳಲ್ಲಿ ಇದನ್ನು ಡಿಫರೆನ್ಷಿಯಲ್ ಲಾಕ್‌ಗಳನ್ನು ಬಳಸಿ, ಚಾಲಕನೇ ನಿಯಂತ್ರಣ ಸಾಧಿಸಬೇಕಾಗುತ್ತದೆ. ಈ ತಂತ್ರಜ್ಞಾನವನ್ನು ಮೊದಲು ಅಭಿವೃದ್ಧಿಪಡಿಸಿದ್ದು ಲ್ಯಾಂಡ್‌ ರೋವರ್ ಎಂಜಿನಿಯರ್‌ಗಳೇ. ಇತರ ಎಸ್‌ಯುವಿ ತಯಾರಕ ಕಂಪೆನಿಗಳೂ ಡ್ರೈವಿಂಗ್ ಮೋಡ್‌ಗಳನ್ನು ಅಭಿವೃದ್ಧಿಪಡಿಸಿವೆಯಾದರೂ, ಟಿಆರ್‌ಎಸ್‌ನಷ್ಟು ಚಾಕಚಕ್ಯತೆ ಅವುಗಳಿಗಿಲ್ಲ.

ಇತರ ಕಂಪೆನಿಗಳ ಡ್ರೈವ್‌ ಮೋಡ್‌ಗಳು ಎಂಜಿನ್ ಶಕ್ತಿ, ಗಿಯರ್ ಬದಲಾವಣೆ ಮತ್ತು ಟ್ರಾಕ್ಷನ್ ಕಂಟ್ರೋಲ್‌ ಅನ್ನು ಮಾತ್ರ ಬದಲಿಸುತ್ತವೆ. ಆದರೆ ಟಿಆರ್‌ಎಸ್ ಈ ಮೂರರ ಜತೆಗೆ ಎಸ್‌ಯುವಿಯ ಸಸ್ಪೆನ್ಷನ್ ಮತ್ತು ಸ್ಟೀರಿಂಗ್ ನಿಯಂತ್ರಣವನ್ನೂ ಅಗತ್ಯಕ್ಕೆ ತಕ್ಕಂತೆ ಬದಲಿಸುತ್ತದೆ.

ಜತೆಗೆ, ಚಾಲಕ ಅನಗತ್ಯವಾಗಿ ಹೆಚ್ಚು ಆಕ್ಸಿಲರೇಟರ್‌ (ಥ್ರೋಟಲ್) ಒತ್ತಿದರೆ ಅಥವಾ ಬ್ರೇಕ್‌ ಬಳಸುತ್ತಿದ್ದರೆ ಟಿಆರ್‌ಎಸ್, ಎಸ್‌ಯುವಿಯನ್ನು ಆ ಕ್ಷಣಕ್ಕೆ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ಹೀಗಾಗಿಯೇ ಟಿಆರ್‌ಎಸ್ ಹೆಚ್ಚು ಚಾಕಚಕ್ಯತೆಯ ತಂತ್ರಜ್ಞಾನ ಎನಿಸಿದೆ.

ಟಿಆರ್‌ಎಸ್‌ನಲ್ಲಿ ಗ್ರಾಸ್-ಗ್ರಾವೆಲ್-ಸ್ನೋ, ರಾಕ್ ಕ್ರಾವ್ಲ್‌, ಮಡ್ ಅಂಡ್ ರಟ್ಸ್, ಆಟೊ ಮತ್ತು ಜನರಲ್ ಎಂಬ ಆಯ್ಕೆಗಳಿವೆ. ಜನರಲ್ ಆಯ್ಕೆ, ಸಾಮಾನ್ಯ ರಸ್ತೆಗಳಲ್ಲಿನ ಚಾಲನೆಗೆ ಬಳಕೆಯಾಗುತ್ತದೆ. ಆಟೊ ಆಯ್ಕೆ ಮಾಡಿದ್ದಲ್ಲಿ, ರಸ್ತೆಯ ಪರಿಸ್ಥಿತಿಯನ್ನು ತಾನೇ ಲೆಕ್ಕಹಾಕಿ-ವಿಶ್ಲೇಷಿಸಿ ಎಂಜಿನ್ ಶಕ್ತಿ, ಸಸ್ಪೆನ್ಷನ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಸ್ಟೀರಿಂಗ್ ನಿಯಂತ್ರಣವನ್ನು ವಾಹನವೇ ಬದಲಿಸಿಕೊಳ್ಳುತ್ತಿರುತ್ತದೆ.

ಗ್ರಾಸ್-ಗ್ರಾವೆಲ್-ಸ್ನೋ ಆಯ್ಕೆಯಲ್ಲಿ ಎಂಜಿನ್‌ ಶಕ್ತಿ ಕುಂದುತ್ತದೆ. ಸಡಿಲವಾದ, ಜಾರುತ್ತಿರುವಂತಹ ಮೇಲ್ಮೈ ಇದ್ದಾಗ ಇದನ್ನು ಬಳಸಬಹುದು. ಇಂತಹ ಪರಿಸ್ಥಿತಿಯಲ್ಲಿ ಚಕ್ರಗಳಿಗೆ ಹೆಚ್ಚು ಶಕ್ತಿ ರವಾನೆ ಆಗಬಾರದು. ರವಾನೆ ಆದರೆ, ಜಾರು ಮೇಲ್ಮೈನಲ್ಲಿ ಚಕ್ರಗಳು ಹಿಡಿತ ಕಳೆದುಕೊಂಡು ನಿಂತಲ್ಲೇ ತಿರುಗುತ್ತವೆ.

ಈ ರೀತಿ ಆಗಿ, ಎಸ್‌ಯುವಿ ರಸ್ತೆ ಹಿಡಿತ ಕಳೆದುಕೊಳ್ಳದಂತೆ ಈ ಆಯ್ಕೆ ತಡೆಯುತ್ತದೆ. ಮಳೆ ನೀರು ಹರಿದು ಕೊರಕಲು ಬಿದ್ದಿದ್ದ, ಸಡಿಲವಾದ ಮಣ್ಣಿನಿಂದ ಕೂಡಿದ್ದ ಇಳಿಜಾರಿನಲ್ಲಿ ಈ ಆಯ್ಕೆಯನ್ನು ಪರೀಕ್ಷಿಸಲಾಯಿತು. ಕಂದಕದ ಅಂಚಿನ ಮಣ್ಣು ಕುಸಿಯುತ್ತಿದ್ದರೂ, ನಿಯಂತ್ರಣ ಕಳೆದುಕೊಳ್ಳದೆ ಡಿಸ್ಕವರಿ ಸ್ಪೋರ್ಟ್ಸ್ ಆರಾಮವಾಗಿ ಇಳಿಜಾರು ಇಳಿಯಿತು.

ಇನ್ನು ನೀರು ತುಂಬಿದ ಹೊಂಡ ಮತ್ತು ಹೊಳೆಗಳಲ್ಲಿ ಮಡ್‌ ಅಂಡ್ ರಟ್ಸ್ ಅನ್ನು ಬಳಸಲಾಯಿತು. ಇಂಥ ಜಾಗದಲ್ಲಿ ಎಸ್‌ಯುವಿ ಕಡಿಮೆ ವೇಗದಲ್ಲೇ ಚಲಿಸಬೇಕು. ಆದರೆ ಎಂಜಿನ್‌ನ ಶಕ್ತಿ ಹೆಚ್ಚಿರಬೇಕು. ಹಳ್ಳ-ದಿಣ್ಣೆ, ಉಬ್ಬು ತಗ್ಗುಗಳು ಇದ್ದುದ್ದರಿಂದ ಅದಕ್ಕೆ ತಕ್ಕಂತೆ ಎಸ್‌ಯುವಿ ಸಸ್ಪೆನ್ಷನ್ ಸಹ ಬದಲಾಗಬೇಕು. ಮತ್ತು ರಸ್ತೆ ಹಿಡಿತ ಇಲ್ಲದ ಚಕ್ರಗಳು ತಿರುಗದಂತೆ ಟ್ರಾಕ್ಷನ್ ಕಂಟ್ರೋಲ್ ಚಕಚಕನೆ ಕೆಲಸ ಮಾಡಬೇಕು. ಇವಿಷ್ಟನ್ನೂ ಮಡ್ ಅಂಡ್ ರಟ್ಸ್ ನೋಡಿಕೊಂಡಿತು. ಕಡಿದಾದ ದಿಬ್ಬಗಳನ್ನು ಹತ್ತುವಾಗಲೂ ಇದನ್ನು ಬಳಸಲಾಯಿತು.

ಇನ್ನು ಹೆಚ್ಚು ಶಕ್ತಿಶಾಲಿಯಾದ ಆಯ್ಕೆ ಎಂದರೆ ರಾಕ್ ಕ್ರಾವ್ಲ್ ಮೋಡ್. ಇದು ಬಂಡೆಗಲ್ಲುಗಳನ್ನು, ಕಡಿದಾದ ಬಂಡೆಗಳನ್ನು ಹತ್ತಲು ಬಳಸಲಾಗುತ್ತದೆ. ಆಫ್‌ರೋಡಿಂಗ್ ನಡೆಯುತ್ತಿದ್ದ ಜಾಗದಲ್ಲಿ ಅಂತಹ ಕಡಿದಾದ ಬಂಡೆ ಇಲ್ಲದ ಕಾರಣ, ಇದರ ಶಕ್ತಿಯ ಅನುಭವ ನಮಗೆ ಆಗಲಿಲ್ಲ. ಆದರೆ, ಇದು ನಿಜಕ್ಕೂ ರೋಮಾಂಚನಕಾರಿ ಅನುಭವ ನೀಡುವ ಆಯ್ಕೆ.

ಗರಿಷ್ಠ 45 ಡಿಗ್ರಿಯಷ್ಟು ಕಡಿದಾದ ಬಂಡೆಯನ್ನು ಹತ್ತಿ-ಇಳಿಯುವ ಸಾಮರ್ಥ್ಯವನ್ನು ಈ ಎಸ್‌ಯುವಿಗಳಿಗೆ ರಾಕ್ ಕ್ರಾವ್ಲ್ ಮೋಡ್ ನೀಡುತ್ತದೆ. ಇಲ್ಲಿ ಎಲ್ಲಾ ಚಕ್ರಗಳಿಗೂ ಹೆಚ್ಚು ಶಕ್ತಿ (ಟಾರ್ಕ್) ರವಾನೆಯಾಗುತ್ತದೆ. ಆದರೆ, ಚಕ್ರಗಳು ವೇಗವಾಗಿ ತಿರುಗುವುದಿಲ್ಲ. ಬದಲಿಗೆ ಬಸವನ ಹುಳುವಿನಂತೆ ತೆವಳುತ್ತವೆ. ಆದರೆ ಉಡದಂತೆ ಬಂಡೆಗೆ ಕಚ್ಚಿಕೊಂಡಿರುತ್ತದೆ.

ಒಟ್ಟಿನಲ್ಲಿ ಆಫ್‌ರೋಡ್ ಪರಿಣಿತರಲ್ಲದವರೂ, ಸವಾಲಿನ ರಸ್ತೆಗಳಲ್ಲಿ ಈ ಎಸ್‌ಯುವಿಗಳನ್ನು ಚಲಾಯಿಸಬಹುದು, ಅದೂ ವಿಡಿಯೊ ಗೇಮ್ ಆಡಿದಷ್ಟೇ ಸುಲಭವಾಗಿ!

    

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry