ತೀವ್ರಗೊಂಡ ಹಿಂಸಾಚಾರ: ಟ್ರಕ್‌ಗಳಿಗೆ ಬೆಂಕಿ

7
ಮಧ್ಯಪ್ರದೇಶ: ಜಿಲ್ಲಾಧಿಕಾರಿ ಅಡ್ಡಗಟ್ಟಿ ಹಲ್ಲೆ ನಡೆಸಿದ ರೈತರು

ತೀವ್ರಗೊಂಡ ಹಿಂಸಾಚಾರ: ಟ್ರಕ್‌ಗಳಿಗೆ ಬೆಂಕಿ

Published:
Updated:
ತೀವ್ರಗೊಂಡ ಹಿಂಸಾಚಾರ: ಟ್ರಕ್‌ಗಳಿಗೆ ಬೆಂಕಿ

ಮಂದಸೌರ್‌ (ಮಧ್ಯಪ್ರದೇಶ):  ಮಂದಸೌರ್‌ ಜಿಲ್ಲೆಯಲ್ಲಿ  ರೈತರ ಪ್ರತಿಭಟನೆ ಬುಧವಾರ ಹಿಂಸಾಚಾರಕ್ಕೆ ತಿರುಗಿದ್ದು, ಮಹು–ನೀಮಚ್‌ ಹೆದ್ದಾರಿಯಲ್ಲಿ ಪ್ರತಿಭಟನಾಕಾರರು ಟ್ರಕ್‌, ಬಸ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರ್ಕಾರ  ಮೀಸಲು ಪಡೆಯ 1,100 ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿದೆ.

ಬರಖೆಡಾ ಪಂಥ ಪ್ರದೇಶದ ಸುಮಾರು 18 ಕಿ.ಮೀ. ರಸ್ತೆಯನ್ನು  ಪ್ರತಿಭಟನಾಕಾರರು ತಡೆಗಟ್ಟಿದ್ದರು. ಸಮಾಧಾನಪಡಿಸಲು ಮುಂದಾದ ಮಂದಸೌರ್‌ ಜಿಲ್ಲಾಧಿಕಾರಿ ಎಸ್‌.ಕೆ. ಸಿಂಗ್‌್ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿ ಓಂಪ್ರಕಾಶ್‌ ತ್ರಿಪಾಠಿ ಅವರನ್ನು ಪ್ರತಿಭಟನಾಕಾರರು ತಡೆಹಿಡಿದಿದ್ದಾರೆ.

‘ಪ್ರತಿಭಟನಾಕಾರರು ಅನುಚಿತವಾಗಿ ವರ್ತಿಸಿ ಜಿಲ್ಲಾಧಿಕಾರಿಯನ್ನು ತಳ್ಳಾಡುತ್ತಿದ್ದಾಗ ಅಲ್ಲಿಂದ ಸುರಕ್ಷಿತವಾಗಿ ಮರಳಲು ಅವರಿಗೆ ನಾವು ನೆರವು ನೀಡಿದೆವು’ ಎಂದು ಬರಖೆಡಾ ಪಂಥ ಗ್ರಾಮದ ಮುಖ್ಯಸ್ಥ ದಿನೇಶ್‌ ತಿಳಿಸಿದ್ದಾರೆ.

ಸಾಲ ಮನ್ನಾ ಮಾಡುವಂತೆ ಹಾಗೂ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವಂತೆ ಆಗ್ರಹಿಸಿ ರೈತರು ಜೂನ್‌ 1ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ನಡೆದ ಗಲಭೆಯಲ್ಲಿ ಐವರು ರೈತರು  ಮೃತಪಟ್ಟಿದ್ದರು. ಇದರಿಂದಾಗಿ ಈ ಪ್ರದೇಶದಲ್ಲಿ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದರು.

ಮೃತ ರೈತರ ಕುಟುಂಬದವರನ್ನು ಭೇಟಿ ಮಾಡಲು ತೆರಳುತ್ತಿದ್ದ ಮಂದಸೌರ್‌ನ ಮಾಜಿ ಸಂಸದೆ ಮೀನಾಕ್ಷಿ ನಟರಾಜನ್‌್ ಅವರನ್ನು 

ಮಾರ್ಗ ಮಧ್ಯದಲ್ಲಿ ತಡೆಯಲಾಯಿತು.

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಗುರುವಾರ ಮಂದಸೌರ್‌ಗೆ ಭೇಟಿ ನೀಡಲಿದ್ದಾರೆ.

ವರದಿಗೆ ಸೂಚನೆ: ಮಂಗಳವಾರದ ಗಲಭೆ ಕುರಿತು ವಿವರವಾದ ವರದಿ ಹಾಗೂ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲು ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡುವಂತೆ  ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ.

ಕ್ಷಿಪ್ರ ಕಾರ್ಯಪಡೆಯ ಸುಮಾರು 600 ಸಿಬ್ಬಂದಿ ಈಗಾಗಲೇ ಸ್ಥಳಕ್ಕೆ ತೆರಳಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.

ಸಾಲ ಪರಿಹಾರ ಯೋಜನೆ: ರೈತರ ಸಮಸ್ಯೆ ಪರಿಹಾರಕ್ಕೆ ‘ಸಾಲ ಪರಿಹಾರ ಯೋಜನೆ’ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಘೋಷಿಸಿದ್ದಾರೆ.

ಜೂನ್‌ 10ರಿಂದ 30ರ ಒಳಗೆ ಹೆಸರುಬೇಳೆಗೆ ಕ್ವಿಂಟಾಲ್‌ಗೆ ₹5,225, ತೊಗರಿಬೇಳೆ ಹಾಗೂ ಉದ್ದಿನಬೇಳೆಗೆ ಕ್ವಿಂಟಾಲ್‌ಗೆ ₹5,050 ಬೆಂಬಲಬೆಲೆ ನೀಡಿ ಖರೀದಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಧಾನಿ ತುರ್ತು ಸಭೆ: ಗಲಭೆಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಕೇಂದ್ರದ ಹಿರಿಯ ಸಚಿವರ ಜತೆ ತುರ್ತು ಸಭೆ ನಡೆಸಿದರು.

ಪ್ರತಿಕ್ರಿಯೆಗೆ ನಕಾರ

ರೈತರು ತಮ್ಮನ್ನು ತಡೆಹಿಡಿದ ಕುರಿತು ಪ್ರತಿಕ್ರಿಯಿಸಲು ಜಿಲ್ಲಾಧಿಕಾರಿ ನಿರಾಕರಿಸಿದ್ದಾರೆ.

ಅನುಚಿತವಾಗಿ ವರ್ತಿಸಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರಾ ಎನ್ನುವ ಪ್ರಶ್ನೆಗೆ ‘ಅದು ಪೊಲೀಸರ ಕೆಲಸವಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಮೃತರ ಅಂತ್ಯಸಂಸ್ಕಾರ ಬುಧವಾರ ಬೆಳಗ್ಗೆ ಆಗಿದೆ. ಮಂದಸೌರ್‌ನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದೂ ಅವರು ತಿಳಿಸಿದ್ದಾರೆ.

₹1 ಕೋಟಿ ಪರಿಹಾರ

ಮೃತಪಟ್ಟ ರೈತರ ಕುಟುಂಬಕ್ಕೆ ತಲಾ ₹1 ಕೋಟಿ ಪರಿಹಾರ, ಗಾಯಾಳುಗಳಿಗೆ ತಲಾ ₹5 ಲಕ್ಷ ಆರ್ಥಿಕ ನೆರವು ನೀಡುವುದಾಗಿ ನೀಡಲಾಗುವುದು ಎಂದು ಚೌಹಾಣ್‌ ಘೋಷಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry