ಕೇಂದ್ರೀಕೃತ ಅಡುಗೆ ವ್ಯವಸ್ಥೆ ಕೈಬಿಡಲು ಆಗ್ರಹ

7

ಕೇಂದ್ರೀಕೃತ ಅಡುಗೆ ವ್ಯವಸ್ಥೆ ಕೈಬಿಡಲು ಆಗ್ರಹ

Published:
Updated:
ಕೇಂದ್ರೀಕೃತ ಅಡುಗೆ ವ್ಯವಸ್ಥೆ ಕೈಬಿಡಲು ಆಗ್ರಹ

ಬೆಂಗಳೂರು: ಬಿಸಿಯೂಟ ಯೋಜನೆಯಡಿ ಸರ್ಕಾರಿ ಶಾಲೆಗಳಲ್ಲಿ ಅಡುಗೆ ತಯಾರಿಸಿ ಮಕ್ಕಳಿಗೆ ಬಡಿಸುವ ಕ್ರಮವನ್ನು ಕೈಬಿಟ್ಟು ‘ಕೇಂದ್ರೀಕೃತ ಅಡುಗೆ ಕೇಂದ್ರ’ಗಳ ಮೂಲಕ ಬಿಸಿಯೂಟ ಪೂರೈಸಬೇಕು ಎಂಬ ಕೇಂದ್ರ ಸರ್ಕಾರದ ಆದೇಶ ವಿರೋಧಿಸಿ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ಕೇಂದ್ರ  ಸಚಿವ ಅನಂತಕುಮಾರ್ ಅವರ ಮನೆ ಮುಂದೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯಕರ್ತರು ಧರಣಿ ಕೂತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ಕೆಲವೇ ಸ್ವಯಂಸೇವಾ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಲ್ಲೂ ಕೇಂದ್ರೀಕೃತ ಅಡುಗೆ ಕೇಂದ್ರಗಳನ್ನು ಸ್ಥಾಪಿಸುವಂತೆ ಆದೇಶಿಸಿದೆ. ಮೇ 24ರಂದು ಈ ವ್ಯವಸ್ಥೆ ಜಾರಿಗೊಳಿಸುವಂತೆ ರಾಜ್ಯದ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಇದರಿಂದ ಕಾರ್ಯಕರ್ತರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹೀಗಾಗಿ ಆದೇಶ ವಾಪಸ್ ಪಡೆಯಬೇಕು’ ಎಂದು ಅವರು  ಆಗ್ರಹಿಸಿದರು.

‘ಹೊಸ ವ್ಯವಸ್ಥೆಯಡಿ, ಒಂದೇ ಭಾಗದಲ್ಲಿರುವ ಹಾಗೂ ಸಾರಿಗೆ ಸಂಪರ್ಕವಿರುವ 50ರಿಂದ 60 ಶಾಲೆಗಳ ಮಕ್ಕಳಿಗೆ ಬಿಸಿಯೂಟ ಪೂರೈಸುವುದು ಸರಿಯಾದ ಕ್ರಮವಲ್ಲ. ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ಆಹಾರ ಸರಬರಾಜು ಮಾಡಲು ಸಾಕಷ್ಟು ಸಮಯ ತಗಲುತ್ತದೆ. ಜತೆಗೆ ಅಡುಗೆಯೂ ತಣ್ಣಗಾಗುತ್ತದೆ. ಇದರಿಂದ ಬಿಸಿಯೂಟ ಯೋಜನೆಯ ಉದ್ದೇಶವೇ ಬುಡಮೇಲು ಆದಂತಾಗುತ್ತದೆ. ಸಾಕಷ್ಟು ಮಂದಿ ಕೆಲಸ ಕಳೆದುಕೊಳ್ಳುತ್ತಾರೆ’ ಎಂದರು.

ಕನಿಷ್ಠ ವೇತನ, ಪಿಂಚಣಿ ನೀಡಬೇಕು ಎಂದೂ ಒತ್ತಾಯಿಸಿದರು.

* ಇದೇ ವಿಚಾರವಾಗಿ ಜೂನ್ 13ರಂದು ‘ವಿಧಾನಸೌಧ ಚಲೋ’ ರಾಜ್ಯ ಮಟ್ಟದ ಪ್ರತಿಭಟನೆ ಮಾಡುತ್ತೇವೆ. ಅಡುಗೆ ಕೆಲಸಗಾರರಿಗೆ ಅನ್ಯಾಯವಾಗಲು ಬಿಡುವುದಿಲ್ಲ.

- ಮಾಲಿನಿ ಮೇಸ್ತ, ಸಂಘದ ಪ್ರಧಾನ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry