ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಏಸ’ ಬಂತು ತಂಗಾಳಿ ತಂತು!

Last Updated 9 ಜೂನ್ 2017, 19:30 IST
ಅಕ್ಷರ ಗಾತ್ರ

ನಿರ್ದೇಶಕರಾದ ಟಿ.ಎನ್‌. ಸೀತಾರಾಂ, ಪಿ.ಶೇಷಾದ್ರಿ ಅವರ ಗರಡಿಯಲ್ಲಿ ಬೆಳೆದ ಎಂ.ಎನ್‌. ಜಯಂತ್‌ ಸ್ಯಾಂಡಲ್‌ವುಡ್‌ನ ವಿಶಿಷ್ಟ ಪ್ರತಿಭೆ. ‘ಮಾಯಾಮೃಗ’, ‘ಮಳೆಬಿಲ್ಲು’ವಿನಂತಹ ಜನಪ್ರಿಯ ಧಾರಾವಾಹಿಗಳಿಗೆ ದುಡಿದಿರುವ ಜಯಂತ್‌ ‘ಮುನ್ನುಡಿ’ ಚಿತ್ರಕ್ಕಾಗಿಯೂ ಕೆಲಸ ಮಾಡಿದವರು. ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಹ ನಿರ್ದೇಶಕರಾಗಿ, ಸಂಭಾಷಣೆಕಾರರಾಗಿ ಹೆಸರು ಮಾಡಿದ ಜಯಂತ್‌, ಸ್ನೇಹಿತ ಶೋಭರಾಜ್‌ ಪಾವೂರು ಅವರ ಪ್ರೀತಿಯ ಒತ್ತಾಯಕ್ಕೆ ಕಟ್ಟುಬಿದ್ದು ‘ಏಸ’ ಚಿತ್ರವನ್ನು ನಿರ್ದೇಶಿಸಿದವರು. ಕಳೆದ ತಿಂಗಳು ತೆರೆಕಂಡ ‘ಏಸ’ ಸಿನಿಮಾ ಕುರಿತು ಜಯಂತ್‌ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

* ಜಯಂತ್‌, ನಿಮ್ಮ ‘ಬಣ್ಣದ ಬದುಕು’ ಆರಂಭಗೊಂಡಿದ್ದು ಯಾವಾಗ?
ನಾನು ಚಿತ್ರರಂಗ ಪ್ರವೇಶಿಸಿದ್ದು 1982ರಲ್ಲಿ. ‘ತ್ರಿಶೂಲ’ ಸಿನಿಮಾದಲ್ಲಿ ಬಾಲನಟನಾಗಿ ಬಣ್ಣ ಹಚ್ಚಿದ್ದೆ. ಆಮೇಲೆ 36 ಸಿನಿಮಾಗಳಲ್ಲಿ ನಟಿಸಿದೆ. ಮಾಸ್ಟರ್‌ನಿಂದ ಮಿಸ್ಟರ್‌ ಆದ ಮೇಲೆ ನಟಿಸುವ ಮೋಹ ಕಡಿಮೆ ಆಯಿತು. ಹಾಗಾಗಿ, ಮನರಂಜನಾ ಉದ್ಯಮದ ಇತರೆ ವಿಭಾಗಗಳಲ್ಲಿ ಹೆಚ್ಚು ತೊಡಗಿಸಿಕೊಂಡೆ. ಈಚೆಗೆ ತೆರೆಕಂಡ ‘ಸಿದ್ಧಾರ್ಥ’ ಸಿನಿಮಾಕ್ಕೆ ಕತೆ ಬರೆದಿದ್ದು ನಾನೇ.  ‘ಒಂದೇ ಗೂಡಿನ ಹಕ್ಕಿಗಳು’ ಧಾರಾವಾಹಿಗೆ ಕೆಲಸ ಮಾಡುವಾಗ ಶೋಭರಾಜ್‌ ಪಾವೂರು ಅವರ ಪರಿಚಯ ಆಯ್ತು. ಅವರೊಂದು ಕತೆ ಬರೆದಿದ್ದರು. ಅದನ್ನು ನಿರ್ದೇಶನ ಮಾಡುವಂತೆ ನನ್ನನ್ನು ಕೇಳಿಕೊಂಡರು. ಜತೆಗೆ ನಿರ್ಮಾಪಕ ಉದಯ್‌ ಶೆಟ್ಟರಿಗೆ ನನ್ನನ್ನು ಪರಿಚಯಿಸಿದರು. ಅಲ್ಲಿಂದ ‘ಏಸ’ ಸಿನಿಮಾ ರೂಪುಗೊಳ್ಳತೊಡಗಿತು. ‘ಏಸ’ ಚಿತ್ರಕ್ಕೆ ಕತೆ ಮತ್ತು ಸಂಭಾಷಣೆಯನ್ನು ಶೋಭರಾಜ್‌ ಅವರೇ ಬರೆದಿದ್ದು, ಚಿತ್ರಕತೆ–ನಿರ್ದೇಶನ ನನ್ನದು.

* ಕನ್ನಡ ಚಿತ್ರರಂಗದಲ್ಲೇ ಹೆಚ್ಚು ಗುರುತಿಸಿಕೊಂಡಿದ್ದ ನೀವು ತುಳು ಸಿನಿಮಾ ನಿರ್ದೇಶನದತ್ತ ಒಲವು ತೋರಲು ವಿಶೇಷ ಕಾರಣ ಇದೆಯೇ?
ತುಳುನಾಡಿನ ಸಂಸ್ಕೃತಿ, ಜನರ ಅಭಿರುಚಿ ನನಗೆ ತಿಳಿದಿದ್ದು ಶೋಭರಾಜ್‌ ಅವರ ಮೂಲಕವೇ. ಕನ್ನಡ ಭಾಷೆಗೆ ಒಂದು ವರ್ಚಸ್ಸಿದೆ. ಅದೇರೀತಿ, ತುಳು ಭಾಷೆಗೆ ಒಂದು ಮಾಧುರ್ಯ ಇದೆ. ಮಕ್ಕಳು ಮಾತನಾಡುವಾಗ ಕೇಳಿಸುವ ಮುದ್ದುತನ ತುಳು ಭಾಷೆಯಲ್ಲಿದೆ. ಇನ್ನು, ತುಳುನಾಡಿನ ಸಂಸ್ಕೃತಿಯೇ ಭಿನ್ನ. ಕೋಸ್ಟಲ್‌ವುಡ್‌ ಪರಂಪರೆಯಲ್ಲಿ ಮಲಯಾಳಂ ಛಾಯೆ ಇದೆ. ಮಾಲಿವುಡ್‌ ಪ್ರಯೋಗಶೀಲತೆಗೆ ಹೆಸರುವಾಸಿ. ಒಳ್ಳೊಳ್ಳೆ ಕತೆಗಳ ಮೂಲಕ ಸಿನಿಪ್ರಿಯರನ್ನು ರಂಜಿಸುತ್ತಾರೆ. ಅಂತಹ ಪ್ರಯೋಗ ಕೋಸ್ಟಲ್‌ವುಡ್‌ನಲ್ಲೂ ನಡೆಯುತ್ತಿದೆ. ಸಿ–ಟೌನ್‌ನ ಈ ಪ್ರಯೋಗಶೀಲ ಗುಣ ನನ್ನನ್ನು ಆಕರ್ಷಿಸಿತು. 

* ತುಳು ಪ್ರೇಕ್ಷಕರ ಅಭಿರುಚಿಯೇ ಭಿನ್ನ. ‘ಏಸ’ ಸಿನಿಮಾ ಮಾಡುವಾಗ ಈ ಸವಾಲನ್ನು ಹೇಗೆ ನಿಭಾಯಿಸಿದಿರಿ?
ತುಳು ಪ್ರೇಕ್ಷಕರು ಕಾಮಿಡಿ ಪ್ರಿಯರು. ಈ ಕಾರಣಕ್ಕಾಗಿಯೇ ತುಳು ಸಿನಿಮಾಗಳಲ್ಲಿ ಹಾಸ್ಯನಟರೇ ವಿಜೃಂಭಿಸುತ್ತಾರೆ. ನಾಯಕ–ನಾಯಕಿಗೆ ನಂತರದ ಸ್ಥಾನ. ‘ಏಸ’ ಚಿತ್ರದಲ್ಲಿ ನಾನು ಅದನ್ನು ಸರಿದೂಗಿಸುವ ಪ್ರಯತ್ನ ಮಾಡಿದ್ದೇನೆ. ಒಂದು ಸಿನಿಮಾದಲ್ಲಿ ಒಬ್ಬ ಹಾಸ್ಯನಟ ಇದ್ದಾನೆ ಅಂದರೆ ಆತ ಕತೆಗೂ ಪೂರಕ ಆಗಬೇಕು. ಅದೇವೇಳೆ, ನಾಯಕನಟ ಕಾಮಿಡಿಗೂ ಹೊಂದಿಕೊಳ್ಳಬೇಕು. ಈ ಸೂತ್ರವನ್ನು ಇಲ್ಲಿ ವರ್ಕೌಟ್‌ ಮಾಡಿದ್ದೇನೆ.  ಅರವಿಂದ ಬೋಳಾರ್‌, ನವೀನ್‌ ಡಿ.ಪಡೀಲ್‌, ಭೋಜರಾಜ ವಾಮಂಜೂರು ಮೊದಲಾದ ಹಾಸ್ಯನಟರ ದಂಡೇ ಚಿತ್ರದಲ್ಲಿ ಇದ್ದರೂ ಅವರ ಹಾಸ್ಯ ಸನ್ನಿವೇಶಗಳು ಪ್ರತ್ಯೇಕ ಅನ್ನಿಸುವುದಿಲ್ಲ. ಚಿತ್ರಕತೆಯೊಳಗೆ ಹಾಸ್ಯ ದೃಶ್ಯಗಳನ್ನು ಪೋಣಿಸಿರುವುದರಿಂದ ಇಲ್ಲಿ ಯಾರೂ ವಿಜೃಂಭಿಸುವುದಿಲ್ಲ.

* ಜಯಂತ್‌ ಮತ್ತು ಶೋಭರಾಜ್‌ ಜುಗಲ್‌ಬಂದಿ ಬಗ್ಗೆ ಹೇಳಿ?
100 ವರ್ಷಗಳ ಇತಿಹಾಸ ಹೊಂದಿರುವ ಸಿನಿಮಾರಂಗದಲ್ಲಿ ಒಬ್ಬ ನಿರ್ದೇಶಕ ಪ್ರೇಕ್ಷಕರಿಗೆ ಹೊಸಕತೆ ಹೇಳುತ್ತೇನೆ ಎಂದು ಹೇಳುವುದು ಮೂರ್ಖತನ. ಏಕೆಂದರೆ ಹೊಸಕತೆ ಅನ್ನುವುದು ಇಲ್ಲವೇ ಇಲ್ಲ. ನಾವು ಚಿತ್ರವನ್ನು ಹೇಗೆ ನಿರೂಪಿಸುತ್ತೇವೆ, ಹೇಳುತ್ತೇವೆ ಎಂಬುದರಲ್ಲಿ ಮಾತ್ರ ಹೊಸತನ ಅಡಗಿದೆ. ಶೋಭರಾಜ್‌ ನನಗೆ ತುಳುನಾಡಿನ ಸಂಸ್ಕೃತಿ ಪರಿಚಯಿಸಿದರು. ‘ಏಸ’ ಚಿತ್ರವನ್ನು ನೋಡಿದ ತುಳು ಪ್ರೇಕ್ಷಕರಿಗೆ  ಈ ಚಿತ್ರವನ್ನು ಕನ್ನಡದ ಒಬ್ಬ ವ್ಯಕ್ತಿ ನಿರ್ದೇಶನ ಮಾಡಿದ್ದಾನೆ ಎಂದು ಗೊತ್ತಾಗುವುದಿಲ್ಲ. ಅಷ್ಟರ ಮಟ್ಟಿಗೆ ನಮ್ಮಿಬ್ಬರ ‘ಏಸ’ದಲ್ಲಿ ತುಳು ಸೊಗಡು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT