ಬಾಂಗ್ಲಾದೇಶ ಸೆಮಿಫೈನಲ್ ಆಸೆ ಜೀವಂತ

7
ಶಕೀಬ್ ಅಲ್‌ ಹಸನ್‌–ಮಹಮ್ಮದುಲ್ಲಾ ದಾಖಲೆ ಜೊತೆಯಾಟಕ್ಕೆ ಮಂಕಾದ ಬೌಲರ್‌ಗಳು

ಬಾಂಗ್ಲಾದೇಶ ಸೆಮಿಫೈನಲ್ ಆಸೆ ಜೀವಂತ

Published:
Updated:
ಬಾಂಗ್ಲಾದೇಶ ಸೆಮಿಫೈನಲ್ ಆಸೆ ಜೀವಂತ

ಕಾರ್ಡಿಫ್‌: ಸೋಲಿನ ಪ್ರಪಾತದಲ್ಲಿ ಬಿದ್ದಿರುವಾಗಲೂ ಭರವಸೆ ಕಳೆದುಕೊಳ್ಳದೆ ಮುನ್ನುಗ್ಗಿದ ಬಾಂಗ್ಲಾ ದೇಶ ಹೋರಾಟಕ್ಕೆ ಫಲ ಉಂಡಿತು. ನ್ಯೂಜಿಲೆಂಡ್ ವಿರುದ್ಧ ಅಮೋಘ ಜಯ ಸಾಧಿಸಿತು. ಇದರೊಂದಿಗೆ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸುವ ಆಸೆಯನ್ನು ಜೀವಂತವಾಗಿ ಟ್ಟುಕೊಂಡಿತು.

ಸೋಫಿಯಾ ಗಾರ್ಡನ್‌ನಲ್ಲಿ ಶುಕ್ರವಾರ ನಡೆದ ‘ಮಾಡು ಇಲ್ಲ ಮಡಿ’ ಪಂದ್ಯದಲ್ಲಿ ನ್ಯೂಜಿಲೆಂಡ್ ಮುಂದಿಟ್ಟ 266 ರನ್‌ಗಳ ಜಯದ ಗುರಿ ಬೆನ್ನತ್ತಿದ ತಂಡ 33ಕ್ಕೆ ನಾಲ್ಕು ವಿಕೆಟ್ ಎಂಬ ಶೋಚನೀಯ ಸ್ಥಿತಿಯನ್ನು ಮೆಟ್ಟಿ ನಿಂತು ಐದು ವಿಕೆಟ್‌ಗಳ ಜಯ ಸಾಧಿಸಿತು.

ನಾಲ್ಕನೇ ವಿಕೆಟ್‌ಗೆ ಶಕೀಬ್ ಅಲ್ ಹಸನ್ (114; 115 ಎಸೆತ,1 ಸಿಕ್ಸರ್‌, 11 ಬೌಂಡರಿ) ಮತ್ತು ಮಹಮ್ಮದುಲ್ಲಾ (ಔಟಾಗದೆ 102; 107 ಎಸೆತ, 2 ಸಿಕ್ಸರ್ಸ್‌, 8 ಬೌಂಡರಿ) ನಡುವಿನ 224 (34.5 ಓವರ್‌ಗಳಲ್ಲಿ) ರನ್‌ಗಳ ಜೊತೆಯಾಟ ಈ ಜಯಕ್ಕೆ ಕಾರಣವಾಯಿತು.

ಬಾಂಗ್ಲಾಗೆ ಮೊದಲ ಓವರ್‌ನಲ್ಲೇ ಪೆಟ್ಟು ಬಿದ್ದಿತ್ತು. ಟಿಮ್‌ ಸೌಥಿ ಇನಿಂಗ್ಸ್‌ನ ಎರಡನೇ ಎಸೆತದಲ್ಲಿ ತಮೀಮ್‌ ಇಕ್ಬಾಲ್ ಅವರನ್ನು ಎಲ್‌ಬಿಡಬ್ಲ್ಯು ಬಲೆಯಲ್ಲಿ ಕೆಡವಿದರು. ತಂಡದ ಮೊತ್ತ 10 ಆದಾಗ ಎರಡನೇ ವಿಕೆಟ್ ಕೂಡ ಪತನಗೊಂಡಿತು. 12 ಓವರ್‌ಗಳ ಮುಕ್ತಾಯಕ್ಕೆ ತಂಡ ನಾಲ್ಕು ವಿಕೆಟ್‌ ಕಳೆದುಕೊಂಡಿತು.

ಈ ಸಂದರ್ಭದಲ್ಲಿ ನ್ಯೂಜಿಲೆಂಡ್‌ ತಂಡದವರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಆದರೆ ಶಕೀಬ್ ಮತ್ತು ಮಹಮ್ಮದುಲ್ಲಾ ಕ್ರೀಸ್‌ನಲ್ಲಿ ಆಧಿಪತ್ಯ ಸ್ಥಾಪಿಸಿದರು. ನಾಲ್ವರು ವೇಗಿಗಳು ಮತ್ತು ನಾಯಕ ಒಳಗೊಂಡಂತೆ ಇಬ್ಬರು ಸ್ಪಿನ್ನರ್‌ಗಳನ್ನು ಎಗ್ಗಿಲ್ಲದೆ ಎದುರಿಸಿದ ಇವರಿಬ್ಬರ ಜೊತೆಯಾಟ 42ನೇ ಓವರ್‌ನಲ್ಲಿ 179 ಆಗುತ್ತಿದ್ದಂತೆ ದಾಖಲೆ ಯೂ ನಿರ್ಮಾಣವಾಯಿತು. ಇದು ಯಾವುದೇ ವಿಕೆಟ್‌ಗೆ ಬಾಂಗ್ಲಾದೇಶದ ಅತ್ಯಧಿಕ ಜೊತೆಯಾಟ.

ಮಿಲ್ನೆ ಹಾಕಿದ 46ನೇ ಓವರ್‌ನ ಐದನೇ ಎಸೆತವನ್ನು ಫೈನ್‌ ಲೆಗ್ ಮೂಲಕ ಸಿಕ್ಸರ್‌ಗೆ ಅಟ್ಟಿ ಶಕೀಬ್ ಶತಕ ಪೂರೈಸಿದರು. ನಂತರದ ಓವರ್‌ನಲ್ಲಿ ಅವರು ಔಟಾದಾಗ ತಂಡದ ಗೆಲುವಿಗೆ ಕೇವಲ ಒಂಬತ್ತು ರನ್ ಬೇಕಾಗಿತ್ತು. 47ನೇ ಓವರ್‌ನಲ್ಲಿ ಟ್ರೆಂಟ್‌ ಬೌಲ್ಟ್ ಎಸೆತದಲ್ಲಿ ಬೌಂಡರಿ ಗಳಿಸಿ ಮಹಮ್ಮದುಲ್ಲಾ ಕೂಡ ಶತಕ ಪೂರೈಸಿದರು. ಮುಂದಿನ ಓವರ್‌ನಲ್ಲಿ ಮೊಸಡೆಕ್‌ ಗೆಲುವಿನ ರನ್‌ ಗಳಿಸಿದರು.

ವಿಲಿಯಮ್ಸನ್‌–ಟೇಲರ್ ಅರ್ಧಶತಕ

ಟಾಸ್‌ ಗೆದ್ದ  ನ್ಯೂಜಿಲೆಂಡ್‌ ನಾಯಕ ಬ್ಯಾಟಿಂಗ್ ಆಯ್ದುಕೊಂಡರು. ಇನಿಂಗ್ಸ್‌ ಉದ್ದಕ್ಕೂ ಒಮ್ಮೆ ಬ್ಯಾಟ್ಸ್‌ಮನ್‌ಗಳು, ಮತ್ತೊಮ್ಮೆ ಬೌಲರ್‌ಗಳು ಮೇಲುಗೈ ಸಾಧಿಸಿದರು. ಮೊಸಾಡೆಕ್ ಹೊಸೈನ್‌ ಮತ್ತು ಟಸ್ಕಿನ್ ಅಹಮ್ಮದ್‌ ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್ ಕಬಳಿಸಿದರು. ಅರ್ಧಶತಕಗಳನ್ನು ಗಳಿಸಿದ ನಾಯಕ ವಿಲಿಯಮ್ಸನ್‌ ಮತ್ತು ರಾಸ್ ಟೇಲರ್‌ ನ್ಯೂಜಿಲೆಂಡ್‌ಗೆ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು.

ಡದ ಇನಿಂಗ್ಸ್‌ನಲ್ಲಿ 25 ಬೌಂಡರಿಗಳು ಸಿಡಿದರೆ, ಕೇವಲ ಒಂದು ಸಿಕ್ಸರ್‌ ಇತ್ತು.ಮಾರ್ಟಿನ್‌ ಗಪ್ಟಿಲ್‌ ಮತ್ತು ಲೂಕ್ ರಾಂಚಿ ಮೊದಲ ವಿಕೆಟ್‌ಗೆ 46 ರನ್ ಸೇರಿಸಿದರು. ರಾಂಚಿ ಔಟಾದ ನಂತರ ನಾಯಕ ಕೇನ್‌ ವಿಲಿಯಮ್ಸನ್‌ ಉತ್ತಮ ಹೊಡೆತಗಳ ಮೂಲಕ ರಂಜಿಸಿ ಎರಡನೇ ವಿಕೆಟ್‌ಗೆ 23 ರನ್‌ ಜೋಡಿಸಿದರು.

ವಿಲಿಯಮ್ಸನ್‌ ಜೊತೆಗೆ ರಾಸ್ ಟೇಲರ್‌ ಸೇರಿದಾಗ ಹೆಚ್ಚು ರನ್ ಹರಿದು ಬರಲು ಆರಂಭವಾಯಿತು. ಬೌಂಡರಿ ಗಳೊಂದಿಗೆ ಒಂಟಿ ರನ್‌ಗಳನ್ನೂ ಕಲೆ ಹಾಕಿದ ಇವರಿಬ್ಬರು 19ನೇ ಓವರ್‌ನಲ್ಲಿ ತಂಡದ ಮೊತ್ತವನ್ನು ಮೂರಂಕಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್‌: 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 265 (ಮಾರ್ಟಿನ್ ಗಪ್ಟಿಲ್‌ 33, ಕೇನ್‌ ವಿಲಿಯಮ್ಸನ್‌ 57, ರಾಸ್ ಟೇಲರ್ 63, ನೀಲ್‌ ಬ್ರೂಮ್‌ 36, ಜೇಮ್ಸ್ ನೀಶಮ್‌ 23; ತಸ್ಕಿನ್ ಅಹಮ್ಮದ್‌ 43ಕ್ಕೆ2, ಮೊಸಡೆಕ್ ಹೊಸೈನ್ 13ಕ್ಕೆ3);

ಬಾಂಗ್ಲಾದೇಶ: 47.2 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 268 (ಶಕೀಬ್ ಅಲ್‌ ಹಸನ್‌ 114, ಮಹಮ್ಮದುಲ್ಲಾ 102; ಟಿಮ್ ಸೌಥಿ 45ಕ್ಕೆ3). ಫಲಿತಾಂಶ: ಬಾಂಗ್ಲಾದೇಶಕ್ಕೆ ಐದು ವಿಕೆಟ್‌ಗಳ ಜಯ.

ಪಂದ್ಯಶ್ರೇಷ್ಠ–ಶಕೀಬ್‌ ಅಲ್‌ ಹಸನ್‌ (ಬಾಂಗ್ಲಾದೇಶ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry