ಫಾಗಿಂಗ್‌ನಿಂದ ಸೊಳ್ಳೆ ಸಾಯುವುದೆ?

7

ಫಾಗಿಂಗ್‌ನಿಂದ ಸೊಳ್ಳೆ ಸಾಯುವುದೆ?

Published:
Updated:
ಫಾಗಿಂಗ್‌ನಿಂದ ಸೊಳ್ಳೆ ಸಾಯುವುದೆ?

ಮೈಸೂರು: ಜಿಲ್ಲೆಯಲ್ಲಿ ಡೆಂಗಿ ದಿನೇ ದಿನೇ ಹೆಚ್ಚುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ಫಾಗಿಂಗ್‌ ಮಾಡುವಂತೆ ಒತ್ತಾಯಗಳು ಕೇಳಿಬರುತ್ತಿವೆ.  ಒತ್ತಾಯಕ್ಕೆ ಮಣಿದು ಜನಪ್ರತಿನಿಧಿಗಳು ಫಾಗಿಂಗ್ ಮಾಡಲು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಈಗಾಗಲೇ ಶ್ರೀರಾಂಪುರ ಬಡಾವಣೆ, ಮಹದೇವಪುರ ಸೇರಿದಂತೆ ಕೆಲವು ಜನವಸತಿ ಪ್ರದೇಶಗಳಲ್ಲಿ ಫಾಗಿಂಗ್ ಮಾಡಲಾಗಿದೆ. ಆದರೆ, ಇದು ಆರೋಗ್ಯಕ್ಕೆ ಹಾನಿಕಾರಕ ಎಂಬ ಅಂಶ ಬಹುತೇಕ ಮಂದಿಗೆ ತಿಳಿದಿಲ್ಲ.

ಹೇಗೆ ಹಾನಿಕಾರಕ?: ಫಾಗಿಂಗ್‌ ಸೇರಿದಂತೆ ಬಹುತೇಕ ರಾಸಾಯನಿಕಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಆಸ್ತಮಾ ಸಮಸ್ಯೆ ಉಳ್ಳವರಿಗಂತೂ ಫಾಗಿಂಗ್‌ನ ಹೊಗೆ ತೀರಾ ಹಾನಿಕಾರಕ. ಕೆಮ್ಮು, ದಮ್ಮು ಇದರಿಂದ ಉಲ್ಬಣಗೊಳ್ಳುತ್ತವೆ. ಮಕ್ಕಳಿಗೆ ಅಲರ್ಜಿ ಮೊದಲಾದ ಸಮಸ್ಯೆಗಳು ಹೆಚ್ಚುತ್ತವೆ.

ಫಾಗಿಂಗ್‌ನಿಂದ ಸೊಳ್ಳೆ ಸಾಯುವುದೆ?: ಫಾಗಿಂಗ್‌ನಿಂದ ಸೊಳ್ಳೆ ನಿರ್ಮೂಲನೆ ಸಾಧ್ಯವೇ ಇಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳೇ ಹೇಳುತ್ತಾರೆ. ಹಲವು ಚಾಣಾಕ್ಷ ಸೊಳ್ಳೆಗಳು ಫಾಗಿಂಗ್‌ ಹೊಗೆಯಿಂದ ತಪ್ಪಿಸಿಕೊಂಡು ಪಕ್ಕದ ಬಡಾವಣೆಗಳಿಗೆ ಅಥವಾ ಬೀದಿಗಳಿಗೆ ವಲಸೆ ಹೋಗುತ್ತವೆ.

ಹೊಗೆಯಿಂದ ಸತ್ತು ಬಿದ್ದ ಸೊಳ್ಳೆಗಳ ರಾಶಿ ಸಿಗುವುದು ಅಪರೂಪ. ಕೇವಲ ದುರ್ಬಲ ಹಾಗೂ ವಯಸ್ಸಾದ ಸೊಳ್ಳೆಗಳಷ್ಟೇ ಫಾಗಿಂಗ್‌ ಹೊಗೆಗೆ ಸಿಕ್ಕಿ ಬೀಳುತ್ತವೆ. ಇನ್ನುಳಿದ ತರುಣ ಸೊಳ್ಳೆಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತವೆ.

ಫಾಗಿಂಗ್‌ ಏಕೆ ಬೇಕು?: ಆಗಿದ್ದ ಮೇಲೆ ಫಾಗಿಂಗ್‌ ಏಕೆ ಬೇಕು ಎಂಬ ಪ್ರಶ್ನೆ ಮೂಡುತ್ತದೆ. ಸರ್ಕಾರ ಫಾಗಿಂಗ್‌ನ್ನು ಕೊನೆ ಅಸ್ತ್ರವಾಗಿ ಬಳಸುವಂತೆ ನಿರ್ದೇಶನ ನೀಡಿದೆ. ಡೆಂಗಿ, ಮಲೇರಿಯಾ ಸೇರಿದಂತೆ ಸೊಳ್ಳೆಯಿಂದ ಹರಡುವ ಕಾಯಿಲೆಗಳು ಕಂಡು ಬಂದ ಕೂಡಲೇ ಫಾಗಿಂಗ್ ಮಾಡುವುದು ಬೇಡ ಎಂದು ಸ್ಪಷ್ಟವಾಗಿ ತಿಳಿಸಿದೆ. ಇಡೀ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು.

ನಿಂತ ನೀರು ತೆರವುಗೊಳಿಸಬೇಕು. ಒಳಚರಂಡಿಯಲ್ಲಿ ಸರಾಗವಾಗಿ ನೀರು ಹರಿದು ಹೋಗುವ ವ್ಯವಸ್ಥೆ ಮಾಡ ಬೇಕು. ಜನರಲ್ಲಿ ಜಾಗೃತಿ ಮೂಡಿಸ ಬೇಕು. ಇದಾದ ನಂತರವೂ ಮೇಲಿಂದ ಮೇಲೆ ಕಾಯಿಲೆ ಪ್ರಕರಣ ಗಳು ವರದಿಯಾಗುತ್ತಿದ್ದಲ್ಲಿ ಆಗ ಮಾತ್ರ ಅಂತಿಮ ಅಸ್ತ್ರವಾಗಿ ಫಾಗಿಂಗ್‌ನ್ನು ವೈಜ್ಞಾನಿಕವಾಗಿಯೇ ಬಳಕೆ ಮಾಡ ಬೇಕು ಎಂದು ಸರ್ಕಾರ ಸೂಚಿಸಿದೆ.

ಆದರೂ ಬಳಕೆ ಏಕೆ?: ಇಷ್ಟಾದರೂ ಒಂದೆರಡು ಪ್ರಕರಣ  ಕಂಡುಬಂದ ಕೂಡಲೇ ಫಾಗಿಂಗ್‌ ಮಾಡುವುದು ಕೇವಲ ಪ್ರಚಾರಕ್ಕಾಗಿ. ಜನಪ್ರತಿನಿಧಿಗಳು ಅಥವಾ ಸಂಘ, ಸಂಸ್ಥೆಗಳ ಪ್ರತಿನಿಧಿಗಳು ಪ್ರಚಾರದ ಉದ್ದೇಶಕ್ಕಾಗಿ ಫಾಗಿಂಗ್ ಮಾಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರು ತ್ತಾರೆ. ಇದರಿಂದ ಅನಿವಾರ್ಯವಾಗಿ ಅಧಿಕಾರಿಗಳೂ ಫಾಗಿಂಗ್ ಮಾಡುತ್ತಾರೆ. ಕೊನೆಗೆ, ಆಸ್ತಮಾ, ಅಲರ್ಜಿ ಸಮಸ್ಯೆ ಯುಳ್ಳ ಜನರು ದೀರ್ಘಕಾಲದವರೆಗೆ ಕೆಮ್ಮು ಹಾಗೂ ಉಬ್ಬಸದಿಂದ ನರಳುವಂತಾಗಿದೆ.

ಅಪಾಯಕಾರಿ ಸೊಳ್ಳೆಗಳು...

* ಮಲೇರಿಯಾವು ಪ್ಲಾಸ್ಮೋಡಿಯಂ ಎಂಬ ಪರಾವಲಂಬಿ ಜೀವಿಯಿಂದ ಬರುತ್ತದೆ. ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆಯು ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ               ಹರಡುತ್ತದೆ.

* ಈಡೀಸ್ ಸೊಳ್ಳೆಯ ವೈರಸ್‌ಗಳಿಂದ ಡೆಂಗೆ, ಚಿಕುನ್‌ಗುನ್ಯಗಳು ಹರಡುತ್ತವೆ.

* ಕ್ಯೂಲೆಕ್ಸ್ ಸೊಳ್ಳೆಯಿಂದ ಆನೆಕಾಲು ರೋಗ, ಮಿದುಳುಜ್ವರಗಳು ಹರಡುತ್ತವೆ.

ಸೊಳ್ಳೆಗಳ ಜೀವನ ಕ್ರಮ

* ನೀರಿನಲ್ಲಿರುವ ಲಾರ್ವ ಗೂಡು ಕಟ್ಟುತ್ತದೆ

* ಗೂಡಿನಿಂದ ಎರಡೇ ದಿನಕ್ಕೆ ಸೊಳ್ಳೆಯಾಗಿ ಹೊರಬರುತ್ತವೆ

*  ಒಂದು ವಾರದಿಂದ 7 ವಾರದವರೆಗೆ ಸೊಳ್ಳೆಗಳು ಬದುಕಿರುತ್ತವೆ

* ಹೆಣ್ಣು ಸೊಳ್ಳೆಯು ಗಂಡು ಸೊಳ್ಳೆಗಿಂತ ಹೆಚ್ಚು ದೀರ್ಘಕಾಲ ಬದುಕಿರುತ್ತವೆ

* * 

ಫಾಗಿಂಗ್ ಮಾಡುವುದು ಕೊನೆ ಅಸ್ತ್ರವಾಗಬೇಕೇ ಹೊರತು ಮೊದಲ ಅಸ್ತ್ರವಾಗಬಾರದು. ಫಾಗಿಂಗ್‌ನಿಂದ ಸೊಳ್ಳೆ ನಿರ್ಮೂಲನೆ ಆಗದು. ಸ್ವಚ್ಛತೆ, ನೀರು ನಿಲ್ಲದಂತೆ ಎಚ್ಚರ ವಹಿಸುವುದೊಂದೇ ಮದ್ದು

ಡಾ.ಚಿದಂಬರ

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry