ಏಸುವಿಗೆ ‘ರಾಕ್ಷಸ’ ಎಂದು ಸಂಬೋಧನೆ: ಗುಜರಾತ್‌ ಹಿಂದಿ ಪಠ್ಯದಲ್ಲಿ ಪ್ರಮಾದ

7

ಏಸುವಿಗೆ ‘ರಾಕ್ಷಸ’ ಎಂದು ಸಂಬೋಧನೆ: ಗುಜರಾತ್‌ ಹಿಂದಿ ಪಠ್ಯದಲ್ಲಿ ಪ್ರಮಾದ

Published:
Updated:
ಏಸುವಿಗೆ ‘ರಾಕ್ಷಸ’ ಎಂದು ಸಂಬೋಧನೆ: ಗುಜರಾತ್‌ ಹಿಂದಿ ಪಠ್ಯದಲ್ಲಿ ಪ್ರಮಾದ

ಅಹಮದಾಬಾದ್‌ (ಪಿಟಿಐ): ಗುಜರಾತ್‌ನ ಒಂಬತ್ತನೇ ತರಗತಿಯ ಹಿಂದಿ ಪಠ್ಯಪುಸ್ತಕದ ಒಂದು ಅಧ್ಯಾಯದಲ್ಲಿ ಏಸುಕ್ರಿಸ್ತನನ್ನು ‘ಹೈವಾನ್‌’ (ರಾಕ್ಷಸ) ಎಂದು ಸಂಬೋಧಿಸಿರುವ ಪ್ರಮಾದ ಉಂಟಾಗಿದೆ.

ಗುಜರಾತ್‌ ಶಾಲಾ ಪಠ್ಯಪುಸ್ತಕ ಮಂಡಳಿ (ಜಿಎಸ್‌ಎಸ್‌ಟಿಬಿ) ಪ್ರಕಟಿಸಿರುವ ಈ ಪುಸ್ತಕದಲ್ಲಿ ‘ಭಗವಾನ್‌’(ದೇವರು) ಎಂದು ಸಂಬೋಧಿಸುವ ಬದಲಿಗೆ ಈ ತಪ್ಪು ಉಂಟಾಗಿದೆ.

ಪ್ರಮಾದ ಕುರಿತು ಕ್ರೈಸ್ತ ಸಮುದಾಯ ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲಾ  ಶಿಕ್ಷಣ ಅಧಿಕಾರಿಯ (ಡಿಇಒ) ಕಚೇರಿ ಎದುರು ಪ್ರತಿಭಟನೆ ನಡೆಸಿ, ಪಠ್ಯಪುಸ್ತಕ ಹಿಂಪಡೆಯುವಂತೆ ಆಗ್ರಹಿಸಿದೆ.

‘ಪಠ್ಯಪುಸ್ತಕದಲ್ಲಿ ಏಸುಕ್ರಿಸ್ತನನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ಇದು ನಮ್ಮ ಧಾರ್ಮಿಕ ಭಾವನೆಗಳಿಗೆ ನೋವು ಉಂಟುಮಾಡಿದೆ. ಸರ್ಕಾರ ತಕ್ಷಣವೇ ಪಠ್ಯಪುಸ್ತಕ ಹಿಂಪಡೆಯಬೇಕು’ ಎಂದು ಕ್ರೈಸ್ತ ಸಮುದಾಯ ಒತ್ತಾಯಿಸಿದೆ. ಪಠ್ಯಪುಸ್ತಕದ 16ನೇ ಪುಟದ ‘ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಕ–ವಿದ್ಯಾರ್ಥಿ ಬಾಂಧವ್ಯ’ ಎನ್ನುವ ಪಾಠದಲ್ಲಿ ಈ ವಿವಾದಾತ್ಮಕ ಅಂಶ ಇದೆ. ಪ್ರಮಾದ ಗುರುತಿಸಿರುವ ಜಿಎಸ್‌ಎಸ್‌ಟಿಬಿ, ತನ್ನ ವೆಬ್‌ಸೈಟ್‌ನಲ್ಲಿರುವ ಅಂತರ್ಜಾಲ ಪಠ್ಯದಲ್ಲಿ ಈ ವಿವಾದಾತ್ಮಕ ಪದವನ್ನು ತೆಗೆದುಹಾಕಿದೆ.

‘ಮುದ್ರಣ ದೋಷದಿಂದ ಈ ರೀತಿ ಪ್ರಮಾದ ಉಂಟಾಗಿದೆ. ‘ಭಗವಾನ್‌’ ಬದಲು ‘ಹೈವಾನ್‌’ ಎಂದು ಮುದ್ರಣವಾಗಿದೆ. ಈ ಬಗ್ಗೆ ಆಂತರಿಕ ವಿಚಾರಣೆ ನಡೆಸಲಾಗುವುದು. ಈಗಾಗಲೇ ರಾಜ್ಯದೆಲ್ಲೆಡೆ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಂಚಿಕೆ ಆಗಿರುವುದರಿಂದ ಪುಸ್ತಕ ಹಿಂಪಡೆಯುವುದು ಸಾಧ್ಯವಿಲ್ಲ. ಆದರೆ ವಿದ್ಯಾರ್ಥಿಗಳಿಗೆ ಸರಿಯಾದ ಮಾಹಿತಿ ಬೋಧಿಸುವಂತೆ ಶಿಕ್ಷಕರಿಗೆ ಲಿಖಿತ ಸೂಚನೆ ನೀಡಲಾಗುವುದು’ ಎಂದು  ಜಿಎಸ್‌ಎಸ್‌ಟಿಬಿ ಕಾರ್ಯಕಾರಿ ಅಧ್ಯಕ್ಷ ನಿತಿನ್‌ ಪೆಥಾನಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry