ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂದನಿ ಚೌಕದಲ್ಲಿ ಆಹಾರ ಹಬ್ಬ

Last Updated 11 ಜೂನ್ 2017, 19:30 IST
ಅಕ್ಷರ ಗಾತ್ರ

ಮುಂಗಾರು ಮಳೆ ರಸ್ತೆಯನ್ನು ಒದ್ದೆ ಮಾಡಿತ್ತು. ತಣ್ಣನೆಯ ಗಾಳಿಯೊಂದಿಗೆ ತೇಲಿ ಬರುತ್ತಿದ್ದ ಕಲ್ಮಿ ಕಬಾಬ್‌ನ ಘಮ್ಮನೆಯ ಪರಿಮಳ ಬಾಯಲ್ಲಿ ನೀರೂರಿಸುತ್ತಿತ್ತು.

ರಸ್ತೆಯ ತುಂಬಾ ಜನಜಂಗುಳಿ. ವಾಹನ ಸವಾರರು ಬೈಕ್‌ಗಳನ್ನು ನಿಧಾನವಾಗಿ ಓಡಿಸುತ್ತಾ ಮಾಂಸಾಹಾರಿ ಮಳಿಗೆಗಳತ್ತ ಕಣ್ಣು ಹಾಯಿಸುತ್ತಿದ್ದರು. ಕೆಲವರು ಬೈಕ್‌ಗಳನ್ನು ರಸ್ತೆ ಬದಿಯಲ್ಲಿ ಪಾರ್ಕ್‌ ಮಾಡಿ ಮಳಿಗೆಗಳತ್ತ ಬರುತ್ತಿದ್ದರು. ದೊಡ್ಡ ಪಾತ್ರೆಯಲ್ಲಿ ಹೊಗೆಯಾಡುತ್ತಿದ್ದ ಬಿರಿಯಾನಿಯನ್ನು ಸೌಟಿನಲ್ಲಿ ತೆಗೆದು ಪಾರ್ಸೆಲ್‌ ಮಾಡುತ್ತಿದ್ದ ಹೋಟೆಲ್‌ನ ಉದ್ಯೋಗಿ.

ಶಿವಾಜಿ ನಗರ ಸಮೀಪದ ಚಾಂದನಿ ಚೌಕ್‌ ರಸ್ತೆಯ ಆಹಾರ ಬೀದಿಯಲ್ಲಿ ಕಂಡ ನೋಟಗಳಿವು. ರಂಜಾನ್‌ಗಾಗಿ ಈಗ ಹೊಸದೊಂದು ಲೋಕವೇ ಅಲ್ಲಿ ಸೃಷ್ಟಿಯಾಗಿದೆ. ಪ್ರಾರ್ಥನೆ ಸಲ್ಲಿಸಿ ಬರುತ್ತಿದ್ದ ಮುಸ್ಲಿಂ ಸಮುದಾಯದವರು ತಮಗಿಷ್ಟದ ತಿನಿಸಿನ ಅಂಗಡಿಗಳತ್ತ ಮುಗಿಬೀಳುತ್ತಿದ್ದರು.

ಸಿಹಿ ತಿನಿಸಿನ ಗಾಡಿಗಳು, ಕೋಳಿಮಾಂಸವನ್ನು ಗ್ರಿಲ್‌ ಮಾಡಿ ಕೊಡುತ್ತಿದ್ದ ಬಾಣಸಿಗರು, ಗ್ರಾಹಕರನ್ನು ಕೈಬೀಸಿ ಕರೆಯುತ್ತಿದ್ದ ಹುಡುಗರು, ಬಗೆಬಗೆ ಟೋಪಿಗಳನ್ನು ಮಾರುವ ವೃದ್ಧರು... ರಸ್ತೆಬದಿಯಲ್ಲಿ ಕಂಡುಬಂದರು.

ರಂಜಾನ್‌  ಮಾಸ ಆರಂಭವಾಗುತ್ತಿದ್ದಂತೆ ಇಲ್ಲಿ ಮಾಡುವ  ಬಗೆಬಗೆ ರುಚಿಕರ ಖಾದ್ಯಗಳು ಜನರನ್ನು  ಕೈಬೀಸಿ ಕರೆಯುತ್ತವೆ. ಕ್ಯಾರೆಟ್‌ ಹಲ್ವಾ, ಖೋವಾ, ಅನಾನಸ್‌ ತಿನಿಸು, ಕಾಶ್ಮೀರಿ ಫಿರ್ನಿ, ಶ್ಯಾವಿಗೆ ಪಾಯಸ, ಮೈಸೂರು ಪಾಕ್‌ ಸಸ್ಯಾಹಾರಿಗಳ ರುಚಿಮೊಗ್ಗುಗಳನ್ನು ಅರಳಿಸುತ್ತವೆ. 

(ಬಿಸಿಬಿಸಿ ಬಿರಿಯಾನಿ...)

‘ಐದು ವರ್ಷಗಳಿಂದ ಇಲ್ಲಿ ಹೋಟೆಲ್‌ ನಡೆಸುತ್ತಿದ್ದೇವೆ. ಮಲೈ ಚಿಕನ್‌, ಕುಲ್ಫಿ ಚಿಕನ್‌, ಅಮೆರಿಕನ್‌ ಚಾಪ್ಸ್‌, ಪ್ರಾನ್ಸ್‌ ಜಿಂಗಾ,  ಸಿಂಗಪುರಿ ಸ್ಪೆಷಲ್‌ ಚಿಕನ್‌, ಬಾರ್ಬಿಕ್ಯೂ ಚಿಕನ್‌, ಹರಿಯಾಲಿ ಚಿಕನ್‌, ಮಟನ್‌ ಶೀಖ್‌ ಕಬಾಬ್‌, ಪತ್ಥರ್‌ ಕಾ ಘೋಷ್‌, ಮಟನ್ ಗ್ರಿಲ್‌, ಕ್ಯಾರಮಲ್‌ ಪುಡ್ಡಿಂಗ್‌, ಅನಾರ್ಕಲಿ, ಚಿಕನ್ ಚಾಪ್ಸ್... ಹೀಗೆ 42 ವಿಧದ ತಿನಿಸುಗಳನ್ನು ಮಾಡಿದ್ದೇವೆ’ ಎನ್ನುತ್ತಾರೆ ರಾಯಲ್‌ ರೆಸ್ಟೊರೆಂಟ್‌ನ ಸಿಬ್ಬಂದಿ ಉಮೈಜ್‌ ಖುರೇಷಿ.

ಕುರಿಮಾಂಸವನ್ನು ಚಪ್ಪಡಿಕಲ್ಲಿನ ಮೇಲೆ ಬೇಯಿಸಿ ಕೊಡುವ ‘ಪತ್ಥರ್‌  ಕಾ ಘೋಷ್‌’ ಇಲ್ಲಿನ ಮತ್ತೊಂದು ವಿಶೇಷ ತಿನಿಸಾಗಿದೆ. ಸೌದೆಯ ಉರಿಯಲ್ಲಿ ಕಲ್ಲು ಕಾದಿರುತ್ತದೆ. ಕಲ್ಲಿನ ಮೇಲೆ ಮಾಂಸ ಹಾಗೂ ಮಸಾಲೆ ಹಾಕಿ ಚೆನ್ನಾಗಿ ಬೇಯಿಸಲಾಗುತ್ತದೆ. ಹೈದರಾಬಾದಿ ವಿಶೇಷ ಪತ್ಥರ್‌ ಕಾ ಘೋಷ್ ಅನ್ನು ರಂಜಾನ್‌ನಲ್ಲಿ ಜನರು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಐದು ತುಂಡುಗಳ ಒಂದು ಪ್ಲೇಟ್‌ಗೆ ₹110. ಮಟನ್‌ ಸೀಖ್‌ ಕಬಾಬ್‌ಗೆ ₹60.

ಮಧ್ಯಾಹ್ನ 1ರಿಂದ ಆರಂಭವಾಗುವ  ಹೋಟೆಲ್‌ಗಳು ಬೆಳಗಿನ ಜಾವ 5ಗಂಟೆಯವರೆಗೂ ತೆರೆದಿರುತ್ತವೆ.

‘ರಂಜಾನ್‌ಗಾಗಿ ಚಿಕನ್‌, ಬೀಫ್‌ ಬಿರಿಯಾನಿ ಮಾಡಿದ್ದೇವೆ. ದಿನಕ್ಕೆ 200ಕ್ಕೂ ಹೆಚ್ಚು ಪ್ಲೇಟ್‌ ಬಿರಿಯಾನಿ ಖಾಲಿಯಾಗುತ್ತವೆ. ಹೈದರಾಬಾದಿ ಮಟನ್‌ ಹಲೀಮ್‌, ಚಿಕನ್‌ ಹಲೀಮ್‌ ಮಾಡಿದ್ದೇವೆ. ಕೊತ್ತಂಬರಿ, ಈರುಳ್ಳಿ, ನಿಂಬೆರಸ ಹಾಗೂ ಗ್ರೇವಿ ಹಾಕಿಕೊಂಡು ತಿಂದರೆ ಅದ್ಭುತ ರುಚಿ ಬರುತ್ತದೆ. ₹70ಕ್ಕೆ ಒಂದು ಪ್ಲೇಟ್‌ ಕೊಡುತ್ತೇವೆ’ ಎಂದರು ಬಿರಿಯಾನಿ ಹೋಟೆಲ್‌ನ ಸಿಬ್ಬಂದಿ ಮೊಹಮ್ಮದ್‌ ಜಿನೇದ್‌.

(ಹೊಟ್ಟೆ ಸೇರಲು ತಯಾರಾಗುತ್ತಿರುರುವ ಮಾಂಸಾಹಾರಿ ಖಾದ್ಯಗಳು)

‘ನಾನು ಸೈನ್ಯದಲ್ಲಿ ಹವಾಲ್ದಾರ್‌ ಆಗಿ ಕೆಲಸ ಮಾಡುತ್ತಿದ್ದೇನೆ. ಮೂರು ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದೇನೆ. ಇಲ್ಲಿನ ವಿಭಿನ್ನ ರುಚಿಯ ಮಂಸಾಹಾರಿ ತಿನಿಸುಗಳು ಇಷ್ಟವಾಗುತ್ತವೆ. ಆಹಾರ ಬೀದಿ ನೋಡಲು ಖುಷಿಯಾಗುತ್ತದೆ’ ಎನ್ನುತ್ತಾರೆ ಇಂದಿರಾನಗರದ ಉನ್ನಿಕೃಷ್ಣನ್‌.

‘ಪ್ರತಿವರ್ಷ ಇಲ್ಲಿಗೆ ಬರುತ್ತೇನೆ. ಗ್ರಿಲ್‌ ಚಿಕನ್‌ ರುಚಿ ನೋಡುತ್ತೇನೆ. ಅದರಲ್ಲೂ ಚಿಕನ್‌ ಸಿಂಗಪುರಿ ತುಂಬಾ ಇಷ್ಟ. ನಮ್ಮ ಎದುರಿಗೆ ಬೇಯಿಸಿಕೊಡುತ್ತಾರೆ. ಜೊತೆಗೆ ತಡಮಾಡದೇ ಸರ್ವ್‌ ಮಾಡುತ್ತಾರೆ’ ಎಂದರು ರಾಜಾಜಿನಗರ ಬಾಷ್ಯಂ ಸರ್ಕಲ್‌ನ ನಿವಾಸಿ ಶಿವರಾಜ್‌.

(ಉನ್ನಿಕೃಷ್ಣನ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT