ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಬಾಲಕಿಯಿಂದ ಪ್ರಧಾನಿ ಮೋದಿಗೆ ಪತ್ರ

ಜವಾನ ಸೇರಿ ನಾಲ್ವರಿಂದ ಅತ್ಯಾಚಾರ ಆರೋಪ: ನ್ಯಾಯ ಕೊಡಿಸಲು ಮನವಿ
Last Updated 12 ಜೂನ್ 2017, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ‘ನಾನು ಹೆಣ್ಣಾಗಿ ದಲಿತ ಕುಟುಂಬದಲ್ಲಿ ಅಂದವಾಗಿ ಹುಟ್ಟಿದ್ದೇ ತಪ್ಪಾ? ನನ್ನ ಮೇಲೆ ಅತ್ಯಾಚಾರ ನಡೆಸಿದ್ದ ಜವಾನ ಈಗ ಒಂದು ಥರಾ ನೋಡುತ್ತಾನೆ. ನಾಳೆಯಿಂದ ಶಾಲೆಗೆ ಹೇಗೆ ಹೋಗಲಿ? ಶಿಕ್ಷಕರೊಬ್ಬರ ಸಹಾಯದಿಂದ ಈ ಪತ್ರ ನಿಮಗೆ ಬರೆಯುತ್ತಿದ್ದೇನೆ. ಮೋದಿ ಸರ್ ನನಗೆ ನ್ಯಾಯ ಕೊಡಿಸಿ...’

‘ಸ್ಕಾಲರ್‌ಶಿಪ್ ಕೊಡಿಸುವುದಾಗಿ ಕಾರಿನಲ್ಲಿ ಕರೆದೊಯ್ದ ಶಾಲೆಯ ಜವಾನ (ಸಿಪಾಯಿ) ಹಾಗೂ ಆತನ ಮೂವರು ಗೆಳೆಯರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ’ ಎಂದು ಆರೋಪಿಸಿರುವ ತಾಲ್ಲೂಕಿನ ಗ್ರಾಮವೊಂದರ ದಲಿತ ಬಾಲಕಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದ ಸಾರಾಂಶವಿದು.

‘ಪರಿಶಿಷ್ಟ ಜಾತಿ–ಪಂಗಡದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ಬಂದಿದೆ. ಬಾಗಲಕೋಟೆಗೆ ಹೋಗೋಣ. ಅಲ್ಲಿ ಸ್ಕಾಲರ್‌ಶಿಪ್‌ ಕೊಡಿಸುವೆ ಎಂದು ಹೇಳಿ ಮೂರು ತಿಂಗಳ ಹಿಂದೆ ಶಾಲೆಯ ಜವಾನ ವಿಜಯಕುಮಾರ ಕಾಳವ್ವಗೋಳ ಕಾರಿನಲ್ಲಿ ಕರೆದೊಯ್ದಿದ್ದ. ಆಗ ಆತನೊಂದಿಗೆ ಕಾರಿನಲ್ಲಿ ಇನ್ನೂ ಮೂವರು ಇದ್ದರು. ಅವರ ಹೆಸರು ನನಗೆ ಗೊತ್ತಿಲ್ಲ. ಪರಿಚಯವೂ ಇಲ್ಲ. ದಾರಿ ಮಧ್ಯೆ ಅವರು ಕೊಟ್ಟ ತಂಪು ಪಾನೀಯ ಕುಡಿಯುತ್ತಿದ್ದಂತೆಯೇ ನಾನು ಮೂರ್ಛೆ ಹೋದೆ. ಆ ವೇಳೆ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ.

ಮೂರು ತಾಸಿನ ನಂತರ ನನಗೆ ಪ್ರಜ್ಞೆ ಬಂದಿದೆ. ಮನೆಗೆ ಬಂದ ನಂತರ ರಾತ್ರಿ ಜ್ವರ ಬಂದಿತ್ತು. ತಾಯಿ ನನ್ನನ್ನು ವೈದ್ಯರ ಬಳಿ ಕರೆದೊಯ್ದರು. ಪರೀಕ್ಷೆ ನಡೆಸಿದ ಅವರು, ಈಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂಬುದನ್ನು ತಾಯಿಗೆ ಹೇಳಿ, ಪೊಲೀಸರಿಗೆ ದೂರು ನೀಡುವಂತೆ ತಿಳಿಸಿದರು. ಆದರೆ ಅಮ್ಮ ಮನೆಗೆ ಕರೆದೊಯ್ದು ಅಪ್ಪನಿಗೆ ಎಲ್ಲಾ ವಿಚಾರ ತಿಳಿಸಿದಳು. ದೂರು ನೀಡಲು ಬೆದರಿದ ಅಪ್ಪ, ನನ್ನನ್ನು ಸೋದರತ್ತೆ ಮನೆಗೆ ಕಳುಹಿಸಿದರು. ಅಲ್ಲಿಯೇ ಇದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ’ ಎಂದು ಬಾಲಕಿ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ.

‘ಈ ಘಟನೆ ನನಗೆ ಮಾನಸಿಕವಾಗಿ ಕಾಡುತ್ತಿದೆ. ನನ್ನ ಹಾಗೆ ಶಾಲೆಯಲ್ಲಿ ಬಹಳಷ್ಟು ಮಕ್ಕಳು ಇದೇ ರೀತಿಯ ನೋವು ಅನುಭವಿಸುತ್ತಿದ್ದಾರೆ. ಅವರನ್ನೂ ನೀವು ರಕ್ಷಿಸಿ ಸರ್’ ಎಂದು ಪ್ರಧಾನಿಗೆ ಕೇಳಿಕೊಂಡಿರುವ ಆಕೆ, ಪತ್ರದಲ್ಲಿ ತನ್ನ ಹೆಸರು, ಊರು, ಶಾಲೆಯ ಹೆಸರು ಎಲ್ಲವನ್ನೂ ಬರೆದಿದ್ದಾಳೆ. ಪ್ರಧಾನಿ ಕಚೇರಿ, ನಂ 152, ಸೌತ್‌ ಬ್ಲಾಕ್, ರೆಸಿನಾ ಹಿಲ್, ನವದೆಹಲಿ–110011 ಈ ವಿಳಾಸಕ್ಕೆ ಪತ್ರ ಬರೆಯಲಾಗಿದೆ.

ಕನ್ನಡದಲ್ಲಿದ್ದ ಪತ್ರವನ್ನು ಶಿಕ್ಷಕರೊಬ್ಬರ ಸಹಾಯದಿಂದ ಇಂಗ್ಲಿಷ್‌ಗೂ ಅನುವಾದಿಸಿರುವ ಆಕೆ ಪತ್ರದಲ್ಲಿ ಅದನ್ನು ಉಲ್ಲೇಖಿಸಿದ್ದಾಳೆ. ಪ್ರಧಾನಿಗೆ ಹಾಕಿದ ಪತ್ರದ ಪ್ರತಿಯನ್ನು ಕೇಂದ್ರ ಸಚಿವೆ ಮೇನಕಾ ಗಾಂಧಿ, ರಾಜ್ಯ ಮಹಿಳಾ ಆಯೋಗ, ಬಾಗಲಕೋಟೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಎಸ್‌ಪಿ ಕಚೇರಿ ಹಾಗೂ ಹುಬ್ಬಳ್ಳಿಯ ‘ಪ್ರಜಾವಾಣಿ’ ಕಚೇರಿಗೂ ಪೋಸ್ಟ್ ಮಾಡಿದ್ದು, ಅದು ಸೋಮವಾರ (ಜೂನ್‌ 12) ತಲುಪಿದೆ.

****
ಪ್ರಧಾನಿಗೆ ಬಾಲಕಿ ಬರೆದ ಪತ್ರದ ಪ್ರತಿ ನನ್ನ ಕಚೇರಿಗೂ ತಲುಪಿದೆ. ಪತ್ರವನ್ನು ಡಿಡಿಪಿಐಗೆ ಕಳುಹಿಸಿದ್ದೇನೆ. ಸತ್ಯಾಸತ್ಯತೆ ಅರಿತು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದ್ದೇನೆ
ವಿಕಾಸ್ ಸುರಳಕರ್, ಜಿಲ್ಲಾ ಪಂಚಾಯ್ತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT