ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್‌ ವಿರುದ್ಧ ಸಾಕ್ಷ್ಯಗಳಿವೆ: ಪ್ರೀತ್‌ ಭರಾರ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪದ ತನಿಖೆಗೆ ಡೊನಾಲ್ಡ್ ಅಡ್ಡಿ
Last Updated 12 ಜೂನ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪದ ಕುರಿತು ನಡೆಯುತ್ತಿರುವ ವಿಚಾರಣೆಗೆ ಅಡ್ಡಿಪಡಿಸಿರುವ  ಡೊನಾಲ್ಡ್‌ ಟ್ರಂಪ್‌ ವಿರುದ್ಧ ಪ್ರಕರಣ ದಾಖಲಿಸಲು ಸಾಕಷ್ಟು ಸಾಕ್ಷ್ಯಗಳಿವೆ ಎಂದು  ಮಾಜಿ ಅಟಾರ್ನಿ ಭಾರತ ಸಂಜಾತ ಪ್ರೀತ್‌ ಭರಾರ ಹೇಳಿದ್ದಾರೆ.

ಅಟಾರ್ನಿ ಹುದ್ದೆಗೆ ರಾಜೀನಾಮೆ ನೀಡುವ ಮುನ್ನ ಟ್ರಂಪ್‌, ತನ್ನೊಂದಿಗೆ ಉತ್ತಮ ಸ್ನೇಹ  ಬೆಳೆಸಲು ಪ್ರಯತ್ನಿಸಿದ್ದರು ಎಂದು ಅವರು ಹೇಳಿದ್ದಾರೆ.
ವಜಾಗೊಂಡ ಎಫ್‌ಬಿಐ ನಿರ್ದೇಶಕ ಜೇಮ್ಸ್‌ ಕ್ಯಾಮಿ ಅವರೊಂದಿಗೂ ಇದೇ ರೀತಿಯಲ್ಲಿ  ಟ್ರಂಪ್‌ ನಡೆದುಕೊಂಡಿದ್ದರು ಎಂದು ತಿಳಿಸಿದ್ದಾರೆ.

ಟ್ರಂಪ್‌ ಆಡಳಿತ ಅಸ್ತಿತ್ವಕ್ಕೆ ಬಂದ ನಂತರ ಅಮೆರಿಕದ ಉನ್ನತ ಹುದ್ದೆಗೆ ರಾಜೀನಾಮೆ ನೀಡಿದ 46  ಅಟಾರ್ನಿಗಳಲ್ಲಿ ಭರಾರ ಕೂಡ ಒಬ್ಬರು.

‘ಟ್ರಂಪ್‌ ವಿರುದ್ಧ  ದಾಖಲೆಗಳಿಲ್ಲ ಎನ್ನಲು ಯಾವುದೇ ರೀತಿಯ ಆಧಾರವಿಲ್ಲ’ ಎಂದು ಎಬಿಸಿ ನ್ಯೂಸ್‌ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

ಅಟಾರ್ನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಭರಾರ ಇದೇ ಮೊದಲ ಬಾರಿಗೆ ಸುದ್ದಿವಾಹಿನಿಗೆ ಸಂದರ್ಶನ ನೀಡಿದ್ದಾರೆ.

ಉನ್ನತ ಹುದ್ದೆಗಳಿಂದ ವಜಾಗೊಳಿಸುವ ಅಧಿಕಾರ ಟ್ರಂಪ್‌ ಅವರಿಗಿದೆ. ಆದರೆ ಅಂತಹ ಅಧಿಕಾರ ಬಳಕೆಯಲ್ಲಿ  ಲೋಪವಾಗಿದ್ದರೆ ಅವರಿಗೆ ಯಾವುದೇ ಶಾಸನಾತ್ಮಕ ರಕ್ಷಣೆ ಸಿಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಶಿಷ್ಟಾಚಾರ ಉಲ್ಲಂಘಿಸಿ ಟ್ರಂಪ್‌  ತಮಗೆ ಅನೇಕ ಬಾರಿ ಕರೆ ಮಾಡಿದ್ದಾರೆ ಎಂದೂ ಅವರು ಹೇಳಿದ್ದಾರೆ. ಈ ಮೂಲಕ ಸ್ನೇಹ ಬೆಳೆಸಲು ಪ್ರಯತ್ನಿಸಿದ್ದರು ಎಂದಿದ್ದಾರೆ.

‘ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾದ ಬಳಿಕ ಕರೆ ಮಾಡಿದ ಟ್ರಂಪ್‌ ನನ್ನ ಯೋಗಕ್ಷೇಮ ವಿಚಾರಿಸಿದರು. ಇದರಿಂದ ನಾನು ಮುಜುಗರಕ್ಕೊಳಗಾದೆ. ನಂತರ ಅಧಿಕಾರ ಸ್ವೀಕಾರ ಸಮಾರಂಭದ ಎರಡು ದಿನಗಳ ಮುಂಚೆ ಎರಡನೇ ಬಾರಿ ಕರೆ ಮಾಡಿದ್ದರು. ಅಧ್ಯಕ್ಷರಾದ ಬಳಿಕ ಅವರು ಮತ್ತೊಮ್ಮೆ ಕರೆ ಮಾಡಿದ್ದರು. ಆದರೆ ನಾನು ಸ್ವೀಕರಿಸಿರಲಿಲ್ಲ’ ಎಂದೂ ಕೂಡ ಸಂದರ್ಶನದಲ್ಲಿ ತಿಳಿಸಿದ್ದಾರೆ. 

ಅಧ್ಯಕ್ಷರ ಸಂಗಡಿಗರು ಭಾಗಿಯಾಗಿರುವ ಮತ್ತು ಇನ್ನಿತರ ಮಹತ್ವದ ಪ್ರಕರಣಗಳನ್ನು  ತನಿಖೆ ನಡೆಸುತ್ತಿದ್ದ ವ್ಯಕ್ತಿಯೊಂದಿಗೆ ಅಮೆರಿಕ ಅಧ್ಯಕ್ಷರು  ವೈಯಕ್ತಿಕ ಮಾತುಕತೆ ನಡೆಸುವುದು  ವಿಚಿತ್ರವಾಗಿದೆ ಎಂದು ಸಂದರ್ಶನದಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT