ಜಿಎಸ್‌ಟಿ ವಿಳಂಬ ಇಲ್ಲ: ಕೇಂದ್ರ

7
ಜಾರಿ ಮುಂದೂಡಿಕೆಯ ಪ್ರಶ್ನೆಯೇ ಇಲ್ಲ: ಹಣಕಾಸು ಸಚಿವಾಲಯ ಸ್ಪಷ್ಟನೆ

ಜಿಎಸ್‌ಟಿ ವಿಳಂಬ ಇಲ್ಲ: ಕೇಂದ್ರ

Published:
Updated:
ಜಿಎಸ್‌ಟಿ ವಿಳಂಬ ಇಲ್ಲ: ಕೇಂದ್ರ

ನವದೆಹಲಿ: ಜುಲೈ 1 ರಿಂದಲೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯು ದೇಶದಾದ್ಯಂತ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಹೊಸ ತೆರಿಗೆ ವ್ಯವಸ್ಥೆಯನ್ನು ಸುಸೂತ್ರವಾಗಿ ಜಾರಿಗೆ ತರಲು ಪೂರ್ವಭಾವಿ ಸಿದ್ಧತೆಗಳೆಲ್ಲ ಭರದಿಂದ ನಡೆಯುತ್ತಿವೆ.  ನಿಗದಿಯಾಗಿರುವ ಗಡುವು ಯಾವುದೇ ಕಾರಣಕ್ಕೂ ಮುಂದಕ್ಕೆ ಹೋಗಲಾರದು. ಈ ಕುರಿತ ಗಾಳಿಸುದ್ದಿಗಳಿಗೆ ಆಧಾರಗಳೇ ಇಲ್ಲ   ಎಂದು ಹಣಕಾಸು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಕೇಂದ್ರೀಯ ಅಬಕಾರಿ ಮತ್ತು ಸೀಮಾ ಸುಂಕ ಮಂಡಳಿಯು (ಸಿಬಿಇಸಿ), ರಾಜ್ಯ ಸರ್ಕಾರಗಳ ಸಹಯೋಗದಲ್ಲಿ  ಪ್ರತಿಯೊಬ್ಬ ವರ್ತಕನಿಗೆ ಹೊಸ ವ್ಯವಸ್ಥೆ ಬಗ್ಗೆ ಮನದಟ್ಟು ಮಾಡಿಕೊಡಲು ಕಾರ್ಯಪ್ರವೃತ್ತವಾಗಿದೆ.

ಜಿಎಸ್‌ಟಿ ಜಾರಿಯನ್ನು ಒಂದೆರಡು ತಿಂಗಳು ಮುಂದೂಡಬೇಕೆಂದು   ಕೆಲ ವಲಯಗಳಿಂದ ಒತ್ತಾಯ ಕೇಳಿ ಬರುತ್ತಿದೆ. ಒಂದು ತಿಂಗಳವರೆಗೆ ಮುಂದಕ್ಕೆ ಹಾಕಬೇಕೆಂದು ಪಶ್ಚಿಮ ಬಂಗಾಳದ ಹಣಕಾಸು ಸಚಿವ ಅಮಿತ್‌ ಮಿತ್ರಾ ಅವರೂ ಅಭಿಪ್ರಾಯಪಟ್ಟಿದ್ದರು.

ಪ್ರತಿ ತಿಂಗಳೂ 300 ಕೋಟಿಗಳಷ್ಟು  ಬೆಲೆಪಟ್ಟಿಗಳನ್ನು ನಿರ್ವಹಿಸಬೇಕಾದ ಐ.ಟಿ ವ್ಯವಸ್ಥೆಯು ಪೂರ್ಣಪ್ರಮಾಣದಲ್ಲಿ ಸನ್ನದ್ಧಗೊಂಡಿಲ್ಲ. ಈ ಕಾರಣಕ್ಕೆ ಜಿಎಸ್‌ಟಿ ಮುಂದೂಡಿಕೆಯಾಗಲಿದೆ ಎನ್ನುವ ಊಹಾಪೋಹಗಳು ಕೇಳಿ ಬರುತ್ತಿವೆ.

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ನೇತೃತ್ವದಲ್ಲಿನ ಜಿಎಸ್‌ಟಿ ಮಂಡಳಿಯು ಈಗಾಗಲೇ 1,200 ಸರಕು ಮತ್ತು 500 ಸೇವೆಗಳ ತೆರಿಗೆ ದರಗಳನ್ನು ಅಂತಿಮಗೊಳಿಸಿದೆ.

‘ಕೆಲವರು ಜಿಎಸ್‌ಟಿ ಜಾರಿಗೆ  ಸಿದ್ಧ ರಾಗಿಲ್ಲ ಎಂದೇ ಹೇಳುತ್ತಾರೆ. ಜುಲೈ 1ರ ಗಡುವಿನ ಬಗ್ಗೆ ಬೇರೆ ಆಯ್ಕೆಗಳೇ ಇಲ್ಲ. ಪ್ರತಿಯೊಬ್ಬರೂ ಸಿದ್ಧರಾಗಿರಲೇಬೇಕು.  ಅದಕ್ಕೆ ಪ್ರಾಮಾಣಿಕ ಉದ್ದೇಶ ಇರಬೇಕಷ್ಟೆ’ ಎಂದು ಜೇಟ್ಲಿ   ಅವರು ಅಭಿಪ್ರಾಯಪಟ್ಟಿದ್ದರು.

****

ಜಿಎಸ್‌ಟಿ ಜಾರಿ ವಿಳಂಬವಾಗಲಿದೆ ಎನ್ನುವ ಗಾಳಿ ಸುದ್ದಿಗಳೆಲ್ಲ ಆಧಾರರಹಿತ. ದಯವಿಟ್ಟು ಅವುಗಳನ್ನು ನಂಬಬೇಡಿ

ಹಸ್ಮುಖ ಆಧಿಯಾ, ರೆವಿನ್ಯೂ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry