ಸೋಮವಾರ, ನವೆಂಬರ್ 29, 2021
20 °C
ವಸತಿ ಸಮುಚ್ಚಯದಲ್ಲಿ ಘಟನೆ

ಲಂಡನ್: ಭಾರಿ ಬೆಂಕಿ ಅವಘಡ

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್: ಭಾರಿ ಬೆಂಕಿ ಅವಘಡ

ಲಂಡನ್: ಪಶ್ಚಿಮ ಲಂಡನ್‌ನ ವಸತಿ ಸಮುಚ್ಚಯವೊಂದರಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿ ಕನಿಷ್ಠ 12 ಮಂದಿ ಮೃತರಾಗಿದ್ದು ಐವತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇನ್ನೂ ಹಲವರು ಕಟ್ಟಡದ ಒಳಗಡೆ ಸಿಲುಕಿದ್ದಾರೆ.ಲ್ಯಾಮಿಟರ್ ರಸ್ತೆಯ ಲ್ಯಾಂಕೆಸ್ಟರ್ ವೆಸ್ಟ್ ಎಸ್ಟೇಟ್‌ನಲ್ಲಿರುವ ಗ್ರೆನ್‌ಫೆಲ್ ಟವರ್‌ನಲ್ಲಿ ಬುಧವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ.‘ಕಟ್ಟಡದ ವಿಸ್ತಾರ ಮತ್ತು ಸಂಕೀರ್ಣತೆಯ ಕಾರಣದಿಂದ ಈಗಲೇ ಸಾವಿನ ಸಂಖ್ಯೆಯನ್ನು ಖಚಿತಪಡಿಸಲು ಸಾಧ್ಯವಿಲ್ಲ’ ಎಂದು ಅಗ್ನಿಶಾಮಕ ಪಡೆಯ ಮುಖ್ಯಸ್ಥ ಡ್ಯಾನಿ ಕಾಟನ್ ತಿಳಿಸಿದ್ದಾರೆ.

‘ಹಲವರು ಸಾವನ್ನಪ್ಪಿದ್ದು,  ಐವತ್ತು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ. ಆದಷ್ಟು ಬೇಗ ಸಂತ್ರಸ್ತರ ಕುಟುಂಬದವರನ್ನು ಸಂಪರ್ಕಿಸುತ್ತೇವೆ’ ಎಂದು ಮೆಟ್ರೊಪಾಲಿಟನ್ ಪೊಲೀಸ್ ಕಮಾಂಡರ್ ಸ್ಟುವರ್ಟ್ ಕಂಡಿ ತಿಳಿಸಿದ್ದಾರೆ.

‘ಅನಾಹುತದ ನಂತರ ಹಲವರು ನಾಪತ್ತೆಯಾಗಿದ್ದಾರೆ’ ಎಂದು ಲಂಡನ್‌ ಮೇಯರ್ ಸಾದಿಕ್ ಖಾನ್ ತಿಳಿಸಿದ್ದಾರೆ. ಅವಘಡದ ಕುರಿತು ತನಿಖೆ ನಡೆಯಬೇಕು ಎಂದಿದ್ದಾರೆ.

ನಾಪತ್ತೆಯಾದವರನ್ನು ಸಂಪರ್ಕಿಸಲು ಅವರ ಸಂಬಂಧಿಕರು ಸಾಮಾಜಿಕ ಜಾಲತಾಣಗಳ ಮೊರೆಹೋಗುತ್ತಿದ್ದಾರೆ.ಕಟ್ಟಡದ ಇಪ್ಪತ್ತು ಮಹಡಿಗಳಲ್ಲಿ ಮನೆಗಳಿದ್ದು, ನಾಲ್ಕು ಮಹಡಿಗಳನ್ನು ಸಮುದಾಯಭವನಕ್ಕೆ ಮೀಸಲಿಡಲಾಗಿದೆ. ಕಳೆದ ವರ್ಷವಷ್ಟೇ ಕಟ್ಟಡದ ನವೀಕರಣ ಕಾರ್ಯ ಪೂರ್ಣಗೊಂಡಿತ್ತು. ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

‘ಅಗ್ನಿ ಅನಾಹುತ ತಡೆಯುವ ವ್ಯವಸ್ಥೆಯಲ್ಲಿ ಗಮನಾರ್ಹ ಲೋಪ ಉಂಟಾಗಿದೆ’ ಎಂದು ಅಗ್ನಿ ಶಾಮಕ ದಳ ಹೇಳಿದೆ.

ಸಹಾಯಕ್ಕಾಗಿ ಕೂಗು

‘ಕಟ್ಟಡದೊಳಗೆ ಸಿಲುಕಿಕೊಂಡವರು ಸಹಾಯಕ್ಕಾಗಿ ಕಿರುಚುತ್ತಿದ್ದರು. ತಮ್ಮ ಮಕ್ಕಳನ್ನು ಉಳಿಸಿ ಎಂದು ಕೂಗುತ್ತಿದ್ದರು. ಕೆಲವರು ಕಟ್ಟಡದಿಂದ ಪಾರಾಗಲು ಚಾದರಗಳನ್ನು ಬಳಸುತ್ತಿದ್ದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ.‘ಕಟ್ಟಡದ ತುದಿಯಲ್ಲಿ ಬೆಳಕು ಕಂಡಾಗ ಅದು ಬ್ಯಾಟರಿ ಅಥವಾ ಮೊಬೈಲ್ ಬೆಳಕು ಇರಬಹುದು ಎಂದು ಭಾವಿಸಿದ್ದೆವು. ಕಟ್ಟಡದ ಒಳಗೆ ಸಿಲುಕಿಕೊಂಡವರು ಕಿಟಕಿಯಿಂದ ಇಣುಕುತ್ತಿದ್ದರು. ಅವರಲ್ಲಿ ಕೆಲವರು ಮಕ್ಕಳನ್ನು ಎತ್ತಿಕೊಂಡಿದ್ದರು’ ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ಹೇಳಿದರು.ಮಗು ರಕ್ಷಣೆಗಾಗಿ ಮೇಲಿನಿಂದ ಎಸೆದ ತಾಯಿ

ಮಗುವನ್ನು ರಕ್ಷಿಸುವ ಭರದಲ್ಲಿ ಹತಾಶ ತಾಯಿಯೊಬ್ಬಳು, ಕೆಳಗೆ ನೆರೆದಿದ್ದ ಜನರತ್ತ ಒಂಬತ್ತು ಅಥವಾ ಹತ್ತನೇ ಮಹಡಿಯ ಕಿಟಕಿಯಿಂದ ಮಗುವನ್ನು ಎಸೆದಿದ್ದಾರೆ. ತಕ್ಷಣ ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಆ ಮಗುವನ್ನು ಹಿಡಿದುಕೊಂಡಿದ್ದಾರೆ.

ಮತ್ತೊಬ್ಬ ತಾಯಿ ಐದು ಅಥವಾ ಆರನೇ ಮಹಡಿಯಿಂದ ಐದು ವರ್ಷದ ಮಗನನ್ನು ಎಸೆದಿದ್ದಾರೆ. ಆ ಮಗುವಿಗೆ ಹೆಚ್ಚೆಂದರೆ ಮೂಳೆ ಮುರಿದಿರಬಹುದು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.