ಭಯದಲ್ಲೇ ಸಾಗುತ್ತಿದೆ ವಿದ್ಯಾರ್ಥಿಗಳ ಕಲಿಕೆ

7
ಶಿಥಿಲಾವಸ್ಥೆ ತಲುಪಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಭಯದಲ್ಲೇ ಸಾಗುತ್ತಿದೆ ವಿದ್ಯಾರ್ಥಿಗಳ ಕಲಿಕೆ

Published:
Updated:
ಭಯದಲ್ಲೇ ಸಾಗುತ್ತಿದೆ ವಿದ್ಯಾರ್ಥಿಗಳ ಕಲಿಕೆ

ಬೆಂಗಳೂರು: ಮಾಗಡಿ ರಸ್ತೆಯ ಮಾಚೋಹಳ್ಳಿಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಥಿಲಾವಸ್ಥೆ ತಲುಪಿದ್ದು, ಯಾವಾಗ ಸೂರು ತಲೆ ಮೇಲೆ ಬೀಳುತ್ತದೆಯೋ ಎನ್ನುವ ಭಯದಲ್ಲಿ ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ.

ಅಂಗನವಾಡಿ ಮಕ್ಕಳಿಗಾಗಿ ಮೀಸಲಿರುವ ತರಗತಿಗಳ ಹೆಂಚು ಇತ್ತೀಚೆಗೆ ಬಿದ್ದುಹೋಗಿದೆ. ಶಾಲೆಯ ಮೇಲ್ಚಾವಣಿ ಸೋರುತ್ತಿದೆ. ಬಿಸಿಯೂಟ ಸಿದ್ಧಗೊಳಿಸುವ ಕೊಠಡಿ ಪಕ್ಷಿಗಳ ಗೂಡಾಗಿದೆ.

ಒಂದರಿಂದ ಎಂಟನೇ ಇರುವ ಈ ಶಾಲೆಯಲ್ಲಿ  ಒಟ್ಟು 110 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಶಾಲಾ ಕಟ್ಟಡದಲ್ಲಿ ಒಟ್ಟು 5 ಕೊಠಡಿಗಳಿದ್ದು ಅದರಲ್ಲಿ 2 ಕೊಠಡಿಗಳ ಛಾವಣಿ ಕುಸಿದಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಉಳಿದ 3ರಲ್ಲಿ ಒಂದು ಕೊಠಡಿ ಕಂಪ್ಯೂಟರ್‌ ಕಲಿಕೆಗಾಗಿ ಮೀಸಲಿರಿಸಲಾಗಿದೆ. ಕೇವಲ ಎರಡು ಕೊಠಡಿಯಲ್ಲಿ 110 ವಿದ್ಯಾರ್ಥಿಗಳು ಓದಬೇಕಾದ ಶೋಚನೀಯ ಸ್ಥಿತಿ ಈ ಶಾಲೆಯಲ್ಲಿದೆ.

5 ರಿಂದ 8ನೇ ತರಗತಿಯ ಕೆಲವು ವಿದ್ಯಾರ್ಥಿಗಳನ್ನು ಈಗಿರುವ ಶಾಲೆಯಿಂದ 1 ಕಿ.ಮೀ ದೂರದ ಮಾಚೋಹಳ್ಳಿ ಕಾಲೋನಿಯ ಶಾಲೆಗೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸಲಾಗುತ್ತಿದೆ. ಅಲ್ಲಿಯೂ ಕೇವಲ 4 ಜನ ಶಿಕ್ಷಕರು ಇದ್ದಾರೆ.

‘ತಮ್ಮ ಮಕ್ಕಳು ಶಾಲೆಗಳಲ್ಲಿ ಓದಿ ವಿದ್ಯಾವಂತರಾಗಲಿ ಎನ್ನುವ ಕನಸ್ಸು ಕಂಡಿರುವ ಪೋಷಕರು ಈ ಶಾಲೆಯ ದುಃಸ್ಥಿತಿಯನ್ನು ಕಂಡು ತಮ್ಮ ಮಕ್ಕಳನ್ನು ಈ ಶಾಲೆಯಲ್ಲಿ ಓದಿಸಲು ಹಿಂದೇಟು ಹಾಕುತ್ತಿದ್ದಾರೆ. ದಿನದಿಂದ ದಿನಕ್ಕೆ ಮಕ್ಕಳ ಸಂಖ್ಯೆಯೂ ಕಡಿಮೆಯಾಗುತ್ತಿದೆ’ ಎಂದು ಶಾಲಾ ಸಿಬ್ಬಂದಿಯೊಬ್ಬರು ತಿಳಿಸಿದರು.

‘ನಿತ್ಯ ಭಯದ ಬೀತಿಯಲ್ಲಿ ನಾವು ಪಾಠ ಮಾಡಬೇಕಾದ ಪರಿಸ್ಥಿತಿ ಇದೆ. ಮಳೆ ಬಂದಾಗ ಸೋರುತ್ತದೆ. ಗೋಡೆಗಳು ಬಿರುಕು ಬಿಟ್ಟಿವೆ, ಯಾವಾಗ ಬೀಳುತ್ತದೆಯೊ ಎನ್ನುವ ಭಯ ನಮ್ಮಲ್ಲಿದೆ’ ಎಂದು ಶಿಕ್ಷಕರು ಆತಂಕ ವ್ಯಕ್ತಪಡಿಸಿದರು. ಶಾಲೆಯನ್ನು ಪುನರ್‌ ನಿರ್ಮಾಣ ಮಾಡಬೇಕೆಂದು ಸ್ಥಳೀಯರು ಶಾಸಕ ಎಸ್.ಆರ್.ವಿಶ್ವನಾಥ್‌ ಅವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಬೆಂಗಳೂರು ಉತ್ತರ ಡಿಡಿಪಿಐ ಅಬ್ದುಲ್ ವಾಜಿದ್ ಖಾಜಿ, ‘ಶಾಲೆಯ ಮುಖ್ಯೋಪಾದ್ಯಾಯರು ಈ ಕುರಿತಾಗಿ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಮಾಹಿತಿ ಪಡೆದುಕೊಂಡು ತಕ್ಷಣವೇ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗೋವಿಂದೇಗೌಡ, ‘ಕಟ್ಟಡ ಇರುವ ಜಾಗದ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಹಾಗಾಗಿ ಯಾವುದೇ ನಿರ್ವಹಣಾ ಕೆಲಸಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ತೀರ್ಪಿನ ನಂತರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ’ ಎಂದು ತಿಳಿಸಿದರು.

‘ಕನ್ನಡ ಉಳಿಸಿ, ಕನ್ನಡ ಬೆಳೆಸಿ ಎಂದು ನಿತ್ಯ ಕಿರುಚಾಡುವ ಸಂಘಟನೆಗಳು ನೂರಾರು ಇವೆ. ನಮ್ಮ ಗ್ರಾಮದ ಕನ್ನಡ ಶಾಲೆ ಉಳಿಸಲು ಯಾರೂ ಪ್ರಯತ್ನಿಸುತ್ತಿಲ್ಲ’ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry