ರೈತರ ಸಂಪರ್ಕಕ್ಕೆ ಸಾಮಾಜಿಕ ಜಾಲತಾಣ

7

ರೈತರ ಸಂಪರ್ಕಕ್ಕೆ ಸಾಮಾಜಿಕ ಜಾಲತಾಣ

Published:
Updated:
ರೈತರ ಸಂಪರ್ಕಕ್ಕೆ ಸಾಮಾಜಿಕ ಜಾಲತಾಣ

ಭದ್ರಾವತಿ: ಕೃಷಿ ಇಲಾಖೆ ಆರಂಭಿಸಿದ ಫೇಸ್‌ಬುಕ್ ಪುಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲಾಖೆ ಈ ಪುಟದಿಂದಲೇ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಲು ಮುಂದಾಗಿದೆ.

ರಾಜ್ಯದಲ್ಲೇ ಪ್ರಥಮ ಬಾರಿಗೆ ಕೃಷಿಗೆ ಸಂಬಂಧಿಸಿದ ಭದ್ರಾವತಿಯ ಫೇಸ್‌ಬುಕ್‌ ಪುಟವನ್ನು 2016ರಲ್ಲಿ ಆರಂಭಿಸಿದ್ದರು. ಕೃಷಿ ಇಲಾಖೆಯ ಮಾಹಿತಿಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡರು. ಇದಕ್ಕೆ ರೈತರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕೃಷಿ ಇಲಾಖೆ ನಡೆಸುವ ಕಾರ್ಯಕ್ರಮಗಳ ಮಾಹಿತಿ, ಸರ್ಕಾರಿ ಸೌಲಭ್ಯಗಳ ವಿವರ, ವಿವಿಧ ಬೇಸಾಯ ಪದ್ಧತಿ, ಆಧುನಿಕ ತಂತ್ರಜ್ಞಾನದ ಬಳಕೆ... ಹೀಗೆ ಹತ್ತು ಹಲವು ವಿಚಾರಗಳನ್ನು ಫೇಸ್‌ಬುಕ್‌ ಹಾಗೂ ವಾಟ್ಸ್‌ಆ್ಯಪ್‌ ಮೂಲಕ ನೀಡಲಾಗುತ್ತಿದೆ. ಇದರಿಂದ ರೈತರಲ್ಲಿ ಕೃಷಿಯ ಬಗೆಗಿನ ಆಸಕ್ತಿ ಹೆಚ್ಚಾಗುತ್ತಿದೆ.

‘ನಮ್ಮ ಈ ವಿನೂತನ ಕಾರ್ಯಕ್ಕೆ ಪ್ರೇರಕ ಶಕ್ತಿಯಾದವರು ಉಪ ಕೃಷಿ ನಿರ್ದೇಶಕರಾದ ಡಾ.ಕೆ.ಪಿ.ಅರುಣ. ಅವರ ಮಾರ್ಗದರ್ಶನ ಪಡೆದು ಆರಂಭಿಸಿದ ಸಾಮಾಜಿಕ ಜಾಲತಾಣ ಈಗ ಹೆಚ್ಚು ಪ್ರಚಲಿತದಲ್ಲಿದೆ’ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಎಚ್.ವಿ.ನಾಗರಾಜ್. ಫೇಸ್‌ಬುಕ್‌ ಪುಟ ನಿರ್ವಹಣೆಯಲ್ಲಿ ಕೃಷಿ ಅಧಿಕಾರಿ ಪೃಥ್ವಿ, ತಾಂತ್ರಿಕ ವ್ಯವಸ್ಥಾಪಕ ರಾಕೇಶ್ ಅವರು ನಡೆಸಿದ ಪ್ರಯತ್ನ ವಿಶೇಷ. ಈಗ ಇಲಾಖೆಯು ಪ್ರತಿ ಪಂಚಾಯ್ತಿ ಮಟ್ಟದಲ್ಲಿ ‘ರೈತಸ್ನೇಹಿ’ ವ್ಯಾಟ್ಸ್ಆ್ಯಪ್ ಗುಂಪುಗಳನ್ನು ಆರಂಭಿಸಲು ಮುಂದಾಗಿದೆ ಎನ್ನುತ್ತಾರೆ ನಾಗರಾಜ್.

‘ಸದ್ಯ ನಮ್ಮ ಫೇಸ್‌ಬುಕ್ ಪುಟದಲ್ಲಿ 38 ವಿಡಿಯೊ ತುಣುಕುಗಳು, 300ಕ್ಕೂ ಅಧಿಕ ಛಾಯಾಚಿತ್ರ ಹಾಗೂ 200ಕ್ಕೂ ಅಧಿಕ ಲೇಖನಗಳಿವೆ. ರೈತರಿಗೆ ಉಪಯುಕ್ತ ಮಾಹಿತಿಯೂ ಇದೆ. 14,924 ಮಂದಿ ಫೇಸ್‌ಬುಕ್‌ ಪುಟವನ್ನು ನಿರಂತರವಾಗಿ ವೀಕ್ಷಿಸುತ್ತಿದ್ದಾರೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ನಾಗರಾಜ್.

ತಾಂತ್ರಿಕ ವ್ಯವಸ್ಥಾಪಕ ಬಿ.ರಾಕೇಶ್ ವಿವರ ನೀಡಿ, ‘13,490 ಮಂದಿ ಇಲಾಖೆಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾವು ಹಾಕಿರುವ ‘ರೈನ್ ಗನ್’ ವಿಡಿಯೊ ತುಣುಕು 13,24,000 ಬಾರಿ ವೀಕ್ಷಿಣೆಗೊಂಡಿದೆ. ಇದು ನಮ್ಮ ಕೆಲಸಕ್ಕೆ ಪ್ರೇರಣೆ ಮತ್ತು ವೇಗ ನೀಡಿದೆ’ ಎಂದರು.

‘ವರ್ಷದ ವಿವಿಧ ಋತುಗಳಲ್ಲಿ ಅನುಸರಿಸಬೇಕಾದ ಬೆಳೆ ಪದ್ಧತಿ, ಹವಾಮಾನ ವೈಪರೀತ್ಯ, ಮಳೆಯ ಮಾಹಿತಿ, ಅಡಿಕೆ, ಬಾಳೆ ಬೇಸಾಯ ಪದ್ಧತಿ, ಆಧುನಿಕ ತಾಂತ್ರಿಕ ಸಲಕರಣೆಗಳ ವಿಚಾರದ ಮಾಹಿತಿಗೆ ಹೆಚ್ಚಿನ ಪ್ರತಿಕ್ರಿಯೆ ಸಿಕ್ಕಿದೆ’ ಎನ್ನುತ್ತಾರೆ ರಾಕೇಶ್.

ಮೊದಲ ಹಂತವಾಗಿ ಕಸಬಾ ಹೋಬಳಿಯಲ್ಲಿ ವಾಟ್ಸ್‌ಆ್ಯಪ್‌ ಗುಂಪು ಆರಂಭಿಸಲಾಗಿತ್ತು. ಈಗ ತಾಲ್ಲೂಕಿನ ಎಲ್ಲ ಆರು ಹೋಬಳಿಗಳಲ್ಲಿ ವಾಟ್ಸ್ಅ್ಯಪ್ ತಂಡವನ್ನು ಆರಂಭಿಸಿ, ರೈತರಿಗೆ ಮಾಹಿತಿ ಒದಗಿಸಲಾಗುತ್ತಿದೆ.

ಕೆಎಸ್‌ಡಿಎ ಭದ್ರಾವತಿ ಫೇಸ್‌ಬುಕ್‌ ಖಾತೆಯಲ್ಲಿ (facebook.com/ KSDABhadravathi/) ಕೃಷಿ ಇಲಾಖೆಯ ಸಮಗ್ರ ಮಾಹಿತಿ ಸಿಗುತ್ತಿದೆ.  ಇನ್ನಷ್ಟು ಮಾಹಿತಿ ತಿಳಿಯಲು ಆಸಕ್ತರು ಇಲಾಖಾ ಕಚೇರಿಗೆ ಭೇಟಿ ನೀಡಬಹುದು ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕರು.

–ಕೆ.ಎನ್. ಶ್ರೀಹರ್ಷ

*

ಹೆಚ್ಚಿನ ಕಾಲ ಜಮೀನಿನಲ್ಲಿ ಕಳೆಯುವ ನಾನು ಮೊಬೈಲ್ ಮೂಲಕ ಕೃಷಿ ಮಾಹಿತಿ ಪಡೆಯುತ್ತೇನೆ. ಇದರಿಂದ ಕೃಷಿ ಕುರಿತಾದ ಆಸಕ್ತಿ ಹೆಚ್ಚಾಗಿದೆ.

-ಪಿ.ರವಿಕುಮಾರ್, ರೈತ, ಗುಡ್ಡದನೇರಳೆಕೆರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry