ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯತ್ನಾಳ ಬಿಜೆಪಿ ಮರುಸೇರ್ಪಡೆ ಬೇಡ

ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕೋರ್ ಕಮಿಟಿ ನಿರ್ಣಯ
Last Updated 15 ಜೂನ್ 2017, 7:16 IST
ಅಕ್ಷರ ಗಾತ್ರ

ವಿಜಯಪುರ: ‘ವಿಧಾನ ಪರಿಷತ್‌ನ ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ ಯತ್ನಾಳರ ಬಿಜೆಪಿ ಮರು ಸೇರ್ಪಡೆ ಪ್ರಕ್ರಿಯೆ ಬೇಡವೇ ಬೇಡ’ ಎಂಬ ನಿರ್ಣಯವನ್ನು ಜಿಲ್ಲಾ ಕೋರ್‌ ಕಮಿಟಿ ಜೂನ್‌ 2ರ ಶುಕ್ರವಾರ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಿದೆ.

ಯತ್ನಾಳ ಅವರನ್ನು ಪಕ್ಷಕ್ಕೆ ಮರಳಿ ಕರೆ ತರುವ ಯತ್ನಗಳು ಮೇ ಅಂತ್ಯದಲ್ಲಿ ರಾಜ್ಯದ ವರಿಷ್ಠರ ಅಂಗಳದಲ್ಲಿ ಚುರುಕು ಪಡೆಯುತ್ತಿದ್ದಂತೆ, ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ ನಿವಾಸದಲ್ಲಿ ಸಭೆ ಸೇರಿದ ಜಿಲ್ಲಾ ಕೋರ್‌ ಕಮಿಟಿ, ತನ್ನ ಒಕ್ಕೊರಲ ನಿರ್ಧಾರಕ್ಕೆ ಸಮ್ಮತಿಯ ಮುದ್ರೆಯೊತ್ತಿ, ವರಿಷ್ಠರಿಗೆ ಲಿಖಿತವಾಗಿ ತಿಳಿಸಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ರವಾನಿಸಿರುವ ಜಿಲ್ಲಾ ಕೋರ್‌ ಕಮಿಟಿ ನಿರ್ಣಯದ ಲಿಖಿತ ಪತ್ರದ ಪ್ರತಿಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ಇದೇ ಪ್ರತಿಯನ್ನು ವಿಧಾನ ಮಂಡಲದ ಉಭಯ ಸದನಗಳ ಪಕ್ಷದ ನಾಯಕರಾದ ಜಗದೀಶ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ಮಾಜಿ ಅಧ್ಯಕ್ಷ ಪ್ರಹ್ಲಾದ ಜೋಶಿ, ರಾಷ್ಟ್ರೀಯ ಕಾರ್ಯದರ್ಶಿ ಸಂತೋಷ್‌ಜಿ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ, ಎನ್‌. ರವಿಕುಮಾರ್, ಅರವಿಂದ ಲಿಂಬಾವಳಿ, ಶೋಭಾ ಕರಂದ್ಲಾಜೆ ಅವರಿಗೂ ರವಾನಿಸಲಾಗಿದೆ.

ಅರುಣ ಶಹಾಪುರ ನಿವಾಸದಲ್ಲಿ ನಡೆದ ಕೋರ್‌ ಕಮಿಟಿ ಸಭೆಯಲ್ಲಿ ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಜಿಲ್ಲಾ ಘಟಕದ ಅಧ್ಯಕ್ಷ ವಿಠ್ಠಲ ಕಟಕದೊಂಡ, ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್‌.ಕೆ. ಬೆಳ್ಳುಬ್ಬಿ, ಶಾಸಕರಾದ ರಮೇಶ ಭೂಸ ನೂರ, ಶಹಾಪುರ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಚಂದ್ರಶೇಖರ ಕವಟಗಿ, ಬೆಳಗಾವಿ ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಆರ್‌.ಎಸ್‌. ಪಾಟೀಲ (ಕೂಚಬಾಳ), ರವಿಕಾಂತ ಬಗಲಿ, ಸಂಗರಾಜ ದೇಸಾಯಿ, ವಿವೇಕಾನಂದ ಡಬ್ಬಿ ಉಪಸ್ಥಿತರಿದ್ದು, ಈ ನಿರ್ಣಯ ಪತ್ರಕ್ಕೆ ಸಹಿ ಹಾಕಿದ್ದಾರೆ.

ನಿರ್ಣಯ: ‘ಜಿಲ್ಲಾ ಕೋರ್‌ ಕಮಿಟಿ ಸಭೆ ಯಲ್ಲಿ ಪ್ರಮುಖವಾಗಿ ಎರಡು ನಿರ್ಣಯ ಅಂಗೀಕರಿಸಲಾಗಿದೆ. ಚುನಾವಣಾ ವರ್ಷದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಲು ಜಿಲ್ಲೆಯ ವ್ಯಾಪ್ತಿಯಲ್ಲಿ ಹಾಲಿ–ಮಾಜಿ ಶಾಸಕರು ತುದಿಗಾಲಲ್ಲಿ ನಿಂತಿದ್ದಾರೆ. ಇದೇ ಸಂದರ್ಭ ಕೆಲ ಮುಖಂಡರು ಸಹ ಸೇರ್ಪಡೆಗೆ ಉತ್ಸುಕರಾಗಿದ್ದಾರೆ.

ಇವರನ್ನು ರಾಜ್ಯ ಘಟಕದ ವರಿಷ್ಠರು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳುವ ಮುನ್ನ ಆಯಾ ವಿಧಾನಸಭಾ ಕ್ಷೇತ್ರದ ಮಂಡಲ ಪ್ರಮುಖರ ಅಭಿಪ್ರಾಯ, ಹಾಗೂ ಜಿಲ್ಲಾ ಕೋರ್‌ ಕಮಿಟಿಯ ನಿರ್ಧಾರಕ್ಕೆ ಮನ್ನಣೆ ನೀಡಬೇಕು. ಕಾರ್ಯಕರ್ತರ ಸಲಹೆ ಪಡೆಯಬೇಕು. ಎರಡನೇಯದಾಗಿ ಯತ್ನಾಳರ ಬಿಜೆಪಿ ಮರು ಸೇರ್ಪಡೆ ಪ್ರಕ್ರಿಯೆ ಬೇಡವೇ ಬೇಡ ಎಂಬ ಖಡಕ್‌ ನಿರ್ಣಯ ಅಂಗೀಕರಿಸಲಾಗಿದೆ.

ಯತ್ನಾಳರ ಕುರಿತಂತೆ ಪತ್ರದಲ್ಲಿ ಸುದೀರ್ಘ ವಿವರಣೆ ನೀಡಲಾಗಿದೆ. ಪಕ್ಷ ಇದುವರೆಗೂ ಬಸನಗೌಡರಿಗೆ ನೀಡಿ ರುವ ಅಧಿಕಾರದ ಸ್ಥಾನಮಾನ, ಪಕ್ಷಕ್ಕೆ ಅವರು ನೀಡಿರುವ ಕೊಡುಗೆ ಏನು ?, ಅವರನ್ನು ಯಾವ ಉದ್ದೇಶಕ್ಕಾಗಿ ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಬೇಕು ?, ಇದರಿಂದ ಲಾಭವೋ ? ಹಾನಿಯೋ ? ಎಂಬುದನ್ನು ವಿವರವಾಗಿ ತಿಳಿಸಲಾಗಿದೆ.

ಈ ಹಿಂದೆ ಬಿ.ಎಸ್.ಯಡಿಯೂರಪ್ಪ, ಸದಾನಂದ ಗೌಡ, ಕೇಶವ ಕೃಪಾ, ಸಂಘ ಪರಿವಾರ, ಇದೀಗ ಜಗದೀಶ ಶೆಟ್ಟರ್‌, ಪ್ರಹ್ಲಾದ ಜೋಶಿ ವಿರುದ್ಧ ನಿರಂತರವಾಗಿ ನಡೆಸುತ್ತಿರುವ ಟೀಕೆಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಪತ್ರದ ಕುರಿತು ರಾಜ್ಯ ಕಾರ್ಯಕಾರಿಣಿಯಲ್ಲಿ ಚರ್ಚೆಯೂ ನಡೆಯಲಿದೆ’ ಎಂದೂ ಜಿಲ್ಲೆಯ ಸಂಘ ಪರಿವಾರ ಮೂಲದ ಬಿಜೆಪಿಯ ಪ್ರಭಾವಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಗೂಳಪ್ಪ ಶಟಗಾರ ಸೇರ್ಪಡೆ?
ಮಹಾನಗರ ಪಾಲಿಕೆಯ ಕಾಂಗ್ರೆಸ್‌ ಸದಸ್ಯ ಗೂಳಪ್ಪ ಶಟಗಾರ ಜೂನ್‌ 29 (ಗುರುವಾರ)ರಂದು ವಿಜಯಪುರದಲ್ಲಿ ನಡೆಯಲಿರುವ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸಮ್ಮುಖ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಮಾರೋಪ 29ಕ್ಕೆ: ಯಡಿಯೂರಪ್ಪ ನಡೆಸುತ್ತಿರುವ ರಾಜ್ಯ ಪ್ರವಾಸ ಇದೇ 29ರಂದು ಅಂತ್ಯಗೊಳ್ಳಲಿದ್ದು, ಬಬಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೃಹತ್ ಪ್ರಮಾಣದ ಸಮಾರೋಪ ಸಮಾರಂಭ ಆಯೋಜಿಸಲು ಜೂನ್‌ 10 (ಶನಿವಾರ) ರಂದು ಜಿಲ್ಲಾ ಘಟಕದ ಅಧ್ಯಕ್ಷ ವಿಠ್ಠಲ ಕಟಕದೊಂಡ ಅವರ ತೋಟದ ನಿವಾಸದಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT