ಧನದಾಹದ ಮೂಲ ಯಾವುದು?

7

ಧನದಾಹದ ಮೂಲ ಯಾವುದು?

Published:
Updated:
ಧನದಾಹದ ಮೂಲ ಯಾವುದು?

ದಿನ ಬೆಳಗಾದರೆ ವೈದ್ಯರ ಧನದಾಹ, ನಿರ್ಲಕ್ಷ್ಯ, ಬೇಜವಾಬ್ದಾರಿತನ, ದುರಹಂಕಾರ ಕುರಿತ ಚರ್ಚೆ ಕೇಳಿಬರುತ್ತಿದೆ. ಹಲವು ‘ಪಥಿ’-ವೇದ-ಪ್ಯಾಕೇಜು-ಥೆರಪಿಗಳ ಸುಳಿಯಲ್ಲಿ ಕೊನೆಗೂ ರೋಗಿಗಳಿಗಾಗಿ ಆಸ್ಪತ್ರೆಗಳೋ, ಆಸ್ಪತ್ರೆ ನಡೆಯಲು ರೋಗಿಗಳಿರಬೇಕೋ ಗೊತ್ತಾಗದಷ್ಟು ಹಪಾಹಪಿತನ ಆವರಿಸಿದೆ.

ಸುತ್ತಲ ಸಮಾಜದ ಆಗುಹೋಗುಗಳಿಗೂ, ತಮಗೂ ಯಾವ ಸಂಬಂಧವೂ ಇಲ್ಲವೆಂಬಂತೆ ತಾವಾಯಿತು, ತಮ್ಮ ಗಾಜಿನ ಮನೆಯಾಯಿತು ಎಂಬಂತೆ ಬಹುತೇಕ ವೈದ್ಯರಿದ್ದಾರೆ. ಇದರ ನಡುವೆ ವೈದ್ಯರು, ಆಸ್ಪತ್ರೆಗಳ ಮೇಲೆ ನಿಯಂತ್ರಣ ಹೊಂದಲು ನಾನಾ ಹಿತಾಸಕ್ತಿಗಳ ಜನ ನಿರಂತರ ಪ್ರಯತ್ನಿಸುತ್ತಲೇ ಇದ್ದಾರೆ.

ಈಗ ತರಲುದ್ದೇಶಿಸಿರುವ ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ)- 2017’ ಮಸೂದೆ ಅಂತಹ ಒಂದು ಕಾನೂನಾತ್ಮಕ ಪ್ರಯತ್ನವಾಗಿದೆ. ಮೇಲ್ನೋಟಕ್ಕೆ ಇದು ಭಾರೀ ಕ್ರಾಂತಿಕಾರಕ ಎಂದು ಕಾಣಿಸಿದರೂ ಆಳದಲ್ಲಿ ರೋಗಿಗಳಿಗೆ ಕಡಿಮೆ ಬೆಲೆಯ ಉತ್ತಮ ಆರೋಗ್ಯಸೇವೆ ನಿಲುಕದಂತೆ ಮಾಡುವ ಲೈಸೆನ್ಸ್ ರಾಜ್ ಸೃಷ್ಟಿಸುವ ಕ್ರಮವೇ ಆಗಿದೆ.

ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಲು ಕಾಯ್ದೆಗಳನ್ನು ರೂಪಿಸುವುದು, ಆ ಮೂಲಕ ರೋಗಿಗಳಿಗೆ ಉತ್ತಮ, ಸೂಕ್ತ, ಸಕಾಲದ ಚಿಕಿತ್ಸೆ ಸಿಗಬೇಕೆಂದು ಪ್ರಯತ್ನಿಸುವುದು ಶ್ಲಾಘನೀಯ ಕಳಕಳಿ. ಆದರೆ ಈಗಾಗಲೇ ಇರುವ ಕಾನೂನುಗಳು, ನಿಯಂತ್ರಣ ಪ್ರಾಧಿಕಾರಗಳು ದುರಾಸೆಯ ವೈದ್ಯರನ್ನು ಶಿಕ್ಷಿಸಲು; ಜನಪರವಾಗಿರುವಂತೆ ಒತ್ತಾಯಿಸಲು ಸಾಕಿತ್ತು.

ಆದರೂ ಯಾಕೆ ಸರ್ಕಾರ ‘ರೇಟ್ ಫಿಕ್ಸ್’ ಮಾಡಲು, ತಪ್ಪಿತಸ್ಥರನ್ನು ‘ಶಿಕ್ಷಿಸಲು’ ಮತ್ತೆಮತ್ತೆ ಕಾನೂನು ತರುವ ಮಾತನಾಡುತ್ತಿದೆ? ಇರುವ ಕಾನೂನುಗಳು ಸ್ಟೆತ್, ಸಿರಿಂಜು ಹಿಡಿದ ಕೈಯ ಹಿಂದಿನ ಹೃದಯವನ್ನು ಮಾನವೀಯಗೊಳಿಸಲು ಸಾಧ್ಯವಾಗಲಿಲ್ಲ ಯಾಕೆ?  ಇದಕ್ಕೆ ಅಂತಹ ವೈದ್ಯರನ್ನು ಸೃಷ್ಟಿಸಿದ ವ್ಯವಸ್ಥೆಯ ಕಡೆಗೂ ನೋಡಬೇಕಾಗುತ್ತದೆ.

ವೈದ್ಯರ ಧನದಾಹದ ಮೂಲ ಅಧ್ಯಾತ್ಮ- ಶಿಕ್ಷಣ- ತಾಯಗರ್ಭ ಮೊದಲುಗೊಂಡು ಎಲ್ಲ ‘ಸೇವೆ’ಗಳೂ ವಾಣಿಜ್ಯೀಕರಣಗೊಂಡ ಕಾಲದಲ್ಲಿದೆ; ಕ್ಯಾಪಿಟೇಷನ್ ಮೆಡಿಕಲ್ ಕಾಲೇಜುಗಳಲ್ಲಿದೆ; ‘ಶ್ರೇಣೀಕೃತ’ ಸೇವೆಯನ್ನು ಮಾನ್ಯ ಮಾಡಿರುವ ಸಮಾಜದಲ್ಲಿದೆ; ಇನ್ಶೂರೆನ್ಸ್ ಕಂಪೆನಿಗಳಿಂದಲೇ ಬದುಕುವೆವೆನ್ನುವ, ಅತ್ಯಾಧುನಿಕ ನಿಖರ ಸೇವೆ ತಮ್ಮದೆನ್ನುವ ಕಾರ್ಪೊರೇಟ್ ಆಸ್ಪತ್ರೆಗಳ ಹುನ್ನಾರಗಳಲ್ಲಿದೆ.

ಕೋಟ್ಯಂತರ ರೂಪಾಯಿ ನೀವು ತೆರುವಿರಾದರೆ ಮೆರಿಟ್ಟೂ ಬೇಡ, ಮೀಸಲಾತಿಯೂ ಬೇಡ, ವೈದ್ಯರಾಗಬಹುದು. ಕ್ಯಾಪಿಟೇಷನ್ ಕಾಲೇಜುಗಳಲ್ಲಿ ಓದಬಲ್ಲಿರಾದರೆ ಗ್ರಾಮೀಣ ಸೇವೆ ನಿಮಗೆ ಕಡ್ಡಾಯವಲ್ಲ. ಹೀಗೆಂದು ಸಮಾಜವೇ ವೈದ್ಯವಿದ್ಯಾರ್ಥಿಗಳಿಗೆ ಹೇಳುತ್ತಿದೆ. ಇಡೀ ಸಮಾಜದ ನೈತಿಕ ಮಾನದಂಡವು ದುಡ್ಡೇ ಆಗಿರುವಾಗ ವೃತ್ತಿ ಘನತೆ ಮರೆತ ವೈದ್ಯರೂ ಅದೇ ದಾರಿಯಲ್ಲಿ ಮುಂದುವರೆದಿದ್ದಾರೆ.

ಆದರೆ ಇಷ್ಟು ಹೇಳಿದರೆ ವೈದ್ಯರಾಗಿ ನಮ್ಮ ಪಾಪ ಪರಿಹಾರವಾಗುವುದಿಲ್ಲ. ಕೆಲವು ಆಸ್ಪತ್ರೆಗಳಲ್ಲಿ ವೈದ್ಯಸೇವೆ ಎಷ್ಟು ವಾಣಿಜ್ಯೀಕರಣಗೊಂಡಿದೆಯೆಂದರೆ ಸೂಕ್ಷ್ಮ ಮನಸ್ಸಿನ ವೈದ್ಯರೂ ನಾಚಿಕೆಪಟ್ಟುಕೊಳ್ಳುವಂತಿದೆ. ವೈದ್ಯಬಂಧುಗಳು ತಾವೂ ಕೇವಲ ಮನುಷ್ಯರು, ಮಾಯಿಸುವ ಗುಣ ಪ್ರಕೃತಿಯದೇ ಹೊರತು ತಮ್ಮದಲ್ಲ ಎಂಬ ವಿನೀತಭಾವ ಮರೆತಿದ್ದಾರೆ. ಎಲ್ಲ ಆಸ್ತಿಗಿಂತ ಮಾನವೀಯ ಕಳಕಳಿಯೇ ದೊಡ್ಡದು ಎಂಬ ಹಿಪೊಕ್ರೆಟೀಸನ ಪಾಠ ಕಲಿತು ಮರೆತಿದ್ದಾರೆ.

ಬಾಬಾಗಳ ಬೂದಿಯಾಗಲೀ, ಮಠಮಂದಿರಗಳ ಹರಗುರುಚರಮೂರ್ತಿಗಳಾಗಲೀ ಕಾಯುವುದಕ್ಕಿಂತ ಹೆಚ್ಚು ತಮ್ಮನ್ನು ರೋಗಿಗಳ ಜೊತೆಗಿನ ಸಂಬಂಧವೇ ಕಾಯುತ್ತದೆ ಎಂದವರು ತಿಳಿಯದೇ ಹೋಗಿದ್ದಾರೆ. ಇಡೀ ಲೋಕದ ಎಲ್ಲ ರೋಗಿಗಳನ್ನು ತಾವೇ ನೋಡಿ, ತಾವೇ ಗುಣಪಡಿಸುವೆನೆನ್ನುವ ಕೀರ್ತಿಯ ಹಪಾಹಪಿಗೂ ಬಿದ್ದಿದ್ದಾರೆ.

ವೈದ್ಯಬಂಧುಗಳು ಸುಲಿಗೆಕೋರತನ ತೊರೆದು ಮಾನವೀಯಗೊಳ್ಳಲೇಬೇಕಾದ ಅನಿವಾರ್ಯ ಕಾಲ ಬಂದಿದೆ. ಒಂದಷ್ಟು ಸಮಯವನ್ನು ಸಮಾಜಕ್ಕಾಗಿಯೂ, ಕುಟುಂಬಕ್ಕಾಗಿಯೂ ಮೀಸಲಿಟ್ಟು ಮನುಷ್ಯರಾಗಬೇಕಿದೆ. ರೋಗಿಗಳಿಗೆ ಕಾಯಿಲೆ-ಮಾಹಿತಿಯನ್ನು ಸಾವಧಾನದಿಂದ ವಿವರಿಸಿ, ವರ್ತಿಸುವ ತಾಳ್ಮೆಯನ್ನು ವೈದ್ಯಕೀಯೇತರ ಚಟುವಟಿಕೆಗಳಿಂದ ಗಳಿಸಿಕೊಳ್ಳಬೇಕಿದೆ.

ಅದೇ ವೇಳೆ ಈಗ ಬರಲಿರುವ ಕಾನೂನು ಮತ್ತು ವೈದ್ಯಸೇವೆಯ ಇನ್ನೊಂದು ಮುಖವನ್ನೂ ಪರಿಶೀಲಿಸಬೇಕು. ರಾಜ್ಯ ಆರೋಗ್ಯ ಸೇವೆಯ ಶೇ  5ರಷ್ಟೂ ಪಾಲು ಹೊಂದಿರದ ಕಾರ್ಪೊರೇಟ್ ಆಸ್ಪತ್ರೆಗಳ ಮೇಲೆ ಕಡಿವಾಣ ಹಾಕುವ ನೆಪದಲ್ಲಿ ಸಣ್ಣ, ಮಧ್ಯಮ ಗಾತ್ರದ ಆಸ್ಪತ್ರೆಗಳು ಸಮಸ್ಯೆಗೆ ಸಿಲುಕಲಿವೆ. ಹೇಗೆ ಬೃಹತ್ ಬಂಡವಾಳದ ಆಸ್ಪತ್ರೆಗಳು ಬೆಂಗಳೂರು ಮತ್ತಿತರ ಮಹಾನಗರಗಳಲ್ಲಿವೆಯೋ, ಹಾಗೆಯೇ ಜನಾರೋಗ್ಯ ರಕ್ಷಣೆ ಹೆಸರಿನ ಅಸಂಖ್ಯ ಎನ್‌ಜಿಒಗಳು, ಸ್ವಘೋಷಿತ ಸಮಾಜಸೇವಕರು, ರೋಗಿಪರ ಚಿಂತಕರೂ ಆ ಮಹಾನಗರಗಳಲ್ಲೇ ಬೀಡುಬಿಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.

ಹೋಬಳಿ, ತಾಲ್ಲೂಕು ಕೇಂದ್ರಗಳಂತಹ ಸಣ್ಣ ಪಟ್ಟಣಗಳಲ್ಲಿರುವ ಹಾಗೂ ಕಡಿಮೆ ಬಂಡವಾಳದ ಸಣ್ಣ ಆಸ್ಪತ್ರೆ ನಡೆಸುವವರ ಪರಿಸ್ಥಿತಿ ಬೃಹತ್ ಆಸ್ಪತ್ರೆಗಳಿಗಿಂತ ಭಿನ್ನವಾಗಿದೆ. ಆದರೆ ವಾಸ್ತವ ಸತ್ಯಗಳಿಗಿಂತ ಎಲ್ಲವನ್ನೂ ಒಂದೇ ಅಳತೆಪಟ್ಟಿಯಲ್ಲಿ ಹಿಡಿದು ನೋಡುವ ಸಂಸ್ಥೆಗಳಿಗೆ ಜನಪ್ರಿಯವಾದ ತಕ್ಷಣದ ಕ್ರಮವೊಂದು ಬೇಕಾಗಿದೆ. ತಮ್ಮ ‘ವಾರ್ಷಿಕ ಸಾಧನೆಗಳ ಪಟ್ಟಿ’ಯಲ್ಲಿ ತೋರಿಸಿಕೊಳ್ಳಲು ಕಾನೂನುಗಳು, ತಿದ್ದುಪಡಿ, ಒಂದಷ್ಟು ಕೇಸುಗಳು ಅವಶ್ಯವಾಗಿವೆ. ಈ ಹುನ್ನಾರದ ಭಾಗವಾಗಿ ಕಾನೂನು-ತಿದ್ದುಪಡಿ-ನಿಯಂತ್ರಣ ಸಮಿತಿ ಇತ್ಯಾದಿಗಳು ರೂಪುಗೊಂಡಿದ್ದು ರೋಗಿ-ವೈದ್ಯ ಸಂಬಂಧ ದಿನದಿನಕ್ಕೆ ವಿಷಮಿಸುತ್ತಿದೆ.

ಆದರೆ ಜನಾರೋಗ್ಯ ರಕ್ಷಕರನ್ನು ಕಾಯಿಲೆಗಳು ಮನ್ನಿಸಲಿ, ರೋಗಚಿಕಿತ್ಸೆಯು ಎರಡು ಪ್ಲಸ್ ಎರಡು ಸೇರಿ ನಾಕು ಎನ್ನುವಂತಹ ಸರಳ ಗಣಿತ ಸಮೀಕರಣದಂತಲ್ಲ. ಪುಸ್ತಕ ಜ್ಞಾನದಿಂದ, ಮಾಹಿತಿಯಿಂದ ರೋಗಚಿಕಿತ್ಸೆ ಸಾಧ್ಯವಿಲ್ಲ. ಚಿಕಿತ್ಸೆಯೆಂಬುದೊಂದು ಅಸಂಖ್ಯ ಸಾಧ್ಯತೆಗಳ ಬಯಲು. ರೋಗಿಗಳ ನೋಡಿದ ಅನುಭವವೇ ದೊಡ್ಡ ಸಂಪನ್ಮೂಲ. ಮನುಷ್ಯ ದೇಹವೆಂಬ ಸೂಪರ್ ಕಂಪ್ಯೂಟರು ಎಷ್ಟೋ ಸಲ ವೈದ್ಯ ಜ್ಞಾನ-ಅನುಭವದ ಅಳವಿಗೇ ಸಿಗುವುದಿಲ್ಲ. ಹೀಗಿರುವಾಗ ಆಯಾ ಸ್ಥಳದಲ್ಲಿ, ಆಯಾ ರೋಗಿಗೆ ಲಭ್ಯವಿರುವ, ಸಾಧ್ಯವಿರುವ, ಅಗತ್ಯವಿರುವ ಸಂಪನ್ಮೂಲಗಳಿಂದ ರೋಗಚಿಕಿತ್ಸೆ ಮಾಡಲು ಮುಕ್ತ ಅವಕಾಶ ಬೇಕು. ಅದಕ್ಕೆ ‘ದರ ಪಟ್ಟಿ’ ಫಿಕ್ಸ್ ಮಾಡುವುದು ಅಥವಾ ಸಾಕ್ಷ್ಯಾಧಾರಿತ ಚಿಕಿತ್ಸೆ ನೀಡುವುದು ಸಾಧ್ಯವಿಲ್ಲ. ಪೇಶೆಂಟುಗಳನ್ನು ನೋಡದ ಸಮಾಜಸೇವಕರಿಗೆ ಹಾಗೂ ಬ್ಯೂರೋಕ್ರಾಟುಗಳಿಗೆ ಇಂತಹ ಸೂಕ್ಷ್ಮ ಸವಾಲುಗಳು ಗಮನಕ್ಕೆ ಬರುತ್ತಿಲ್ಲ.

ರೋಗಿಪರವೆಂಬ ಸೋಗಿನಲ್ಲಿ ವೈದ್ಯರನ್ನು ಕ್ರಿಮಿನಲ್‌ಗಳಂತೆ ಬಿಂಬಿಸುತ್ತ ಹೋಗುವುದಷ್ಟೆ ಕಂಡುಬರುತ್ತಿದೆ. ದುರಂತವೆಂದರೆ ಇಂತಹ ಕ್ರಮಗಳಿಂದ ಸಣ್ಣ, ಮಧ್ಯಮ ಗಾತ್ರದ ಆಸ್ಪತ್ರೆಗಳ ಬಾಗಿಲನ್ನು ಸುಲಿಗೆಕೋರರಿಗೆ ತೆರೆದಿಟ್ಟು ಅವು ಕಣ್ಮುಚ್ಚುವಂತೆ ಆದೀತೇ ಹೊರತು ಮತ್ತಾವ ಸಾಧನೆಯೂ ಆಗುವುದಿಲ್ಲ.

ಎಷ್ಟೋ ಸಾಮಾಜಿಕ ಅನಿಷ್ಟಗಳು ಕೇವಲ ಕಾನೂನಿನಿಂದ ನಿಲ್ಲಲಿಲ್ಲ ಎನ್ನುವುದನ್ನು ನೆನಪಿಡೋಣ. ಯಾವುದೇ ವೃತ್ತಿನಿರತರನ್ನು ಅಪರಾಧಿಗಳನ್ನಾಗಿಸಿ ಶಿಕ್ಷೆಯ ಭಯ ಹುಟ್ಟಿಸಿ ಮಾನವೀಯಗೊಳಿಸಲು ಸಾಧ್ಯವಿಲ್ಲ.

ವೈದ್ಯರೂ ರಾಗದ್ವೇಷ, ಸುಸ್ತುಸೋಲು, ಕುಟುಂಬಜಂಜಾಟಗಳಿರುವ ನರಮನುಷ್ಯರು. ಹೀಗಿರುತ್ತ ಲೈಸೆನ್ಸ್ ರಾಜ್-ಗ್ರಾಹಕ ಕಾಯ್ದೆಗಳಲ್ಲಿ ಈಗಾಗಲೇ ಸಣ್ಣಪುಟ್ಟ ಊರುಪಟ್ಟಣಗಳ ಆಸ್ಪತ್ರೆಗಳು ನಲುಗುತ್ತಿರುವಾಗ, ವೈದ್ಯರನ್ನು ಮಾನವೀಯಗೊಳಿಸುವ ಕಾನೂನೇತರ ಕ್ರಮಗಳತ್ತ ಜನಾರೋಗ್ಯ ರಕ್ಷಕರು ಗಮನ ಹರಿಸಬೇಕು. ಕಾನೂನು  ಉಪಕರಣ ಮಾತ್ರ. ಅದನ್ನು ಬಳಕೆಗೆ ಯಾರ ಕೈಲಿಡುತ್ತಿದ್ದೇವೆಂದು ಆಳುವವರು ನೆನಪಿಡಬೇಕು. ಜೊತೆಗೆ ರೋಗತಡೆಯುವ ಆರೋಗ್ಯಕರ ಬದುಕಿನ ಕ್ರಮವನ್ನು ರೂಢಿಸಿಕೊಳ್ಳಲು ಜನರಿಗೆ ತಾವೇ ಮಾದರಿಯಾಗಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry