ವಿಂಡೀಸ್ ಸರಣಿಗೆ ಭಾರತ ತಂಡ : ರಿಷಭ್, ಕುಲದೀಪ್‌ಗೆ ಸ್ಥಾನ

7

ವಿಂಡೀಸ್ ಸರಣಿಗೆ ಭಾರತ ತಂಡ : ರಿಷಭ್, ಕುಲದೀಪ್‌ಗೆ ಸ್ಥಾನ

Published:
Updated:
ವಿಂಡೀಸ್ ಸರಣಿಗೆ ಭಾರತ ತಂಡ : ರಿಷಭ್, ಕುಲದೀಪ್‌ಗೆ ಸ್ಥಾನ

ಬರ್ಮಿಂಗ್‌ಹ್ಯಾಮ್‌: ಏಕದಿನ ಮತ್ತು ಟ್ವೆಂಟಿ–20 ಪಂದ್ಯ ಆಡಲು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡವನ್ನು ಪ್ರಕಟಿಸಿದ್ದು ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ ಮತ್ತು  ವೇಗಿ ಜಸ್‌ಪ್ರೀತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್ ಮತ್ತು ಚೈನಾಮನ್ ಶೈಲಿಯ ಬೌಲರ್‌ ಕುಲದೀಪ್ ಯಾದವ್‌ ಅವರಿಗೆ 15 ಸದಸ್ಯರ ತಂಡದಲ್ಲಿ ಸ್ಥಾನ ನೀಡಲಾಗಿದೆ. ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ ಪ್ರಸಾದ್‌ ತಂಡವನ್ನು ಗುರುವಾರ ಪ್ರಕಟಿಸಿದರು.

ಪಕ್ಕೆಲುಬಿನ ನೋವಿಗೆ ಒಳಗಾಗಿದ್ದ ರೋಹಿತ್ ಶರ್ಮಾ ಗುಣಮುಖರಾದ ನಂತರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನಿರಂತರ ಆಡಿದ್ದರು. ಚಾಂಪಿಯನ್ಸ್ ಟ್ರೋಫಿ ಟೂರ್ನಿಯುದ್ದಕ್ಕೂ ಶಿಖರ್ ಧವನ್‌ ಜೊತೆ ಭಾರತಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಆದರೆ ಅವರನ್ನು ಮೇಲಿಂದ ಮೇಲೆ ಕಣಕ್ಕೆ ಇಳಿಸಲು ಇಷ್ಟಪಡದ ತಂಡದ ಆಡಳಿತ ವಿಶ್ರಾಂತಿ ನೀಡಲು ನಿರ್ಧರಿಸಿದೆ. ಐಪಿಎಲ್‌ನಲ್ಲಿ ನಿರಂತರ ಬೆವರು ಸುರಿಸಿದ ಬೂಮ್ರಾ ಅವರ ಮೇಲೆಯೂ ಹೆಚ್ಚು ಒತ್ತಡ ಹೇರದಿರಲು ಆಡಳಿತ ನಿರ್ಧರಿಸಿದೆ.

ರೋಹಿತ್ ಶರ್ಮಾ ಅನುಪ ಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ಅಥವಾ ರಿಷಭ್ ಪಂತ್‌ ಅವರಿಗೆ ಇನಿಂಗ್ಸ್ ಆರಂಭಿಸುವ ಅವಕಾಶ ಲಭಿಸಲಿದೆ.

ಕುಲದೀಪ್ ಯಾದವ್‌ ಅವರನ್ನು 2014ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಒಂದು ಪಂದ್ಯವನ್ನೂ ಆಡಲು ಅವಕಾಶ ಲಭಿಸಿರಲಿಲ್ಲ. ಕಳೆದ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಧರ್ಮಶಾಲಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅಮೋಘ ಬೌಲಿಂಗ್‌ ಮಾಡಿ ಗಮನ ಸೆಳೆದಿದ್ದರು. 

ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್‌, ರಿಷಭ್ ಪಂತ್‌, ಅಜಿಂಕ್ಯ ರಹಾನೆ, ಎಂ.ಎಸ್.ಧೋನಿ (ವಿಕೆಟ್ ಕೀಪರ್‌), ಯುವರಾಜ್ ಸಿಂಗ್‌, ಕೇದಾರ್ ಜಾಧವ್‌, ಹಾರ್ದಿಕ್‌ ಪಾಂಡ್ಯ, ದಿನೇಶ್‌ ಕಾರ್ತಿಕ್‌, ರವಿಚಂದ್ರನ್‌ ಅಶ್ವಿನ್‌, ರವೀಂದ್ರ ಜಡೇಜ, ಮಹಮ್ಮದ್ ಶಮಿ, ಉಮೇಶ್ ಯಾದವ್‌, ಭುವನೇಶ್ವರ್ ಕುಮಾರ್‌, ಕುಲದೀಪ್ ಯಾದವ್‌.

ಸರಣಿಯ ವೇಳಾಪಟ್ಟಿ

ಜೂನ್‌ 23 ಮೊದಲ ಏಕದಿನ, ಟ್ರಿನಿಡಾಡ್‌

ಜೂನ್‌ 25 ಎರಡನೇ ಏಕದಿನ, ಟ್ರಿನಿಡಾಡ್‌

ಜೂನ್‌ 30 ಮೂರನೇ ಏಕದಿನ, ಆಂಟಿಗಾ

ಜುಲೈ 2 ನಾಲ್ಕನೇ ಏಕದಿನ, ಆಂಟಿಗಾ

ಜುಲೈ 6 ಐದನೇ ಏಕದಿನ, ಜಮೈಕಾ

ಜುಲೈ 9 ಏಕೈಕ ಟ್ವೆಂಟಿ–20, ಜಮೈಕಾ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry