ಸಾರಿಗೆ ಅಧಿಕಾರಿ ಹಾಲಸ್ವಾಮಿ ಮನೆ ಮೇಲೆ ಎಸಿಬಿ ದಾಳಿ

7
8 ಅಧಿಕಾರಿಗಳ ಮನೆ,ಕಚೇರಿಯಲ್ಲಿ ತಪಾಸಣೆ

ಸಾರಿಗೆ ಅಧಿಕಾರಿ ಹಾಲಸ್ವಾಮಿ ಮನೆ ಮೇಲೆ ಎಸಿಬಿ ದಾಳಿ

Published:
Updated:
ಸಾರಿಗೆ ಅಧಿಕಾರಿ ಹಾಲಸ್ವಾಮಿ ಮನೆ ಮೇಲೆ ಎಸಿಬಿ ದಾಳಿ

ಬೆಂಗಳೂರು: ಆದಾಯ ಮೀರಿ ಆಸ್ತಿ ಹೊಂದಿರುವ ಆರೋಪದ ಮೇಲೆ ರಾಜ್ಯದ ಎಂಟು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಎಸಿಬಿ ಅಧಿಕಾರಿಗಳ ತಂಡ ಏಕಕಾಲಕ್ಕೆ ಅಧಿಕಾರಿಗಳ ಮನೆ ಹಾಗೂ  ಕಚೇರಿ ಮೇಲೆ ದಾಳಿ ನಡೆಸಿದೆ.26 ಎಕರೆಗೆ ಹಾಲಸ್ವಾಮಿ ಒಡೆಯ

ನೆಲಮಂಗಲ ತಾಲ್ಲೂಕು ಮಾಕೇನಹಳ್ಳಿ ಮತ್ತು ಜಕ್ಕನಹಳ್ಳಿಯಲ್ಲಿ  ತಂದೆ ಹೆಸರಿನಲ್ಲಿ 26 ಎಕರೆ 20 ಗುಂಟೆ ಜಮೀನನ್ನು ಹಾಲಸ್ವಾಮಿ ಹೊಂದಿದ್ದಾರೆ.

ಪತ್ನಿ ಹೆಸರಿನಲ್ಲಿ ದಾಸರಹಳ್ಳಿ  ಬಾಗಲುಗುಂಟೆಯಲ್ಲಿ ಮನೆ,  ಆರ್‌.ಎಂ.ವಿ 2ನೇ ಹಂತದಲ್ಲಿ ತಂದೆ ಹೆಸರಿನಲ್ಲಿ ಒಂದು ನಿವೇಶನ,  ₹ 11 ಲಕ್ಷ ಮೌಲ್ಯದ ನಿಸ್ಸಾನ್‌ ಟೆರೆನೊ ಕಾರು, ₹ 28 ಲಕ್ಷ ಮೌಲ್ಯದ ಫಾರ್ಚೂನರ್‌ ಕಾರು, ₹ 9 ಲಕ್ಷ ಮೌಲ್ಯದ ಸ್ವಿಫ್ಟ್‌ ಕಾರು, ಒಂದು ಟ್ರ್ಯಾಕ್ಟರ್‌ ಮತ್ತು ಮೂರು ಮೋಟರ್‌ ಬೈಕ್‌ ಹೊಂದಿದ್ದಾರೆ. ದಾಳಿ ಸಂದರ್ಭದಲ್ಲಿ ₹ 11 ಲಕ್ಷ ಮೌಲ್ಯದ 530 ಗ್ರಾಂ ಚಿನ್ನ, 3.5 ಕೆಜಿ ಬೆಳ್ಳಿ ಆಭರಣ ಮತ್ತು  ₹ 2.7 ಲಕ್ಷ ನಗದು ಪತ್ತೆಯಾಗಿದೆ.ಪತ್ನಿ ಹೆಸರಿನಲ್ಲಿ 3 ನಿವೇಶನ:  ವಿಜಯಕುಮಾರ್ ಎಂ. ಗುಡಗೇರಿ ಹಾವೇರಿಯ ಬಸವೇಶ್ವರನಗರದಲ್ಲಿ ₹ 50 ಲಕ್ಷ ಮೌಲ್ಯದ ಡ್ಯೂಪ್ಲೆಕ್ಸ್ ಮನೆ, ಪತ್ನಿ ಹೆಸರಿನಲ್ಲಿ 3 ನಿವೇಶನ, ಒಂದು ಸ್ವಿಫ್ಟ್‌ ಕಾರು, ಎರಡು ದ್ವಿಚಕ್ರ ವಾಹನ ಹೊಂದಿದ್ದಾರೆ.ಮಗನ ಹೆಸರಿನಲ್ಲಿ 10 ನಿವೇಶನ, 32 ಎಕರೆ ಜಮೀನು:  ಬಸವರಾಜ್‌ ರುದ್ರಪ್ಪ ಗೌಡೂರ್  ಕಲಬುರ್ಗಿಯಲ್ಲಿ ಎರಡು ನಿವೇಶನ, ಹೆಂಡತಿ ಹೆಸರಿನಲ್ಲಿ ಒಂದು ನಿವೇಶನ ಹಾಗೂ ಕುಣಿಕಲ್ಲೂರು ಗ್ರಾಮದಲ್ಲಿ 22 ಎಕರೆ 4 ಗುಂಟೆ ಜಮೀನು ಹೊಂದಿದ್ದಾರೆ.ಮಗನ ಹೆಸರಿನಲ್ಲಿ ಕಲಬುರ್ಗಿಯಲ್ಲಿ ಒಂದು ಫ್ಲಾಟ್‌, ವಿವಿಧೆಡೆ 10 ನಿವೇಶನ, 32 ಎಕರೆ 2 ಗುಂಟೆ ಜಮೀನು, ಒಂದು ಮಹೆಂದ್ರಾ ಬೊಲೆರೋ ಜೀಪ್‌ ಇರುವ ದಾಖಲೆಗಳು ದೊರೆತಿವೆ. ತಪಾಸಣೆ ವೇಳೆ ಮನೆಯಲ್ಲಿ 1 ಕೆ.ಜಿ ಚಿನ್ನ, 5 ಕೆಜಿ ಬೆಳ್ಳಿ ಆಭರಣ ಮತ್ತು ₹ 1 ಲಕ್ಷ ನಗದು ಸಿಕ್ಕಿದೆ.ಪತ್ನಿ ಹೆಸರಿನಲ್ಲಿ 3 ನಿವೇಶನ, 15 ಎಕರೆ ಜಮೀನು: ಬನ್ನಪ್ಪ ಕೋಮಾರ್‌ ತಮ್ಮ ತಂದೆ ಹೆಸರಿನಲ್ಲಿ ಗಣೀಕಲ್‌ ಗ್ರಾಮದಲ್ಲಿ ಒಂದು ನಿವೇಶನ ಒಂದು ಮನೆ, 26 ಎಕರೆ 37 ಗುಂಟೆ ಜಮೀನು ಹೊಂದಿದ್ದಾರೆ. ಯಾದಗಿರಿ ನಗರದಲ್ಲಿ ಎರಡು ನಿವೇಶನ ಪತ್ನಿ ಹೆಸರಿನಲ್ಲಿ 3 ನಿವೇಶನ, 15 ಎಕರೆ 27 ಗುಂಟೆ ಜಮೀನು, ಒಂದು ಕಾರು, ಒಂದು ಬೈಕ್‌ ಹೊಂದಿದ್ದಾರೆ.ದಾಳಿ ಸಂದರ್ಭದಲ್ಲಿ ₹ 5 ಲಕ್ಷ ಮೌಲ್ಯದ 560 ಗ್ರಾಂ ಚಿನ್ನ, 690 ಗ್ರಾಂ ಬೆಳ್ಳಿ ಆಭರಣ ಮತ್ತು ₹ 64,000 ನಗದು, 5 ಎಲ್ಐಸಿ ಬಾಂಡ್‌ಗಳು, ವಿವಿಧ 15 ಬ್ಯಾಂಕ್‌ಗಳಲ್ಲಿ ಖಾತೆಗಳು, ಒಂದು  ಲಾಕರ್‌ ಹೊಂದಿರುವ ದಾಖಲೆಗಳು ಪತ್ತೆಯಾಗಿವೆ.ಕಲಬುರ್ಗಿ, ಬೀದರ್‌ನಲ್ಲಿ ಅಪಾರ ಅಸ್ತಿ: ಸಹದೇವ ಭೀಮರಾವ್ ಮಾನ್‌ಕರೆ ಅವರು ಬೀದರ್‌ನಲ್ಲಿ 2 ಅಂತಸ್ತಿನ ಮನೆ, ಪತ್ನಿ ಹೆಸರಿನಲ್ಲಿ ಒಂದು ಅಂಗಡಿ ಮಳಿಗೆ, ಕಲಬುರ್ಗಿಯಲ್ಲಿ ಎರಡು ಮನೆ, ಒಂದು ನಿವೇಶನ, ಬೀದರ್‌ನಲ್ಲಿ ಒಂದು ಮನೆ,  ಖಾದರ್‌ ನಗರದಲ್ಲಿ ತೋಟದ ಮನೆ ಹಾಗೂ 2 ಎಕರೆ 30 ಗುಂಟೆ ಜಮೀನು, ಹುಮ್ನಾಬಾದ್ ತಾಲ್ಲೂಕಿನ ಬೋರಾಳ ಗ್ರಾಮದಲ್ಲಿ ತಂದೆ ಹೆಸರಿನಲ್ಲಿ  11 ಎಕರೆ 15 ಗುಂಟೆ ಜಮೀನು, ₹ 8 ಲಕ್ಷ ಮೌಲ್ಯದ ಚಿನ್ನದ ಆಭರಣಗಳಿರುವ ದಾಖಲೆಗಳು ಪತ್ತೆಯಾಗಿವೆ.ಭೂಸೇನಾ ನಿಗಮದ ಎಂಜಿನಿಯರ್‌ ಕೋಟಿ ಒಡೆಯ

ಎಸ್‌.ಪಿ. ತಿಪ್ಪಾರೆಡ್ಡಿ  ಚಿಕ್ಕಮಗಳೂರು ಕೆಎಚ್‌ಬಿ ಕಾಲೊನಿಯಲ್ಲಿ ₹ 1 ಕೋಟಿ ಮೌಲ್ಯದ ಡ್ಯೂಪ್ಲೆಕ್ಸ್ ಮನೆ ಹೊಂದಿದ್ದಾರೆ. ಪಕ್ಕದಲ್ಲೆ ಪತ್ನಿ ಹೆಸರಿನಲ್ಲಿ ಒಂದು ಖಾಲಿ ನಿವೇಶನ, 1 ಎಕರೆ 37 ಗುಂಟೆ ಜಮೀನು  ಇದೆ.  ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ತಿಪ್ಪಾರೆಡ್ಡಿ ಅವರು 14 ಎಕರೆ 34 ಗುಂಟೆ ಜಮೀನು,   440 ಗ್ರಾಂ ಚಿನ್ನ, 190 ಗ್ರಾಂ ಬೆಳ್ಳಿ ಆಭರಣ, 2 ಕಾರು, 2 ಬೈಕ್‌, ಮಕ್ಕಳ ಹೆಸರಿನಲ್ಲಿ ₹ 2 ಲಕ್ಷ ಬ್ಯಾಂಕ್ ಠೇವಣಿ, ವಿವಿಧ ಬ್ಯಾಂಕ್‌ಗಳಲ್ಲಿ 10 ಖಾತೆ, 2 ಲಾಕರ್‌ಗಳನ್ನು ಹೊಂದಿರುವ ದಾಖಲೆಗಳು ದೊರೆತಿವೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಮೊದಲ ಪತ್ನಿ ಹೆಸರಲ್ಲಿ 3 ಮನೆ ಎರಡನೇ ಪತ್ನಿ ಹೆಸರಲ್ಲಿ 4 ಮನೆ

ಹಾಸ್ಟೆಲ್‌ ವಾರ್ಡನ್ ವೆಂಕಟರಮಣಪ್ಪ ಅವರಿಗೆ ಮೊದಲನೇ ಪತ್ನಿ ಗಂಗಮ್ಮ ಹೆಸರಿನಲ್ಲಿ ಚಿಕ್ಕಬಳ್ಳಾಪುರದ ಬಡವರ ಸಂಘ ಕಾಲೊನಿಯಲ್ಲಿ ಮೂರು ಮನೆ, ಅಂಗಡಿ ಮಳಿಗೆಗಳು ಹಾಗೂ ಒಂದು ಬೈಕ್‌, ಚಿಂತಾಮಣಿ ತಾಲ್ಲೂಕು ಕರಿಯಪ್ಪನಪಾಳ್ಯದಲ್ಲಿ 2 ಎಕರೆ 7 ಗುಂಟೆ ಜಮೀನು ಇರುವ ದಾಖಲೆಗಳು  ದೊರೆತಿವೆ.

ಎರಡನೇ ಪತ್ನಿ ನರಸಮ್ಮ ಹೆಸರಿನಲ್ಲಿ ಚಿಕ್ಕಬಳ್ಳಾಪುರದಲ್ಲಿ ಎರಡು ನಿವೇಶನ, ಒಂದು ಮನೆ, ಮಷ್ಟೂರು ಗ್ರಾಮದಲ್ಲಿ  ಮೂರು ಮನೆ ಮತ್ತು ಎರಡು ಅಂಗಡಿ ಮಳಿಗೆ ಇವೆ. ಚಿಂತಾಮಣಿ ತಾಲ್ಲೂಕಿನ ಸೊಣ್ಣಶೆಟ್ಟಿಹಳ್ಳಿಯಲ್ಲಿ 1 ಎಕರೆ 6 ಗುಂಟೆ ಜಮೀನಿದೆ.  ₹ 5 ಲಕ್ಷ ಮೌಲ್ಯದ 250 ಗ್ರಾಂ ಚಿನ್ನ, 1.5 ಕೆಜಿ ಬೆಳ್ಳಿ ಆಭರಣ, ₹ 3.5 ಲಕ್ಷ ಮೌಲ್ಯದ ಸ್ವಿಫ್ಟ್ ಕಾರು, ಎರಡು ಬೈಕ್‌, 16 ಎಲ್‌ಐಸಿ ಪಾಲಿಸಿಗಳು, ಕೆನರಾ ಬ್ಯಾಂಕ್‌ನಲ್ಲಿ ಒಂದು ಲಾಕರ್‌ ಹೊಂದಿರುವ ದಾಖಲೆಗಳು ಪತ್ತೆಯಾಗಿವೆ.ಆರೋಗ್ಯ ಇಲಾಖೆ ಅಧಿಕಾರಿ ಪತ್ನಿ ಬಾರ್‌ ಮಾಲಕಿ

ಆರೋಗ್ಯ ಇಲಾಖೆ ತರಬೇತಿ ಕೇಂದ್ರದ ಪ್ರಾಂಶುಪಾಲ ಎಸ್‌.ಎಂ.ವಿ. ಕುಮಾರಗೌಡ ಅವರ ಪತ್ನಿ ಹೆಸರಿನಲ್ಲಿ  ಮುಳುಬಾಗಿಲು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ವೆಂಕಟೇಶ್ವರ ವೈನ್ಸ್‌ಗೆ ಪಾಲುದಾರ ಮಾಲೀಕರು. ಪತ್ನಿ ಹೆಸರಿನಲ್ಲಿ ಮುಳಬಾಗಿಲು ತಾಲ್ಲೂಕಿನ ವಿವಿಧೆಡೆ 27 ಎಕರೆ 25 ಗುಂಟೆ ಜಮೀನಿದೆ. ಬೆಂಗಳೂರು  ಕೆ.ಆರ್‌. ಪುರಂನಲ್ಲಿ ಮೂರು ಅಂತಸ್ತಿನ ಕಟ್ಟಡದಲ್ಲಿ 12 ಮನೆ, 2 ಅಂಗಡಿಗಳಿವೆ. ಮುಳುಬಾಗಿಲು ನಗರ ಮುತ್ಯಾಲಪೇಟೆಯಲ್ಲಿ 3 ಅಂತಸ್ತಿನ ಮನೆ ಇದ್ದು, ಇದರಲ್ಲಿ ಖಾಸಗಿ ನರ್ಸಿಂಗ್‌ ಹೋಂ ಮತ್ತು ವಾಸದ ಮನೆ ಇದೆ. ಅಲ್ಲದೆ ಇದೇ ಬಡಾವಣೆಯಲ್ಲಿ ಮೂರು ಅಂಗಡಿ ಮಳಿಗೆಗಳಿರುವ ದಾಖಲೆಗಳು ದೊರೆತಿವೆ. ದಾಳಿ ಸಂದರ್ಭದಲ್ಲಿ 685 ಗ್ರಾಂ ಚಿನ್ನ, 500 ಗ್ರಾಂ ಬೆಳ್ಳಿ ಆಭರಣ ಮತ್ತು ₹ 1.70 ಲಕ್ಷ ನಗದು ಪತ್ತೆಯಾಗಿದೆ.ದಾಳಿಗೆ ಒಳಗಾದ ಅಧಿಕಾರಿಗಳು

* ಕೆ.ಟಿ. ಹಾಲಸ್ವಾಮಿ, ಸಾರಿಗೆ ಉಪ ಆಯುಕ್ತ, ಕೆ.ಆರ್.ಪುರಂ, ಬೆಂಗಳೂರು.

* ಎಸ್‌.ಎಂ.ವಿ. ಕುಮಾರಗೌಡ, ಆರೋಗ್ಯ ಇಲಾಖೆಯ ತರಬೇತಿ ಕೇಂದ್ರದ ಪ್ರಾಂಶುಪಾಲ, ಕೋಲಾರ.* ವೆಂಕಟರಮಣಪ್ಪ, ಹಾಸ್ಟೆಲ್ ವಾರ್ಡನ್, ಸಮಾಜ ಕಲ್ಯಾಣ ಇಲಾಖೆ,  ಚಿಕ್ಕಬಳ್ಳಾಪುರ.* ವಿಜಯಕುಮಾರ್‌ ಎಂ. ಗುಡಗೇರಿ, ಶಿಗ್ಗಾವಿ ವೃತ್ತದ ಕಂದಾಯ ನಿರೀಕ್ಷಕ, ಹಾವೇರಿ* ಬಸವರಾಜ್‌ ರುದ್ರಪ್ಪ ಗೌಡೂರ್‌,  ಪಂಚಾಯತ್‌ ರಾಜ್ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌,  ರಾಯಚೂರು.* ಬನ್ನಪ್ಪ ಕೋಮಾರ್‌, ಕೃಷ್ಣ ಭಾಗ್ಯ ಜಲ ನಿಗಮದ ಸಹಾಯಕ  ಎಂಜಿನಿಯರ್‌, ಯಾದಗಿರಿ ಜಿಲ್ಲೆ ಖಾನಾಪುರ.* ಸಹದೇವ ಭೀಮರಾವ್‌ ಮಾನ್‌ಕರೆ, ಜೆಸ್ಕಾಂ ಕಾರ್ಯಪಾಲಕ ಎಂಜಿನಿಯರ್‌, ಕಲಬುರ್ಗಿ.* ಎಸ್‌.ಪಿ. ತಿಪ್ಪಾರೆಡ್ಡಿ,  ಭೂಸೇನಾ ನಿಗಮದ ಸಹಾಯಕ ಎಂಜಿನಿಯರ್‌, ಚಿಕ್ಕಮಗಳೂರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry