ನಿರಂತರ ಮಳೆ; ಜನಜೀವನ ಅಸ್ತವ್ಯಸ್ತ,ರೋಗ ಭೀತಿ

7

ನಿರಂತರ ಮಳೆ; ಜನಜೀವನ ಅಸ್ತವ್ಯಸ್ತ,ರೋಗ ಭೀತಿ

Published:
Updated:
ನಿರಂತರ ಮಳೆ; ಜನಜೀವನ ಅಸ್ತವ್ಯಸ್ತ,ರೋಗ ಭೀತಿ

ಯಾದಗಿರಿ: ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿದ್ದು, ಇದುವರೆಗೂ ಜಿಲ್ಲೆಯಲ್ಲಿ ಒಟ್ಟು 106 ಮಿಲಿ ಮೀಟರ್‌ ಮಳೆ ಬಿದ್ದಿದೆ. ಗುರುವಾರ ನಗರ ಸೇರಿದಂತೆ ಸುತ್ತಾಮುತ್ತಾ ಇಡೀ ರಾತ್ರಿ ಒಟ್ಟು 38 ಮಿಲಿ ಮೀಟರ್ ಮಳೆಯಾಗಿದ್ದು, ಚರಂಡಿಗಳು ಉಕ್ಕಿ ಹರಿದಿದ್ದರಿಂದ ಹಲವು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಚಿರಂಜೀವಿ ನಗರದ ಹನುಮಾನ್‌ ದೇವಸ್ಥಾನ ಹಿಂಭಾಗದಲ್ಲಿ ರಸ್ತೆ ಮುಳುಗಿದ್ದು, ಜನಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಚರಂಡಿಗಳಲ್ಲಿನ ಹೂಳು ಹಾಗೂ ಚರಂಡಿ ಸ್ವಚ್ಛತೆ ಇಲ್ಲದೇ ಇರುವುದರಿಂದ ಮಳೆ ನೀರು ಸೇರಿ ಚರಂಡಿ ನೀರು ನಿವಾಸಿಗಳ ಮನೆಗಳಿಗೆ ನುಗ್ಗಿದೆ. ಯಾವುದೇ ಹಾನಿ ಸಂಭವಿಸಿಲ್ಲ.

ನೀರು ನುಗ್ಗಿದ ಪ್ರದೇಶಗಳು: ನಗರದ ಬೆಟ್ಟದ ಬುಡದಲ್ಲಿರುವ ಗಾಂಧಿನಗರ, ಹಿರೇಅಗಸಿ, ಕೋಲಿವಾಡ, ಲಾಡೆಸ್‌ ಗಲ್ಲಿ, ಕೋಟಗಾರವಾಡ, ಜೋಯಿವಾಡ, ಗೋಗಿ ಮೊಹೆಲ್ಲಾ, ಬುಕಾರಿ ಮೊಹೆಲ್ಲಾ, ರಾಯಚೂರಿ ಮೊಹೆಲ್ಲಾ, ಆಸರ್ ಮೊಹೆಲ್ಲಾ, ಖಸಬವಾಡಿ, ಕನಕ ನಗರ ಪ್ರದೇಶಗಳಲ್ಲಿ ಚರಂಡಿಗಳು ಉಕ್ಕಿ ಹರಿದಿವೆ. ರಸ್ತೆಗಳಲ್ಲಿ ಬೃಹತ್ ಗುಂಡಿಗಳೂ ತುಂಬಿದ್ದು, ಜನಸಂಚಾರಕ್ಕೂ ತೊಂದರೆ ಉಂಟಾಗಿದೆ.

ಮೂರು ಅಡಿ ಅಗಲ ಮತ್ತು ಎರಡು ಅಡಿ ಅಳ ಇರುವ ಕಿರಿದಾದ ಚರಂಡಿಗಳನ್ನು ನಿರ್ಮಾಣ ಮಾಡಿರುವುದರಿಂದ ಮಳೆಗಾಲದಲ್ಲಿ ಚರಂಡಿ ನೀರು ರಸ್ತೆ, ಮನೆಗೆ ನುಗ್ಗಿ ರೋಗ ಭೀತಿ ಹರಡಿದೆ. ಪ್ರತಿ ಮಳೆಗಾಲದಲ್ಲಿ ನಗರದ ನಾಗರಿಕರು ಸಂಕಷ್ಟಪಡುತ್ತಿದ್ದರೂ, ಜನಪ್ರತಿನಿಧಿಗಳು, ಜಿಲ್ಲಾಡಳಿತ ನಡೆಸುವ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂದು ಚಿರಂಜೀವಿ ನಗರದ ಸುರೇಶ್‌ಬಾಬು ಅಸಮಾಧಾನ ವ್ಯಕ್ತಪಡಿಸಿದರು.

ಮೂರಾಬಟ್ಟೆ ಅಲೆಮಾರಿಗಳ ಬದುಕು: ಇಲ್ಲಿನ ಗಂಜ್‌ ಪ್ರದೇಶ ಹಾಗೂ ಸರ್ಕಾರಿ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ಟೆಂಟ್‌ ಹಾಕಿಕೊಂಡು ನೆಲೆಸಿರುವ ನೂರಾರು ಅಲೆಮಾರಿ ಕುಟುಂಬಗಳ ಬದುಕು ಮೂರಾಬಟ್ಟೆಯಾಗಿದೆ. ಅಲೆಮಾರಿಗಳಿಗೆ ಶಾಶ್ವತ ಸೂರು ಕಲ್ಪಿಸುವಂತೆ ಸರ್ಕಾರ ಆದೇಶಿಸಿದ್ದರೂ, ಜಿಲ್ಲಾಡಳಿತ ಅಲೆಮಾರಿಗಳಿಗೆ ಸೂರು ಕಲ್ಪಿಸಿಲ್ಲ. ಶಾಶ್ವತ ಸೂರು ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ನೀಡಲಾಗಿದೆ ಎಂದು ಅಲೆಮಾರಿಗಳ ಜಿಲ್ಲಾ ಸಂಘದ ಅಧ್ಯಕ್ಷ ವೆಂಟಕೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪದವಿ ಕಾಲೇಜು ಆವರಣಕ್ಕೆ ನುಗ್ಗಿದ ನೀರು: ಚಿತ್ತಾಪುರ ರಸ್ತೆ ಪಕ್ಕದಲ್ಲಿರುವ ಸರ್ಕಾರಿ ಪದವಿ ಕಾಲೇಜು ಆವರಣಕ್ಕೂ ಭಾರೀ ನೀರು ನುಗ್ಗಿದ್ದು, ಇಡೀ ಕಾಲೇಜು ಆವರಣ ಹೊಂಡದಂತಾಗಿದೆ.

ಇದರಿಂದ ವಿದ್ಯಾರ್ಥಿಗಳ ದೈನಂದಿನ ಪಠ್ಯೇತರ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಚಿತ್ತಾಪುರ ಮುಖ್ಯರಸ್ತೆಯಿಂದ ಹಳ್ಳಕ್ಕೆ ಸಂಪರ್ಕ ಕಲ್ಪಿಸುವ ಚರಂಡಿ ಮುಚ್ಚಿರುವ ಪರಿಣಾಮ ಕಾಲೇಜು ಆವರಣ ಮಳೆಗಾಲದಲ್ಲಿ ನೀರಿನಿಂದ ಆವೃತ್ತಗೊಳ್ಳುತ್ತದೆ. ಇದರಿಂದ ಉಪನ್ಯಾಸಕರು, ವಿದ್ಯಾರ್ಥಿಗಳು ಮಳೆಗಾಲ ಮುಗಿಯುವವರೆಗೂ ಹಿಂಸೆ ಅನುಭವಿಸುತ್ತಾರೆ. ಚರಂಡಿ ಸರಿಪಡಿಸುವಂತೆ ನಗರಸಭೆಗೆ, ಜಿಲ್ಲಾಡಳಿತಕ್ಕೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ ಎಂದು ಕಾಲೇಜು ಪ್ರಾಂಶುಪಾಲ ಸುಭಾಶ್ಚಂದ್ರ ಕೌಲಗಿ ದೂರಿದರು.

ಬಬಲಾಳ: ಮನೆಗಳಿಗೆ ನುಗ್ಗಿದ ಮಳೆನೀರು: ಶಹಾಪುರದ ಬಬಲಾಳ ಗ್ರಾಮದಲ್ಲಿ ಶುಕ್ರವಾರ  ಮಳೆ ಸುರಿದಿದ್ದು, ಒಟ್ಟು ಏಳು ಮನೆಗಳಿಗೆ ನೀರು ನುಗ್ಗಿದೆ. ಹನುಮಂತಪ್ಪ ಚಾಟ್ನಾಳ, ದೇವಿಂದ್ರಪ್ಪ ಗುಂಡಳ್ಳಿ, ಮರಿಯಪ್ಪ, ಶರಣಮ್ಮ ಕರ್ನಾಳ, ಮಲ್ಲಪ್ಪ, ಸಾಬಣ್ಣ, ಕೀರ್ತಲಿಂಗಪ್ಪ, ದುಂಡಪ್ಪ ಎಂಬುವರ ಮನೆಗಳಿಗೆ ನೀರು ನುಗ್ಗಿದೆ. ಆದರೆ, ಕಾಳುಕಡಿಗೆ ಹಾನಿಯಾಗಿಲ್ಲ. ಮಳೆಗೆ ಸಂಗ್ರಹಿಸಿದ್ದ ಮೇವು ಹಾನಿಯಾಗಿದೆ ಎಂದು ಗ್ರಾಮಸ್ಥರು ‘ಪ್ರಜಾವಾಣಿ’ಗೆ ತಿಳಿಸಿದರು.

ನಗರಸಭೆಗೆ ಸ್ಪಂದಿಸದ ಜಿಲ್ಲಾಡಳಿತ: ಅಧ್ಯಕ್ಷೆ ಅನಪೂರ ಆರೋಪ

ನಗರದ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ. ಇದರಿಂದ ನಗರಸಭೆ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆ ಉಂಟಾಗಿದೆ ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಆರೋಪಿಸಿದರು.

ನಗರಸಭೆ ಕರೆದಿರುವ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗೆ ಜಿಲ್ಲಾಡಳಿತದಿಂದ ಅನುಮೋದನೆ ಸಿಕ್ಕಿಲ್ಲ. ನಾನೂ ಈ ನಗರದ ಪ್ರಥಮಪ್ರಜೆ. ಜಿಲ್ಲಾಧಿಕಾರಿಯನ್ನು ಭೇಟಿಯಾಗಲು ಎರಡು ಗಂಟೆ ಸಮಯ ಕಾದರೂ ಸಹಾಯಕರು ಬಿಟ್ಟಿಲ್ಲ. ಹೀಗಾದರೆ, ನಗರ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

‘ಮಳೆಗಾಲ ಆರಂಭವಾಗಿದೆ. ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ರೋಗತಡೆಗೆ ಮುಂಜಾಗ್ರತಾ ಕಾರ್ಯಕ್ರಮ ಹಮ್ಮಿಕೊಳ್ಳಲು ಸರ್ಕಾರ ₹7ಲಕ್ಷ ಅನುದಾನ ನಿಗದಿ ಮಾಡಿದೆ. ಆದರೂ, ಜಿಲ್ಲಾಡಳಿತ ನಗರಸಭೆಗೆ ಅನುದಾನ ನೀಡುತ್ತಿಲ್ಲ. ಅನುದಾನ ಕೇಳಲು ಹತ್ತಾರು ಬಾರಿ ಓಡಾಡಿದರೂ ಜಿಲ್ಲಾಧಿಕಾರಿ ಸ್ಪಂದಿಸಿಲ್ಲ’ ಎಂದು ಅಸಮಾಧಾನ ತೋಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry