ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೂರ್ಖಾ’ ಹಿಂಸಾಚಾರಕ್ಕೆ ಒಂದು ಬಲಿ

ಡಾರ್ಜಿಲಿಂಗ್: ಪೊಲೀಸರ ಜತೆ ಗೂರ್ಖಾ ಜನಮುಕ್ತಿ ಮೋರ್ಚಾ ಕಾರ್ಯಕರ್ತರ ಘರ್ಷಣೆ
Last Updated 17 ಜೂನ್ 2017, 19:30 IST
ಅಕ್ಷರ ಗಾತ್ರ

ಡಾರ್ಜಿಲಿಂಗ್: ಇಲ್ಲಿಯ ಸಿಂಗಮಾರಿ ಪ್ರದೇಶವು ಶನಿವಾರ ರಣರಂಗವಾಗಿ ಮಾರ್ಪಟ್ಟಿತ್ತು. ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಕಾರ್ಯಕರ್ತ ಮತ್ತು ಪೊಲೀಸರ ಮಧ್ಯೆ ನಡೆದ ಘರ್ಷಣೆಯಲ್ಲಿ ಒಬ್ಬ ಮೃತಪಟ್ಟು, 35 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.

ಉದ್ರಿಕ್ರ ಪ್ರತಿಭಟನಾಕಾರರು  ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್ ಎಸೆದರು. ಕಲ್ಲು ಹಾಗೂ ಬಾಟಲ್‌ಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿ, ಲಾಠಿ ಪ್ರಹಾರ ಮಾಡಿದರು.

ಪರಿಸ್ಥಿತಿ ನಿಯಂತ್ರಿಸಲು ಸ್ಥಳದಲ್ಲಿ ಸೇನಾ ತುಕಡಿಯನ್ನು ನಿಯೋಜಿಸಲಾಯಿತು. ಹಿಂಸಾಪೀಡಿತ ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿಯು ಗಸ್ತು ನಡೆಸಿದರು.
ಪ್ರತ್ಯೇಕ ರಾಜ್ಯಕ್ಕಾಗಿ ಜೆಜಿಎಂ ನಡೆಸುತ್ತಿರುವ ಹೋರಾಟ ಶನಿವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಕಾರ್ಯಕರ್ತರು ಪಕ್ಷದ ಮುಖ್ಯಕಚೇರಿಯಿಂದ ಸಿಂಗಮಾರಿವರೆಗೆ ಹಮ್ಮಿಕೊಂಡಿದ್ದ ಪ್ರತಿಭಟನಾ ರ‍್ಯಾಲಿಯಲ್ಲಿ  ಘರ್ಷಣೆ ನಡೆದಿದೆ. ನಿಷೇಧಾಜ್ಞೆ ಜಾರಿಯಲ್ಲಿರುವ ಕಾರಣ ಹಿಂದಿರುಗುವಂತೆ ಪ್ರತಿಭಟನಾನಿರತರಿಗೆ ಪೊಲೀಸರು ಸೂಚನೆ ನೀಡಿದರು.

‘ಪೊಲೀಸರ ಮಾತಿಗೆ ಕಿವಿಗೊಡದ ಪ್ರತಿಭಟನಾಕಾರರು, ಕಲ್ಲು, ಬಾಟಲ್‌ ಎಸೆದರು. ಅಲ್ಲದೆ ವಾಹನವೊಂದಕ್ಕೆ ಬೆಂಕಿ ಹಚ್ಚಿದರು. ಪರಿಸ್ಥಿತಿ ನಿಯಂತ್ರಿಸಲು ಅಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ಮಾಡಬೇಕಾಯಿತು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಔಷಧಾಲಯಗಳನ್ನು ಹೊರತುಪಡಿಸಿ ಡಾರ್ಜಿಲಿಂಗ್‌ನ ಎಲ್ಲ ಅಂಗಡಿಗಳನ್ನು ಮುಚ್ಚಲಾಗಿತ್ತು.ಲೆಬೊಂಗ್ಕಾರ್ಟ್ ರಸ್ತೆ, ಗುಮ್, ಚೌಕ್‌ಬಜಾರ್‌ ಪ್ರದೇಶಗಳಲ್ಲೂ ಘರ್ಷಣೆ ನಡೆಯಿತು. ಗಾಯಗೊಂಡವರ ಪೈಕಿ 19 ಮಂದಿ  ಸ್ಥಿತಿ ಗಂಭೀರವಾಗಿದೆ ಎಂದು ಪಶ್ಚಿಮ ಬಂಗಾಳ ಎಡಿಜಿ ಅನುಜ್ ಶರ್ಮಾ ಹೇಳಿದ್ದಾರೆ.

‘ಜೆಜಿಎಂನ ಈ ಗೂಂಡಾಗಿರಿಯನ್ನು ಸರ್ಕಾರ ಒಪ್ಪುವುದಿಲ್ಲ’ ಎಂದು ಪ್ರವಾಸೋದ್ಯಮ ಸಚಿವ ಗೌತಮ್ ದೇವ್ ಅವರು ಪ್ರತಿಕ್ರಿಯಿಸಿದ್ದಾರೆ. ಜೆಜಿಯಂನ ಮಾಧ್ಯಮ ಮುಖ್ಯಸ್ಥ  ಹಾಗೂ ಶಾಸಕ ಅಮರ್ ರೈ ಅವರ ಮಗ ವಿಕ್ರಮ್ ರೈ ಅವರನ್ನು ಪೊಲೀಸರು ಹೊತ್ತೊಯ್ದಿದ್ದಾರೆ ಎಂದು ಜೆಜಿಎಂ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT