ಅಧ್ಯಾತ್ಮ-ಕತ್ತಲ ಅನುಭವ

7

ಅಧ್ಯಾತ್ಮ-ಕತ್ತಲ ಅನುಭವ

Published:
Updated:
ಅಧ್ಯಾತ್ಮ-ಕತ್ತಲ ಅನುಭವ

ಧರ್ಮದ ಲಾಂಛನಗಳನ್ನು ದೇಹದ ಮೇಲೆ ಹೊತ್ತು ಮೆರೆವವರೆಲ್ಲ ಹೆಚ್ಚಿನದಾಗಿ ಪ್ರದರ್ಶನ ವ್ಯಸನಿಗಳು. ಲಾಂಛನದ ಅರ್ಥವನ್ನು ಅರಿವಾಗಿಸಿಕೊಂಡವರು ದೇಹವನ್ನೇ ಧರ್ಮದ ಗುಡಿಯಾಗಿಸಿಕೊಂಡಿರುತ್ತಾರೆ. ಗುಡಿಯೊಳಗಿನ ದೈವಕ್ಕೆ ಅನುಭಾವವೇ ಆರಾಧನೆ. ಅನುಭಾವಕ್ಕೆ ಗುರುಲಿಂಗ-ಜಂಗಮವೆಂಬುದು ಜೀವಜೀವದ ಬೆಳಗು. ಹಾಗಾದಾಗ ಅರಿವೇ ಅಧ್ಯಾತ್ಮ.

ಅರಿವು ಸಂಬಂಧವುಳ್ಳ ಪರಿಪೂರ್ಣ ಜ್ಞಾನಿಗಳ

ಅಡಿಗಳಿಗೆ ನಾನೆರಗುವೆನಯ್ಯಾ

ಎಡೆದೆರಹಿಲ್ಲದೆ ಮೃಡನ ನೆನೆವವರ

ಅಡಿಗಳಿಗೆ ನಾನೆರಗುವೆನಯ್ಯಾ

ಕಡುಗಲಿಗಳ ಕಂಡಂತೆ ಪರಶಿವನೆಂಬೆನಯ್ಯಾ

ಅಮುಗೇಶ್ವರ ಲಿಂಗವನರಿದ ಘನಮಹಿಮನೆಂಬೆನಯ್ಯಾ

-ಎಂದು ಇಂಥ ಮಹಾಂತರ ಬಗ್ಗೆ ಅಮುಗೆ ರಾಯಮ್ಮ ಗುಣಗೌರವದಲ್ಲಿ ಮಾತನಾಡಿದ್ದಾಳೆ. ಸದಾ ಪ್ರದರ್ಶನ­ವೆಂಬುದು ಸಾಧಕನಾಗದವನ ಸಣ್ಣತನ. ಭಾವಿತವಾಗದ ಭಾಷೆ ಅರ್ಥಭಾರದ ಹಂಗು ಶಬ್ದ. ಅರ್ಥದ ಹಂಗಿಗೆ ಬಿದ್ದು ಗುರುಲಿಂಗಜಂಗಮದ ಹೆಸರಿನಲ್ಲಿ ವಸ್ತು ಸಂಕೇತಗಳನ್ನು ಸದಾ ಹೊತ್ತು ತಿರುಗು­ವವರನ್ನು ಕುರಿತು ಅಮುಗೆ ರಾಯಮ್ಮ ಛೇಡಿಸಿ ಮಾತನಾಡಿದ್ದಾಳೆ.

ಉದರ ಪೋಷಣಕ್ಕೆ ಗಿಡು­ಗಿಡುದಪ್ಪದೆ ತಿರುಗುವ ಕುನ್ನಿ

ಒಡೆಯನ ಗುರುತು ಬಲ್ಲುದೆ?

ಮಳೆಗಾಲದಲ್ಲಿ ಮೀನು ಮಿಡಿಚೆಯ ತಿಂಬ ನರಿ

ಬೆಳುದಿಂಗಳ ಬಲ್ಲುದೆ?

ಸತ್ತ ಹಂದಿಯ ತಿಂಬ ನಾಯಿ

ಕತ್ತಲೆಯ ಬಲ್ಲುದೆ?

ಕರ್ತನನರಿಯದ ವೇಷಧಾರಿಗಳು

ನಿಮ್ಮನೆತ್ತ ಬಲ್ಲರು ಅಮುಗೇಶ್ವರಾ?

-ಎಂದು ಹೇಳುತ್ತಾಳೆ. ಶರಣರಿಗೆ ಲಿಂಗಾಯತವೆಂಬುದು ಪ್ರದರ್ಶನದ ಸರಕಲ್ಲ; ಅದು ನಿಜದ ಬದುಕು. ನಿಸರ್ಗ ಧರ್ಮಕ್ಕೆ ಎರವಾಗದ ಬಾಳುವೆಯ ನಿಲುವು.

ಕಾಲಿಲ್ಲದ ಕುದುರೆಯನೇರಿ ರಾವುತಿಗೆಯ ಮಾಡಬೇಕು

ಕಡಿವಾಣವಿಲ್ಲದ ಕುದುರೆಯ ನಿಲಿಸಬೇಕು

ಕಾಲಿಲ್ಲದ ಕುದುರೆಯ ಬೀದಿಯಲ್ಲಿ ಕುಣಿಪಾಡ ಬಲ್ಲಡೆ

ಇಹಲೋಕಕ್ಕೆ ವೀರನೆಂಬೆ ಪರಲೋಕಕ್ಕೆ ಧೀರನೆಂಬೆ

ಅಮುಗೇಶ್ವರ ಲಿಂಗಕ್ಕೆ ಅಧಿಕನೆಂಬೆ

-ಇದು ಅಮುಗೆ ರಾಯಮ್ಮನು ಸತ್ಯಶುದ್ಧ ಸಾಧಕರ ಬಗ್ಗೆ ತೋರುವ ನುಡಿಗೌರವ. ಇದುವೆ ನಿತ್ಯನಾಗಿ ಇಷ್ಟಲಿಂಗವನಪ್ಪಿದ ಶರಣನ ಇರವು; ಆದರೆ ಮನೋ ನಿಗ್ರಹವಿಲ್ಲದೆ ಹೋದಾಗ ಮಂತ್ರದ ಹಸರ ಲಾಂಛನಗಳ ಪಸರವೆಂಬುದು ಡಾಂಬಿಕತೆಯ ಬಣಗು. ನಿಜಸಾಧಕನ ಅಧ್ಯಾತ್ಮದ ಬಗೆಯೆಂಬುದು ಕತ್ತಲೆಯ ಮನೆಯಲ್ಲಿ ಮಧುರವ ಸವಿದಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry