ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದು ಕೊರತೆ

Last Updated 25 ಜೂನ್ 2017, 19:30 IST
ಅಕ್ಷರ ಗಾತ್ರ

ಪಾದಚಾರಿಗಳ ತೊಂದರೆ ನಿವಾರಿಸಿ
ವಿಜಯನಗರ 7ನೇ ಮುಖ್ಯರಸ್ತೆಯ ಪಾದಚಾರಿ ಜಾಗವನ್ನು ಪೀಠೋಪಕರಣ ಮಳಿಗೆಯವರು ಆಕ್ರಮಿಸಿಕೊಂಡಿದ್ದಾರೆ. ಟೇಬಲ್, ಕುರ್ಚಿ ಮತ್ತು ಟೈಪಿಂಗ್ ಮಿಷಿನ್‌ಗಳನ್ನು ಅಡ್ಡಾದಿಡ್ಡಿ ಇಟ್ಟುಕೊಂಡು ಪಾದಚಾರಿಗಳಿಗೆ ತೊಂದರೆ ಕೊಡುತ್ತಿರುತ್ತಾರೆ. ಈ ಪ್ರದೇಶದಲ್ಲಿ ಪ್ರತಿದಿನ ಅಪಘಾತಗಳು ಸಂಭವಿಸುತ್ತಿವೆ. ಟ್ರಾಫಿಕ್ ಪೊಲೀಸರು ಈ ಸಮಸ್ಯೆಯನ್ನು ಕಂಡೂ ಕಾಣದಂತೆ ಇದ್ದಾರೆ. ಈ ಬಗ್ಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಹಿರಿಯ ಅಧಿಕಾರಿಗಳು ಶೀಘ್ರ ಇತ್ತ ಗಮನಹರಿಸಬೇಕಾಗಿದೆ ವಿನಂತಿ.
ನಂದಕಿಶೋರ್, ವಿಜಯನಗರ

ಬೀದಿ ಕಾಮಣ್ಣರ ಕಾಟ ತಪ್ಪಿಸಿ
ಜೆ.ಪಿ.ನಗರ 4ನೇ ಹಂತದ 16ನೇ ಅಡ್ಡರಸ್ತೆ, ಶಶಿ ಮೆಡಿಕಲ್ ಸೆಂಟರ್ ಹಾಗೂ ಬೇಕರಿ, ಕಾಂಡಿಮೆಂಟ್ಸ್‌ ಹತ್ತಿರದ ಸರ್ಕಲ್‌ನಲ್ಲಿ ಬೀದಿ ಕಾಮಣ್ಣರ ಕಾಟ ಹೆಚ್ಚಾಗಿದೆ. ಬೆಳಿಗ್ಗೆ 10 ರಿಂದ ರಾತ್ರಿ 11 ಗಂಟೆಯವರೆಗೂ ಈ ಬಡಾವಣೆಯಲ್ಲಿರುವ ರಿಯಲ್ ಎಸ್ಟೇಟ್ ಹುಡುಗರು ಹಾಗೂ ಬೀದಿ ಕಾಮಣ್ಣರು, ರಸ್ತೆಯಲ್ಲಿ ಬರುವ ಹೆಂಗಸರು, ಹುಡುಗಿಯರನ್ನು ಚುಡಾಯಿಸುವುದು, ಕುಡಿದು ರಸ್ತೆಯಲ್ಲಿ ಸಿಗರೇಟ್, ಗಾಂಜ ಹೊಗೆಯನ್ನು ಹೆಣ್ಣು ಮಕ್ಕಳ ಮುಖಕ್ಕೆ ಬೀಡುವುದು ಸಾಮಾನ್ಯ. ಕೇಳಲು ಹೋದರೆ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾರೆ.

ಬೇಕರಿ ಸರ್ಕಲ್ ಹತ್ತಿರ ತರಕಾರಿ ಗಾಡಿಯವರು ಫುಟ್‌ಪಾತ್ ಒತ್ತುವರಿ ಮಾಡಿಕೊಂಡಿದ್ದಾರೆ. ಪುಟ್ಟೇನಹಳ್ಳಿ ಪೋಲಿಸರು ಈ ಬಡಾವಣೆಗೆ ಬೀಟ್‌ ಬರುತ್ತಿಲ್ಲ. ಹೊಯ್ಸಳ ವಾಹನವೂ ಗಸ್ತು ತಿರುಗುತ್ತಿಲ್ಲ. ರಾತ್ರಿ ಇಡೀ ಈ ಬಡಾವಣೆಗಳಲ್ಲಿ ಕಳ್ಳತನ, ಸುಲಿಗೆ ಅಪರಾಧಗಳಾದರೂ ಸಹ ಪೋಲಿಸರ ವರ್ತನೆ ಬದಲಾಗಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ಶೀಘ್ರ ಇತ್ತ ಗಮನ ಹರಿಸಬೇಕು.
ಯಶೋದಮ್ಮ, ಜೆ.ಪಿ. ನಗರ 4ನೇ ಹಂತ

ರಸ್ತೆ ದಾಟಲು ತೊಂದರೆ
ತುಮಕೂರು ರಸ್ತೆಯಲ್ಲಿ ಗೊರಗುಂಟೆ ಪಾಳ್ಯದಿಂದ ಎಂಟನೇ ಮೈಲಿ ಹೋಗುವವರೆಗೆ ವಾಹನಗಳ ದಟ್ಟಣೆ ಹಾಗೂ ಅವು ಹೊರಸೂಸುವ ವಿಷಾನಿಲ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟಲು ಹಾಗೂ ಮೆಟ್ರೊ ನಿಲ್ದಾಣ ತಲುಪಲು ಗೊರಗುಂಟೆ ಪಾಳ್ಯದಿಂದ ಎಂಟನೇ ಮೈಲಿ ಸಿಗ್ನಲ್‌ವರೆಗೆ ಯಾವುದೇ ಸುರಕ್ಷಿತ ವ್ಯವಸ್ಥೆ ಇಲ್ಲ.

ಕೆಂಪು ದೀಪ ಇದ್ದಾಗಲೂ ವಾಹನ ಸವಾರರು ರಸ್ತೆ ನಿಯಮಗಳನ್ನು ಉಲ್ಲಂಘಿಸಿ ಪಾದಚಾರಿಗಳ ಮೇಲೆ ಸವಾರಿ ಮಾಡುತ್ತಾರೆ. ಯಾವುದೇ ಸ್ಕೈವಾಕ್ ಅಥವಾ ಸುರಂಗ ಮಾರ್ಗ ನಿರ್ಮಾಣವಾಗಿಲ್ಲ.ಟ್ರಾಫಿಕ್ ಪೊಲೀಸರು ಮತ್ತು ಬಿಬಿಎಂಪಿ ಅಧಿಕಾರಿಗಳು ಶೀಘ್ರ ಗಮನ ಹರಿಸಬೇಕು.
ವಿಜಯಕುಮಾರ. ಎಂ.ಕೆ., ನಾಗಸಂದ್ರ

ಖಾಸಗಿ ಬಸ್ ನಿಲ್ಲದಂತೆ ಕ್ರಮ ಅಗತ್ಯ
ನಾಯಂಡಹಳ್ಳಿ (ಮೈಸೂರು ರಸ್ತೆ), ಕೊಟ್ಟಿಗೆಪಾಳ್ಯ (ಮಾಗಡಿ ರಸ್ತೆ) ಬಿಎಂಟಿಸಿ ಬಸ್‌ಗಳ ನಿಲ್ದಾಣಗಳಲ್ಲಿ ಖಾಸಗಿ ವಾಹನಗಳ ನಿಲುಗಡೆ ಇರುವುದರಿಂದ ಬಿಎಂಟಿಸಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಈ ರೂಟ್‌ನಲ್ಲಿ ಖಾಸಗಿ ವಾಹನಗಳ ನಿಲುಗಡೆ ಕುರಿತು ಕ್ರಮ ತೆಗೆದುಕೊಳ್ಳಬೇಕೆಂದು ವಿನಂತಿ.
ಚಿಕ್ಕನಾಗಯ್ಯ, ಮೈಸೂರು ರಸ್ತೆ

ಶೌಚಾಲಯ ನಿರ್ಮಿಸಿ
ಮೈಸೂರು ರಸ್ತೆಯ ರಾಜರಾಜೇಶ್ವರಿ ನಗರ ಗೇಟ್ ಸಮೀಪ ವಿಪರೀತ ಜನಸಂದಣಿ ಇರುತ್ತದೆ. ಆದರೆ ಈ ಪ್ರದೇಶದಲ್ಲಿ ಎಲ್ಲಿಯೂ ಶೌಚಾಲಯಗಳು ಇಲ್ಲ. ಸಾರ್ವಜನಿಕ ಶೌಚಾಲಯ ನಿರ್ಮಿಸಿಕೊಟ್ಟರೆ ಜನರಿಗೆ ಅನುಕೂಲವಾಗುತ್ತದೆ.

ಅದೇ ರೀತಿ ಜ್ಞಾನಭಾರತಿ– ಕೆಂಗೇರಿ ರಸ್ತೆಯ (ವರ್ತುಲ ರಸ್ತೆ) ಕ್ವಾರ್ಟರ್‌್ಸ್ ಬಸ್ ನಿಲ್ದಾಣದ ಹತ್ತಿರವೂ ಸಾರ್ವಜನಿಕ ಶೌಚಾಲಯ ನಿರ್ಮಿಸುವುದು ಅಗತ್ಯವಾಗಿದೆ.
ಚಿಕ್ಕನಾಗಯ್ಯ, ಕೆಂಗೇರಿ 

ಸೊಳ್ಳೆಗಳ ಕಾಟದಿಂದ ಕಾಪಾಡಿ
ಬಾಪೂಜಿನಗರ 3ನೇ ಹಂತದಲ್ಲಿರುವ ಸಾರ್ವಜನಿಕ ಗ್ರಂಥಾಲಯದಲ್ಲಿ ಪತ್ರಿಕೆ, ಪುಸ್ತಕ, ಸ್ಪರ್ಧಾತ್ಮಕ ಪರೀಕ್ಷೆಗಾಗಿ ಓದಲು ಬರುವ  ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಪುಸ್ತಕ ಪ್ರೇಮಿಗಳು ಬಂದರೆ ಸೊಳ್ಳೆಗಳು ಕಚ್ಚದಂತೆ ಒಡೊಮಸ್‌ನಂಥ ಔಷಧಿಯನ್ನು ಕೈ, ಕಾಲು, ಮುಖಕ್ಕೆ ಹಚ್ಚಿಕೊಂಡು ಬರಬೇಕಾದ ಪರಿಸ್ಥಿತಿಯಿದೆ.

ಹಿರಿಯ ಅಧಿಕಾರಿಗಳು ಇಲ್ಲಿಗೆ ಬಂದು ಕನಿಷ್ಠ ಒಂದು ಗಂಟೆ ಪತ್ರಿಕೆಗಳನ್ನು ಓದಿದರೆ ಅಥವಾ ಕುಳಿತುಕೊಂಡರೆ ಓದುಗರ ಕಷ್ಟ ತಿಳಿಯುತ್ತದೆ.
ಇಲ್ಲಿ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆಯೂ ಇಲ್ಲ. ಶೌಚಾಲಯದ ಪೈಪ್‌ಗಳು ಕಟ್ಟಿಕೊಂಡು ಕೆಟ್ಟು ಹೋಗಿದೆ. ಹೆಗ್ಗಣಗಳು ಸ್ವತಂತ್ರವಾಗಿ ಓಡಾಡುತ್ತವೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಓದುಗರ ಸಮಸ್ಯೆಗಳನ್ನು ಸರಿಪಡಿಸಬೇಕೆಂದು ವಿನಂತಿ.
ರವಿಕುಮಾರ್, ಬಾಪೂಜಿನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT