ಬುಧವಾರ, ಫೆಬ್ರವರಿ 19, 2020
24 °C

ಇಂದಿನಿಂದ 65 ಮದ್ಯದಂಗಡಿ ಸ್ಥಗಿತ

ಡಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಇಂದಿನಿಂದ 65 ಮದ್ಯದಂಗಡಿ ಸ್ಥಗಿತ

ವಿಜಯಪುರ: ಸುಪ್ರೀಂಕೋರ್ಟ್‌ ತೀರ್ಪಿ­­ನಂತೆ ಜಿಲ್ಲೆಯ ವ್ಯಾಪ್ತಿಯಲ್ಲಿ 65 ಮದ್ಯದಂಗಡಿಗಳು, ಸ್ಥಳಾಂತರ­ಗೊಳ್ಳುವವರೆಗೂ ಇಂದಿನಿಂದ (ಜುಲೈ 1ರ ಶನಿವಾರ) ಬಾಗಿಲು ಮುಚ್ಚಲಿವೆ. ರಾಷ್ಟ್ರೀಯ, ರಾಜ್ಯ ಹೆದ್ದಾರಿ ಆಸುಪಾಸಿದ್ದ ಈ 65 ಮದ್ಯದಂಗಡಿ­ಗಳಿಗೆ ಅಬಕಾರಿ ಇಲಾಖೆ ಪರವಾನಗಿ ನವೀಕರಿಸದಿರುವುದರಿಂದ, ಸ್ಥಳಾಂತರ­ಗೊಳ್ಳುವ ತನಕ ಅನಿವಾರ್ಯವಾಗಿ ಅಂಗಡಿ ಮಾಲೀಕರು ಬಾಗಿಲು ಮುಚ್ಚಬೇಕಿದೆ.

‘ಜಿಲ್ಲೆಯ ವ್ಯಾಪ್ತಿಯಲ್ಲಿ 195 ಮದ್ಯದಂಗಡಿಗಳಿವೆ. ಇವುಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ ಬರುವ 30, ರಾಜ್ಯ ಹೆದ್ದಾರಿ ಬದಿಯ 35 ಮದ್ಯ­ದಂಗಡಿಗಳ ಪರವಾನಗಿಯನ್ನು ಸುಪ್ರೀಂ­ಕೋರ್ಟ್‌ ಸೂಚನೆಯಂತೆ 2017–18ನೇ ಸಾಲಿಗೆ ನವೀಕರಿಸಿಲ್ಲ’ ಎಂದು ಅಬಕಾರಿ ಜಿಲ್ಲಾಧಿಕಾರಿ ವೆಂಕಟೇಶ ಪದಕಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಟ್ಟು 65 ಅಂಗಡಿಗಳ ಪರವಾನಗಿ ನವೀಕರಣಗೊಂಡಿಲ್ಲ. ಸೆಪ್ಟೆಂಬರ್‌ ಅಂತ್ಯದೊಳಗೆ ಈ ಅಂಗಡಿಗಳ ಮಾಲೀಕರು ಹೆದ್ದಾರಿ ಬದಿಯಿಂದ ಸ್ಥಳಾಂತರಿಸುವ ಮೂಲಕ ಸುಪ್ರೀಂ­ಕೋರ್ಟ್‌ ಸೂಚನೆ ಪಾಲಿಸಿದರೆ, ಮಾತ್ರ ಪರವಾನಗಿ ನವೀಕರಿಸಬಹುದು. ಈ ಮೂರು ತಿಂಗಳ ಅವಧಿಯಲ್ಲಿ ಮದ್ಯದ ಅಂಗಡಿಗಳನ್ನು ಸ್ಥಳಾಂತರಿಸ­ದಿದ್ದರೆ, ಲೈಸೆನ್ಸ್‌ ರದ್ದುಗೊಳ್ಳುತ್ತದೆ’ ಎಂದು ಪದಕಿ ಹೇಳಿದರು.

ಸರ್ಕಾರಕ್ಕೆ ಮನವಿ: ‘ಜಿಲ್ಲಾ ಬಾರ್‌ ಅಂಡ್‌ ರೆಸ್ಟೋರೆಂಟ್‌ ಅಸೋಸಿ­ಯೇ­ಷನ್‌ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯನ್ನು ಡಿ ನೋಟಿಫೈ ಮಾಡಿ, ಸ್ಥಳೀಯ ರಸ್ತೆಗಳು ಎಂದು ಘೋಷಿಸುವಂತೆ ಆಗ್ರಹಿಸಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಲೋಕೋ­ಪಯೋಗಿ ಇಲಾಖೆ ಮೂಲಕ ಸಂಬಂಧಪಟ್ಟ ದಾಖಲಾತಿಗಳನ್ನು ಕಳುಹಿಸಿಕೊಡಲಾಗಿದೆ. ನಿರೀಕ್ಷೆಯಂತೆ 15 ದಿನದೊಳಗಾಗಿ ರಾಜ್ಯ ಸರ್ಕಾರ ರಾಜ್ಯ ಹೆದ್ದಾರಿ ಡಿನೋಟಿಫೈ ಮಾಡುವ ಸಾಧ್ಯತೆ ಹೆಚ್ಚಿದೆ.

ಇದು ನಡೆದರೆ ಇದೀಗ ಪರವಾನಗಿ ದೊರಕದಿರುವ ರಾಜ್ಯ ಹೆದ್ದಾರಿಯಲ್ಲಿನ 35 ಅಂಗಡಿಗಳಿಗೆ ನವೀಕರಣಗೊಂಡ ಲೈಸೆನ್ಸ್‌ ದೊರೆಯಲಿದೆ. ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳನ್ನು ನಡೆಸ­ಲಾಗುತ್ತಿದೆ’ ಎಂದು ಅಸೋಸಿ­ಯೇ­ಷನ್‌ನ ಜಿಲ್ಲಾ ಕಾರ್ಯದರ್ಶಿ ಪ್ರಕಾಶ ಕಟ್ಟಿಮನಿ ತಿಳಿಸಿದರು.

‘ಪಂಜಾಬ್‌ ಅಸೋಸಿಯೇಷನ್‌ ವತಿಯಿಂದ ತೀರ್ಪಿನ ವಿರುದ್ಧ ಸುಪ್ರೀಂ­ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಜುಲೈ 4ರಂದು ಪ್ರಕರಣದ ವಿಚಾ­ರಣೆಯಿದೆ. ಅಂದು ನಡೆಯುವ ವಿದ್ಯಮಾನ ಆಧರಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಮದ್ಯದ ಅಂಗಡಿಗಳ ಕುರಿತಂತೆ ರಾಜ್ಯದ ಅಸೋಸಿಯೇಷನ್‌ ಸಹ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದು ಜಿಲ್ಲಾ ಅಸೋಸಿಯೇಷನ್‌ ಪದಾಧಿಕಾರಿ ಪ್ರಕಾಶ ಹೇಳಿದರು.

ಸಿಎಲ್‌–7 ಚಿಂತಾಜನಕ: ‘ವಿಜಯಪುರ ತಾಲ್ಲೂಕಿನಲ್ಲಿ 84 ಮದ್ಯದ ಅಂಗಡಿ­ಗಳಿವೆ. ಸುಪ್ರೀಂಕೋರ್ಟ್‌ ಸೂಚನೆ­ಯಂತೆ ಇವುಗಳಲ್ಲಿ 22 ಅಂಗಡಿಗಳಿಗೆ ನವೀಕರಣ ಪರವಾನಗಿ ದೊರಕಲ್ಲ. ಇನ್ನೂ ಸಿಎಲ್‌–7 (ಲಾಡ್ಜ್‌ಗಳಲ್ಲೇ ಮದ್ಯ ಮಾರಾಟದ ಕೌಂಟರ್‌) ಲೈಸೆನ್ಸ್‌ ಹೊಂದಿದವರ ಪರಿಸ್ಥಿತಿ ಚಿಂತಾಜನಕ.

ಅದರಲ್ಲೂ ಎರಡ್ಮೂರು ವರ್ಷದ ಹಿಂದೆ ಕೋಟಿ ಕೋಟಿ ರೂಪಾಯಿ ವ್ಯಯಿಸಿ ನೂತನವಾಗಿ ಲಾಡ್ಜ್‌ ನಿರ್ಮಿಸಿ, ಲೈಸೆನ್ಸ್‌ ಪಡೆದವರು ಸ್ಥಳಾಂತರಿಸುವುದು ಬಲು ಕಷ್ಟ ಸಾಧ್ಯವಾಗಿದೆ. 25ಕ್ಕೂ ಹೆಚ್ಚು ಸಿಎಲ್‌–7 ಲೈಸೆನ್ಸ್‌ಗಳು ಜಿಲ್ಲೆಯಲ್ಲಿದ್ದು, ಎಲ್ಲರೂ ಸಂಕಷ್ಟ ಎದುರಿಸುತ್ತಿದ್ದಾರೆ.

ಇದೀಗ ಉದ್ಯಮ ನಡೆಸಬೇಕು ಎಂದರೇ ಸುಪ್ರೀಂಕೋರ್ಟ್‌ನ ಸೂಚನೆ­ಯಂತೆ ಮೂರು ತಿಂಗಳೊಳಗೆ ಸ್ಥಳಾಂತ­ರಿಸಬೇಕು. ಇಲ್ಲದಿದ್ದರೇ ಲೈಸೆನ್ಸ್ ರದ್ದು­ಗೊಳ್ಳುತ್ತದೆ. ಏನು ಮಾಡಬೇಕು ಎಂಬುದು ತೋಚದ ಸ್ಥಿತಿಯಲ್ಲಿ ಲಾಡ್ಜ್‌ ಮಾಲೀಕರಿದ್ದಾರೆ’ ಎಂದು ಪ್ರಕಾಶ ತಿಳಿಸಿದರು.

ಜಿಲ್ಲೆಯ ಮದ್ಯದಂಗಡಿಗಳ ವಿವರ
195 ಜಿಲ್ಲೆಯಲ್ಲಿರುವ ಒಟ್ಟು ಮದ್ಯದಂಗಡಿ

130 ಅಂಗಡಿ ಪರವಾನಗಿ  ನವೀಕರಣ

30 ಮದ್ಯದಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದ್‌

35 ರಾಜ್ಯ ಹೆದ್ದಾರಿಯಲ್ಲಿ ಬಂದ್‌

* * 

ಸುಪ್ರೀಂಕೋರ್ಟ್‌ನ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇವೆ. ಆದೇಶದ ಪ್ರಕಾರ ಹೆದ್ದಾರಿ ಬದಿಯಿದ್ದ 65 ಮದ್ಯದಂಗಡಿ­ಗಳ ಪರವಾನಗಿ ನವೀಕರಣಗೊಳಿಸಿಲ್ಲ
ವೆಂಕಟೇಶ ಪದಕಿ
ಅಬಕಾರಿ ಜಿಲ್ಲಾಧಿಕಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)