ಶನಿವಾರ, ಡಿಸೆಂಬರ್ 7, 2019
24 °C

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆಗೆ ಆಕ್ಷೇಪಿಸಿದ್ದಕ್ಕೆ ಹಲ್ಲೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆಗೆ ಆಕ್ಷೇಪಿಸಿದ್ದಕ್ಕೆ ಹಲ್ಲೆ

ನವದೆಹಲಿ: ವ್ಯಕ್ತಿಯೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದನ್ನು ಆಕ್ಷೇಪಿಸಿದ ವಕೀಲರೊಬ್ಬರ ಮೇಲೆ ಗುಂಪೊಂದು ಹಲ್ಲೆ ಮಾಡಿದ ಘಟನೆ ಉತ್ತರಪ್ರದೇಶದ ನೊಯ್ಡಾದಲ್ಲಿ ಇತ್ತೀಚೆಗೆ ನಡೆದಿದೆ.

ವಕೀಲ ಗೌರವ್ ವಾಸೊವ್ಯ ಎಂಬುವವರು ಗುರುವಾರ ಸಂಜೆ ವ್ಯಕ್ತಿಯೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜಿಸುವುದನ್ನು ನೋಡಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ, ಮೂತ್ರ ವಿರ್ಸಜಿಸುತ್ತಿರುವ ವ್ಯಕ್ತಿಯ ಜತೆಗಿದ್ದ ಗುಂಪು ಗೌರವ್ ಮೇಲೆ ಹಲ್ಲೆ ನಡೆಸಿದೆ. ಗುಂಪಿನಲ್ಲಿದ್ದವರು ಮದ್ಯಪಾನ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

‘ಗುಂಪಿನಲ್ಲಿದ್ದವರು ಹಲ್ಲೆಗೆ ಮುಂದಾಗುತ್ತಿದ್ದಂತೆ ಗೌರವ್ ಅಲ್ಲಿಂದ ತೆರಳಲು ಮುಂದಾಗಿದ್ದಾರೆ. ಆದರೂ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಮನೆಗೆ ತೆರಳುತ್ತಿರುವಾಗ ಅವರನ್ನು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಹೊಡೆಯಲಾಗಿದೆ. ಅವರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಮನೆಯವರೆಗೂ ಹಿಂಬಾಲಿಸಿಕೊಂಡು ಬಂದು ಹಲ್ಲೆ ಮಾಡಿದ್ದಲ್ಲದೆ, ಮನೆಯ ಚಾವಡಿಯಲ್ಲಿರುವ ಪೀಠೋಪಕರಣಗಳನ್ನೂ ಹಾಳುಗಡೆವಲಾಗಿದೆ’ ಎಂದು ಗೌರವ್ ಅವರ ತಂದೆ ಕುಶಾಲ್ ಪಾಲ್ ಸಿಂಗ್ ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ನೊಯ್ಡಾದ ನಗರ ಪೊಲೀಸ್‌ ಸುಪರಿಂಟೆಂಡೆಂಟ್ ಅರುಣ್‌ ಕುಮಾರ್ ಸಿಂಗ್ ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ. ಇಬ್ಬರು ವ್ಯಕ್ತಿಗಳು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದನ್ನು ಆಕ್ಷೇಪಿಸಿದ್ದಕ್ಕೆ ವಾಯವ್ಯ ದೆಹಲಿಯಲ್ಲಿ ಮೇ 29ರಂದು ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲಾಗಿತ್ತು.

ಪ್ರತಿಕ್ರಿಯಿಸಿ (+)