ಸೋಮವಾರ, ಡಿಸೆಂಬರ್ 16, 2019
18 °C

ಜಲಾಶಯಕ್ಕೆ ಒಂದು ಮೀಟರ್ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಲಾಶಯಕ್ಕೆ ಒಂದು ಮೀಟರ್ ನೀರು

ಆಲಮಟ್ಟಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೃಷ್ಣಾ ನದಿಗೆ ಹರಿದು ಬರುತ್ತಿರುವ ನೀರಿನ ದಿನೇ ದಿನೇ ಹೆಚ್ಚುತ್ತಿದ್ದು ಆಲಮಟ್ಟಿ ಜಲಾಶಯಕ್ಕೆ ಒಂದೇ ದಿನ ಒಂದು ಮೀಟರ್ (3.2 ಅಡಿ) ನೀರು ಹರಿದು ಬಂದಿದೆ.

ಶನಿವಾರ 506.40 ಮೀ ಇದ್ದ ಜಲಾ­ಶಯದ ಮಟ್ಟ ಭಾನುವಾರ 507.40 ಮೀಗೆ ಏರಿದೆ. 16.22 ಟಿಎಂಸಿ ಅಡಿ ನೀರಿನ ಸಂಗ್ರಹವಿದ್ದ ಜಲಾಶಯ­ದಲ್ಲಿ ಭಾನುವಾರ 19.307 ಟಿಎಂಸಿ ಅಡಿಗೇರಿದೆ. ಒಂದೇ ದಿನದಲ್ಲಿ ಮೂರು ಟಿಎಂಸಿ ಅಡಿಯಷ್ಟು ನೀರು ಜಲಾಶಯಕ್ಕೆ ಹರಿದು ಬಂದಿದೆ.

ಆಲಮಟ್ಟಿ ಜಲಾಶಯದ ಡೆಡ್‌ ಸ್ಟೋರೇಜ್‌ ಮಟ್ಟ 506.87 ಮೀ ಇದ್ದು (17.62ಟಿಎಂಸಿ ಅಡಿ), ಭಾನುವಾರ ಡೆಡ್‌ ಸ್ಟೋರೇಜ್‌ಕ್ಕಿಂತಲೂ ಹೆಚ್ಚಿನ ನೀರು ಸಂಗ್ರಹವಾಗಿದೆ.

ಇದರಿಂದ ಜಲಾಶಯದ ಹಿಂಭಾಗ­ದಲ್ಲಿ ಕೃಷ್ಣೆ ಮೈದುಂಬುತ್ತಿದ್ದು, ನೋಡು­ಗರ ಕಣ್ಮನ ಸೆಳೆಯುತ್ತಿವೆ. ನೀರಿನ ತೆರೆಗಳ ಅಬ್ಬರ ನಿಧಾನವಾಗಿ ಹೆಚ್ಚುತ್ತಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.

ಜಲಾಶಯದ ಮಟ್ಟ: 519.60 ಮೀ ಗರಿಷ್ಟ ಸಂಗ್ರಹದ ಜಲಾಶಯದಲ್ಲಿ ಭಾನುವಾರ 507.40 ಮೀ ನೀರು ಸಂಗ್ರಹವಿದೆ. 123 ಟಿಎಂಸಿ ಅಡಿ ಗರಿಷ್ಟ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 19.307 ಟಿಎಂಸಿ ಅಡಿ ನೀರು ಸಂಗ್ರಹ­ಗೊಂಡಿದೆ. ಜಲಾಶಯಕ್ಕೆ 35,708 ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ಯಾವುದೇ ನೀರನ್ನು ಹೊರಬಿಟ್ಟಿಲ್ಲ.

ಕಳೆದ ಕೆಲ ತಿಂಗಳಿಂದ ಕಾಣುತ್ತಿದ್ದ ಹಳೆ ಆಲಮಟ್ಟಿ–ಸೀತಿಮನಿ ಮಧ್ಯೆ ಇದ್ದ ಬ್ರಿಟೀಷ್‌ ಕಾಲದ ರೈಲ್ವೆ ಸೇತುವೆಯ ಕಂಬಗಳು ಆಲಮಟ್ಟಿ ಜಲಾಶಯ ಹಿನ್ನೀರು ಹೆಚ್ಚಾದ ಕಾರಣ ಮತ್ತೇ ಜಲಾವೃತಗೊಂಡಿವೆ.

ಮಹಾರಾಷ್ಟ್ರದಲ್ಲಿ ಮುಂದುವರೆದ ಮಳೆ: ಕೃಷ್ಣಾ ನದಿಯ ಮಹಾರಾಷ್ಟ್ರದ ಕೃಷ್ಣಾ ಕೊಳ್ಳದ ಪ್ರಮುಖ ಜಲಾಶ­ಯಗಳಾದ ಕೊಯ್ನಾ, ಧೋಮ, ಕನ್ಹೇರ್‌, ವಾರಣಾ, ದೂದಗಂಗಾ, ರಾಧಾ­ನಗರಿ, ತುಳಸಿ, ಕಾಸರಿ, ಪಾಥಗಾಂವ, ಧೋಮ ಬಾಳಕವಾಡಿ, ಉರ್ಮೋದಿ, ಯೆರಳವಾಡಿ, ತರಳಿ ಜಲಾಶಯಗಳು ಭರ್ತಿಯತ್ತ ಸಾಗಿದ್ದು, ಇನ್ನೂ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿಲ್ಲ, ಜಲಾಶಯಗಳಿಂದ ಇನ್ನೂ ನೀರು ಹರಿದು ಬಿಟ್ಟಿಲ್ಲ, ಆದರೆ ಮಹಾರಾಷ್ಟ್ರದ ಜಲಾಶಯ ಪಾತ್ರದ ಕೆಳಭಾಗದಿಂದ ಕೃಷ್ಣಾ ನದಿಗೆ ನೀರು ಹರಿದು ಬರುತ್ತಿದೆ ಎಂದು ಕೆಬಿಜೆಎನ್‌ಎಲ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಹಾರಾಷ್ಟ್ರದ ಸಾಂಗ್ಲಿ ಬಳಿಯ ರಾಜಾಪುರ ಬ್ಯಾರೇಜ್‌ ಬಳಿ ಕೃಷ್ಣಾ ನದಿಗೆ 37,761 ಕ್ಯುಸೆಕ್‌ ಒಳಹರಿವು ಇದೆ ಎಂದು ಅವರು ತಿಳಿಸಿದರು. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ಕೊಯ್ನಾದಲ್ಲಿ 7.7 ಸೆಂ.ಮೀ, ಕಾಸರಿಯಲ್ಲಿ 15.5 ಸೆಂ.ಮೀ, ತುಳಶಿಯಲ್ಲಿ 8.3 ಸೆಂ.ಮೀ, ರಾಧಾನಗರಿಯಲ್ಲಿ 9 ಸೆಂ.ಮೀ, ದೂದಗಂಗಾದಲ್ಲಿ 6.1 ಸೆಂ.ಮೀ ಮಳೆಯಾಗಿದೆ.

ಅಂಕಿ ಅಂಶ

507 ಭಾನುವಾರದವರೆಗೆ ಸಂಗ್ರಹವಾದ ನೀರಿನ ಪ್ರಮಾಣ

19 ಭಾನುವಾರದವರೆಗೆ ಇರುವ ನೀರು

17.62 ಡೆಡ್‌ ಸ್ಟೋರೇಜ್‌ ಮಟ್ಟ

ಪ್ರತಿಕ್ರಿಯಿಸಿ (+)