ಸೋಮವಾರ, ಡಿಸೆಂಬರ್ 16, 2019
25 °C

ಮರ್ರೆ, ನಿಶಿಕೋರಿ ಗೆಲುವಿನ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರ್ರೆ, ನಿಶಿಕೋರಿ ಗೆಲುವಿನ ಆರಂಭ

ಲಂಡನ್‌ : ಬ್ರಿಟನ್‌ನ ಆ್ಯಂಡಿ ಮರ್ರೆ ಮತ್ತು ಜಪಾನ್‌ನ ಕೀ ನಿಶಿಕೋರಿ ಅವರು ವಿಂಬಲ್ಡನ್‌ ಟೆನಿಸ್‌ ಟೂರ್ನಿ ಯಲ್ಲಿ ಗೆಲುವಿನ ಆರಂಭ ಕಂಡಿದ್ದಾರೆ.

ಆಲ್‌ ಇಂಗ್ಲೆಂಡ್‌ ಕ್ಲಬ್‌ನಲ್ಲಿ ಸೋಮ ವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾ ಗದ ಆರಂಭಿಕ ಸುತ್ತಿನ ಹಣಾಹಣಿಯಲ್ಲಿ ಅಗಶ್ರೇಯಾಂಕದ ಮರ್ರೆ 6–1, 6–4, 6–2ರಲ್ಲಿ ಕಜಕಸ್ತಾನದ ಅಲೆಕ್ಸಾಂಡರ್‌ ಬಬ್ಲಿಕ್‌ ಅವರನ್ನು ಪರಾಭವಗೊಳಿಸಿದರು.

ಇಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರಲ್ಲಿ ಒಬ್ಬರೆನಿಸಿರುವ ಮರ್ರೆ  ಮೂರೂ ಸೆಟ್‌ಗಳಲ್ಲೂ ಎದುರಾಳಿಯ ಮೇಲೆ ಪಾರಮ್ಯ ಮೆರೆದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಮರ್ರೆ ಮೊದಲ ಸೆಟ್‌ನಲ್ಲಿ ಅಕ್ಷರಶಃ ಗರ್ಜಿಸಿದರು. ಬ್ರಿಟನ್‌ನ ಆಟಗಾರನ ರ್‍ಯಾಕೆಟ್‌ನಿಂದ ಸಿಡಿಯುತ್ತಿದ್ದ ಶರವೇಗದ ಸರ್ವ್‌ಗಳನ್ನು ಹಿಂತಿರುಗಿ ಸಲು ಪ್ರಯಾಸಪಟ್ಟ ಅಲೆಕ್ಸಾಂಡರ್‌ ಸುಲಭ ವಾಗಿ ಗೇಮ್‌ ಕೈಚೆಲ್ಲಿದರು. ತಾವು ಮಾಡಿದ ಎಲ್ಲಾ ಸರ್ವ್‌ಗಳನ್ನು ಉಳಿಸಿ ಕೊಂಡ ಮರ್ರೆ ಮೂರು ಬಾರಿ ಎದುರಾಳಿಯ ಸರ್ವ್‌ ಮುರಿದು ಏಕ ಪಕ್ಷೀಯ ವಾಗಿ ಸೆಟ್‌ ಗೆದ್ದುಕೊಂಡರು.

ಎರಡನೇ ಸೆಟ್‌ನಲ್ಲಿ ಕಜಕಸ್ತಾನದ ಅಲೆಕ್ಸಾಂಡರ್‌ ಗುಣಮಟ್ಟದ ಆಟ ಆಡಿದರು. ಆರಂಭಿಕ ನಿರಾಸೆಯಿಂದ ವಿಶ್ವಾಸ ಕಳೆದುಕೊಳ್ಳದ ಅವರು ಚುರು ಕಿನ ಸರ್ವ್‌ ಮತ್ತು ಆಕರ್ಷಕ ಡ್ರಾಪ್‌ಗಳ ಮೂಲಕ ಗೇಮ್‌ ಬೇಟೆಯಾಡಿದರು. ಎಂಟು ಗೇಮ್‌ಗಳಲ್ಲಿ  ಉಭಯ ಆಟ ಗಾರರೂ ತಮ್ಮ ತಮ್ಮ ಸರ್ವ್‌ ಉಳಿಸಿ ಕೊಂಡಿದ್ದರಿಂದ ಆಟದ ರೋಚಕತೆ ಹೆಚ್ಚಿತ್ತು.

ವಿಂಬಲ್ಡನ್‌ನಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದಿರುವ ಮರ್ರೆ ಈ ಹಂತದಲ್ಲಿ ಬಲಿಷ್ಠ ಹಿಂಗೈ ಮತ್ತು  ಕ್ರಾಸ್‌ಕೋರ್ಟ್‌ ಹೊಡೆತ ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು. ಒಂಬತ್ತನೇ ಗೇಮ್‌ನಲ್ಲಿ ತಮ್ಮ ಸರ್ವ್‌ ಕಾಪಾಡಿಕೊಂಡ ಅವರು ಮರು ಗೇಮ್‌ನಲ್ಲಿ ಅಲೆಕ್ಸಾಂಡರ್‌ ಅವರ  ಸರ್ವ್‌ ಮುರಿದು ಸೆಟ್‌ ತಮ್ಮದಾಗಿಸಿ ಕೊಂಡರು.

ಮೂರನೇ ಸೆಟ್‌ನಲ್ಲಿ ಅಲೆಕ್ಸಾಂಡರ್‌ ಅವರು ಮರ್ರೆಗೆ ಸಾಟಿಯಾಗಲೇ ಇಲ್ಲ. ಗ್ರ್ಯಾಂಡ್‌ಸ್ಲಾಮ್‌ನಲ್ಲಿ  ಮೂರು ಪ್ರಶಸ್ತಿ ಗಳನ್ನು ಜಯಿಸಿರುವ ಬ್ರಿಟನ್‌ನ ಆಟಗಾರ  ಮನಮೋಹಕ ಕ್ರಾಸ್‌ ಕೋರ್ಟ್‌ ಹೊಡೆತಗಳ ಮೂಲಕ ಅಂಗಳದ ಮೂಲೆ ಮೂಲೆಗೂ ಚೆಂಡು ಅಟ್ಟಿ ಎದುರಾಳಿಯನ್ನು ಹೈರಾಣಾ ಗಿಸಿದರು.

ನಾಲ್ಕನೇ ಗೇಮ್‌ವರೆಗೂ ಮರ್ರೆಗೆ ತಕ್ಕ ಮಟ್ಟಿಗೆ ಪೈಪೋಟಿ ನೀಡಿದ  ಅಲೆಕ್ಸಾಂಡರ್‌ ಬಳಿಕ ಮಂಕಾದಂತೆ ಕಂಡರು. ಹಲವು ಸ್ವಯಂಕೃತ ತಪ್ಪುಗಳನ್ನು ಮಾಡಿದ ಅವರು ಸುಲಭವಾಗಿ ಗೇಮ್‌ ಕೈಚೆಲ್ಲಿದರು. ಇದರ ಪೂರ್ಣ ಲಾಭ ಎತ್ತಿಕೊಂಡ ಮರ್ರೆ ಸುಲಭವಾಗಿ ಪಂದ್ಯ ಗೆದ್ದುಕೊಂಡರು.

ನಿಶಿಕೋರಿ ಮಿಂಚು: ಜಪಾನ್‌ನ ಕೀ ನಿಶಿಕೋರಿ ಅವರೂ ಆರಂಭಿಕ ಸುತ್ತಿನಲ್ಲಿ ಮಿಂಚಿದರು. ವಿಶ್ವ ಕ್ರಮಾಂಕಪಟ್ಟಿಯಲ್ಲಿ 9ನೇ ಸ್ಥಾನ ಹೊಂದಿರುವ ನಿಶಿಕೋರಿ 6–2, 6–2, 6–0ರಲ್ಲಿ ಇಟಲಿಯ ಮಾರ್ಕೊ ಸೆಚ್ಚಿನಾಟೊ ಅವರನ್ನು ಮಣಿಸಿದರು. 

ನಡಾಲ್‌ಗೆ 850ನೇ ಗೆಲುವು: ಸ್ಪೇನ್‌ನ ರಫೆಲ್‌ ನಡಾಲ್‌ ಅವರು ಸೋಮವಾರ ವೃತ್ತಿಬದುಕಿನಲ್ಲಿ 850ನೇ ಪಂದ್ಯ ಗೆದ್ದ ಸಾಧನೆ ಮಾಡಿದರು.

ವಿಂಬಲ್ಡನ್‌ ಟೂರ್ನಿಯ ಆರಂಭಿಕ ಸುತ್ತಿನಲ್ಲಿ 6–1, 6–3, 6–2ರಲ್ಲಿ ಆಸ್ಟ್ರೇಲಿಯಾದ ಜಾನ್‌ ಮಿಲ್‌ಮ್ಯಾನ್‌ ಅವರನ್ನು ಮಣಿಸಿ ಅವರು ಈ ಮೈಲುಗಲ್ಲು ನೆಟ್ಟರು.  ವಿಂಬಲ್ಡನ್‌ನಲ್ಲಿ ಎಡಗೈ ಆಟಗಾರ ನಡಾಲ್‌ಗೆ ದೊರೆತ 50ನೇ ಗೆಲುವು ಇದಾಗಿದೆ.

ಕ್ವಿಟೋವಾ ಮೋಡಿ: ಮಹಿಳೆಯರ ಸಿಂಗಲ್ಸ್‌ ವಿಭಾಗದ ಹಣಾಹಣಿಯಲ್ಲಿ ಜೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ ಮೋಡಿ ಮಾಡಿದರು. 

ಮೊದಲ ಸುತ್ತಿನ ಪಂದ್ಯದಲ್ಲಿ ಕ್ವಿಟೋವಾ 6–3, 6–4ರ ನೇರ ಸೆಟ್‌ಗಳಿಂದ ಸ್ವೀಡನ್‌ನ ಜೊಹಾನ್ನ ಲಾರ್ಸನ್‌ ಅವರನ್ನು ಸೋಲಿಸಿದರು.

ಇನ್ನೊಂದು ಪಂದ್ಯದಲ್ಲಿ ಅಮೆರಿ ಕಾದ ವೀನಸ್‌ ವಿಲಿಯಮ್ಸ್‌ ಕೂಡ ಗೆಲುವಿನ ಸಿಹಿ ಸವಿದರು. ವಿಶ್ವ ರ್‍ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿರುವ ವೀನಸ್‌ 7–6, 6–4ರಲ್ಲಿ  ಬೆಲ್ಜಿಯಂನ ಎಲಿಸೆ ಮರ್ಟೆನ್ಸ್‌ ವಿರುದ್ಧ ಗೆದ್ದರು.

ಪ್ರತಿಕ್ರಿಯಿಸಿ (+)