ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಚೀನಾ ಬಾಂಧವ್ಯ: ವೃದ್ಧಿಯಾಗದ ವಿಶ್ವಾಸ

Last Updated 3 ಜುಲೈ 2017, 19:25 IST
ಅಕ್ಷರ ಗಾತ್ರ

ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯ ಎರಡು ದೇಶಗಳಾದ ಪ್ರಜಾಸತ್ತಾತ್ಮಕ ಭಾರತ ಮತ್ತು ಕಮ್ಯುನಿಸ್ಟ್‌ ಚೀನಾ ನಡುವೆ ಸುಮಧುರ ಸಂಬಂಧ ಎಂದೂ ಇರಲಿಲ್ಲ. 1962ರ ಯುದ್ಧ ಮತ್ತು 1967ರ ಸಂಘರ್ಷ ಬಿಟ್ಟರೆ ಎರಡೂ ದೇಶಗಳ ಗಡಿಯಲ್ಲಿ ಉದ್ವಿಗ್ನ ಸ್ಥಿತಿಯೂ ಇರಲಿಲ್ಲ. ಆದರೆ ಪಾಕಿಸ್ತಾನ, ಭಯೋತ್ಪಾದನೆ, ಎನ್‌ಎಸ್‌ಜಿ ಸದಸ್ಯತ್ವ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಶಾಶ್ವತ ಸದಸ್ಯತ್ವದಂತಹ ಹಲವು ವಿಚಾರಗಳಿಂದಾಗಿ ಸಂಬಂಧ ಇತ್ತೀಚೆಗೆ ಹದಗೆಟ್ಟಿದೆ. ಸಿಕ್ಕಿಂ ಗಡಿಯಲ್ಲಿ ಚೀನಾದ ರಸ್ತೆ ನಿರ್ಮಾಣಕ್ಕೆ ಭಾರತ ತಡೆ ಒಡ್ಡಿದೆ ಎಂದು ಚೀನಾ ಆರೋಪಿಸಿದೆ. ತನ್ನ ಭೂ ಪ್ರದೇಶದಲ್ಲಿ ಚೀನಾ ಅತಿಕ್ರಮಣ ಮಾಡಿದೆ, ಎರಡು ಬಂಕರ್‌ ನಾಶ ಮಾಡಿದೆ ಎಂದು ಭಾರತ ಹೇಳಿದೆ.  ಪರಿಣಾಮವಾಗಿ ಕಳೆದ  ತಿಂಗಳಿನಿಂದ ಸಿಕ್ಕಿಂ ವಲಯದ ಗಡಿಯಲ್ಲಿ  ಬಿಗುವಿನ ಪರಿಸ್ಥಿತಿ ಉಂಟಾಗಿದೆ. ಎರಡೂ ಕಡೆಯಲ್ಲಿ ತಲಾ  3,000ಕ್ಕೂ ಹೆಚ್ಚು ಯೋಧರನ್ನು ಜಮಾವಣೆ ಮಾಡಲಾಗಿದೆ ಎಂಬ ವರದಿಗಳಿವೆ.  ದಿನಕಳೆದಂತೆ ಸಂಘರ್ಷ ಹೆಚ್ಚುತ್ತಿದೆಯೇ ಹೊರತು ಶಾಂತಿಯ ಪ್ರಯತ್ನ ಕಾಣಿಸುತ್ತಿಲ್ಲ.

* 1962ರಲ್ಲಿ ಎರಡೂ ದೇಶಗಳ ನಡುವೆ ಪೂರ್ಣ ಪ್ರಮಾಣದ ಯುದ್ಧವೇ ನಡೆಯಿತು. ವಾಯುಪಡೆಯನ್ನು ಬಳಸದಿರುವ ಸರ್ಕಾರದ ನಿರ್ಧಾರದಿಂದ  ಭಾರತಕ್ಕೆ ಈ  ಯುದ್ಧದಲ್ಲಿ ಹಿನ್ನಡೆಯಾಯಿತು
* 1967ರಲ್ಲಿಯೂ  ಎರಡೂ ದೇಶಗಳ ನಡುವೆ ದೊಡ್ಡ ಮಟ್ಟದ ಸಂಘರ್ಷವೇ ನಡೆಯಿತು. ಸಿಕ್ಕಿಂ ವಲಯದಿಂದ ಚೀನಾ ಹಿಂದಕ್ಕೆ ಸರಿಯಿತು. ಈ ಸಂಘರ್ಷದಲ್ಲಿ ಚೀನಾಕ್ಕೆ ಹೆಚ್ಚಿನ ಹಿನ್ನಡೆ ಉಂಟಾಯಿತು

ಭಾರತ–ಚೀನಾ ಗಡಿ ವಿವಾದಕ್ಕೆ ಎರಡು ಮುಖ್ಯ ಕಾರಣಗಳು
ಭಾರತ ಮತ್ತು ಚೀನಾ ನಡುವೆ 3,488 ಕಿ.ಮೀ ಉದ್ದ ಗಡಿ ಇದೆ. ಎಲ್ಲ ಭಾಗಗಳಲ್ಲಿ ಗಡಿ ಗುರುತಿಸುವಿಕೆ ಆಗಿಲ್ಲ. ಈ ಗಡಿಯನ್ನು 14 ವಿಭಾಗಗಳಾಗಿ ವಿಂಗಡಿಸಲಾಗಿದೆ.
ಲಡಾಖ್‌ನ ಅಕ್ಸೈ ಚಿನ್‌ ಪ್ರದೇಶದಲ್ಲಿ ಎರಡೂ ದೇಶಗಳ ನಡುವೆ ವಾಸ್ತವ ನಿಯಂತ್ರಣ ರೇಖೆ ಇದೆ. ಇದು ಚೀನಾವು 1962ರಲ್ಲಿ  ನಿಯಂತ್ರಣಕ್ಕೆ ಪಡೆದ ಪ್ರದೇಶ
ಅರುಣಾಚಲ ಪ್ರದೇಶದ 90,000 ಚದರ ಕಿ.ಮೀ ಪ್ರದೇಶ ತನಗೆ ಸೇರಿದ್ದು ಎಂದು ಚೀನಾ ಹಕ್ಕು ಸಾಧಿಸುತ್ತಿದೆ. ಈ ಪ್ರದೇಶವನ್ನು ದಕ್ಷಿಣ ಟಿಬೆಟ್‌ ಎಂದೇ ಗುರುತಿಸುತ್ತಿದೆ.
ಪೂರ್ವ ಮತ್ತು ಪಶ್ಚಿಮ ವಿಭಾಗಗಳಲ್ಲದೆ ಉತ್ತರಾಖಂಡದ ಮಧ್ಯ ವಿಭಾಗದಲ್ಲಿಯೂ ಗಡಿ ವಿವಾದ ಇದೆ. ಇಲ್ಲಿ 10,000 ಚದರ ಕಿ.ಮೀ ಪ್ರದೇಶದ ಮೇಲೆ ಚೀನಾ ಹಕ್ಕು ಸಾಧಿಸುತ್ತಿದೆ.

1986ರ ನಂತರ ಗಡಿ ವಿವಾದ ಪರಿಹಾರಕ್ಕೆ ಹಲವು ಸುತ್ತು ಮಾತುಕತೆಗಳು ನಡೆದಿವೆ. ಆದರೆ ಯಾವುದೇ ಪರಿಹಾರ ಸಿಕ್ಕಿಲ್ಲ.

1. ಬ್ರಿಟಿಷ್‌ ವಸಾಹತುಶಾಹಿ ಬಿಟ್ಟು ಹೋದ ಬಳುವಳಿ: ಸಮಾನ ಸಂಸ್ಕೃತಿ ಮತ್ತು ಪರಂಪರೆ ಇಲ್ಲದ ಹಲವು ಪ್ರದೇಶಗಳನ್ನು ಸೇರಿಸಿಕೊಂಡು ಬ್ರಿಟಿಷರು ಸಾಮ್ರಾಜ್ಯ ವಿಸ್ತರಣೆ ಮಾಡಿದ್ದರು. ಬ್ರಿಟಿಷ್‌ ಆಡಳಿತದ ಕಾಲದಲ್ಲಿ ಚೀನಾದ ಜತೆಗೆ ಬಲವಂತದಿಂದ ಕೆಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿತ್ತು.

2. ಗಡಿ ನಕ್ಷೆ ಬಗ್ಗೆ ಭಿನ್ನ ಗ್ರಹಿಕೆ:  ಬ್ರಿಟಿಷ್‌ ಭಾರತ, ಚೀನಾ ಮತ್ತು ಟಿಬೆಟ್‌  ನಡುವಣ ಶಿಮ್ಲಾ ಸಮಾವೇಶದಲ್ಲಿ ಬ್ರಿಟಿಷ್‌ ಭಾರತದ ಪರವಾಗಿ ವಿದೇಶಾಂಗ ಕಾರ್ಯದರ್ಶಿ ಸರ್ ಮೆಕ್‌ ಮಹೋನ್‌ ಅವರು ಪ್ರಧಾನ ಸಂಧಾನಕಾರರಾಗಿದ್ದರು. ಚೀನಾ ಪ್ರತಿನಿಧಿಯಾಗಿದ್ದ ಇವಾನ್‌ ಚೆನ್‌ ಅವರು ಟಿಬೆಟ್‌ ಪರವಾಗಿ ಸಂಧಾನದಲ್ಲಿ ಭಾಗಿಯಾಗಲು ನಿರಾಕರಿಸಿದರು. ಹಾಗಾಗಿ ಟಿಬೆಟ್‌ ಪ್ರತಿನಿಧಿಗಳ ಜತೆ ಮಹೋನ್‌ ಮಾತುಕತೆ ನಡೆಸಿ ಗಡಿ ಗುರುತಿಸಲಾಯಿತು. ಇದನ್ನು ಮೆಕ್‌ಮಹೋನ್‌ ರೇಖೆ ಎಂದೇ ಕರೆಯಲಾಗುತ್ತದೆ.
ಚೀನಾ ಇದಕ್ಕೆ ವಿರೋಧ ವ್ಯಕ್ತಪಡಿಸಿತು. ಹಾಗಾಗಿ ಇದನ್ನು ಟಿಬೆಟ್‌ ಮತ್ತು ಬ್ರಿಟಿಷ್‌ ಭಾರತದ ನಡುವಣ ದ್ವಿಪಕ್ಷೀಯ ಒಪ್ಪಂದ ಎಂದು ಪರಿಗಣಿಸಲಾಯಿತು. ಪರಿಣಾಮವಾಗಿ ದಕ್ಷಿಣ ಟಿಬೆಟ್‌ ಎಂದು ಕರೆಯಲಾಗುತ್ತಿದ್ದ ತವಾಂಗ್‌ (ಅರುಣಾಚಲ ಪ್ರದೇಶದ ಒಂದು ಭಾಗ) ಬ್ರಿಟಿಷ್‌ ಭಾರತದ ಭಾಗವಾಯಿತು.

ಸ್ವತಂತ್ರ ರಾಷ್ಟ್ರ ಸ್ಥಾನವನ್ನು 1950ರಲ್ಲಿ ಟಿಬೆಟ್‌ ಕಳೆದುಕೊಂಡಿತು. ತವಾಂಗ್‌ ಪ್ರದೇಶದ ನಿಯಂತ್ರಣವನ್ನು ಭಾರತ ಪಡೆದುಕೊಂಡಿತು. ಮೆಕ್‌ಮಹೋನ್‌ ರೇಖೆ ನಿಗದಿಯಾದಾಗ  ಚೀನಾದ ಭಾಗವಾಗಿ ಟಿಬೆಟ್‌ ಇರಲಿಲ್ಲ. ಹಾಗಾಗಿ ಹಳೆಯ ಒಪ್ಪಂದ ಮೌಲಿಕ ಎಂದು ಭಾರತ ವಾದಿಸುತ್ತಿದೆ. ತವಾಂಗ್‌ ಪ್ರದೇಶವನ್ನು ಮರಳಿ ಕೊಡಬೇಕು ಎಂಬುದು ಚೀನಾದ ಆಗ್ರಹ.

ಜಮ್ಮು ಮತ್ತು ಕಾಶ್ಮೀರ ಹಾಗೂ ಅರುಣಾಚಲ ಪ್ರದೇಶದ ಜನರಿಗೆ ಚೀನಾ ವೀಸಾ ನೀಡಿದಾಗ ಭಾರತದ ಪಾಸ್‌ಪೋರ್ಟ್‌ಗೆ ವೀಸಾ ಮೊಹರು ಹಾಕುತ್ತಿರಲಿಲ್ಲ. ಬದಲಿಗೆ ಪ್ರತ್ಯೇಕ ಹಾಳೆಯನ್ನು ಪಾಸ್‌ಪೋರ್ಟ್‌ಗೆ ಸೇರಿಸಿ ಅದಕ್ಕೆ ಮೊಹರು ಹಾಕುತ್ತಿತ್ತು. ಜಮ್ಮು ಮತ್ತು ಕಾಶ್ಮೀರದ ಜನರಿಗೆ ಇಂತಹ ವೀಸಾ ನೀಡಿಕೆಯನ್ನು ಚೀನಾ 2011ರಲ್ಲಿ ನಿಲ್ಲಿಸಿತು. ಆದರೆ, ಅರುಣಾಚಲ ಪ್ರದೇಶದ ಜನರಿಗೆ ಸಂಬಂಧಿಸಿ ಇದೇ ನೀತಿ ಈಗಲೂ ಮುಂದುವರಿದಿದೆ.

ಚೀನಾ–ಭಾರತ ವ್ಯಾಪಾರ ಸಂಬಂಧ
ಏಷ್ಯಾದ ದೊಡ್ಡ ಆರ್ಥಿಕ ಶಕ್ತಿಗಳಾದ ಚೀನಾ ಮತ್ತು ಭಾರತಗಳು 1984ರಲ್ಲಿ ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿ, ಅತ್ಯಂತ ನೆಚ್ಚಿನ ರಾಷ್ಟ್ರಗಳು ಎಂದು ಪರಸ್ಪರ ಗುರುತಿಸಿಕೊಂಡವು.
* 1994ರಲ್ಲಿ ಎರಡು ತೆರಿಗೆ ವ್ಯವಸ್ಥೆಯನ್ನು  ರದ್ದುಗೊಳಿಸುವ ಒಪ್ಪಂದ ಮಾಡಿಕೊಂಡವು.
* 2006ರ ನಂತರ ಎರಡೂ ರಾಷ್ಟ್ರಗಳ ವ್ಯಾಪಾರ ಸಂಬಂಧ ಮತ್ತಷ್ಟು ವೃದ್ಧಿಯಾಯಿತು. ಚೀನಾದ ಸ್ವಾಯತ್ತ ಪ್ರದೇಶವಾದ ಟಿಬೆಟ್‌ ಮತ್ತು ಭಾರತದ ನಡುವೆ ಗಡಿ ವ್ಯಾಪಾರ ಆರಂಭಿಸಲು 40 ವರ್ಷಗಳ ಬಳಿಕ ನಾಥೂ –ಲಾ ಮಾರ್ಗವನ್ನು ತೆರೆಯಲಾಯಿತು.
* ಗಡಿ ಗುರುತಿಸುವಿಕೆ ವಿಚಾರದಲ್ಲಿ ಸಂಘರ್ಷಗಳು ನಡೆಯುತ್ತಿದ್ದರೂ, ಉಭಯ ರಾಷ್ಟ್ರಗಳ ನಡುವಣ ವ್ಯಾಪಾರ–ವಹಿವಾಟಿಗೆ ಧಕ್ಕೆಯಾಗಿಲ್ಲ.

ಭಾರತ ರಫ್ತು ಮಾಡುವ ಪ್ರಮುಖ ವಸ್ತುಗಳು
* ಅದಿರುಗಳು, ಕಬ್ಬಿಣ, ಉಕ್ಕು, ಪ್ಲಾಸ್ಟಿಕ್‌, ಕಾರ್ಬನ್‌ಯುಕ್ತ ರಾಸಾಯನಿಕಗಳು, ಹತ್ತಿ

ಚೀನಾದಿಂದ ಆಮದಾಗುವ ವಸ್ತುಗಳು
* ಯಂತ್ರೋಪಕರಣಗಳು ಮತ್ತು ಎಲೆಕ್ಟ್ರಾನಿಕ್‌ ಸಾಧನಗಳು, ಸಿಮೆಂಟ್‌, ಕಾರ್ಬನ್‌ಯುಕ್ತ ರಾಸಾಯನಿಕಗಳು, ರೇಷ್ಮೆ, ಖನಿಜಯುಕ್ತ ಇಂಧನಗಳು, ತೈಲ

ವ್ಯಾಪಾರದಲ್ಲಿ ಭಾರಿ ಅಸಮತೋಲನ
* ಚೀನಾವು ಭಾರತದ ಅತಿ ದೊಡ್ಡ ವ್ಯಾಪಾರ ಪಾಲುದಾರ. ಆದರೆ, ಎರಡೂ ರಾಷ್ಟ್ರಗಳ ವ್ಯಾಪಾರ ಸಂಬಂಧದಲ್ಲಿ ಭಾರಿ ಅಸಮತೋಲನ ಇದೆ.
* 2007ರ ನಂತರ ಉಭಯ ರಾಷ್ಟ್ರಗಳ ನಡುವಣ ವ್ಯಾಪಾರ ವಾರ್ಷಿಕವಾಗಿ ಶೇ 15ರಷ್ಟು ಹೆಚ್ಚಾಗುತ್ತಿದ್ದರೂ,  ಭಾರತವು ಚೀನಾದೊಂದಿಗೆ ವ್ಯಾಪಾರ ಕೊರತೆಯನ್ನು ಎದುರಿಸುತ್ತಿದೆ.
* 2016ರ ಆರ್ಥಿಕ ವರ್ಷದಲ್ಲಿ ಭಾರತವು 900 ಕೋಟಿ ಡಾಲರ್‌ (ಅಂದಾಜು ₹58,500 ಕೋಟಿ) ಮೌಲ್ಯದ ವಸ್ತುಗಳನ್ನು ಚೀನಾಕ್ಕೆ ರಫ್ತು ಮಾಡಿದೆ.
* ಆದರೆ, ಇದೇ ಅವಧಿಯಲ್ಲಿ ದೇಶವು ಚೀನಾದಿಂದ 6,170 ಕೋಟಿ ಡಾಲರ್‌ (₹ 4 ಲಕ್ಷ ಕೋಟಿ) ಮೌಲ್ಯದ ವಸ್ತುಗಳನ್ನು  ಆಮದು ಮಾಡಿಕೊಂಡಿದೆ.

ಎನ್‌ಎಸ್‌ಜಿಗೆ ಅಡ್ಡಗಾಲು
ಪರಮಾಣು ಪೂರೈಕೆದಾರರ ಗುಂಪಿನ (ಎನ್‌ಎಸ್‌ಜಿ) ಸದಸ್ಯತ್ವಕ್ಕೆ ಭಾರತ ಸತತವಾಗಿ ಪ್ರಯತ್ನಿಸುತ್ತಿದೆ. ಆದರೆ 48 ದೇಶಗಳ ಗುಂಪಿನಲ್ಲಿ ಸದಸ್ಯತ್ವ ಹೊಂದಿರುವ ಚೀನಾ, ಭಾರತದ ಪ್ರವೇಶಕ್ಕೆ ಒಂದಲ್ಲ ಒಂದು ಕಾರಣ ಮುಂದೊಡ್ಡಿ ಅಡ್ಡಿಪಡಿಸುತ್ತಲೇ ಇದೆ. ಭಾರತದ ಸದಸ್ಯತ್ವಕ್ಕೆ ಅಡ್ಡಿಪಡಿಸುವ ಮೂಲಕ ಪಾಕಿಸ್ತಾನಕ್ಕೂ ಸದಸ್ಯತ್ವ ದೊರಕಿಸಿಕೊಡುವುದು ಚೀನಾದ ಉದ್ದೇಶ ಎಂದು ವಿಶ್ಲೇಷಕರು ಹೇಳುತ್ತಾರೆ.

ಗಡಿ ಹಂಚಿಕೊಂಡ ಎಲ್ಲಾ ದೇಶಗಳ ಜತೆಗೂ ವಿವಾದ, ಕಿರಿಕಿರಿ
ಚೀನಾವು  14 ರಾಷ್ಟ್ರಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಗಡಿ ಗುರುತಿಸುವಿಕೆ ವಿಚಾರದಲ್ಲಿ ಬಹುತೇಕ ಎಲ್ಲ ನೆರೆ ರಾಷ್ಟ್ರಗಳ ಜತೆ ಅದು ಸಂಘರ್ಷಕ್ಕೆ ಇಳಿದಿದೆ.
ಅಫ್ಗಾನಿಸ್ತಾನ, ಕಜಾಕಿಸ್ತಾನ, ಪಾಕಿಸ್ತಾನ, ಮ್ಯಾನ್ಮಾರ್‌, ರಷ್ಯಾ ಮತ್ತು ತಾಜಿಕಿಸ್ತಾನಗಳೊಂದಿಗಿನ ಗಡಿ ವಿವಾದಗಳನ್ನು ಅದು ಬಗೆಹರಿಸಿಕೊಂಡಿದೆ.

ಭೂಮಿ ಮಾತ್ರ ಅಲ್ಲ;  ಜಲ ಗಡಿ ವಿಚಾರವಾಗಿಯೂ ಚೀನಾ ನೆರೆ ರಾಷ್ಟ್ರಗಳೊಂದಿಗೆ ವೈಮನಸ್ಸು ಕಟ್ಟಿಕೊಂಡಿದೆ. ಅದು ಜಪಾನ್‌, ದಕ್ಷಿಣ ಕೊರಿಯ, ವಿಯೆಟ್ನಾಂ, ತೈವಾನ್‌ ಮತ್ತು ಫಿಲಿಪ್ಪೀನ್ಸ್‌ಗಳೊಂದಿಗೆ ಜಲ ಗಡಿ ಹಂಚಿ ಕೊಂಡಿದ್ದು, ಎಲ್ಲ ಗಡಿಗಳೂ ವಿವಾದದಲ್ಲಿವೆ.

ನದಿ ನೀರು ವಿವಾದ: ಲಾವೋಸ್‌, ಕಾಂಬೋಡಿಯಾ, ವಿಯೆಟ್ನಾಂ, ಥಾಯ್ಲೆಂಡ್‌ ಸೇರಿ ನದಿ ಹರಿದು ಹೋಗುವ ನೆರೆಯ ಎಲ್ಲ ದೇಶಗಳ ಜತೆಗೂ ನೀರು ಹಂಚಿಕೆ ವಿವಾದವನ್ನು ಚೀನಾ ಹೊಂದಿದೆ.

ಬ್ರಹ್ಮಪುತ್ರ ನದಿ ನೀರು ಹಂಚಿಕೆ ಭಾರತ–ಚೀನಾ ನಡುವಣ ದೊಡ್ಡ ವಿವಾದ. ಟಿಬೆಟ್‌ನಲ್ಲಿ ಬ್ರಹ್ಮಪುತ್ರವನ್ನು ತ್ಸಾಂಗ್‌ಪೊ ಎಂದು ಕರೆಯುತ್ತಾರೆ. ನದಿಯ ಮೇಲಿನ ಪ್ರದೇಶದಲ್ಲಿ ಹಲವು ಅಣೆಕಟ್ಟೆಗಳನ್ನು ಚೀನಾ ನಿರ್ಮಿಸಿದೆ.

ಭಾರತ ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದೆ. ಆದರೆ ನೀರು ಹಂಚಿಕೆಗೆ ಯಾವುದೇ ಒಪ್ಪಂದ ಇಲ್ಲ. ಟಿಬೆಟ್‌ ಭಾಗದಲ್ಲಿರುವ ಬ್ರಹ್ಮಪುತ್ರದ ನೀರಿನ ಮಟ್ಟದ ಬಗ್ಗೆಯೂ ಚೀನಾ ಮಾಹಿತಿ ಬಹಿರಂಗಪಡಿಸುವುದಿಲ್ಲ. ಹಾಗಾಗಿ, ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ವಿಸ್ತಾರ ಪ್ರದೇಶಗಳು ಹಠಾತ್‌ ಪ್ರವಾಹದ ಭೀತಿಯಲ್ಲಿಯೇ ಇರುತ್ತವೆ.  ಪ್ರವಾಹ ಸಮಸ್ಯೆ ಪರಿಹಾರಕ್ಕಾಗಿಯೇ  ಸುಮಾರು 25 ಅಣೆಕಟ್ಟೆಗಳನ್ನು ನಿರ್ಮಿಸುವ ಯೋಜನೆಯನ್ನು ಭಾರತ ರೂಪಿಸಿದೆ.

ಸುತ್ತುವರಿಯುವ ನೀತಿ
ಭಾರತದ ಜಲಗಡಿಗಳ ಸುತ್ತಲೂ ತನ್ನ ನೆಲೆ ಸ್ಥಾಪಿಸುವುದು ಚೀನಾದ ಅಘೋಷಿತ ನೀತಿ. ಹಿಂದೂ ಮಹಾಸಾಗರದಲ್ಲಿ ಬಹಳ ಹಿಂದಿನಿಂದಲೂ ಚೀನಾದ ಉಪಸ್ಥಿತಿ ಇದೆ.
ಈಗ ಮ್ಯಾನ್ಮಾರ್‌ನ ಕೊಕೋಸ್‌ ದ್ವೀಪ, ಬಾಂಗ್ಲಾದೇಶದ ಚಿತ್ತಗಾಂಗ್‌, ಶ್ರೀಲಂಕಾದ ಹಂಬಂತೋಟ, ಮಾಲ್ಡೀವ್ಸ್‌ನ ಮರಾವೊ ಅಟಾಲ್‌, ಪಾಕಿಸ್ತಾನದ ಗ್ವಾದರ್‌ಗಳಲ್ಲಿ ಚೀನಾ ನೌಕಾ ನೆಲೆಗಳನ್ನು ಹೊಂದಿದೆ. ಮಾಲೆಯಲ್ಲಿ ಸಂಪೂರ್ಣ ಸಕ್ರಿಯವಾಗಿರುವ ರಾಯಭಾರ ಕಚೇರಿಗಳನ್ನು ಹೊಂದಿರುವ ದೇಶಗಳು ಭಾರತ ಮತ್ತು ಚೀನಾ ಮಾತ್ರ.
ಭಾರತದ ತಿರುಗೇಟು: ಚೀನಾದ ಸುತ್ತಲಿನ ದೇಶಗಳ ಜತೆ ಉತ್ತಮ ಸಂಬಂಧ ಹೊಂದುವ ನೀತಿಯನ್ನು ಭಾರತ ಅನುಸರಿಸುತ್ತಿದೆ. ಜಪಾನ್‌, ದಕ್ಷಿಣ ಕೊರಿಯ ಮತ್ತು ವಿಯೆಟ್ನಾಂ ಜತೆಗೆ ಭಾರತ ಒಳ್ಳೆಯ ಬಾಂಧವ್ಯ ಹೊಂದಿದೆ. ಅದಲ್ಲದೆ, ಚೀನಾದ ಮಧ್ಯ ಏಷ್ಯಾದ ನೆರೆ ದೇಶಗಳ (ಅಫ್ಗಾನಿಸ್ತಾನ, ಕಜಾಕಿಸ್ತಾನ, ಕಿರ್ಗಿಸ್ತಾನ, ಉಜ್ಬೆಕಿಸ್ತಾನ, ತಾಜಿಕಿಸ್ತಾನ, ತುರ್ಕಮೆನಿಸ್ತಾನ) ಜತೆಗೂ ಉತ್ತಮ ಸಂಬಂಧ ಹೊಂದಿದೆ.

ಭೂತಾನ್‌, ನೇಪಾಳದ ಸಂಬಂಧವೂ ಅಪಥ್ಯ
ಭೂತಾನ್‌ ಮತ್ತು ನೇಪಾಳದ ಜತೆಗೆ ಬಹಳ ಹಿಂದಿನಿಂದಲೂ ಪರಂಪರೆ, ಸಂಸ್ಕೃತಿ ಮತ್ತು ವ್ಯಾಪಾರ ಸಂಬಂಧವನ್ನು ಭಾರತ ಹೊಂದಿದೆ. ಆದರೆ ಇದು ಚೀನಾಕ್ಕೆ ಇಷ್ಟವಿಲ್ಲ. ಭೂತಾನ್‌ ಗಡಿಗಳನ್ನು ರಕ್ಷಿಸುವ ಹೊಣೆಯನ್ನು ಭಾರತ ವಹಿಸಿಕೊಂಡಿದೆ. ನೇಪಾಳದ ಬಹುತೇಕ ಆರ್ಥಿಕ ಚಟುವಟಿಕೆಗಳು ಭಾರತದ ಮೂಲಕವೇ ನಡೆಯುತ್ತಿವೆ. ತೀರಾ ಇತ್ತೀಚೆಗೆ ಚೀನಾದ ಜತೆಗೆ ನೇಪಾಳ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿದೆ.

ಪಾಕಿಸ್ತಾನಕ್ಕೆ ನಿರಂತರ ಬೆಂಬಲ
ಪಾಕಿಸ್ತಾನದ ನೆಲದಿಂದ ಉಂಟಾಗುವ ಗಡಿಯಾಚೆಗಿನ ಭಯೋತ್ಪಾದನಾ ಕೃತ್ಯಗಳನ್ನು ಭಾರತ ಖಂಡಿಸುತ್ತಲೇ ಬಂದಿದೆ. ಆದರೆ ಅಂತರರಾಷ್ಟ್ರೀಯ ಮಟ್ಟದ ಪ್ರತಿ ವೇದಿಕೆಯಲ್ಲಿಯೂ ಪಾಕಿಸ್ತಾನಕ್ಕೆ ಚೀನಾ ಬೆಂಬಲ ನೀಡುತ್ತಿದೆ.

ಜೈಷ್‌–ಎ–ಮೊಹಮ್ಮದ್‌ ಮುಖ್ಯಸ್ಥ ಮಸೂದ್‌ ಅಜರ್‌ನ ಮೇಲೆ ವಿಶ್ವಸಂಸ್ಥೆಯ ಮೂಲಕ ನಿಷೇಧ ಹೇರಲು ಭಾರತ ಯತ್ನಿಸುತ್ತಿದೆ. ಭಾರತದ ಮೇಲೆ ಈತ ಹಲವು ಭಯೋತ್ಪಾದನಾ ದಾಳಿ ನಡೆಸಿದ್ದಾನೆ ಎಂದು ಭಾರತ ಹೇಳುತ್ತಿದೆ. ಆದರೆ ನಿಷೇಧ ಹೇರದಂತೆ ಚೀನಾ ಸದಾ ತಡೆಯುತ್ತಲೇ ಇದೆ.

ಸಿಪಿಇಸಿ: ಚೀನಾಕ್ಕೆ ಪಾಕಿಸ್ತಾನ ಅತ್ಯಂತ ನೆಚ್ಚಿನ ರಾಷ್ಟ್ರ. ಆ ದೇಶದಲ್ಲಿ ಚೀನಾ ಭಾರಿ ಹೂಡಿಕೆಯನ್ನೂ ಮಾಡಿದೆ. ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗಲಿದೆ. ಇದನ್ನು ಭಾರತ ವಿರೋಧಿಸುತ್ತಿದೆ.

ಭಾರತದ ಭೂಪ್ರದೇಶದ ಮೇಲೆ ಸಿಪಿಇಸಿ ಮೂಲಕ ಚೀನಾ ಅತಿಕ್ರಮಣ ನಡೆಸುತ್ತಿದೆ ಎಂದು ಭಾರತ ಹೇಳುತ್ತಿದೆ. ಆದರೆ ಚೀನಾ ಇದಕ್ಕೆ ಬೆಲೆಯನ್ನೇ ಕೊಟ್ಟಿಲ್ಲ.

ಗ್ವಾದರ್‌ನಲ್ಲಿ ನೆಲೆ: ಕರಾಚಿ ಸಮೀಪದ ಗ್ವಾದರ್‌ ಬಂದರನ್ನು ಚೀನಾ ಅಭಿವೃದ್ಧಿಪಡಿಸುತ್ತಿದೆ. ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾ ಜತೆ ವ್ಯಾಪಾರ ನಡೆಸಲು ಇದು ಚೀನಾಕ್ಕೆ ಸಹಕಾರಿ. ಅದಕ್ಕಿಂತ ಮುಖ್ಯವಾಗಿ, ಭಾರತದ ಗಡಿಗಳ ಸಮೀಪ ಹಿಂದೂ ಮಹಾಸಾಗರದ ಉತ್ತರ ಭಾಗದಲ್ಲಿ ಚೀನಾಕ್ಕೆ ನೌಕಾ ನೆಲೆಯೊಂದು ದೊರೆಯುತ್ತದೆ.

ದಲೈಲಾಮಾ ಮತ್ತು ಟಿಬೆಟ್‌
ಟಿಬೆಟನ್ನು 1950ರಲ್ಲಿ ಚೀನಾ ವಶಪಡಿಸಿಕೊಂಡಿತು. 1913ರಲ್ಲಿಯೇ ಚೀನಾದಿಂದ ಟಿಬೆಟ್‌ ಸ್ವಾತಂತ್ರ್ಯ ಘೋಷಿಸಿಕೊಂಡಿತ್ತು. ಏಳು ಅಂಶಗಳ ಒಪ್ಪಂದದ ಮೂಲಕ ಟಿಬೆಟನ್ನು ಚೀನಾದ ಜತೆಗೆ ವಿಲೀನಗೊಳಿಸಲಾಯಿತು. 2003ರಲ್ಲಿ ಭಾರತ ಇದಕ್ಕೆ ಮಾನ್ಯತೆ ನೀಡಿದೆ. ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಚೀನಾಕ್ಕೆ ಭೇಟಿ ಕೊಟ್ಟಾಗ ಇದನ್ನು ಅಧಿಕೃತವಾಗಿ ಘೋಷಿಸಿದರು.

ಟಿಬೆಟ್‌ನ ಮೇಲೆ ಚೀನಾದ ಆಕ್ರಮಣ ಅಲ್ಲಿನ ಜನರಿಗೆ ಬೇಕಿರಲಿಲ್ಲ. ಅಲ್ಲಿ ದೊಡ್ಡ ಬಂಡಾಯ ಆರಂಭವಾಯಿತು. ಚೀನಾ ಅದನ್ನು ಬಲಪ್ರಯೋಗದ ಮೂಲಕ ಹತ್ತಿಕ್ಕಿತು. ಟಿಬೆಟ್‌ನ ಧಾರ್ಮಿಕ ಮತ್ತು ರಾಜಕೀಯ ನಾಯಕ 14ನೇ ದಲೈಲಾಮಾ 1959ರಲ್ಲಿ ಭಾರತಕ್ಕೆ ಪಲಾಯನ ಮಾಡಿದರು. ದಲೈಲಾಮಾ ಮತ್ತು ಅವರ ಅನುಯಾಯಿಗಳಿಗೆ ಭಾರತ ರಾಜಕೀಯ ಆಶ್ರಯ ನೀಡಿತು. ಟಿಬೆಟ್‌ನಲ್ಲಿ ರಾಜಕೀಯ ಸಂಘರ್ಷಕ್ಕೆ ಭಾರತವೇ ಕುಮ್ಮಕ್ಕು ನೀಡುತ್ತಿದೆ ಎಂದು ಚೀನಾ ಆರೋಪಿಸುತ್ತಿದೆ.

ದಲೈಲಾಮಾ ಅವರು ಟಿಬೆಟ್‌ನ ದೇಶಭ್ರಷ್ಟ ಸರ್ಕಾರ ರಚಿಸಿಕೊಂಡಿದ್ದಾರೆ. ಇದಕ್ಕೆ ಯಾವುದೇ ಅಧಿಕಾರ ಅಥವಾ ಕಾರ್ಯವ್ಯಾಪ್ತಿ ಇಲ್ಲ. ಭಾರತ ಮತ್ತು ಇತರ ಹಲವು ದೇಶಗಳಲ್ಲಿ ಟಿಬೆಟ್‌ನ ಜನರು ಚೀನಾ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ದಲೈಲಾಮಾ ಅವರು ಭಾರತದಲ್ಲಿ ಮುಕ್ತವಾಗಿ ಓಡಾಡುತ್ತಿರುವುದಕ್ಕೂ ಚೀನಾ ಆಕ್ಷೇಪಿಸಿದೆ. ಇತ್ತೀಚೆಗೆ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದೆ.

ಚೀನಾಕ್ಕೆ ಶೀಘ್ರದಲ್ಲಿ ಹೊಸ ರಾಯಭಾರಿ
ನವದೆಹಲಿ: ಪಶ್ಚಿಮ ಭೂತಾನ್‌ ಗಡಿ ಭಾಗದಲ್ಲಿ ಚೀನಾ ಮತ್ತು ಭಾರತೀಯ ಸೈನಿಕರ ನಡುವಣ ಸಂಘರ್ಷ ಹೆಚ್ಚಾಗಿರುವುದರ ನಡುವೆಯೇ, ಚೀನಾಕ್ಕೆ ಹೊಸ ರಾಯಭಾರಿಯನ್ನು ನೇಮಿಸಲು ಭಾರತ ಸಿದ್ಧತೆ ನಡೆಸಿದೆ.

ಪಾಕಿಸ್ತಾನಕ್ಕೆ ರಾಯಭಾರಿಯಾಗಿರುವ,1984ನೇ ಸಾಲಿನ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯಾಗಿರುವ ಗೌತಮ್‌ ಬಂಬಾವಾಲೆ ಅವರ ಹೆಸರು ಮುಂಚೂಣಿಯಲ್ಲಿದೆ.

ಗೌತಮ್‌ ಅವರ ಸಹಪಾಠಿ, ಬಾಂಗ್ಲಾದೇಶದಲ್ಲಿ ಭಾರತದ ಹೈಕಮಿಷನರ್ ಆಗಿರುವ ಹರ್ಷವರ್ಧನ್‌ ಶ್ರಿಂಗ್ಲಾ ಅವರ ಹೆಸರು  ಕೂಡ ಕೇಳಿ ಬರುತ್ತಿದೆ. ಈಗ ಚೀನಾದಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿಜಯ್‌ ಗೋಖಲೆ ಅವರು ಶೀಘ್ರದಲ್ಲಿ ಭಾರತಕ್ಕೆ ಹಿಂದಿರುಗಲಿದ್ದು, ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಕಾರ್ಯದರ್ಶಿ ಮಟ್ಟದ ಹುದ್ದೆ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಂದಿನ ಜನವರಿಯಲ್ಲಿ ಎಸ್‌. ಜೈಶಂಕರ್‌ ಅವರ ಅವಧಿ ಮುಗಿದ ನಂತರ, ವಿಜಯ್‌ ಅವರು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಸಾಧ್ಯತೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT