ಭಾನುವಾರ, ಡಿಸೆಂಬರ್ 8, 2019
21 °C

30 ಸಾವಿರ ಬಾಕ್ಸ್ ಮದ್ಯ ಮಾರಾಟ ಕುಸಿತ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

30 ಸಾವಿರ ಬಾಕ್ಸ್ ಮದ್ಯ ಮಾರಾಟ ಕುಸಿತ!

ಬಾಗಲಕೋಟೆ: ಸುಪ್ರೀಂಕೋರ್ಟ್‌ ಆದೇಶದಂತೆ ಜಿಲ್ಲೆಯಲ್ಲಿ ಹೆದ್ದಾರಿ ಪಕ್ಕದ 82 ಬಾರ್ ಮತ್ತು ವೈನ್‌ಶಾಪ್‌ಗಳು ಬಂದ್ ಆದ ಪರಿಣಾಮ ಪ್ರತಿ ನಿತ್ಯ 30 ಸಾವಿರ ಬಾಕ್ಸ್ ಮದ್ಯ ಮಾರಾಟ ಕುಸಿತ ಕಂಡಿದೆ.

‘ಮದ್ಯಮಾರಾಟ ಹಾಗೂ ಅದಕ್ಕೆ ಪೂರಕವಾದ ಹೋಟೆಲ್, ಪಾನ್‌ಶಾಪ್‌, ತಳ್ಳುಗಾಡಿಗಳ ವಹಿವಾಟಿಗೆ ಪ್ರತಿ ನಿತ್ಯ ಅಂದಾಜು ₹ 20 ಕೋಟಿ ನಷ್ಟವಾಗುತ್ತಿದೆ’ ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಬಸವರಾಜ ಸಂದಿಗವಾಡ ತಿಳಿಸಿದರು.

ನೀರವ ಮೌನ: ಹೆದ್ದಾರಿ ಪಕ್ಕದ ಮದ್ಯದಂಗಡಿಗಳು ಬಂದ್‌ ಆದ ಕಾರಣ ಇಲ್ಲಿನ ಗದ್ದನಕೇರಿ ಕ್ರಾಸ್ ಹಾಗೂ ಮುಧೋಳ ತಾಲ್ಲೂಕು ಲೋಕಾಪುರ ವೃತ್ತದಲ್ಲಿ ಕಳೆದ ಮೂರು ದಿನಗಳಿಂದ ನೀರವ ಮೌನ ಆವರಿಸಿದೆ.

ಹುಬ್ಬಳ್ಳಿ–ಸೊಲ್ಲಾಪುರ ನಡುವಿನ ರಾಷ್ಟ್ರೀಯ ಹೆದ್ದಾರಿ 218 ಹಾಗೂ ಬೆಳಗಾವಿ–ರಾಯಚೂರು ರಾಜ್ಯ ಹೆದ್ದಾರಿಯ ಸಂಗಮ ಸ್ಥಾನವಾದ ಗದ್ದನಕೇರಿ ಕ್ರಾಸ್‌ನಲ್ಲಿ ಆರು ಮದ್ಯದಂಗಡಿ ಬಾಗಿಲು ಹಾಕಿವೆ. ಧಾರವಾಡ– ರಾಮದುರ್ಗ–ವಿಜಯಪುರ ರಾಜ್ಯ ಹೆದ್ದಾರಿ ಹಾಗೂ ಬೆಳಗಾವಿ–ರಾಯಚೂರು ರಾಜ್ಯ ಹೆದ್ದಾರಿ ಸಂಧಿಸುವ ಕಾರಣ ಜಂಕ್ಷನ್ ಎಂದೇ ಹೆಸರಾದ ಲೋಕಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 10 ಮದ್ಯದಂಗಡಿಗಳು ನೆಲೆ ಕಳೆದುಕೊಂಡಿವೆ. ಇದರಿಂದ ಸಂಜೆ ವೇಳೆ ಕಾಣುತ್ತಿದ್ದ ವಾಹನ ಹಾಗೂ ಜನದಟ್ಟಣೆ, ಗೌಜು–ಗದ್ದಲಕ್ಕೆ ಈಗ ಕಾಣುತ್ತಿಲ್ಲ.

13,000 ಬಾಕ್ಸ್ ಮದ್ಯ ಮಾರಾಟ: ಪ್ರತಿ ತಿಂಗಳು ಗದ್ದನಕೇರಿ ಕ್ರಾಸ್‌ನಲ್ಲಿ 6000 ಹಾಗೂ ಲೋಕಾಪುರದಲ್ಲಿ 9000 ಬಾಕ್ಸ್ ಮದ್ಯ ಮಾರಾಟ ವಾಗುತ್ತಿದ್ದವು. ಆದರೆ ನ್ಯಾಯಾಲಯದ ಆದೇಶದಿಂದ ಇದಕ್ಕೆ ಬ್ರೇಕ್ ಬಿದ್ದಿದೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಬಸವರಾಜ ಸಂದಿಗವಾಡ ಹೇಳುತ್ತಾರೆ.

ಹೋಟೆಲ್ ವಹಿವಾಟಿಗೂ ಧಕ್ಕೆ:

ಮದ್ಯದಂಗಡಿಗಳು ಮುಚ್ಚಿದ ಪರಿಣಾಮ ಅವುಗಳನ್ನು ಅವಲಂಬಿಸಿದ್ದ ಬೀಡಾ ಅಂಗಡಿ, ಹೋಟೆಲ್, ಬೀದಿ ಬದಿಯ ಮಾರಾಟಗಾರರು, ಬೀಡಿ ಅಂಗಡಿಗಳ ಆದಾಯಕ್ಕೆ ಕತ್ತರಿ ಬಿದ್ದಿದೆ. ಗದ್ದನಕೇರಿ ಕ್ರಾಸ್‌ನಲ್ಲಿ 13 ಸಾವಜಿ ಹೋಟೆಲ್‌ಗಳಿವೆ (ಮಾಂಸಹಾರ). 10ಕ್ಕೂ ಹೆಚ್ಚು ವೀರಶೈವರ ಖಾನಾವಳಿ ಇವೆ.

‘ಮದ್ಯ ಸೇವನೆಗೆ ಬಾರ್‌ ಮತ್ತು ವೈನ್‌ಶಾಪ್‌ಗೆ ಹೋಗುತ್ತಿದ್ದ ಗಿರಾಕಿಗಳು ಊಟಕ್ಕೆ ಇಲ್ಲಿಗೇ ಬರುತ್ತಿದ್ದರು. ಮೂರು ದಿನಗಳಿಂದ ಗಿರಾಕಿಗಳೇ ಬರುತ್ತಿಲ್ಲ. ದಿನಕ್ಕೆ ₹ 5ರಿಂದ 6 ಸಾವಿರ ಮೊತ್ತದ ವಹಿವಾಟು ಆಗುತ್ತಿತ್ತು. ಈಗ ₹ 2ರಿಂದ 3 ಸಾವಿರಕ್ಕೆ ಇಳಿದಿದೆ’ ಎಂದು ಗದ್ದನಕೇರಿಯ ಸಾವಜಿ ಹೋಟೆಲ್‌ ಮಾಲೀಕ ಬಸವರಾಜ ತಳವಾರ ಹೇಳುತ್ತಾರೆ.

‘ದಿನಕ್ಕೆ 15 ಕೆ.ಜಿ ಎಗ್‌ರೈಸ್ ಮಾರಾಟ ಮಾಡುತ್ತಿದ್ದೆನು. ಮೂರು ದಿನಗಳಿಂದ ಐದು ಕೆ.ಜಿಯೂ ಮಾರಾಟ ವಾಗುತ್ತಿಲ್ಲ’ ಎಂದು ಗದ್ದನಕೇರಿ ಕ್ರಾಸ್‌ನಲ್ಲಿರುವ ವೈನ್‌ಶಾಪ್ ಎದುರಿನ ತಳ್ಳುಗಾಡಿ ವ್ಯಾಪಾರಿ ಸಂಜೀವ ಜಾಧವ ಅಳಲು ತೋಡಿಕೊಂಡರು.

ಸ್ಥಳಾಂತರಕ್ಕೆ ಸ್ಥಳೀಯರ ವಿರೋಧ

ಬೀಳಗಿ ತಾಲ್ಲೂಕು ತೆಗ್ಗಿಯಲ್ಲಿ ಹೆದ್ದಾರಿ ಪಕ್ಕದಲ್ಲಿದ್ದ ಎಂಎಸ್‌ಐಎಲ್‌ ಮಳಿಗೆಯನ್ನು ಸಮೀಪದ ಗಿರಿಸಾಗರ ಗ್ರಾಮಕ್ಕೆ, ಜಮಖಂಡಿಯ ಆರ್‌ಟಿಒ ಕಚೇರಿ ಹಾಗೂ ಚಿಕ್ಕಲಕಿ ಕ್ರಾಸ್‌ನ ಮದ್ಯದಂಗಡಿಗಳನ್ನು ಹೆದ್ದಾರಿಯಿಂದ ದೂರಕ್ಕೆ ಸ್ಥಳಾಂತರಿಸಲಾಗಿದೆ. ಉಳಿದ ಕಡೆ ಸ್ಥಳಾಂತರಕ್ಕೆ ಸ್ಥಳೀಯರ ವಿರೋಧ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಬೀಳಗಿ ತಾಲ್ಲೂಕು ಕಾತರಕಿಯಲ್ಲಿ ಗ್ರಾಮಸ್ಥರ ವಿರೋಧದ ಕಾರಣ ಹೆದ್ದಾರಿಯಿಂದ ಅಲ್ಲಿಗೆ ಸ್ಥಳಾಂತರಿಸಲು ಸಾಧ್ಯವಾಗಲಿಲ್ಲ’ ಎಂದು ಸಂದಿಗವಾಡ ಹೇಳುತ್ತಾರೆ.

ಪ್ರತಿಕ್ರಿಯಿಸಿ (+)