ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕೊರತೆ ಮುಂದುವರಿದರೆ ಪರಿಸ್ಥಿತಿ ಭೀಕರ

Last Updated 4 ಜುಲೈ 2017, 9:19 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಮಳೆ ಕೊರತೆ ಹೀಗೇ ಮುಂದುವರಿದರೆ ಬೆಳೆ ನಷ್ಟ, ಕುಡಿಯುವ ನೀರಿನ ಸಮಸ್ಯೆ, ಮೇವು ಕೊರತೆ ಉಲ್ಬಣಗೊಳ್ಳಲಿದ್ದು, ಪರಿಸ್ಥಿತಿ ಇನ್ನಷ್ಟು ಭೀಕರವಾಗಲಿದೆ ಎಂದು ಜಿಲ್ಲಾ ಪಂಚಾಯ್ತಿ ವಿವಿಧ ಇಲಾಖೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವರ್ಷವೂ ಬರದ ಮುನ್ಸೂಚನೆ ನೀಡಿದರು.

ಜೂನ್‌ ಅಂತ್ಯಕ್ಕೆ ವಾಡಿಕೆ ಮಳೆ 184 ಮಿ.ಮೀಗೆ ಸರಾಸರಿಯಾಗಿ 127.6 ಮಿ.ಮೀ ವಾಸ್ತವಿಕ ಮಳೆಯಾಗಿದೆ. ಶೇ 31ರಷ್ಟು ಮಳೆ ಕೊರತೆಯಾಗಿದೆ. ಮುಂಗಾರು ಹಂಗಾಮಿಗೆ 3.40 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿಗೆ ಕೇವಲ 70 ಸಾವಿರ ಹೆಕ್ಟೇರ್ ಬಿತ್ತನೆಯಾಗಿದೆ.

ಇದರಲ್ಲಿ 6ರಿಂದ 8 ಸಾವಿರ ಹೆಕ್ಟೇರ್ ಒಣ ಭೂಮಿಯಲ್ಲಿ ಯಾವುದೇ ಬೆಳೆ ಬಂದಿಲ್ಲ. 25ಸಾವಿರ ಹೆಕ್ಟೇರ್‌ ಬೆಳೆ ಮೊಳಕೆ ಒಡೆದು ಬಾಡುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕೃಷಿಗೆ ಭಾರಿ ಹಿನ್ನೆಡೆಯಾಗಲಿದೆ ಎಂದು ಇಲಾಖೆ ಕೃಷಿ ಜಂಟಿ ನಿರ್ದೇಶಕ ಸದಾಶಿವ ಸಭೆಗೆ ತಿಳಿಸಿದರು.

ಮಳೆ ಕೊರತೆಯಿಂದ 783 ಹೆಕ್ಟೇರ್‌ನಲ್ಲಿರುವ 37,700 ತೆಂಗಿನ ಮರಗಳು ಸಂಪೂರ್ಣ ನಾಶವಾಗಿವೆ. 20 ಸಾವಿರ ಹೆಕ್ಟೇರ್ ಅಡಿಕೆ ತೋಟ ಹಾನಿಯಾಗಿದೆ. ಚನ್ನಗಿರಿ ತಾಲ್ಲೂಕು ಒಂದರಲ್ಲೇ 5ಸಾವಿರ ಎಕರೆ ತೋಟ ಹಾಳಾಗಿದೆ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ವೇದಮೂರ್ತಿ ಹೇಳಿದರು.

ಪ್ರತಿಕ್ರಿಯಿಸಿದ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ, ಬೆಳೆ ನಷ್ಟ ಕುರಿತಂತೆ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು ಜಂಟಿ ಸರ್ವೆ ನಡೆಸಬೇಕು. ಈ ವರದಿ ಆದಷ್ಟು ಬೇಗ ಸಲ್ಲಿಸಿದರೆ ಸರ್ಕಾರ ಉನ್ನತ ಮಟ್ಟದ ಸಭೆ ನಡೆಸಿ ಪರಿಹಾರ ನೀಡಲು ಮುಂದಾಗಲಿದೆ ಎಂದು ಭರವಸೆ ನೀಡಿದರು.

ಶಾಸಕರಾದ ಡಿ.ಜಿ.ಶಾಂತನಗೌಡ, ವಡ್ನಾಳ್ ರಾಜಣ್ಣ ಮಾತನಾಡಿ, ‘ಸರ್ವೆಗೆ ಕಂದಾಯ ಇಲಾಖೆ ಅಧಿಕಾರಿಗಳ ನೆರವು ಪಡೆಯಿರಿ. ಅವರಿಗೆ ಹೆಚ್ಚಿನ ಮಾಹಿತಿ ಇದೆ’ ಎಂದು ಸೂಚಿಸಿದರು.

ಬೋರ್‌ವೆಲ್‌ ಬಾಕಿ ಹಣ ಪಾವತಿಸಿ: ಬೋರ್‌ವೆಲ್ ಕೊರೆದವರಿಗೆ ಜಿಲ್ಲಾ ಪಂಚಾಯ್ತಿ ಇನ್ನೂ ಹಣ ಪಾವತಿಸಿಲ್ಲ.  ಹಣ ಪಾವತಿಸಲು ಇರುವ ಷರತ್ತು ಗಳನ್ನು ಸರಳೀಕರ ಣಗೊಳಿ ಸಬೇಕು. ನೀರು ನಿರ್ವಹಣೆ ಕುರಿತಂತೆ ವಾರ ಕ್ಕೊಮ್ಮೆ ಜಿಲ್ಲಾಡಳಿತ ಸಭೆ ನಡೆಸಬೇಕು ಎಂದು ಶಾಸಕ ಕೆ.ಶಿವಮೂರ್ತಿ ಸಲಹೆ ನೀಡಿದರು. ಉಳಿದ ಶಾಸಕರೂ ಇದನ್ನು ಅನುಮೋದಿಸಿದರು.

‘ಹಳ್ಳಿಗಳಲ್ಲಿ ಜನರ ಕಾಟ ತಡೆಯಲಾರದೆ ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದೇನೆ. ಅಲ್ಪಸ್ವಲ್ಪ ಮಳೆಯಿಂದ ತುಂಗಭದ್ರಾ ನದಿಯಲ್ಲಿ ನೀರು ಬಂದಿದ್ದರೂ ಜನರಿಗೆ ಕುಡಿಯುವ ನೀರು ಸಿಗುತ್ತಿಲ್ಲ’ ಎಂದು ಶಿವಮೂರ್ತಿ ಆಕ್ಷೇಪಿಸಿದರು.

‘ತುರ್ತು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸರ್ಕಾರದಲ್ಲಿ ಅನುದಾನದ ಕೊರತೆ ಇಲ್ಲ’ ಎಂದು ಸ್ಪಷ್ಟನೆ ನೀಡಿದ ಸಚಿವರು, ‘ರಾಜನಹಳ್ಳಿ ಜಾಕ್‌ವೆಲ್‌ ಮಟ್ಟ ಬಹಳ ಎತ್ತರದಲ್ಲಿರುವುದರಿಂದ ಆ ಮಟ್ಟಕ್ಕೆ ಇನ್ನೂ ನೀರು ಹರಿಯುತ್ತಿಲ್ಲ. ನದಿಯಲ್ಲೇ ಪಂಪ್‌ಸೆಟ್‌ ಇಟ್ಟು ಅಲ್ಲಿಂದ ನೀರನ್ನು ಜಾಕ್‌ವೆಲ್‌ಗೆ ಹರಿಸುವ ಕೆಲಸ ಭರದಿಂದ ಸಾಗಿದೆ’ ಎಂದರು.

ವಿಫಲಗೊಂಡ 260 ಬೋರ್‌ ವೆಲ್‌ಗಳಿಗೆ ಸಂಬಂಧಿಸಿದಂತೆ ಈಗಾಗಲೇ 200 ಬೋರ್‌ವೆಲ್‌ಗಳ ವೆಚ್ಚ ಪಾವತಿಸಲಾಗಿದೆ. 60 ಬಾಕಿ ಇವೆ ಎಂದು ಲೋಕೋಪಯೋಗಿ ಇಲಾಖೆ ಕಾರ್ಯ ಪಾಲಕ ಎಂಜಿನಿಯರ್‌ ರಮೇಶ್‌ ಮಾಹಿತಿ ನೀಡಿದರು.

ಕಳೆದ ಮೂರು ವರ್ಷಗಳಿಂದ ಕೇಂದ್ರ ಸರ್ಕಾರ ಸರ್ವ ಶಿಕ್ಷಣ ಅಭಿ ಯಾನ ಯೋಜನೆ ಅಡಿ ನೀಡುತ್ತಿದ್ದ ಅನುದಾನ ಸ್ಥಗಿತಗೊಳಿಸಿದ್ದರಿಂದ ಸರ್ಕಾರಿ ಶಾಲಾ ಕಟ್ಟಡ ದುರಸ್ತಿ ಯಾಗುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಕಟ್ಟಡ ದುರಸ್ತಿ ಕೈಗೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ವಡ್ನಾಳ್‌ ರಾಜಣ್ಣ, ಶಿವಮೂರ್ತಿ, ಶಾಂತನಗೌಡ ಆಕ್ಷೇಪಿಸಿದರು.

46 ಸಾವಿರ ಪಡಿತರ ಅರ್ಜಿ:
ಜಿಲ್ಲೆಯಲ್ಲಿ ಅರ್ಜಿ ಹಾಕಿದವರಿಗೆ ಪಡಿತರ ಚೀಟಿ ಸಿಗುತ್ತಿಲ್ಲ ಎಂದು ಸಭೆಯ ಗಮನಕ್ಕೆ ಶಿವಮೂರ್ತಿ ತಂದಾಗ, ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮಂಜುನಾಥ, ‘ಜಿಲ್ಲೆಯಲ್ಲಿ 46 ಸಾವಿರ ಅರ್ಜಿಗಳು ಬಂದಿವೆ. ಆದರೆ, ಕಂದಾಯ ಇಲಾಖೆ ಪರಿಶೀಲನೆ ನಡೆಸದ ಕಾರಣ ಚೀಟಿ ವಿಲೇವಾರಿಗೆ ಅಡ್ಡಿಯಾಗಿದೆ’ ಎಂದು ಸ್ಪಷ್ಟನೆ ನೀಡಿದರು.

‘ಕಂದಾಯ ಇಲಾಖೆ ನೌಕರರ ಕೆಲವು ಬೇಡಿಕೆಗಳಿವೆ. ಇದೇ 6ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ   ಎದುರು ಆ ಬೇಡಿಕೆ ಗಳನ್ನು ಮಂಡಿಸಲಿದ್ದಾರೆ. ನಂತರ ಈ ಸಮಸ್ಯೆ ಸರಿಹೋಗಬಹುದು’ ಎಂದು ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್ ಸಮಜಾಯಿಷಿ ನೀಡಿದರು. ಜಿಲ್ಲಾ ಪಂಚಾಯ್ತಿ ಸಿಇಒ ಎಸ್.ಅಶ್ವತಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಉಪಸ್ಥಿತರಿದ್ದರು.

‘ಸಭೆ ನಡೆಸದಿದ್ದರೆ ಜಿ.ಪಂ, ಸೂಪರ್‌ ಸೀಡ್’
ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ ನಡೆಸಿ, ಇಲಾಖೆಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿ. ಇಲ್ಲದಿದ್ದರೆ ಜಿಲ್ಲಾ ಪಂಚಾಯ್ತಿ ಸೂಪರ್‌ ಸೀಡ್‌ ಮಾಡಲು ತಕ್ಷಣ ಶಿಫಾರಸು ಮಾಡಲಾಗುವುದು’ ಎಂದು ಸಚಿವರು ಎಚ್ಚರಿಕೆ ನೀಡಿದರು.

ಸಭೆ ನಡೆಸಿ ಅನುಮೋದನೆ ನೀಡದಿದ್ದರಿಂದ ವಾರ್ಷಿಕ ಗುರಿ ಇನ್ನೂ ನಿಗದಿಯಾಗಿಲ್ಲ. ಇದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ತೊಂದರೆಯಾಗಿದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ನಂತರ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ವಾಗೀಶ್ ಅವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ‘ನಿಮ್ಮ ಪಕ್ಷದ ಸಮಸ್ಯೆಗಳು ಏನೇ ಇರಲಿ. ಇದರಿಂದ ಜನರಿಗೆ ತೊಂದರೆಯಾಗಬಾರದು’ ಎಂದು ಹೇಳಿದರು.

ಪ್ರತಿಕ್ರಿಯಿಸಿದ ವಾಗೀಶ್, ‘ನಮ್ಮ ಕಳಕಳಿಯೂ ಅದೇ ಆಗಿದೆ’ ಎಂದರು. ಈ ಮಧ್ಯೆ ‘ಸದಸ್ಯರಾದ ನೀವೂ ಸಭೆಗೆ ಹಾಜರಿಯಾಗಿಲ್ಲ’ ಎಂದು ವಡ್ನಾಳ್‌ ರಾಜಣ್ಣ ಆಕ್ಷೇಪಿಸಿದರು. ತಕ್ಷಣ ಎದ್ದು ನಿಂತ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎನ್‌.ಜೆ.ನಟರಾಜ್, ‘ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಗೆ ನೀವೂ ಸದಸ್ಯರೇ’ ಎಂದು ಕೆಣಕಿದರು.

‘ಸಂದರ್ಭ ಬಂದಾಗ ನಾವೂ ಸಭೆಗೆ ಬರುತ್ತೇವೆ. ಆದರೆ, ಇದು ನಿಮ್ಮ ಪಕ್ಷದ ಒಳಗಿನ ಸಮಸ್ಯೆ. ಅದಕ್ಕಾಗಿ ಜನರ ಹಿತ ಬಲಿಕೊಡಬೇಡಿ’ ಎಂದು ವಡ್ನಾಳ್‌ ರಾಜಣ್ಣ ತೀಕ್ಷ್ಣವಾಗಿ ನುಡಿದರು. ಈ ಚರ್ಚೆ ನಡೆಯುತ್ತಿರುವಾಗ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಉಮಾ ಎಂ.ಪಿ.ರಮೇಶ್ ಸಭೆಯಿಂದ ಎದ್ದು ಹೋಗಿದ್ದರು.

‘ಕೆರೆಯಾಂಗಳದಲ್ಲಿ ಮೇವು ಬೆಳೆಸಿ’
‘ಮಳೆ ಕೊರತೆ ಹಿನ್ನೆಲೆಯಲ್ಲಿ ಈಗಾಗಲೇ ಜಗಳೂರಿನಲ್ಲಿ ಮೇವು ಕೊರತೆ ಕಾಣಿಸಿಕೊಂಡಿದೆ. ಮುಂದೆ ಜಿಲ್ಲೆಯಾದ್ಯಂತ ಈ ಸಮಸ್ಯೆ ಎದುರಾಗಬಹುದು. ಈ ಹಿನ್ನೆಲೆಯಲ್ಲಿ ಕೆರೆಯಾಂಗಳದಲ್ಲಿ ಮೇವು ಬೆಳೆಯಲು ಆರಂಭಿಸಿ’ ಎಂದು ಸಚಿವರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

‘ಚಿತ್ರದುರ್ಗದ ಹಿರಿಯೂರಿಗೆ ಈಚೆಗೆ ಭೇಟಿ ನೀಡಿ ಕೆರೆಯಾಂಗಳದಲ್ಲಿ ಮೇವು ಬೆಳೆಸಿದ್ದನ್ನು ನೋಡಿದ್ದೇನೆ. ಅದೇ ರೀತಿ ಜಿಲ್ಲೆಯ ಯಾವ, ಯಾವ ಕೆರೆಯಾಂಗಳದಲ್ಲಿ ಮೇವು ಬೆಳೆಸಲು ಸಾಧ್ಯ ಎಂಬುದನ್ನು ಸಮೀಕ್ಷೆ ನಡೆಸಿ, ಯೋಜನೆ ಅನುಷ್ಠಾನಕ್ಕೆ ಮುಂದಾಗಿ’ ಎಂದು ಹೇಳಿದರು.

ಜಿಲ್ಲೆಯಲ್ಲಿ ಡೆಂಗಿ ಸಾವು ಇಲ್ಲ
ಜಿಲ್ಲೆಯ ಹರಿಹರ, ಜಗಳೂರಿನಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. ಇದುವರೆಗೂ ಯಾವುದೇ ಸಾವು ಪ್ರಕರಣ ದಾಖಲಾಗಿಲ್ಲ ಎಂದು ಡಿಎಚ್ಒ ಡಾ.ತ್ರಿಪುಲಾಂಬಾ ತಿಳಿಸಿದರು.

* * 

ಕುಡಿಯುವ ನೀರಿನ ಸಮಸ್ಯೆ ಭೀಕರವಾಗಿದೆ.  ಪರಿಸ್ಥಿತಿ ಅರ್ಥಮಾಡಿಕೊಂಡು ಜನ ಸಹಕರಿಸುತ್ತಿದ್ದಾರೆ. ಆದರೆ, ಅವರ ಸಹನೆ ಪರೀಕ್ಷಿಸಬೇಡಿ.
ವಡ್ನಾಳ್‌ ರಾಜಣ್ಣ
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT