ಮಂಗಳವಾರ, ಡಿಸೆಂಬರ್ 10, 2019
18 °C

ಜನಸಾಮಾನ್ಯರಿಗೂ ದೊರೆಯಲಿದೆ ‘ಬಿಗ್‌ ಬಾಸ್’ ಮನೆಗೆ ಪ್ರವೇಶ!

Published:
Updated:
ಜನಸಾಮಾನ್ಯರಿಗೂ ದೊರೆಯಲಿದೆ ‘ಬಿಗ್‌ ಬಾಸ್’ ಮನೆಗೆ ಪ್ರವೇಶ!

ಬೆಂಗಳೂರು: ಭಿನ್ನವಾದ ಪ್ರಸ್ತುತಿಯ ಮೂಲಕ ಗಮನ ಸೆಳೆದಿರುವ ಬಿಗ್‌ ಬಾಸ್ ರಿಯಾಲಿಟಿ ಷೋದ ಐದನೇ ಆವೃತ್ತಿಗೆ ಸಿದ್ಧತೆ ಆರಂಭಗೊಂಡಿದೆ. ಸೆಲೆಬ್ರಿಟಿಗಳ ಅಳು–ನಗು, ಸಂಯಮ–ಸಿಡುಕುಗಳನ್ನು ನೋಡುತ್ತಿದ್ದ ವೀಕ್ಷಕರಿಗಿನ್ನು ಬಿಗ್‌ ಬಾಸ್ ಮನೆಯಲ್ಲಿ ಜನಸಾಮಾನ್ಯನ ಪ್ರತಿಭೆಯನ್ನೂ ಕಾಣಲು ಅವಕಾಶ ಸಿಗಲಿದೆ.

ಹೌದು, ಖ್ಯಾತ ನಟ, ನಟಿಯರು, ಸೆಲೆಬ್ರಿಟಿಗಳೇ ಕಂಡುಬರುತ್ತಿದ್ದ ಬಿಗ್‌ ಬಾಸ್‌ ಮನೆಯಲ್ಲಿನ್ನು ಜನಸಾಮಾನ್ಯರೂ ಕಾಣಸಿಗಲಿದ್ದಾರೆ! ಬಿಗ್‌ ಬಾಸ್ ಕನ್ನಡ ರಿಯಾಲಿಟಿ ಷೋದ ಐದನೇ ಆವೃತ್ತಿಯಲ್ಲಿ ಜನಸಮಾನ್ಯರಿಗೂ ಅವಕಾಶ ನೀಡಲು ಕಲರ್ಸ್‌ ಕನ್ನಡ ವಾಹಿನಿ ನಿರ್ಧರಿಸಿದೆ.

ಅರ್ಜಿ ಸಲ್ಲಿಕೆ ಶೀಘ್ರ ಶುರು: ಈ ಬಾರಿಯೂ ಅಂತಿಮವಾಗಿ ಒಟ್ಟು 15 ಸ್ಪರ್ಧಿಗಳಿರಲಿದ್ದು, ಈ ಪೈಕಿ ಮೂವರು ಜನಸಾಮಾನ್ಯರಾಗಿರಲಿದ್ದಾರೆ. ಸ್ಪರ್ಧಿಗಳ ಆಯ್ಕೆಗೆ ಈ ವಾರವೇ ವಾಹಿನಿಯು ಅಧಿಕೃತವಾಗಿ ಅರ್ಜಿ ಕರೆಯಲಿದೆ. ವೂಟ್‌ ಡಾಟ್‌ ಕಾಂನಲ್ಲಿ ಅರ್ಜಿ ನಮೂನೆ ಲಭ್ಯವಿದ್ದು, ಅರ್ಜಿ ಸಲ್ಲಿಕೆಗೆ ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲ.

ಭವಿಷ್ಯ ಬದಲಿಸಲು ನೆರವಾಗಲಿದೆ ಮೂರು ನಿಮಿಷದ ವಿಡಿಯೊ: ಬಿಗ್‌ ಬಾಸ್‌ ಸ್ಪರ್ಧಿಗಳ ಪ್ರವೇಶದ ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಪ್ರಮುಖ ಮೂರು ಪ್ರಶ್ನೆಗಳು ಬಿಗ್‌ ಬಾಸ್‌ ಮನೆಯನ್ನು ಪ್ರವೇಶಿಸಬೇಕೆಂಬ ಹಂಬಲವುಳ್ಳವರ ಭವಿಷ್ಯ ಬದಲಾಯಿಸಲು ನೆರವಾಗಲಿದೆ. ‘ನಿಮ್ಮದೇ ಆದ ರೀತಿಯಲ್ಲಿ ಪರಿಚಯಿಸಿಕೊಳ್ಳಿ’, ‘ನೀವು ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಲು ಏಕೆ ಬಯಸುತ್ತೀರಿ?’, ‘ಇತರರಿಗಿಂತ ನೀವು ಭಿನ್ನ ಎಂದು ಹೇಗೆ ತೋರಿಸಿಕೊಳ್ಳುತ್ತೀರಿ?’ ಎಂಬ ಪ್ರಶ್ನೆಗಳನ್ನು ಅರ್ಜಿ ನಮೂನೆಯಲ್ಲಿ ಕೇಳಲಾಗಿದೆ. ಇದಕ್ಕೆ ಮೂರು ನಿಮಿಷದ ಉತ್ತರವನ್ನು ವಿಡಿಯೊ ರೂಪದಲ್ಲಿ ಸಲ್ಲಿಸಬೇಕು. ಈ ವಿಡಿಯೊವನ್ನು ಎಷ್ಟು ಕ್ರಿಯಾಶೀಲರಾಗಿ ಮಾಡಿದ್ದಾರೆ ಎಂಬ ಆಧಾರದಲ್ಲಿ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಯಾಕಾಗಿ ಈ ನಡೆ?: ‘ರಾಷ್ಟ್ರ, ವಿಶ್ವಮಟ್ಟದಲ್ಲಿ ಬಿಗ್‌ ಬಾಸ್‌ನಂಥ ರಿಯಾಲಿಟಿ ಷೋದಲ್ಲಿ ಸೆಲೆಬ್ರಿಟಿಗಳಿಗೆ ಮಾತ್ರವಲ್ಲದೆ ಇತರರಿಗೂ ಅವಕಾಶ ನೀಡಲಾಗುತ್ತಿದೆ. ಅದೇ ರೀತಿ ಕನ್ನಡದ ಬಿಗ್‌ ಬಾಸ್‌ ಮನೆಗೂ ಜನಸಾಮಾನ್ಯರಿಗೆ ಪ್ರವೇಶ ಒದಗಿಸಿಕೊಡಬೇಕು ಎಂಬುದು ನಮ್ಮ ಆಶಯ. ಪ್ರಸ್ತುತ ಐದನೇ ಆವೃತ್ತಿಯಲ್ಲಿ 15 ಸ್ಪರ್ಧಿಗಳಲ್ಲಿ ಕನಿಷ್ಠ ಮೂವರಾದರೂ ಜನಸಾಮಾನ್ಯರಿಗೆ ಅವಕಾಶ ನೀಡಬೇಕೆಂದು ಉದ್ದೇಶಿಸಿದ್ದೇವೆ. ಕೊನೇ ಪಕ್ಷ ಒಬ್ಬರಾದರೂ ಇರುವಂತೆ ನೋಡಿಕೊಳ್ಳಲಿದ್ದೇವೆ. ಭವಿಷ್ಯದಲ್ಲಿ ಸಂಪೂರ್ಣವಾಗಿ ಜನಸಾಮಾನ್ಯರೇ ಬಿಗ್‌ ಬಾಸ್‌ ಮನೆಯಲ್ಲಿರುವಂತೆ ನೋಡಿಕೊಳ್ಳುವ ಗುರಿಯೊಂದಿಗೆ ಈ ನಿರ್ಧಾರಕ್ಕೆ ಮುಂದಾಗಿದ್ದೇವೆ’ ಎಂದು ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್‌ ಹೆಡ್‌ ಪರಮೇಶ್ವರ್ ಗುಂಡ್ಕಲ್‌ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)